ಶಿಡೇನೂರ–ಹಿರೇನಂದಿಹಳ್ಳಿ ರಸ್ತೆ ಕಾಮಗಾರಿ ಕಳಪೆ

7
ಕೆಡಿಪಿ ಸಭೆಯಲ್ಲಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಸವಿತಾ ಸುತ್ತಕೋಟಿ ಆರೋಪ

ಶಿಡೇನೂರ–ಹಿರೇನಂದಿಹಳ್ಳಿ ರಸ್ತೆ ಕಾಮಗಾರಿ ಕಳಪೆ

Published:
Updated:

ಬ್ಯಾಡಗಿ: ‘ತಾಲ್ಲೂಕಿನ ಶಿಡೇನೂರ–ಹಿರೇನಂದಿಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸುಮಾರು ₹ 65 ಲಕ್ಷ ವೆಚ್ಚದ ರಸ್ತೆ ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು, ಸೂಕ್ತ ತನಿಖೆ ನಡೆಸಬೇಕು’ ಎಂದು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಸವಿತಾ ಸುತ್ತಕೋಟಿ ಆಗ್ರಹಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯ್ತಿ ಸುವರ್ಣಸೌಧದ ಸಭಾಭವನದಲ್ಲಿ ಗುರುವಾರ ನಡೆದ ‘ಮಾಸಿಕ ಕೆಡಿಪಿ ಸಭೆ’ಯಲ್ಲಿ ಅವರು ಮಾತನಾಡಿದರು.

‘ಹಲವು ಬಾರಿ ಈ ಕುರಿತು ಸಭೆಯಲ್ಲಿ ಚರ್ಚಿಸಿದರೂ ಪಂಚಾಯತ್‌ರಾಜ್ ಎಂಜಿನಿಯರಿಂಗ್‌ ಉಪ ವಿಭಾಗದ ಎಇಇ ಮಂಜುನಾಥ ದೇಸಾಯಿ ಅವರು ಯಾವುದೆ ಕ್ರಮ ಕೈಗೊಂಡಿಲ್ಲ. ಅವರು ಸಭೆಗೆ ಬರೀ ಉಡಾಫೆ ಉತ್ತರ ನೀಡುತ್ತಾರೆ’ ಎಂದು ಆರೋಪಿಸಿದರು.

‘ತಾಲ್ಲೂಕಿನ ಶಿಡೇನೂರ–ಅರಳಿಕಟ್ಟಿ ರಸ್ತೆ ಕಾಮಗಾರಿ ಸಿ.ಎಂ.ಜಿ.ಎಸ್‌.ವೈ. ಅನುದಾನದಲ್ಲಿ ಪೂರ್ಣಗೊಂಡಿದೆ ಎಂದು ಸಭೆಗೆ ಸಲ್ಲಿಸುವ ಪ್ರಗತಿ ಪತ್ರದಲ್ಲಿ ನಮೂದಿಸಲಾಗಿದೆ. ಆದರೆ, ರಸ್ತೆ ಕಾಮಗಾರಿ ಇನ್ನು ಪೂರ್ಣಗೊಂಡಿಲ್ಲ’ ಎಂದರು.

ಇದಕ್ಕೆ ಸಮಜಾಯಿಸಿ ಉತ್ತರ ನೀಡಲು ಮುಂದಾದ ಎಇಇ ಮಂಜುನಾಥ ದೇಸಾಯಿ ಅವರನ್ನು ಅಧ್ಯಕ್ಷೆ ತರಾಟೆಗೆ ತೆಗೆದುಕೊಂಡರು.

‘ಮುಂಬರುವ ಬೇಸಿಗೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು’ ಎಂದು, ಕುಡಿಯುವ ನೀರು ಸರಬರಾಜು ಉಪ ವಿಭಾಗದ ಎಂಜಿನಿಯರ್‌ ಟಿಇಒ ಜಯಕುಮಾರಗೆ ಸೂಚಿಸಿದರು.

ಇದಕ್ಕೆ ಪ್ರತಿಕ್ರಿಸಿದ ಅವರು, ‘ಶಿಡೇನೂರ, ಬಿಸಲಹಳ್ಳಿ, ಬನ್ನಿಹಟ್ಟಿ, ಆಣೂರು, ಬೆಳಕೇರಿ ಹಾಗೂ ಕೊಲ್ಲಾಪುರ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉದ್ಭವವಾಗಬಹುದು. ಈ ಕುರಿತು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದರು. ಉಪಾಧ್ಯಕ್ಷೆ ಶಾಂತವ್ವ ದೇಸಾಯಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry