ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕದಲ್ಲೂ ಬಿಜೆಪಿಗೆ ಅಧಿಕಾರ ನಿಶ್ಚಿತ

ಕಾಂಗ್ರೆಸ್ಸಿಗರದ್ದು ಕುಟುಂಬ ರಾಜಕಾರಣ ಸಂಸ್ಕೃತಿ: ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ವಾಗ್ದಾಳಿ
Last Updated 11 ಫೆಬ್ರುವರಿ 2018, 10:23 IST
ಅಕ್ಷರ ಗಾತ್ರ

ಚಿತ್ರದುರ್ಗ: ಬಿಜೆಪಿಯದ್ದು ‘ಸಬ್ ಕಾ ಸಾತ್ ಸಬ್ ಕಾ ವಿಕಾಸ್’ ಸಂಸ್ಕೃತಿಯಾದರೆ, ಕಾಂಗ್ರೆಸ್ಸಿಗರದ್ದು ಕುಟುಂಬ ರಾಜಕಾರಣದ ಸಂಸ್ಕೃತಿ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದರು.

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಸಬ್‌ ಕಾ ಸಾತ್ ಸಬ್‌ ಕಾ ವಿಕಾಸ್‌’ ನೊಂದಿಗೆ ಮುನ್ನಡೆಯುತ್ತಿರುವ ಬಿಜೆಪಿ ಮುಂದೆ, ಕರ್ನಾಟಕದಲ್ಲೂ ಅಧಿಕಾರ ಹಿಡಿಯಲಿದೆ. ಅದಕ್ಕೆ ನಿಮ್ಮೆಲ್ಲರ ಸಹಕಾರ ಅಗತ್ಯ’ ಎಂದರು.

‘ಮೋದಿ ಅವರು ಸಿದ್ದರಾಮಯ್ಯ ಅವರ ಸರ್ಕಾರವನ್ನು 10 ಪರ್ಸೆಂಟ್ ಸರ್ಕಾರ ಎಂದಿದ್ದಾರೆ. ಆದರೆ ಜನ ಟೆನ್ ಪರ್ಸೆಂಟ್ ಅಲ್ಲ 30 ಪರ್ಸೆಂಟ್ ಎನ್ನುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದ ಅವರು, ‘ಈ ರಾಜ್ಯ ಸರ್ಕಾರ ಹತ್ಯೆಗಳೊಂದಿಗೆ ರಾಜಕೀಯ ಮಾಡುತ್ತಿದೆ’ ಎಂದು ದೂರಿದರು.

‘ಶಾಸಕ ಸಿ.ಟಿ.ರವಿ ಸದನದಲ್ಲಿ ಸರಣಿ ಹತ್ಯೆಗಳ ಬಗ್ಗೆ ಪ್ರಸ್ತಾಪಿಸಿದಾಗ ‘ಯಾರೋ ಸಚಿವರು ಮುಂದಿನ ಹತ್ಯೆ ನಿಮ್ಮದೇ ಎಂದರಂತೆ. ಇದು ಸರಿಯಲ್ಲ. ಬಿಜೆಪಿ ಕಾರ್ಯಕರ್ತರ ಕೊಲೆಯಾಗುತ್ತಿದೆ. ರಾಜ್ಯದಲ್ಲಿ 25ಕ್ಕೂ ಹೆಚ್ಚು ಕೊಲೆಗಳಾಗಿವೆ. ಕಾಂಗ್ರೆಸ್ಸಿನವರು ಬ್ಯಾಲೆಟ್ ಪಾಲಿಟಿಕ್ಸ್ ಬದಲು ಬುಲೆಟ್ ಪಾಲಿಟಿಕ್ಸ್ ಮಾಡುತ್ತಿದೆ’ ಎಂದು ಟೀಕಿಸಿದರು.

