ಸೋಮವಾರ, ಡಿಸೆಂಬರ್ 9, 2019
22 °C
ಅಜ್ಜಿ, ತಾತಂದಿರ ದಿನದ ಸಂಭ್ರಮ

ಹಣ್ಣೆಲೆ- ಹೊಸ ಚಿಗುರಿನ ಸಂಗಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಣ್ಣೆಲೆ- ಹೊಸ ಚಿಗುರಿನ ಸಂಗಮ

ಶಿಡ್ಲಘಟ್ಟ: ನಗರಸಭೆಯ ಉದ್ಯಾನವನದಲ್ಲಿ ಶನಿವಾರ ಎರಡು ತಲೆಮಾರಿನ ವಿಶೇಷ ಸಂಗಮ. ಇಡೀ ನಗು, ಸಂತೋಷ, ಉಲ್ಲಾಸ, ಉತ್ಸಾಹ, ಕೇಕೆಗಳಿಂದ ತುಂಬಿಕೊಂಡಿತ್ತು. ನಳನಳಿಸುವ ಹಸುರಿನ ಗಿಡಮರಗಳ ನಡುವೆ ಪುಟ್ಟ ಮಕ್ಕಳ ರಚನೆಯ ವರ್ಣರಂಜಿತ ಚಿತ್ತಾರಗಳ ತೋರಣ ಸ್ವಾಗತಿಸುತ್ತಿತ್ತು.

ವಿನೂತನ ‘ಅಜ್ಜಿ ತಾತಂದಿರ ದಿನ’ವನ್ನು ನಗರದ ಚಿಂತಾಮಣಿ ರಸ್ತೆಯ ಡಾಲ್ಫಿನ್‌ ಪಬ್ಲಿಕ್ ಶಾಲೆ ಎಲ್.ಕೆ.ಜಿ. ಹಾಗೂ ಯು.ಕೆ.ಜಿ ಮಕ್ಕಳು ಆಚರಿಸಿದರು.

ಮೊಮ್ಮಕ್ಕಳೊಂದಿಗೆ ಬಂದಿದ್ದ ಅಜ್ಜ, ಅಜ್ಜಿಯರಿಗೆ ಹಲವಾರು ವಿನೋದ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಮೊಮ್ಮಕ್ಕಳ ಹಾಡು, ನೃತ್ಯ, ಆಟಗಳನ್ನು ಕಂಡು ಅವರೊಂದಿಗೆ ಉದ್ಯಾನದಲ್ಲಿ ಆಡಿ ನಲಿಯುವ ಮೂಲಕ ಅಜ್ಜ ಅಜ್ಜಿಯರು ಭಾವುಕರಾದರು. ಸ್ಪರ್ಧೆಗಳಲ್ಲಿ ಗೆದ್ದವರಿಗೆ ಪುಸ್ತಕಗಳನ್ನು ಬಹುಮಾನವಾಗಿ ನೀಡಿ ಮಕ್ಕಳಿಗೆ ಕಥೆ ಹೇಳುವಂತೆ ಕೋರಲಾಯಿತು.

ಡಾಲ್ಫಿನ್‌ ವಿದ್ಯಾಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಶೋಕ್‌ ಮಾತನಾಡಿ, ‘ಅಜ್ಜಿ-ತಾತಂದಿರ ಜೊತೆ ಮೊಮ್ಮಕ್ಕಳ ಸಂಬಂಧ ವಿಶೇಷವಾಗಿರುತ್ತದೆ. ಪ್ರೀತಿ, ಅಕ್ಕರೆ ಜೊತೆ ಚಿಕ್ಕ ಪಾಠಗಳನ್ನು ಕಥೆಗಳ ರೂಪದಲ್ಲಿ ಹೇಳಿಕೊಡುವರು. ಹಿರಿಯರು ಇಳಿ ವಯಸ್ಸಿನಲ್ಲಿ ಕಷ್ಟಪಟ್ಟು ಕೆಲಸ ಮಾಡುವುದನ್ನು ಕಂಡು ಮಕ್ಕಳು ಶ್ರಮ ಮತ್ತು ಶಿಸ್ತು ಎಷ್ಟು ಮುಖ್ಯ ಅಂತ ಅರ್ಥ ಮಾಡಿಕೊಳ್ಳುತ್ತಾರೆ. ಹಣ್ಣೆಲೆ ಮತ್ತು ಹೊಸ ಚಿಗುರು ಒಂದೆಡೆ ಸೇರಿದಾಗ ಮಾತ್ರ ಬದುಕಿಗೆ ಪೂರ್ಣ ಅರ್ಥ ಸಿಗುತ್ತದೆ’ ಎಂದು ಹೇಳಿದರು.

ವಿನೂತನ ಕಾರ್ಯಕ್ರಮವನ್ನು ಆಯೋಜಿಸಿದ್ದ ಶಾಲೆಯವರಿಗೆ ಅಭಿನಂದನೆ ಸಲ್ಲಿಸಿದ ಹಿರಿಯರು, ‘ಮೊಮ್ಮಕ್ಕಳ ಖುಷಿಯನ್ನು ನೋಡಿ ಆನಂದಿಸುವುದೇ ನಮ್ಮ ಜೀವನದ ಸಂಧ್ಯಾಕಾಲದ ಸುಂದರ ಗಳಿಗೆ. ಇಂತಹ ಕಾರ್ಯಕ್ರಮ ನಡೆಸುವ ಆಲೋಚನೆಯೇ ಖುಷಿ ತಂದಿದೆ’ ಎಂದರು.

ಡಾಲ್ಫಿನ್‌ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಚಂದನಾ ಅಶೋಕ್‌, ಪ್ರಾಂಶುಪಾಲ ಥಾಮಸ್‌ ಫಿಲಿಪ್‌, ರತ್ನಮ್ಮ, ಶಿಕ್ಷಕರು ಇದ್ದರು.

**

ಹಿರಿಯರ ಪ್ರೀತಿ, ವಿಶ್ವಾಸದಲ್ಲಿ ಮಕ್ಕಳು ಬೆಳೆದರೆ ಬಾಂಧವ್ಯದ ಕೊಂಡಿ ಭದ್ರವಾಗುತ್ತದೆ. ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಲು ಇದು ಪೂರಕ.

- ಅಶೋಕ್‌, ಡಾಲ್ಫಿನ್‌ ವಿದ್ಯಾಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ

 

ಪ್ರತಿಕ್ರಿಯಿಸಿ (+)