ಮಂಗಳವಾರ, ಡಿಸೆಂಬರ್ 10, 2019
20 °C

ಅತ್ಯುನ್ನತ ಶಿಕ್ಷಣ ಸಂಸ್ಥೆಗಳು ಎನ್ನುವ ಹೊಸ ಪ್ರಯೋಗ

Published:
Updated:
ಅತ್ಯುನ್ನತ ಶಿಕ್ಷಣ ಸಂಸ್ಥೆಗಳು ಎನ್ನುವ ಹೊಸ ಪ್ರಯೋಗ

ಭಾರತ ಸರ್ಕಾರವು ಇನ್‌ಸ್ಟಿಟ್ಯೂಷನ್‌ ಆಫ್ ಎಮಿನೆನ್ಸ್ ಎನ್ನುವ ಹೊಸದೊಂದು ಯೋಜನೆಯನ್ನು ರೂಪಿಸಿದೆ. ಇದರ ಪ್ರಕಾರ ಅತ್ಯುನ್ನತ ದರ್ಜೆಯ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಇನ್‌ಸ್ಟಿಟ್ಯೂಟ್‌ ಆಫ್ ಎಮಿನೆನ್ಸ್ ಎನ್ನುವ ಪಟ್ಟವನ್ನು ನೀಡಿ ಅಂತಹ ಸಂಸ್ಥೆಗಳನ್ನು ಯುಜಿಸಿ ಮತ್ತಿತರ ನಿಯಮಕ ಸಂಸ್ಥೆಗಳ ಅಂಕೆಯಿಂದ ಸಂಪೂರ್ಣ ಬಿಡುಗಡೆಗೊಳಿಸುವ ಯೋಜನೆ ಸರ್ಕಾರದ್ದು. ಒಂದೆರಡು ಐಐಟಿಗಳು ಮತ್ತು ಭಾರತೀಯ ವಿಜ್ಞಾನ ಸಂಸ್ಥೆಯಂತಹ ಉನ್ನತ ಶಿಕ್ಷಣ ಕೇಂದ್ರಗಳನ್ನು ಹೊರತುಪಡಿಸಿ, ಭಾರತದ ಯಾವ ಉನ್ನತ ಶಿಕ್ಷಣ ಸಂಸ್ಥೆಯೂ ಅಂತರರಾಷ್ಟ್ರೀಯ ರ‍್ಯಾಂಕಿಂಗ್‌ ಪಟ್ಟಿಗಳಲ್ಲಿ ಸ್ಥಾನ ಪಡೆಯದೇ ಇರುವುದು ಭಾರತದ ಬೆಳೆಯುತ್ತಿರುವ ಜಾಗತಿಕ ವರ್ಚಸ್ಸಿನ ನಡುವೆ ಒಂದು ಅವಮಾನದ ವಿಚಾರ ಎನ್ನುವುದು ಹೆಚ್ಚಿನ ಜನರ ನಂಬಿಕೆ. ಅದೂ ಅಲ್ಲದೇ, ಕೇವಲ ಮೂವತ್ತು ನಲವತ್ತು ವರ್ಷಗಳ ಹಿಂದೆ ನಮಗಿಂತ ತುಂಬಾ ಹಿಂದಿದ್ದ ಪೂರ್ವ ಏಷಿಯಾದ ಉನ್ನತ ಶಿಕ್ಷಣ ಸಂಸ್ಥೆಗಳು, ಅದರಲ್ಲೂ ವಿಶೇಷವಾಗಿ ಚೀನಾದ ಸಂಸ್ಥೆಗಳು ಕಳೆದ ಒಂದೆರಡು ದಶಕಗಳಲ್ಲಿ ಇಂತಹ ರ‍್ಯಾಂಕಿಂಗ್‌ ಮುಂದೆ ಸಾಗಿರುವುದು ಅರಗಿಸಿಕೊಳ್ಳಲಾಗದ ವಿಚಾರ.