‘ಅಭಿವೃದ್ಧಿ ಕಾರ್ಯಗಳಲ್ಲಿ ರಾಜ್ಯ ಸರ್ಕಾರ ಹಿಂದುಳಿದಿದೆ. ಕೇಂದ್ರದ ಯೋಜನೆಗಳನ್ನು ನಮ್ಮದೆಂದು ಹೇಳಿಕೊಳ್ಳುತ್ತಿದೆ. ಕೇಂದ್ರ ಸರ್ಕಾರ ಒಂದು ಕೆ.ಜಿ ಅಕ್ಕಿಗೆ ₹ 27 ನೀಡುತ್ತಿದೆ. ರಾಜ್ಯ ಸರ್ಕಾರ ಕೇವಲ ₹ 3 ಸೇರಿಸುತ್ತಿದೆ. ಹಾಗಾಗಿ ಈ ಯೋಜನೆ ಮೋದಿಯ ಅನ್ನಭಾಗ್ಯವೇ ಹೊರತು ಕಾಂಗ್ರೆಸ್ ಅನ್ನಭಾಗ್ಯವಲ್ಲ’ ಎಂದರು.

ರಾಜ್ಯ ಸರ್ಕಾರದ ಇಂಥ ಅವ್ಯವಸ್ಥೆಯಿಂದ ಜನ ಬೇಸತ್ತಿದ್ದಾರೆ. ಈಗಾಗಲೇ ದೇಶದ 22 ರಾಜ್ಯಗಳಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದೆ. ಇನ್ನುಳಿದ ದೊಡ್ಡ ರಾಜ್ಯ ಎಂದರೆ ಕರ್ನಾಟಕ. ಮೋದಿ ರ‍್ಯಾಲಿಯನ್ನು ಐತಿಹಾಸಿಕವಾಗಿಸಿರುವ ಕರ್ನಾಟಕದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜನರು ಬಿಜೆಪಿ ಅಧಿಕಾರ ತರುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

ಮಧ್ಯಾಹ್ನ ನಗರದ ಪಂಚಾಚಾರ್ಯ ಕಲ್ಯಾಣ ಮಂಟಪದಲ್ಲಿ ನಡೆದ ಬಿಜೆಪಿ ಪದಾಧಿಕಾರಿಗಳ ಸಭೆಯಲ್ಲಿ ಸಂಸದ ಪ್ರಹ್ಲಾದ ಜೋಷಿ ಪಕ್ಷದ ಸಾಧನೆ ಮತ್ತು ಮುಂದಿನ ಚುನಾವಣೆ ಎದುರಿಸುವ ಕಾರ್ಯತಂತ್ರಗಳ ಕುರಿತು ಮಾತನಾಡಿದರು.

ಮಾಜಿ ಸಚಿವ ಗೂಳಿಹಟ್ಟಿ ಶೇಖರ್, ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ತಿಪ್ಪೇಸ್ವಾಮಿ, ಮಾಜಿ ಶಾಸಕ ಎಂ.ಚಂದ್ರಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಎಸ್.ನವೀನ್, ಬಿಜೆಪಿ ರಾಜ್ಯ ಸ್ಲಂ ಮೋರ್ಚಾ ಉಪಾಧ್ಯಕ್ಷ ಸಿದ್ದೇಶ್‌ ಯಾದವ್, ಬಿಜೆಪಿ ಚಿತ್ರದುರ್ಗ ವಿಭಾಗೀಯ ಸಹ ಪ್ರಭಾರಿ ಜಿ.ಎಂ.ಸುರೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ್, ಮುರುಳಿ, ನಗರಾಧ್ಯಕ್ಷ ಲೀಲಾಧರ ಠಾಕೂರ್, ಮುಖಂಡರಾದ ಜಯಪಾಲಯ್ಯ, ಶ್ರೀನಿವಾಸ್, ಸ್ವಾಮಿ ಅವರಿದ್ದರು.

ಬಿಜೆಪಿ ಮುಖಂಡ ಕೆ.ಟಿ.ಕುಮಾರಸ್ವಾಮಿ, ಜಿಲ್ಲಾ ಪಂಚಾಯ್ತಿ ಸದಸ್ಯ ಜಿ.ಟಿ.ಗುರುಮೂರ್ತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರತ್ನಮ್ಮ, ವಕ್ತಾರ ನಾಗರಾಜ್ ಬೆದ್ರೆ, ಮಾಧ್ಯಮ ವಕ್ತಾರ ದಗ್ಗೆ ಶಿವಪ್ರಕಾಶ್, ನಗರಸಭೆ ಸದಸ್ಯ ಎಚ್.ಭೀಮರಾಜ್, ಕೆ.ಶಿವಣ್ಣಾಚಾರ್, ಸಭೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT