ಶುಕ್ರವಾರ, ಡಿಸೆಂಬರ್ 6, 2019
25 °C
ಎರಡು ಕ್ಷೇತ್ರಕ್ಕೆ ಕಾಂಗ್ರೆಸ್‌ನಲ್ಲಿ 12 ಜನ ಆಕಾಂಕ್ಷಿಗಳು; ವರಿಷ್ಠರಿಗೆ ತಲೆನೋವು

ಕುತೂಹಲ ಮೂಡಿಸಿದ ಅಭ್ಯರ್ಥಿ ಆಯ್ಕೆ

ಆದಿತ್ಯ ಕೆ.ಎ. Updated:

ಅಕ್ಷರ ಗಾತ್ರ : | |

ಕುತೂಹಲ ಮೂಡಿಸಿದ ಅಭ್ಯರ್ಥಿ ಆಯ್ಕೆ

ಮಡಿಕೇರಿ: ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಗೂ ಮೊದಲೇ ಕೊಡಗಿನಲ್ಲಿ ಪ್ರಚಾರದ ರಣಕಹಳೆ ಮೊಳಗಿಸಿದ್ದ ಕಾಂಗ್ರೆಸ್‌ಗೆ ಅಭ್ಯರ್ಥಿಗಳ ಆಯ್ಕೆಯ ತಲೆಬಿಸಿ ಆರಂಭವಾಗಿದೆ.

ಜಿಲ್ಲೆಯಲ್ಲಿರುವುದು ಎರಡು ಕ್ಷೇತ್ರವಾದರೂ ಸಾಲು ಸಾಲು ಆಕಾಂಕ್ಷಿಗಳಿದ್ದಾರೆ. ‘ಹಾಲಿ ಶಾಸಕರಿಗೇ ಟಿಕೆಟ್‌ ನೀಡುತ್ತೇವೆ’ ಎಂದು ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಬಿ.ಎಸ್‌.ಯಡಿಯೂರಪ್ಪ ಘೋಷಣೆ ಮಾಡಿದ್ದು, ಆ ಪಕ್ಷದಲ್ಲಿ ಅತೃಪ್ತರು ಮೆತ್ತಗಾಗಿದ್ದಾರೆ. ವಿರಾಜಪೇಟೆ ಕ್ಷೇತ್ರದಲ್ಲಿ ಸಂಕೇತ್‌ ಪೂವಯ್ಯ ಬದಲಿಗೆ ಮನೋಜ್‌ ಬೋಪಯ್ಯಗೆ ಟಿಕೆಟ್‌ ನೀಡಬೇಕೆಂಬ ಆಗ್ರಹಗಳೂ ಕೇಳಿಬರುತ್ತಿರುವುದನ್ನು ಹೊರತುಪಡಿಸಿದರೆ ಜೆಡಿಎಸ್‌ನಲ್ಲಿ ಟಿಕೆಟ್‌ಗೆ ದೊಡ್ಡ ಪೈಪೋಟಿಯಂತೂ ಕಾಣಿಸುತ್ತಿಲ್ಲ.

ಜಿಲ್ಲೆಯಲ್ಲಿ ಹಾಲಿ ಶಾಸಕರ ವಿರೋಧಿ ಅಲೆಯಿರುವ ಕಾರಣಕ್ಕೆ ಕಾಂಗ್ರೆಸ್‌ನಲ್ಲಿ ಮಾತ್ರ ಟಿಕೆಟ್‌ಗಾಗಿ ದೊಡ್ಡ ಲಾಬಿಯೇ ನಡೆಯುತ್ತಿದೆ ಎಂಬ ಮಾತುಗಳು ಜಿಲ್ಲೆಯಲ್ಲಿ ಕೇಳಿಬರುತ್ತಿವೆ.