ಯುಜಿಸಿ, ನ್ಯಾಕ್, ಎಐಸಿಟಿಇ – ಮುಂತಾದ ಸಂಸ್ಥೆಗಳ ಉಸ್ತುವಾರಿಯಲ್ಲಿ ಅಂತಹ ಒಂದು ಶ್ರೇಷ್ಠ ಸಂಸ್ಥೆ ರೂಪುಗೊಳ್ಳುವುದು ಅಸಾಧ್ಯದ ಮಾತೇ ಸರಿ ಎಂದು ಮನಗಂಡ ಸರ್ಕಾರ, ಈಗ ಅವುಗಳ ಅಂಕೆಯನ್ನು ಮೀರಿದ, ಸಂಪೂರ್ಣ ಸ್ವಾತಂತ್ರ್ಯವಿರುವ ಸಂಸ್ಥೆಗಳನ್ನು ರೂಪಿಸಲು ಹೊರಟಿದೆ. ಈ ಯೋಜನೆಗೆ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು ಎರಡೂ ಅರ್ಜಿ ಸಲ್ಲಿಸಬಹುದು. ಈಗಾಗಲೇ ಅಸ್ತಿತ್ವದಲ್ಲಿರುವ ಸಂಸ್ಥೆಗಳು ಹಾಗೂ ಮುಂದೆ ಅಸ್ತಿತ್ವಕ್ಕೆ ಬರಲಿರುವ ಸಂಸ್ಥೆಗಳೂ ಇದಕ್ಕೆ ಅರ್ಜಿ ಸಲ್ಲಿಸಬಹುದು. ಅರ್ಜಿ ಶುಲ್ಕವೇ ಬರೋಬ್ಬರಿ ಒಂದು ಕೋಟಿ ರೂಪಾಯಿಗಳು. ಜೊತೆಗೆ ಸುಮಾರು ಹದಿನೈದು ಕೋಟಿ ರೂಪಾಯಿಗಳ ಮುಚ್ಚಳಿಕೆಯನ್ನೂ ಕೊಡಬೇಕು. ಅಲ್ಲದೇ, ಇನ್ನು ಹದಿನೈದು ವರ್ಷಗಳಲ್ಲಿ ಸುಮಾರು ಹತ್ತು ಸಾವಿರ ವಿದ್ಯಾರ್ಥಿಗಳಿರುವ ಒಂದು ಬೃಹತ್ತಾದ ಅಂತರಶಿಸ್ತೀಯ ಸಂಸ್ಥೆಯನ್ನು ರೂಪಿಸಬೇಕು. ಅದರಲ್ಲಿ ಪ್ರತಿ ಹದಿನೈದು ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕರಂತೆ ಅನುಪಾತ ಇರಬೇಕು. ಅಂದರೆ, ಸುಮಾರು ಸಾವಿರದ ಐನೂರು ಶಿಕ್ಷಕರಿರಬೇಕು. ಅದರಲ್ಲಿ ಹಲವರು ಹೊರದೇಶಗಳಲ್ಲಿ ಉನ್ನತ ವ್ಯಾಸಂಗ ಮಾಡಿದ ಅಥವಾ ಹೊರದೇಶಗಳ ವಿವಿಗಳಲ್ಲಿ ಕೆಲಸ ಮಾಡಿದ ಅನುಭವ ಇರುವ ಶಿಕ್ಷಕರಿರಬೇಕು. ಜೊತೆಗೆ, ಹೊರದೇಶದ ನಾಗರಿಕರಾದ ಶಿಕ್ಷಕರೂ ವಿದ್ಯಾರ್ಥಿಗಳೂ ಕೆಲವರೂ ಇರಬೇಕು. ಸಾಮಾನ್ಯವಾಗಿ, ಅಮೆರಿಕದ ಅತ್ಯುನ್ನತ ಎನ್ನುವ ಶಿಕ್ಷಣ ಸಂಸ್ಥೆಗಳಲ್ಲಿ ಕನಿಷ್ಠ 15ರಿಂದ 20 ಪ್ರತಿಶತ ವಿದ್ಯಾರ್ಥಿಗಳು ಹೊರದೇಶದವರಿರುತ್ತಾರೆ. ಬೆಂಗಳೂರಿನ ಐಐಎಸ್‍ಸಿಯಲ್ಲಿ ಇಂತಹ ವಿದ್ಯಾರ್ಥಿಗಳ ಸಂಖ್ಯೆ ಬಹುಶಃ ಶೇಕಡಾ ಒಂದು ಅಥವಾ ಎರಡನ್ನು ಮೀರುವುದಿಲ್ಲ. ಇನ್ನು ಹೊರದೇಶದ ಶಿಕ್ಷಕರು ಬೆರಳೆಣಿಕೆಯಷ್ಟೆ. ಇವಿಷ್ಟೇ ಅಲ್ಲದೇ, ಅಂತರರಾಷ್ಟ್ರೀಯ ಮಟ್ಟದ ಸಂಶೋಧನಾ ನಿಯತಕಾಲಿಕೆಗಳಿಗೆ ಪ್ರಬಂಧಗಳನ್ನು ಬರೆಯುವ, ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗೆ ಜಂಟಿ ಸಂಶೋಧನೆಗಳನ್ನು ಮಾಡುವ, ಅದಕ್ಕೆ ಬೇರೆಬೇರೆ ಮೂಲಗಳಿಂದ ಧನಸಹಾಯವನ್ನು ತರುವ ಪ್ರಾಧ್ಯಾಪಕರಿರಬೇಕು. ಒಟ್ಟಾರೆಯಾಗಿ, ಇನ್ನು ಹದಿನೈದು ವರ್ಷಗಳಲ್ಲಿ ಈ ಯೋಜನೆಗೆ ಆಯ್ಕೆಯಾಗುವ ಸಂಸ್ಥೆಗಳು ಮೊದಲ ಮುನ್ನೂರು ನಾನೂರು ರ‍್ಯಾಂಕ್‌ಗಳ ಒಳಗೆ ಬರಬೇಕು.

