ಬುಧವಾರ, ಡಿಸೆಂಬರ್ 11, 2019
27 °C
ಕಲ್ಲೇದೇವಪುರ: ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ

ಏಕಾಏಕಿ ಮನೆಗಳ ತೆರವು: ಗ್ರಾಮಸ್ಥರು ಕಂಗಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಏಕಾಏಕಿ ಮನೆಗಳ ತೆರವು: ಗ್ರಾಮಸ್ಥರು ಕಂಗಾಲು

ಜಗಳೂರು: ಚಿತ್ರದುರ್ಗ–ಹೊಸಪೇಟೆ ಮಾರ್ಗದ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ನಿರ್ಮಾಣದ ಹಿನ್ನೆಲೆಯಲ್ಲಿ ತಾಲ್ಲೂಕಿನ ಕಲ್ಲೇದೇವಪುರ ಗ್ರಾಮದಲ್ಲಿ ಗ್ರಾಮಸ್ಥರ ತೀವ್ರ ವಿರೋಧದ ಮಧ್ಯೆ ಶನಿವಾರ ಮನೆಗಳ ತೆರವು ಕಾರ್ಯಾಚರಣೆ ನಡೆಯಿತು.

ರಾಷ್ಟ್ರೀಯ ಹೆದ್ದಾರಿ–50ರ ಚತುಷ್ಪಥ ಕಾಮಗಾರಿ ಕೈಗೊಳ್ಳುವ ಉದ್ದೇಶದಿಂದ ಶನಿವಾರ ಬೆಳಿಗ್ಗೆ ಏಕಾಏಕಿ ಭಾರಿ ಪೊಲೀಸ್‌ ಭದ್ರತೆಯಲ್ಲಿ ತೆರವು ಕಾರ್ಯ ಕೈಗೊಳ್ಳಲಾಯಿತು. ರಸ್ತೆಯ ಎರಡೂ ಬದಿಯಲ್ಲಿದ್ದ 76 ಮನೆಗಳನ್ನು ಜೆಸಿಬಿ ಯಂತ್ರಗಳಿಂದ ಕೆಡವಲಾಯಿತು. ಬೆಳಿಗ್ಗೆ 6 ಗಂಟೆಗೆ ಜೆಸಿಬಿ ಯಂತ್ರಗಳ ಆರ್ಭಟ ಜೋರಾಗಿತ್ತು.

‘ಹಿಂದಿನ ದಿನದವರೆಗೆ ಯಾವುದೇ ನೋಟಿಸ್‌ ನೀಡದೇ ಏಕಾಏಕಿ ಮನೆಗಳಿಗೆ ಯಂತ್ರಗಳನ್ನು ನುಗ್ಗಿಸಿ ಕೆಡವಲಾಗುತ್ತಿದೆ. ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲೂ ಅವಕಾಶ ನೀಡಿಲ್ಲ’ ಎಂದು ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸಿದರು.

200ಕ್ಕೂ ಹೆಚ್ಚು ಪೊಲೀಸರ ಭದ್ರತೆಯಲ್ಲಿ ವಿಶೇಷ ಭೂ ಸ್ವಾಧೀನಾಧಿಕಾರಿ ಲಾಲ್‌ಕೃಷ್ಣ, ಹರಪನಹಳ್ಳಿ ಉಪ ವಿಭಾಗಾಧಿಕಾರಿ ಜಿ.ನಜ್ಮಾ, ತಹಶೀಲ್ದಾರ್‌ ಶ್ರೀಧರಮೂರ್ತಿ ಹಾಗೂ ತಾಲ್ಲೂಕು ಪಂಚಾಯ್ತಿ ಇಒ ಜಾನಕಿರಾಮ್ ನೇತೃತ್ವದಲ್ಲಿ ಇಡೀ ದಿನ ತೆರವು ಕಾರ್ಯಾಚರಣೆ ನಡೆಯಿತು.

ಮಕ್ಕಳು, ಮರಿ ಕಟ್ಟಿಕೊಂಡು ಪಾತ್ರೆ ಪಡಗಗಳನ್ನು ಹೊತ್ತುಕೊಂಡು ದೇವಸ್ಥಾನ, ಸಮುದಾಯ ಭವನ ಶಾಲೆಗಳಲ್ಲಿ ಆಶ್ರಯ ಪಡೆಯಲು ಪರದಾಡಿದರು. ಈ ವೇಳೆ ಗ್ರಾಮದ ಮುಖಂಡರು ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು.

‘ಕೆಲವು ದಿನಗಳ ಹಿಂದೆ ಶಾಸಕರ ಸಮ್ಮುಖದಲ್ಲಿ ತಹಶೀಲ್ದಾರ್‌ ಕಚೇರಿಯಲ್ಲಿ ಅಧಿಕಾರಿಗಳು ಸಂತ್ರಸ್ತರ ಸಭೆ ನಡೆಸಿದ್ದರು. ಗ್ರಾಮದ ಕಲ್ಲೇಶ್ವರ ಜಾತ್ರೆ ಮುಗಿದ ನಂತರ ಏಪ್ರಿಲ್‌ ತಿಂಗಳವರೆಗೆ ತೆರವು ಕಾರ್ಯ ಕೈಗೊಳ್ಳುವುದಿಲ್ಲ. ಆ ವೇಳೆಗೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಿ ಎಂದು ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ, ಶನಿವಾರ ಯಾವುದೇ ಸೂಚನೆ ನೀಡದೆ ಭಾರಿ ಪೊಲೀಸ್‌ ಬೆಂಗಾವಲಿನಲ್ಲಿ ಮನೆಗಳಿಗೆ ಜೆಸಿಬಿ ನುಗ್ಗಿಸಿ ಅಮಾನವೀಯವಾಗಿ ಕೆಡವುತ್ತಿದ್ದಾರೆ’ ಎಂದು ಸಂತ್ರಸ್ತರು ಅಸಮಾಧಾನ ವ್ಯಕ್ತಪಡಿಸಿದರು.

ಪರಿಹಾರ ಕೂಡ ಸಮಪರ್ಕವಾಗಿ ಕೊಟ್ಟಿಲ್ಲ. ದಿಢೀರ್‌ ತೆರವು ಕಾರ್ಯದಿಂದ ಮನೆಗಳನ್ನು ಕಳೆದುಕೊಂಡು ಬೀದಿಗೆ ಬಿದ್ದಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಗ್ರಾಮದ 76 ಸಂತ್ರಸ್ತರಿಗೆ ₹ 2.7 ಕೋಟಿ ಪರಿಹಾರ ನೀಡಲಾಗಿದೆ. ತೆರವು ಮಾಡುವಂತೆ ಈ ಹಿಂದೆಯೇ ಹಲವು ಬಾರಿ ಸೂಚಿಸಲಾಗಿದೆ’ ಎಂದು ಅಧಿಕಾರಿಗಳು ಸಮಜಾಯಿಷಿ ನೀಡಿದರು.

ಪ್ರತಿಕ್ರಿಯಿಸಿ (+)