ಕೈ ಪಕ್ಷದ ಆಕಾಂಕ್ಷಿಗಳು ಕಳೆದ ಮೂರು ತಿಂಗಳಿಂದ ಕ್ಷೇತ್ರ ಸುತ್ತಾಟ, ಭೂಮಿಪೂಜೆ, ಪ್ರಚಾರ ಸಭೆ, ಕಾರ್ಯಕರ್ತರ ಸಭೆಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಕುತೂಹಲ ಮೂಡಿಸುತ್ತಿದ್ದಾರೆ. ಅಭ್ಯರ್ಥಿ ಆಯ್ಕೆಯಲ್ಲಿ ಏಳುವ ಬಂಡಾಯ ಶಮನಗೊಳಿಸುವ ಚಿಂತನೆಯಲ್ಲಿ ರಾಜ್ಯ ವರಿಷ್ಠರಿದ್ದಾರೆ.

ಮಡಿಕೇರಿ ಕ್ಷೇತ್ರ: 2013ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಬಿಜೆಪಿಯ ಎಂ.ಪಿ. ಅಪ್ಪಚ್ಚು ರಂಜನ್‌ ಆಯ್ಕೆಯಾಗಿದ್ದಾರೆ. ಈ ಬಾರಿಯೂ ಬಿಜೆಪಿ ಅವರನ್ನೇ ನಂಬಿಕೊಂಡಿದೆ. ಆದರೆ, ಕಾಂಗ್ರೆಸ್‌ನಿಂದ ಸೋಮವಾರಪೇಟೆ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕೆ.ಎಂ.ಲೋಕೇಶ್‌, ವಕೀಲ ಚಂದ್ರಮೌಳಿ (ವಿಧಾನ ಪರಿಷತ್‌ ಚುನಾವಣೆಗೆ ಸ್ಪರ್ಧಿಸಿ ಬಿಜೆಪಿಯ ಸುನಿಲ್‌ ಸುಬ್ರಮಣಿ ವಿರುದ್ಧ ಸೋತಿದ್ದರು), ಸುಂಟಿಕೊಪ್ಪ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಹಿರಿಯ ಸದಸ್ಯೆ ಕೆ.ಪಿ.ಚಂದ್ರಕಲಾ, ಮಾದಾಪುರ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಸದಸ್ಯೆ ಕುಮುದಾ ಧರ್ಮಪ್ಪ, ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷ ಟಿ.ಪಿ. ರಮೇಶ್‌, ಉದ್ಯಮಿ ನಾಪಂಡ ಮುತ್ತಪ್ಪ ಹಾಗೂ ನಿವೃತ್ತ ಕೆಎಎಸ್‌ ಅಧಿಕಾರಿ ವಿರೂಪಾಕ್ಷಯ್ಯ ಪ್ರಬಲ ಆಕಾಂಕ್ಷಿಗಳು. ಕುಮುದಾ ಧರ್ಮಪ್ಪ ಹೊರತು ಪಡಿಸಿ, ಎಲ್ಲ ನಾಯಕರೂ ಮಡಿಕೇರಿ ಕ್ಷೇತ್ರದಿಂದ ಟಿಕೆಟ್‌ ಬಯಸಿ ಇತ್ತೀಚೆಗೆ ಮಡಿಕೇರಿಯ ಹೋಟೆಲ್‌ನಲ್ಲಿ ನಡೆದಿದ್ದ ಸಭೆಯಲ್ಲಿ ವರಿಷ್ಠರ ಎದುರು ತಮ್ಮ ಆಸೆ ವ್ಯಕ್ತಪಡಿಸಿದ್ದಾರೆ.

ನಾಪಂಡ ಮುತ್ತಪ್ಪ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದಾರೆ. ತಮ್ಮ ಪರಿಚಯವುಳ್ಳ ಪುಸ್ತಕವನ್ನು ಮುದ್ರಿಸಿ ಕ್ಷೇತ್ರದಾದ್ಯಂತ ಹಂಚಿಕೆ ಮಾಡಿ ಮತದಾರರ ಗಮನ ಸೆಳೆಯುವ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಯುವಪಡೆ ಕಟ್ಟಿಕೊಂಡು ಗ್ರಾಮ ಗ್ರಾಮ ಸುತ್ತುವ ಮೂಲಕ ಆಶೀರ್ವಾದ ಮಾಡುವಂತೆ ಕೋರಿಕೆ ಸಲ್ಲಿಸುತ್ತಿದ್ದಾರೆ.