ಇಂತಹ ಒಂದು ಹತ್ತು ಅಥವಾ ಇಪ್ಪತ್ತು ಸಂಸ್ಥೆಗಳನ್ನು ಆಯ್ಕೆ ಮಾಡುವ ಚಿಂತನೆ ಸರ್ಕಾರದ್ದು. ಸರ್ಕಾರಿ ಮತ್ತು ಖಾಸಗಿ ಎರಡೂ ಸೇರಿದಂತೆ ಸುಮಾರು ನೂರರಿಂದ ನೂರೈವತ್ತು ಸಂಸ್ಥೆಗಳು ಈ ಯೋಜನೆಗೆ ಅರ್ಜಿ ಹಾಕಿವೆ ಎಂದು ಒಂದು ಸುದ್ದಿ. ಈ ಪ್ರಕ್ರಿಯೆಗಾಗಿಯೇ ಒಂದು ಉನ್ನತ ಮಟ್ಟದ ಸಮಿತಿಯನ್ನೂ ಸರ್ಕಾರ ಇನ್ನೇನು ರಚಿಸಲಿದೆ. ಪ್ರತಿ ಅರ್ಜಿಯೂ ಸುಮಾರು ಐನೂರರಿಂದ ಸಾವಿರ ಪುಟಗಳ ಒಂದು ಕಡತವೇ ಆಗಲಿದೆ. ಅದರಲ್ಲಿ ಮುಂದಿನ ಹದಿನೈದು ವರ್ಷಗಳಲ್ಲಿ ಈ ಸಂಸ್ಥೆಗಳು ಬೆಳೆಯಬೇಕೆಂದುಕೊಂಡಿರುವ ದಿಕ್ಕಿನ ಕುರಿತ ವಿವರವಾದ ವಿಚಾರಗಳಿವೆ. ಯಾವ ರೀತಿಯ ವಿಷಯಗಳನ್ನು ಬೋಧಿಸುತ್ತೀರಿ ಎನ್ನುವುದರಿಂದ ಹಿಡಿದು ನಿಮ್ಮ ಬೆಳವಣಿಗೆಯ ಯೋಜನೆಗೂ ನಿಮ್ಮ ಹಣಕಾಸಿನ ಯೋಜನೆಗೂ ತಾಳಮೇಳ ಇದೆಯೇ ಎನ್ನುವವರೆಗೂ ಪ್ರಶ್ನೆಗಳಿವೆ. ಇವೆಲ್ಲಾ ಕಳೆದು ಕೊನೆಗೆ ಒಂದಷ್ಟು ವಿದ್ಯಾಸಂಸ್ಥೆಗಳು ಈ ವರ್ಷದ ಕೊನೆಯ ವೇಳೆಗೆ ಅತ್ಯುನ್ನತ ಸಂಸ್ಥೆಗಳು ಎನ್ನುವ ಸ್ಥಾನಮಾನಕ್ಕೆ ನಿಯೋಜಿತಗೊಳ್ಳಲಿವೆ. ಅದರ ಪರಿಣಾಮವಾಗಿ ಯುಜಿಸಿಯ ಜಿಗುಟಾದ, ಹಳೇ ಕಾಲದ, ಅಧಿಕಾರಶಾಹಿ ಕಪಿಮುಷ್ಟಿಯಿಂದ ಇವು ಬಿಡುಗಡೆಗೊಳ್ಳಲಿವೆ.

ಈ ಇಡಿ ಯೋಜನೆಯ ಕುರಿತು ಕೆಲವು ಅಪಸ್ವರಗಳೂ ಅಲ್ಲಲ್ಲಿ ಕೇಳಿ ಬರುತ್ತಿವೆ. ನಮ್ಮ ದೇಶಕ್ಕೆ ಬೇಕಿರುವುದು ಇಪ್ಪತ್ತು ಶ್ರೇಷ್ಠ ಸಂಸ್ಥೆಗಳಲ್ಲ. ಬದಲಾಗಿ, ನೂರಾರು ಉತ್ತಮ ಸಂಸ್ಥೆಗಳು. ಒಂದು ವೇಳೆ ಈ ಯೋಜನೆ ಜಾರಿಗೆ ಬಂದರೆ, ಆಗ ಸರ್ಕಾರ ಭಾರತದ ಉನ್ನತ ಶಿಕ್ಷಣದ ಆಭಿವೃದ್ಧಿಯನ್ನು ಈ ಇಪ್ಪತ್ತು ಸಂಸ್ಥೆಗಳ ಸುಪರ್ದಿಗೊಪ್ಪಿಸಿ ಮಿಕ್ಕ ಸಾವಿರಾರು ಸಂಸ್ಥೆಗಳನ್ನು ಕಡೆಗಣಿಸಿ, ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತದೆ ಎನ್ನುವುದು ಕೆಲವರ ವಾದ.

ಈಗಾಗಲೇ ದಯನೀಯ ಸ್ಥಿತಿಯಲ್ಲಿರುವ ಭಾರತದ ಉನ್ನತ ಶಿಕ್ಷಣ ಅದರಿಂದ ಇನ್ನೂ ಅಧಃಪತನ ಹೊಂದುತ್ತದೆ ಎನ್ನುವುದು ಇವರ ಭಯ. ಅದರೆ, ಹೊಸದಾಗಿ ಬರುತ್ತಿರುವ ದೊಡ್ಡ ಖಾಸಗಿ ವಿವಿಗಳ ಮತ್ತು ಐಐಟಿಯಂತಹ ಪ್ರತಿಷ್ಠಿತ ಸಂಸ್ಥೆಗಳ ಪ್ರಕಾರ ಅವುಗಳಿಗೆ ದೊಡ್ಡ ತೊಡಕಾಗಿರುವುದು ಸರ್ಕಾರದ ಸಂಸ್ಥೆಗಳ ಹಸ್ತಕ್ಷೇಪ. ಈ ಯೋಜನೆಯಿಂದ ಬೇರೇನೂ ಆಗದಿದ್ದರೂ ಅಂತಹ ಹಸ್ತಕ್ಷೇಪವನ್ನು ತಡೆಯುವುದಕ್ಕೆ ಸಾಧ್ಯವಾದರೆ, ಅದೇ ಒಂದು ಸುದೈವ ಎನ್ನುವುದು ಇವುಗಳ ಅಭಿಮತ. ಇದರಲ್ಲಿ ಎರಡೂ ವಾದಗಳಲ್ಲಿ ಸತ್ಯವಿದೆ. ಸಮಸ್ಯೆ ಏನೆಂದರೆ, ಶಿಕ್ಷಣದಲ್ಲಿ ಔನ್ನತ್ಯ ಎನ್ನುವುದು ಸರ್ಕಾರಿ ಹತೋಟಿಯ ಸ್ವಾತಂತ್ರ್ಯದಿಂದಲೇ ಸಿಗುತ್ತದೆ ಎಂದು ಹೇಳಲು ಬರುವುದಿಲ್ಲ. ಸೋವಿಯೆಟ್ ಯುಗದ ರಷ್ಯಾದಲ್ಲಿ ವಿಜ್ಞಾನ ಮತ್ತು ಸಂಶೋಧನೆ ಬಹಳ ಹುಲುಸಾಗಿ ಬೆಳೆದಿತ್ತು. ಅದಕ್ಕೆ ಶೀತಲ ಸಮರದ ಹಿನ್ನೆಲೆಯೂ ಇತ್ತು ಎನ್ನುವುದು ನಿಜ. ಚೀನಾ ಕೂಡ ನಾಗರಿಕ ಸ್ವಾತಂತ್ರ್ಯಗಳು ಮತ್ತು ಅಕಾಡೆಮಿಕ್ ಸ್ವಾತಂತ್ರ್ಯಗಳನ್ನು ಹತ್ತಿಕ್ಕಿಯೂ ಶಿಕ್ಷಣದಲ್ಲಿ ಇಷ್ಟು ಸಾಧನೆ ಮಾಡಿದೆ. ಇದರರ್ಥ ನಾವೂ ಉನ್ನತ ಶಿಕ್ಷಣ ಸಂಸ್ಥೆಗಳ ಸ್ವಾತಂತ್ರ್ಯವನ್ನು ಮೊಟಕು ಮಾಡಬೇಕೆಂದಲ್ಲ. ಆದರೆ, ಅಕಾಡೆಮಿಕ್ ಸ್ವಾತಂತ್ರ್ಯಕ್ಕೂ ವೈಜ್ಞಾನಿಕ ಪ್ರಗತಿಗೂ ಅಂತಹ ಅವಿನಾಭಾವ ಸಂಬಂಧವಿದೆ ಎಂದುಕೊಳ್ಳುವುದು ಕಷ್ಟ.

ಅದಕ್ಕೂ ಮಿಗಿಲಾಗಿ, ಅತ್ಯುನ್ನತ ಎನ್ನುವ ಮಾಪಕವೇ ಒಂದು ರೀತಿಯಲ್ಲಿ ಸಂಶೋಧನೆಯನ್ನು ಕೈಗಾರಿಕಾ ಉತ್ಪಾದನೆಯಂತೆ ನೋಡುತ್ತದೆ ಎನ್ನುವ ದೂರೂ ಇದೆ. ಸಂಶೋಧನೆಗೆ ಇಂತಹ ಬಾಹ್ಯ ಒತ್ತಡಗಳು ಇರಬಾರದು ಎನ್ನುವ ವಿಚಾರವೇನೋ ಕೇಳಲು ಚೆನ್ನಾಗಿದೆ. ಆದರೆ, ಇಂದಿನ ದೊಡ್ಡ ಸಂಶೋಧನೆಗಳೆಲ್ಲಾ ಕೈಗಾರಿಕಾ ಉತ್ಪಾದನೆಯ ಸಹಯೋಗದಲ್ಲೇ ನಡೆಯುತ್ತಿರುವುದು ಎನ್ನುವ ವಿಚಾರವನ್ನು ಅಲ್ಲಗಳೆಯಲು ಬರುವುದಿಲ್ಲ. ಎಲ್ಲೋ ಸಾಹಿತ್ಯ, ತತ್ವಶಾಸ್ತ್ರದಂತಹ ಒಂದೆರಡು ವಿಷಯಗಳ ಸಂಶೋಧನೆ ಮಾತ್ರ ಕೈಗಾರಿಕೆಗಳ ಸಂಬಂಧವಿಲ್ಲದೇ ನಡೆಯುತ್ತಿರುವುದು. ಆದರೆ, ಇಂತಹ ವಿಷಯಗಳೆಲ್ಲಾ ಹೇಗಿದ್ದರೂ ಇಂದಿನ ಶೈಕ್ಷಣಿಕ ಪರಿಸರದಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂಥವು ತಾನೇ. ಹಾಗಾಗಿ, ಇವುಗಳನ್ನು ಮಾಪಕವಾಗಿಟ್ಟುಕೊಂಡು ವೈಜ್ಞಾನಿಕ ಸಂಶೋಧನೆಗಳನ್ನು ಅಳೆಯಲು ಬರುವುದಿಲ್ಲ.

ಒಟ್ಟಾರೆಯಾಗಿ, ಇನ್‍ಸ್ಟಿಟ್ಯೂಷನ್ ಆಫ್ ಎಮಿನೆನ್ಸ್ ಎನ್ನುವ ಯೋಜನೆ ಭಾರತೀಯ ಉನ್ನತ ಶಿಕ್ಷಣದಲ್ಲಿ ಒಂದು ಹೊಸ ಶಕೆಯನ್ನು ಮತ್ತು ಅದರ ಜೊತೆಗೆ ಹೊಸ ಗೊಂದಲಗಳು, ಪ್ರಶ್ನೆಗಳನ್ನು ಹುಟ್ಟುಹಾಕಿರುವುದಂತೂ ದಿಟ. 

ಪ್ರತಿಕ್ರಿಯಿಸಿ (+)