ಭಾನುವಾರ, ಡಿಸೆಂಬರ್ 8, 2019
24 °C
ವಿದೇಶದಲ್ಲೂ ಬೇಡಿಕೆ ಪಡೆದ ಕಲಾಕೃತಿಗಳು: ಚಿತ್ರನಟರಿಂದ ಮೆಚ್ಚುಗೆ

ಸಾಧನೆಯ ಹಾದಿಯಲ್ಲಿ ಯುವ ಕಲಾವಿದ

ಕೆ.ಶರಣಬಸವ ನವಲಹಳ್ಳಿ Updated:

ಅಕ್ಷರ ಗಾತ್ರ : | |

ಸಾಧನೆಯ ಹಾದಿಯಲ್ಲಿ ಯುವ ಕಲಾವಿದ

ತಾವರಗೇರಾ: ಇಲ್ಲಿನ ಯುವ ಚಿತ್ರ ಕಲಾವಿದ ಆನಂದ ಪತ್ರಿಮಠ ಅವರು ವಿಶಿಷ್ಟ ಕಲಾಕೃತಿಗಳನ್ನು ರಚಿಸುವ ಮೂಲಕ ಗಮನ ಸೆಳೆದಿದ್ದು, ಚಿತ್ರಕಲೆಯಲ್ಲಿ ಸಾಧನೆ ಮಾಡುತ್ತಿದ್ದಾರೆ.

ಪತ್ರಿಮಠ ಅವರು ವಿದ್ಯಾಬ್ಯಾಸದ ಜೊತೆಗೆ ಈ ಚಿತ್ರಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಇವುರ ರಚಿಸಿರುವ ಕಲಾಕೃತಿಗಳು ಕಲಾಸಕ್ತರನ್ನು ಆಕರ್ಷಿಸುತ್ತಿದ್ದು, ಅವರನ್ನು ಬಹುಬೇಡಿಕೆಯ ಕಲಾವಿದನನ್ನಾಗಿಸಿದೆ.

ಅವರ ಚಿತ್ರಕಲಾ ಪ್ರತಿಭೆ ವಿದೇಶಕ್ಕೂ ವಿಸ್ತರಿಸಿದೆ. ಸದ್ಯ ಬಾಗಲಕೋಟೆ ಜಿಲ್ಲೆಯ ಇಲಕಲ್ ವಿಜಯ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಬಿವಿಎ (ಬ್ಯಾಚುಲರ್ ಆಫ್ ವಿಷುವಲ್ ಆರ್ಟ್ಸ್) ಅಭ್ಯಾಸ ಮಾಡುತ್ತಿದ್ದಾರೆ. ಕೊಪ್ಪಳ ಜಿಲ್ಲೆ ಮತ್ತು ರಾಜ್ಯದ ವಿವಿಧ ಕಾಲೇಜು, ಕಾರ್ಯಕ್ರಮಗಳಲ್ಲಿ ಚಿತ್ರ ಬಿಡಿಸುವ ಮೂಲಕ ತಮ್ಮ ಕಲಾ ಪ್ರದರ್ಶನ ಮಾಡಿದ್ದಾರೆ.

ನಟ ಯಶ್ ದಂಪತಿಯ ಚಿತ್ರ ಬಿಡಿಸಿ ಫೇಸ್‌ಬುಕ್‌ನಲ್ಲಿ ಪ್ರಕಟಿಸಿದಾಗ ಯಶ್‌ ಮೆಚ್ಚುಗೆ ವ್ಯಕ್ತಪಡಿಸಿ ತಮ್ಮನ್ನು ಆಹ್ವಾನಿಸಿದ್ದರು ಎಂದು ಸ್ಮರಿಸುತ್ತಾರೆ ಪತ್ರಿಮಠ. ವಿವಿಧ ಸಾಹಿತಿಗಳು, ರಾಜಕಾರಣಿಗಳು, ಸಿನಿಮಾ ನಟರು, ನಿಸರ್ಗದ ಚಿತ್ರಗಳು ಅವರ ಕೈಯಲ್ಲಿ ಅರಳಿವೆ.

ಇತ್ತಿಚೆಗೆ ಕುಷ್ಟಗಿ ಪಟ್ಟಣದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ಹಾಜರಿದ್ದ ರಂಭಾಪುರಿ ಜಗದ್ಗುರುಗಳು ಮತ್ತು ರೇಣುಕಾಚಾರ್ಯರ ಚಿತ್ರ ಬಿಡಿಸಿ ಜನರ ಮೆಚ್ಚುಗೆ ಪಡೆದಿದ್ದಾರೆ. ಹಲವು ಸಂಘ ಸಂಸ್ಥೆಗಳು ಪತ್ರಿಮಠ ಅವರ ಪ್ರತಿಭೆಯನ್ನು ಗುರುತಿಸಿ ಸನ್ಮಾನಿಸಿವೆ. ಇದು ಅವರನ್ನು ಸಾಧನೆಗೆ ಪ್ರೇರೇಪಿಸಿದೆ. ಮನೆಯಲ್ಲಿ ಕುಟುಂಬದ ಹಿರಿಯಜ್ಜಿ ತಯಾರಿಸುತ್ತಿದ್ದ ಹಿಟ್ಟಿನ ಬೊಂಬೆಗಳ ಕಸೂತಿ ಕಲೆಯನ್ನು ನೋಡಿ ನನ್ನ ಮಗನಿಗೆ ಚಿತ್ರ ಬಿಡಿಸುವ ಕಡೆ ಆಸಕ್ತಿ ಮೂಡಿದೆ ಎನ್ನುತ್ತಾರೆ ಅವರ ತಂದೆ ಚನ್ನಯ್ಯ ಪತ್ರಿಮಠ.

ಪ್ರತಿಕ್ರಿಯಿಸಿ (+)