4
ಭಷ್ಟ ಸರ್ಕಾರ ಆರೋಪಕ್ಕೆ ಕಿಡಿಕಾರಿ ಗುಡುಗಿದ ಸಿದ್ದರಾಮಯ್ಯ

ಒಂದೇ ವೇದಿಕೆಯಲ್ಲಿ ಚರ್ಚಿಸುವ ದಮ್ಮಿಲ್ಲದ ಬಿಜೆಪಿ

Published:
Updated:
ಒಂದೇ ವೇದಿಕೆಯಲ್ಲಿ ಚರ್ಚಿಸುವ ದಮ್ಮಿಲ್ಲದ ಬಿಜೆಪಿ

ಕೊಪ್ಪಳ: 'ನಮ್ಮದು ಭ್ರಷ್ಟ ಸರ್ಕಾರ ಎಂದು ಕರೆದ ಬಿಜೆಪಿಯವರಿಗೆ ಈ ಬಗ್ಗೆ ಒಂದೇ ವೇದಿಕೆಯಲ್ಲಿ ಬಂದು ಚರ್ಚಿಸುವ ದಮ್ಮಿಲ್ಲ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗುಡುಗಿದರು.

ನಗರದಲ್ಲಿ ಶನಿವಾರ ನಡೆದ ಜನಾಶೀರ್ವಾದ ಯಾತ್ರೆಯಲ್ಲಿ ಮಾತನಾಡಿದ ಅವರು, 'ಜೈಲಿಗೆ ಹೋದ ಸಚಿವರನ್ನು ಪಕ್ಕದಲ್ಲಿ ಕೂರಿಸಿಕೊಂಡು ನಮ್ಮದು ಭ್ರಷ್ಟ ಸರ್ಕಾರ ಎಂದು ಕರೆಯುವ ಪ್ರಧಾನಿಗೆ ನಾಚಿಕೆಯಾಗಬೇಕು. ಇದುವರೆಗಿನ ನಾಲ್ಕೂವರೆ ವರ್ಷಗಳ ಆಡಳಿತಾವಧಿಯಲ್ಲಿ ನಮ್ಮ ವಿರುದ್ಧ ಯಾವುದೇ ಹಗರಣಗಳು ಇಲ್ಲ. ಹಾಗಾಗಿ ನಮಗೆ ಮತ್ತೆ ನಿಮ್ಮ ಆಶೀರ್ವಾದ ಕೇಳುವ ನೈತಿಕ ಹಕ್ಕು ಇದೆ. ಅಚ್ಚೇದಿನ್‌ ಆಯೇಗಾ ಎಂದು ಹೇಳಿ ಮೋದಿ ಅವರು ಜನರ ದಾರಿ ತಪ್ಪಿಸುತ್ತಿದ್ದಾರೆ. ಆದರೆ, ಕರ್ನಾಟಕದ ಜನರ ದಾರಿ ತಪ್ಪಿಸುವುದು ಅವರಿಂದ ಸಾಧ್ಯವಿಲ್ಲ. ಅಚ್ಚೇದಿನ್‌ ಯಾವತ್ತೂ ಬರುವುದಿಲ್ಲ. ಅವರಪ್ಪನಾಣೆಗೂ ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿ ಆಗುವುದು ಸಾಧ್ಯವಿಲ್ಲ. ಎಚ್‌.ಡಿ.ಕುಮಾರಸ್ವಾಮಿ ಅವರೂ ಮುಖ್ಯಮಂತ್ರಿ ಆಗುವುದು ಅಸಾಧ್ಯ' ಎಂದು ಹೇಳಿದರು.

ಜಿಲ್ಲೆಗೆ ನೀಡಿದ ವಿವಿಧ ಯೋಜನೆಗಳನ್ನು ನೆನಪಿಸಿದ ಅವರು, ಮುಂದಿನ ತಿಂಗಳು ಬಹದ್ದೂರ್‌ಬಂಡಿ ಏತ ನೀರಾವರಿ ಯೋಜನೆಗೆ ಶಂಕುಸ್ಥಾಪನೆ ಮಾಡುವುದಾಗಿ ಹೇಳಿದರು.

