ಭಾನುವಾರ, ಡಿಸೆಂಬರ್ 8, 2019
25 °C
ಇಂದಿರಾ ಕ್ಯಾಂಟೀನ್‌ ಉದ್ಘಾಟನೆ: ಕೇಸರಿ ಬಾತ್, ಅನ್ನ ಸಾಂಬಾರ್ ಸವಿದ ಜನ

ಮೊದಲ ದಿನ 800 ಮಂದಿಗೆ ಉಚಿತ ಊಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೊದಲ ದಿನ 800 ಮಂದಿಗೆ ಉಚಿತ ಊಟ

ಕಲಬುರ್ಗಿ: ಕಡಿಮೆ ಬೆಲೆಗೆ ಊಟ, ಉಪಾಹಾರ ನೀಡುವ ಇಂದಿರಾ ಕ್ಯಾಂಟೀನ್‌ನ ಮೊದಲ ಕೇಂದ್ರವನ್ನು ನಗರದಲ್ಲಿ ಶನಿವಾರ ಉದ್ಘಾಟಿಸಲಾಯಿತು. ಮೊದಲ ದಿನ ಕೇಸರಿ ಬಾತ್, ಅನ್ನ ಸಾಂಬಾರ್ ಸಿದ್ಧಪಡಿಸಲಾಗಿತ್ತು.

ಪಾಲಿಕೆ ಆವರಣದಲ್ಲಿ ನಿರ್ಮಿಸಿರುವ ಕ್ಯಾಂಟೀನ್‌ಗೆ ಚಾಲನೆ ನೀಡಿದ ಸಚಿವ ಡಾ.ಶರಣಪ್ರಕಾಶ ಪಾಟೀಲ ಊಟ ಸವಿದರು. ಮೇಯರ್‌ ಶರಣಕುಮಾರ್ ಮೋದಿ, ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ಹಾಗೂ ಪಾಲಿಕೆ ಆಯುಕ್ತ ರಘುನಂದನ ಮೂರ್ತಿ, ಪಾಲಿಕೆಯ ಅಧಿಕಾರಿಗಳು ಸಹ ಊಟ ಮಾಡಿದರು.

ಮೊದಲ ದಿನ 800 ಮಂದಿಗೆ ಉಚಿತವಾಗಿ ಊಟ ನೀಡಲಾಯಿತು. ಊಟ ಸವಿಯಲು ಪಾಲಿಕೆ ಸಿಬ್ಬಂದಿ ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಇದರಿಂದ ಕೆಲವೇ ಗಂಟೆಗಳಲ್ಲಿ ಊಟ ಖಾಲಿಯಾಯಿತು. ಕೇಂದ್ರ ಬಸ್‌ ನಿಲ್ದಾಣ, ರೈಲು ನಿಲ್ದಾಣ, ಜಿಲ್ಲಾಸ್ಪತ್ರೆ, ಎಪಿಪಿಎಂಸಿ ಆವರಣದಲ್ಲಿ ಇಂದಿರಾ ಕ್ಯಾಂಟೀನ್ ಆರಂಭಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ನಡೆಸಿದೆ.

‘ಇಂದಿರಾ ಕ್ಯಾಂಟೀನ್‌ನ ಕೇಸರಿ ಬಾತ್‌, ಅನ್ನ–ಸಾಂಬಾರ್ ರುಚಿಯಾಗಿತ್ತು. ಇದೇ ರುಚಿಯನ್ನು ಪ್ರತಿದಿನವೂ ಕಾಯ್ದುಕೊಳ್ಳುವಂತೆ ತಿಳಿಸಲಾಗಿದೆ. ನಗರದಲ್ಲಿ ಉಳಿದ ಆರು ಕ್ಯಾಂಟೀನ್‌ಗಳನ್ನು ವಾರದಲ್ಲಿ ಉದ್ಘಾಟಿಸಲಾಗುವುದು. ತಾಲ್ಲೂಕು ಕೇಂದ್ರಗಳಲ್ಲೂ ತಲಾ ಒಂದು ಕ್ಯಾಂಟೀನ್‌ ಶೀಘ್ರದಲ್ಲಿಯೇ ಆರಂಭವಾಗಲಿವೆ’ ಎಂದು ಸಚಿವರು ತಿಳಿಸಿದರು.

‘ಬಡವರಿಗೆ ಕನಿಷ್ಠ ಬೆಲೆಯಲ್ಲಿ ಪೌಷ್ಟಿಕ ಆಹಾರ ನೀಡಬೇಕು ಎಂಬುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನಸಾಗಿದೆ. ಬೆಂಗಳೂರಿನಲ್ಲಿ ಪ್ರಾರಂಭಿಸಿದ ಇಂದಿರಾ ಕ್ಯಾಂಟೀನ್‌ಗಳಿಗೆ ಉತ್ತಮ ಅಭಿಪ್ರಾಯ ಬಂದಿದೆ. ಹೀಗಾಗಿ ಅವುಗಳನ್ನು ರಾಜ್ಯದಾದ್ಯಂತ ವಿಸ್ತರಿಸಲಾಗಿದೆ’ ಎಂದು ಹೇಳಿದರು.

‘5ಕ್ಕೆ ಉಪಾಹಾರ, ₹10ಕ್ಕೆ ಮಧ್ಯಾಹ್ನ ಮತ್ತು ರಾತ್ರಿಯ ಊಟ ನೀಡಲಾಗುತ್ತಿದೆ. ಬಡವರಿಗೆ ಇದು ಅನುಕೂಲ ಆಗಲಿದೆ’ ಎಂದರು.

ಮೇಯರ್‌ ಮಾತನಾಡಿ, ‘ಪ್ರತಿದಿನ 500 ಉಪಾಹಾರ ಹಾಗೂ 1,000 ಊಟ ಸರಬರಾಜು ಆಗಲಿದೆ. ಪಾಲಿಕೆಯು ಇದಕ್ಕೆ ಸಹಕಾರ ನೀಡಿದೆ’ ಎಂದರು.

ಪ್ರತಿಕ್ರಿಯಿಸಿ (+)