ಭಾನುವಾರ, ಡಿಸೆಂಬರ್ 8, 2019
25 °C

ಕೃಷಿಯಲ್ಲಿ ಸಾಧನೆಗೆ ಮುಂದಾದ ಮಹಿಳಿಗೆ ಮಹದೇವಕ್ಕ

ಪ್ರಮೀಳಾ ಹುನಗುಂದ Updated:

ಅಕ್ಷರ ಗಾತ್ರ : | |

ಕೃಷಿಯಲ್ಲಿ ಸಾಧನೆಗೆ ಮುಂದಾದ ಮಹಿಳಿಗೆ ಮಹದೇವಕ್ಕ

ಬ್ಯಾಡಗಿ: ಮಹಿಳೆಯರು ಇಂದು ವಿವಿಧ ಕ್ಷೇತ್ರಗಳಲ್ಲಿ ಚಾಪು ಮೂಡಿಸುತ್ತಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ ಬ್ಯಾಡಗಿ ತಾಲ್ಲೂಕಿನ ಕೆರವಡಿ ಗ್ರಾಮದ ಮಹದೇವಕ್ಕ ಲಿಂಗದಳ್ಳಿ ಅವರು ಕೃಷಿಯಲ್ಲಿ ಹೊಸ ಹೊಸ ತಂತ್ರಜ್ಞಾನ, ಪದ್ಧತಿಗಳನ್ನು ಅಳವಡಿಸಿಕೊಂಡು ಸಾಧನೆ ಮಾಡುತ್ತಿದ್ದಾರೆ. ಇತ್ತೀಚೆಗೆ ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆದ ಕೃಷಿ ಮೇಳದಲ್ಲಿ 2017–18ನೇ ಸಾಲಿನ ‘ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ ಮಹಿಳೆ’ ಪ್ರಶಸ್ತಿ ಭಾಜನರಾಗಿದ್ದಾರೆ.

ಅವರು 3 ಎಕರೆ 14ಗಂಟೆ ಜಮೀನು ಹೊಂದಿದ್ದು, ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡು ಮಿಶ್ರ ಬೆಳೆ ಹಾಗೂ ಸಿರಿದಾನ್ಯ ಬೆಳೆಗಳಿಗೆ ಪ್ರಾಮುಖ್ಯತೆ ನೀಡುತ್ತಿದ್ದಾರೆ. ಕೃಷಿ ಹೊಂಡಕ್ಕೆ ಕೊಳವೆ ಬಾವಿ ಮೂಲಕ ನೀರು ಸಂಗ್ರಹಿಸಿ ಬಳಕೆ ಮಾಡುತ್ತಿದ್ದಾರೆ. ಸಾವಯವ ಗೊಬ್ಬರವನ್ನು ಅವರೇ ತಯಾರಿಸುತ್ತಿದ್ದು, ಮಣ್ಣು ಸಂರಕ್ಷಣೆಯಲ್ಲಿ ವಿಶೇಷ ಕಾಳಜಿ ಹೊಂದಿದ್ದಾರೆ.

ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಕಾತರಿ ಯೋಜನೆ ಅಡಿ 110 ತೆಂಗಿನ ಸಸಿಗಳನ್ನು ಪಡೆದು ತಮ್ಮ ಜಮೀನಿನಲ್ಲಿ ನೆಟ್ಟಿದ್ದಾರೆ. ರಾಗಿ, ನುಗ್ಗೆ, ನಿಂಬೆ, ಚೆಂಡು ಹೂವು ಹಾಗೂ ತರಕಾರಿ ಬೆಳೆದು ಹೆಚ್ಚು ಆದಾಯವನ್ನು ಪಡೆಯುತ್ತಿದ್ದು, ಇತರರಿಗೆ ಮಾದರಿಯಾಗಿದ್ದಾರೆ. ಮಹದೇವಕ್ಕ ಅವರು ಟ್ರ್ಯಾಕ್ಟರ್‌ ಚಲಾಯಿಸುತ್ತಾರೆ.

5ನೇ ತರಗತಿಯವರೆಗೆ ಶಿಕ್ಷಣ ಪಡೆದಿರುವ ಅವರು ಮದುವೆಯಾಗದೆ ಮೂಕ ತಂದೆ, ಅಂಗವಿಕಲ ತಾಯಿ, ಮೂವರು ಸಹೋದರಿಯರು ಹಾಗೂ ಅವರ ಮಕ್ಕಳನ್ನು ಸಾಕಿ ಸಲಹುವ ಹೊಣೆ ಹೊತ್ತಿದ್ದಾರೆ. ಬಡತನದ ನಡುವೆ ಮಕ್ಕಳಿಗೆ ಶಿಕ್ಷಣ ನೀಡುವಲ್ಲಿ ಶ್ರಮಿಸುತ್ತಿದ್ದಾರೆ.

‘ಸಹೋದರಿಯ ಮಗಳು ಮಧು ದೃಷ್ಟಿ ದೋಷ ಹಾಗೂ ಕವುಡತದಿಂದ ಬಳಲುತ್ತಿದ್ದು, ಅವಳಿಗೆ ಮೊಬೈಲ್‌ ಕೊಡಿಸಿ ಅದರ ಮೂಲಕ ಧ್ವನಿ ಮುದ್ರಣ ಪಠ್ಯ ನೀಡಿ, ಅಭ್ಯಾಸ ಮಾಡಿಸಲಾಗುತ್ತಿತ್ತು. ಕಳೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅವಳು ಶೇ 80 ರಷ್ಟು ಅಂಕ ಗಳಿಸಿದ್ದಾಳೆ. ಆದರೆ, ಪಿಯುಸಿ ಶಿಕ್ಷಣಕ್ಕೆ ಆರ್ಥಿಕ ಸಹಾಯ ಅವಶ್ಯವಿದ್ದು, ಯಾರಾದರು ಆರ್ಥಿಕ ನೆರವು ನೀಡಲು ಮುಂದಾಗಬೇಕು’ ಎಂದು ಮಹದೇವಕ್ಕ ಲಿಂಗದಳ್ಳಿ ಅವರು ಮನವಿ ಮಾಡಿಕೊಂಡಿದ್ದಾರೆ. ಮೊಬೈಲ್‌ ನಂಬರ್‌ 97439 70633ಗೆ ಸಂಪರ್ಕಿಸಬಹುದು.

ಪ್ರತಿಕ್ರಿಯಿಸಿ (+)