ಶನಿವಾರಸಂತೆ, ಕೊಡ್ಲಿಪೇಟೆ ಹಾಗೂ ಸೋಮವಾರಪೇಟೆ ಭಾಗದಲ್ಲಿ ಮಠಗಳಿದ್ದು ಮಠಾಧೀಶರ ಆಶೀರ್ವಾದ ಚಂದ್ರಮೌಳಿ ಅವರ ಮೇಲಿದೆ ಎನ್ನಲಾಗಿದೆ. ವರಿಷ್ಠರ ಬೆಂಬಲವೂ ಚಂದ್ರಮೌಳಿ ಅವರಿಗಿದೆ. ಕುಮುದಾ ಧರ್ಮಪ್ಪ ಹಾಗೂ ಚಂದ್ರಕಲಾ ಟಿಕೆಟ್‌ ನೀಡುವಂತೆ ಎರಡು ತಿಂಗಳ ಹಿಂದೆಯೇ ದೆಹಲಿಯಲ್ಲಿ ವರಿಷ್ಠರ ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಪದೇ ಪದೇ ಅವಕಾಶ ವಂಚಿತರಾಗುತ್ತಿರುವ ಚಂದ್ರಕಲಾ ಸಹ ಟಿಕೆಟ್‌ ನಿರೀಕ್ಷೆಯಲ್ಲಿದ್ದಾರೆ. ಸೋಮವಾರಪೇಟೆ ಭಾಗದಲ್ಲಿ ಒಕ್ಕಲಿಗರ ಪ್ರಾಬಲ್ಯವಿ ರುವ ಕಾರಣ ಮಡಿಕೇರಿ ಕ್ಷೇತ್ರದ ಅಭ್ಯರ್ಥಿಯ ಆಯ್ಕೆ ಕಾಂಗ್ರೆಸ್‌ನಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ವಿರಾಜಪೇಟೆ ಕ್ಷೇತ್ರ: ಕೊಡವ, ಅರೆ ಭಾಷೆ ಹಾಗೂ ತುಳು ಭಾಷಿಕರ ಪ್ರಾಬಲ್ಯವಿರುವ ಈ ಕ್ಷೇತ್ರದಲ್ಲೂ ಟಿಕೆಟ್‌ಗೆ ತೀವ್ರ ಸ್ಪರ್ಧೆಯಿದೆ.

ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಪದ್ಮಿನಿ ಪೊನ್ನಪ್ಪ ಅವರು ‘ನಾನೇ ಅಭ್ಯರ್ಥಿ. ಟಿಕೆಟ್‌ ತರುವ ಜಾವಾಬ್ದಾರಿ ನನ್ನದು; ಚುನಾವಣೆಗೆ ಸಜ್ಜಾಗಿ’ ಎಂದು ಬೆಂಬಲಿಗರಿಗೆ ಸಿದ್ದಾಪುರದ ಸಭೆಯಲ್ಲಿ ಕರೆ ನೀಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್‌. ಸೀತಾರಾಂ ಅವರ ಆಪ್ತ ಕಾರ್ಯದರ್ಶಿ ಹರೀಶ್‌ ಬೋಪಣ್ಣ ಟಿಕೆಟ್‌ ನಿರೀಕ್ಷೆಯಲ್ಲಿದ್ದಾರೆ. ಸೀತಾರಾಂ ಸಹ ಬೋಪಣ್ಣ ಪರವಾಗಿ ಬ್ಯಾಟಿಂಗ್‌ ನಡೆಸುತ್ತಿದ್ದಾರೆ.

ವಿಧಾನ ಪರಿಷತ್‌ ಮಾಜಿ ಸದಸ್ಯ ಅರುಣ್‌ ಮಾಚಯ್ಯ, ಸಿದ್ದಾಪುರ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಸದಸ್ಯೆ ಸರಿತಾ ಪೂಣಚ್ಚ, ಶ್ರೀಮಂಗಲ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯರೂ ಆಗಿರುವ ಕಾಂಗ್ರೆಸ್‌ ಜಿಲ್ಲಾ ಅಧ್ಯಕ್ಷ ಎಂ.ಬಿ. ಶಿವು ಮಾದಪ್ಪ ಅವರು ಟಿಕೆಟ್‌ ಆಕಾಂಕ್ಷಿಗಳು. ಎಲ್ಲರೂ ವರಿಷ್ಠರಿಗೆ ಮನವಿ ಸಲ್ಲಿಸಿದ್ದಾರೆ.

ಕಳೆದ ಚುನಾವಣೆಯಲ್ಲಿ ವಿರಾಜಪೇಟೆ ಕ್ಷೇತ್ರದಿಂದ ಬಿ.ಟಿ. ಪ್ರದೀಪ್‌ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ಪ್ರದೀಪ್‌ ನಿಧನರಾದ ಬಳಿಕ ಕಾಂಗ್ರೆಸ್‌ನಲ್ಲಿ ಟಿಕೆಟ್‌ಗಾಗಿ ಲಾಬಿ ಜೋರಾಗಿದೆ. ಕೊಡಗಿನಲ್ಲಿ ಎರಡು ಕ್ಷೇತ್ರಗಳಿದ್ದರೂ 12 ಮಂದಿ ಆಕಾಂಕ್ಷಿಗಳಿದ್ದಾರೆ ಎಂದು ಕಾಂಗ್ರೆಸ್‌ನ ಜಿಲ್ಲಾ ಮುಖಂಡರು ತಿಳಿಸಿದ್ದಾರೆ.

***

‘ನಮಗೇ ಟಿಕೆಟ್ ನೀಡಿ’: ಮುಸ್ಲಿಂ ಮುಖಂಡರ ಮನವಿ

ಕೊಡಗು ಜಿಲ್ಲೆಯಲ್ಲಿ ಅಂದಾಜು 60 ಸಾವಿರದಷ್ಟು ಮುಸ್ಲಿಂ ಸಮುದಾಯದ ಜನಸಂಖ್ಯೆಯಿದ್ದು, ವಿರಾಜಪೇಟೆ ಕ್ಷೇತ್ರದಲ್ಲೇ 40 ಸಾವಿರ ಮಂದಿ ನೆಲೆಸಿದ್ದಾರೆ. ಹೀಗಾಗಿ, ಕಾಂಗ್ರೆಸ್‌ನಿಂದ ಈ ಬಾರಿ ಮುಸ್ಲಿಂ ಅಭ್ಯರ್ಥಿಗೇ ಟಿಕೆಟ್‌ ನೀಡಬೇಕೆಂಬ ಕೂಗು ಸಹ ಕೇಳಿಬರುತ್ತಿದೆ. ವಿಟ್ಲದ ಮಾಜಿ ಶಾಸಕ ಕೆ.ಎಂ. ಇಬ್ರಾಹಿಂ ಮಾಸ್ಟರ್‌ ಹಾಗೂ ಜಿಲ್ಲಾ ಪರಿಷತ್‌ ಮಾಜಿ ಅಧ್ಯಕ್ಷ ಪಿ.ಎಂ. ಖಾಸಿಂ ಅವರ ಹೆಸರು ಮುಂಚೂಣಿಯಲ್ಲಿದ್ದು, ಒಂದು ಸುತ್ತಿನ ಸಭೆ ನಡೆದಿದೆ. ಜತೆಗೆ, ಕೊಡವ ಒಕ್ಕೂಟಗಳೂ ನಮ್ಮ ಸಮುದಾಯಕ್ಕೇ ಟಿಕೆಟ್‌ ನೀಡಬೇಕೆಂದು ಧ್ವನಿಯೆತ್ತುವ ಮೂಲಕ ಚುನಾವಣೆಗೂ ಮೊದಲ ಅಭ್ಯರ್ಥಿಯ ಆಯ್ಕೆ ಗೊಂದಲ ಆರಂಭಗೊಂಡಿದೆ.

 

ಪ್ರತಿಕ್ರಿಯಿಸಿ (+)