ಸಚಿವ ಡಿ.ಕೆ.ಶಿವಕುಮಾರ್‌ ಮಾತನಾಡಿ, 'ಪಕ್ಷದ ಪಾಲಿಗೆ ಇದು ಪವಿತ್ರವಾದ ದಿನ. ಹೊಸಪೇಟೆ ಎಂಬ ಕರ್ಮಭೂಮಿಯಲ್ಲಿ  ಕಾಂಗ್ರೆಸ್‌ಗೆ ಮತ್ತೆ ಆಶೀರ್ವಾದ ಪಡೆಯುವ ಜ್ಯೋತಿಯನ್ನು ರಾಹುಲ್‌ ಬೆಳಗಿಸಿದ್ದಾರೆ. ನಾವೆಲ್ಲರೂ ಒಟ್ಟಾಗಿ ಇದ್ದೇವೆ ಎಂಬ ಸಂದೇಶವನ್ನು ಪ್ರಧಾನಿ ನರೇಂದ್ರ ಅವರಿಗೆ ಮುಟ್ಟಿಸಿದ್ದೀರಿ' ಎಂದರು.

ಕುಕನೂರಿನಲ್ಲಿಯೂ ರಾತ್ರಿ 8ರ ವೇಳೆಗೆ ಜನಾಶೀರ್ವಾದ ಯಾತ್ರೆಯ ಬಹಿರಂಗ ಸಮಾವೇಶ ನಡೆಯಿತು.

**

ರಾಹುಲ್‌ಗೆ ಅದ್ದೂರಿ ಸ್ವಾಗತ

ಹುಲಿಗಿಯ ಹುಲಿಗೆಮ್ಮ ದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ರಾಹುಲ್‌ ಅವರಿಗೆ ದೇವಸ್ಥಾನದ ಅರ್ಚಕರು ಶಾಲು ಹೊದೆಸಿ ಆಶೀರ್ವದಿಸಿದರು. ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಕೆ.ಬಸವರಾಜ ಹಿಟ್ನಾಳ್‌ ಇದ್ದರು.

ಗವಿಮಠಕ್ಕೆ ಭೇಟಿ ನೀಡಿದ ರಾಹುಲ್‌ ಗಾಂಧಿ ಅವರಿಗೆ ಮಠದ ಇತಿಹಾಸ, ಶಿಕ್ಷಣ ಸಂಸ್ಥೆಗಳು, ಸೇವಾ ಕಾರ್ಯಗಳ ಬಗ್ಗೆ ಮಠದ ಪೀಠಾಧಿಪತಿ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ವಿವರಿಸಿದರು. ಗವಿಸಿದ್ದೇಶ್ವರ ಜಾತ್ರೆಯ ಛಾಯಾಚಿತ್ರಗಳ ಅಲ್ಪಂ ನೋಡಿದ ರಾಹುಲ್‌, ಜಾತ್ರೆಯಲ್ಲಿ ಸೇರಿದ ಜನಸ್ತೋಮದ ದೃಶ್ಯ ಕಂಡು ಅಚ್ಚರಿ ವ್ಯಕ್ತಪಡಿಸಿದರು. ಗವಿಮಠ ಶಿಕ್ಷಣ ಸಂಸ್ಥೆಯ ಮಕ್ಕಳಿಗೆ ಕೈಕುಲುಕಿ ಖುಷಿಪಟ್ಟರು.

ಇದೆ ವೇಳೆ ಮಠದ ಆವರಣದಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ಸಾಕೆ ಶೈಲಜನಾಥ, ಪಕ್ಷದ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್‌ ಕಾರ್ಯಕರ್ತರೊಂದಿಗೆ ಸೆಲ್ಫಿ ತೆಗೆಸಿಕೊಂಡರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry