ಸೋಮವಾರ, ಡಿಸೆಂಬರ್ 9, 2019
22 °C
ಸರ್ಕಾರದ ಆಸರೆಯಿಲ್ಲದೆ 12 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಶಾಲೆ

ಬುದ್ಧಿಮಾಂದ್ಯ ಮಕ್ಕಳ ಬದುಕಿನ ‘ಆಶಾದೀಪ’

ನಾಗರಾಜ ಚಿನಗುಂಡಿ Updated:

ಅಕ್ಷರ ಗಾತ್ರ : | |

ಬುದ್ಧಿಮಾಂದ್ಯ ಮಕ್ಕಳ ಬದುಕಿನ ‘ಆಶಾದೀಪ’

ರಾಯಚೂರು: ವಿವಿಧ ಕಾರಣಕ್ಕಾಗಿ ಬುದ್ಧಿಮಾಂದ್ಯತೆಯಿಂದ ಜನಿಸುವ ಮಕ್ಕಳ ಲಾಲನೆ–ಪಾಲನೆ ಮಾಡುವುದು ಪಾಲಕರಿಗೆ ನಿತ್ಯವೂ ಸವಾಲು. ಇಂಥ ಪಾಲಕರ ಹೊರೆ ಕಡಿಮೆ ಮಾಡುವ ಉದ್ದೇಶದಿಂದ ನಗರದಲ್ಲಿ ಆಶಾದೀಪ ವಿಶೇಷ ಶಾಲೆಯು 12 ವರ್ಷಗಳಿಂದ ಎಲೆಮರೆ ಕಾಯಿಯಂತೆ ಮಕ್ಕಳ ಸೇವೆಯಲ್ಲಿ ತೊಡಗಿಸಿಕೊಂಡಿದೆ.

ಪಂ. ಸಿದ್ಧರಾಮ ಜಂಬಲದಿನ್ನಿ ರಂಗಮಂದಿರ ಹಿಂಭಾಗ ಬಾಡಿಗೆ ಕಟ್ಟಡದಲ್ಲಿ ಆಶಾದೀಪ ಟ್ರಸ್ಟ್‌ ಸ್ಥಾಪಿತ ವಿಶೇಷ ಶಾಲೆ ಇದೆ. ಟ್ರಸ್ಟ್‌ ಸದಸ್ಯರಲ್ಲಿ ಒಬ್ಬರಾದ ಗಂಗಮ್ಮ ಪಾಟೀಲ ಅವರು ತುಂಬಾ ಅಕ್ಕರೆಯಿಂದ ಶಾಲೆಯನ್ನು ಮುನ್ನಡೆಸುತ್ತಾ ಬಂದಿದ್ದಾರೆ. ಮನೆಗಿಂತಲೂ ಶಾಲೆಯ ವಾತಾವರಣ ಹಾಗೂ ಅಕ್ಕರೆಯಿಂದ ಕೈಹಿಡಿದು ಕಲಿಸುತ್ತಿರುವ ಶಾಲೆಯ ಶಿಕ್ಷಕಿಯರೆಲ್ಲ ಬುದ್ಧಿಮಾಂದ್ಯ ಮಕ್ಕಳಿಗೆ ಆಪ್ತರಾಗಿದ್ದಾರೆ. ಮಕ್ಕಳೊಂದಿಗೆ ಮಕ್ಕಳಾಗುವುದರ ಜೊತೆಗೆ ಬುದ್ಧಿಮಾಂದ್ಯರ ಮಟ್ಟಕ್ಕೆ ಇಳಿದು ಹಾವ, ಭಾವದೊಂದಿಗೆ ವರ್ತನೆಗಳನ್ನು ಮತ್ತು ಮಾತುಗಳನ್ನು ಕಲಿಸುತ್ತಾರೆ. ಮಕ್ಕಳ ಬುದ್ಧಿಮಟ್ಟದ (ಐ.ಕ್ಯು.)ವನ್ನು ಗುರುತಿಸಿ, ಅದನ್ನು ವೃಧ್ಧಿಸಲು ಪೂರಕವಾಗುವ ಚಟುವಟಿಕೆಗಳನ್ನು ಯೋಜಿಸಿ ಕಲಿಸಲಾಗುತ್ತದೆ.

ಸಾಮಾನ್ಯ ಬುದ್ಧಿಮಟ್ಟದ ಶಾಲೆಗಳಲ್ಲಿ ಮಕ್ಕಳಿಗೆ ಅಕ್ಷರ ಕಲಿಕೆ ಮೊದಲ ಹಂತದಿಂದಲೆ ಶುರುವಾಗುತ್ತದೆ. ಆದರೆ ಬುದ್ಧಿಮಾಂದ್ಯ ಮಕ್ಕಳು ಅಕ್ಷರ ತಿದ್ದುವ ಹಂತಕ್ಕೆ ಬರಲು ಕೆಲವು ವರ್ಷಗಳು ಬೇಕಾಗುತ್ತದೆ. ಹೇಳಿದನ್ನು ಕೇಳುವುದಿಲ್ಲ. ಕುಳಿತುಕೊಳ್ಳುವುದಕ್ಕೂ ಸಾಧ್ಯವಾಗದ ಸ್ಥಿತಿಯಲ್ಲಿ ಕೆಲವು ಮಕ್ಕಳಿರುತ್ತವೆ. ಕೈ, ಕಾಲು, ತಲೆ ಹಾಗೂ ಕೆಲವರಲ್ಲಿ ದೇಹದ ರಚನೆಯು ಸ್ವಲ್ಪ ವಿಭಿನ್ನವಾಗಿರುವುದನ್ನು ಕಾಣಬಹುದು. ಕುಳಿತುಕೊಳ್ಳುವುದು, ಬಳಪ ಹಿಡಿಯುವುದು, ಊಟ ಮಾಡುವುದು, ಶೌಚಾಲಯ ಬಳಕೆ ಹೀಗೆ... ಸಣ್ಣ ಸಣ್ಣ ವರ್ತನೆ ಅಭ್ಯಾಸ ಮಾಡಿಸುವುದು ಈ ಶಾಲೆಯಲ್ಲಿ ಮಕ್ಕಳು ಕಲಿಸುವ ಮೊದಲ ಹಂತ.

‘ನಿತ್ಯಕರ್ಮ ಪೂರೈಸಲು ಸಾಧ್ಯವಾಗದ ಸ್ಥಿತಿಯಲ್ಲಿ ಮಕ್ಕಳಿರುತ್ತವೆ. ಪ್ರತಿ ಮಗುವಿನ ಮನಸ್ಸಿನ ಸ್ಥಿತಿ ಅರಿತು, ಅದಕ್ಕೆ ತಕ್ಕಂತೆ ಕಲಿಸಬೇಕಾಗುತ್ತದೆ. 12 ವರ್ಷಗಳಲ್ಲಿ ಸಾಕಷ್ಟು ಮಕ್ಕಳು ವರ್ತನೆಗಳನ್ನು ಕಲಿತು ಬದಲಾಗಿವೆ. ಮಕ್ಕಳನ್ನು ಪಾಲಕರು ನಿರಂತರ ಶಾಲೆಗೆ ಕಳುಹಿಸಿದರೆ ಮಾತ್ರ ವರ್ತನೆ ಅಭ್ಯಾಸ ಮಾಡಿಸಲು ಸಾಧ್ಯವಾಗುತ್ತದೆ. ಕೆಲವು ಪಾಲಕರು ನಿರ್ಲಕ್ಷ್ಯ ವಹಿಸುತ್ತಾರೆ. ಮನೆಯಿಂದಲೆ ಮಕ್ಕಳನ್ನು ಕರೆತರಲು ಶಾಲಾವಾಹನ ವ್ಯವಸ್ಥೆ ಮಾಡಿದ್ದೇವೆ’ ಎಂದು ಹೇಳುತ್ತಾರೆ ಗಂಗಮ್ಮ ಪಾಟೀಲ.

ಶಿಶು ಪ್ರಚೋದನೆ ತರಬೇತಿ, ಸ್ವ ಸಹಾಯ ತರಬೇತಿ, ಸಾಮಾಜೀಕರಣ ತರಬೇತಿ, ಅಂಗಾಂಗ ಬೆಳವಣಿಗೆ ತರಬೇತಿ (ಫಿಜಿಯೊ ಥೆರಪಿ), ಬೌದ್ಧಿಕ ತರಬೇತಿ, ಭಾಷಾ ತರಬೇತಿ, ವೈದ್ಯಕೀಯ ಚಿಕಿತ್ಸಾ ಸೌಲಭ್ಯ, ಆಪ್ತ ಸಮಾಲೋಚನೆ, ಆಕ್ಯುಪಂಕ್ಚರ್‌ ಚಿಕಿತ್ಸೆ ಕೊಡಿಸುವ ವ್ಯವಸ್ಥೆ ಶಾಲೆಯಲ್ಲಿದೆ.

**

ಸ್ವಂತ ಕಟ್ಟಡವಿಲ್ಲ!

ಲಾಭಾಪೇಕ್ಷೆಯಿಲ್ಲದೆ ಮಕ್ಕಳ ಸೇವೆಯಲ್ಲಿ ನಿರತವಾದ ಆಶಾದೀಪ ವಿಶೇಷ ಶಾಲೆಗೆ ಇಂದಿಗೂ ಸ್ವಂತ ಕಟ್ಟಡ ಸಾಧ್ಯವಾಗಿಲ್ಲ. ಸರ್ಕಾರದಿಂದ ಯಾವುದೇ ಅನುದಾನವೂ ಸಿಕ್ಕಿಲ್ಲ. ಸಮಾಜದ ದಾನಿಗಳಿಂದ ಸಂಗ್ರಹಿಸಿದ ಹಣದಲ್ಲಿ ಶಾಲೆಯನ್ನು ಮುನ್ನಡೆಸಲಾಗುತ್ತಿದೆ. ಪಾಲಕರಿಂದ ತುಂಬಾ ಕಡಿಮೆ ಸಾಂಕೇತಿಕ ಶುಲ್ಕ ಪಡೆಯಲಾಗುತ್ತದೆ. ಎಂ.ಎ. ಸ್ನಾತಕೋತ್ತರ ಹಾಗೂ ವಿಶೇಷ ಮಕ್ಕಳ ತರಬೇತಿ ಕೋರ್ಸ್‌ ಪೂರೈಸಿರುವ ಗಂಗಮ್ಮ ಪಾಟೀಲ ಅವರು ಯೋಜನಾಬದ್ಧವಾಗಿ ಶಾಲೆಯನ್ನು ನಡೆಸಿಕೊಂಡು ಹೋಗುತ್ತಿದ್ದಾರೆ.

‘ಟ್ರಸ್ಟ್‌ಗೆ ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರವು ಈಚೆಗೆ ಸಿಎ ನಿವೇಶನವೊಂದನ್ನು ಒದಗಿಸಿದೆ. ಆದರೆ ಕಟ್ಟಡ ನಿರ್ಮಾಣಕ್ಕೆ ಲಕ್ಷಾಂತರ ಮೊತ್ತ ಬೇಕಾಗುತ್ತದೆ. ಸಮಾಜದಲ್ಲಿರುವ ದಾನಿಗಳಿಂದ ನೆರವು ಸಿಕ್ಕರೆ ಮಾತ್ರ ಸ್ವಂತ ಕಟ್ಟಡ ನಿರ್ಮಾಣ ಸಾಧ್ಯವಾಗುತ್ತದೆ. ಟ್ರಸ್ಟ್‌ನಲ್ಲಿ ದೊಡ್ಡ ಮೊತ್ತವಿಲ್ಲ’ ಎನ್ನುತ್ತಾರೆ ಟ್ರಸ್ಟ್‌ ಅಧ್ಯಕ್ಷ ಹಾಗೂ ನಿವೃತ್ತ ಜಿಲ್ಲಾಧಿಕಾರಿ ಟಿ.ಶರಣಪ್ಪ.

**

ಬುದ್ಧಿಮಾಂದ್ಯತೆ ಗುರುತಿಸುವುದು?

ನಿಧಾನವಾದ ಪ್ರತಿಕ್ರಿಯೆ, ನಿಧಾನವಾಗಿ ಅರ್ಥ ಮಾಡಿಕೊಳ್ಳುವುದು ಹಾಗೂ ಹಠಹಿಡಿದು ಮನೆಯಲ್ಲಿರುವ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡುವುದು. ಸರಿಯಾಗಿ ವ್ಯಕ್ತಪಡಿಸಲು ಸಾಧ್ಯವಾಗದಿರುವುದು ಹಾಗೂ ನಿರ್ಧಾರ ಮಾಡುವ ಮನಸ್ಥಿತಿ ಇಲ್ಲದಿರುವುದು, ಜ್ಞಾಪಕಶಕ್ತಿಯ ಕ್ಷಿಣತೆ, ಆಟ–ಪಾಠವನ್ನು ನಿಧಾನವಾಗಿ ಕಲಿಯುವುದು, ಏಕಾಗ್ರತೆ ಇಲ್ಲದಿರುವುದು, ಮೈಮೇಲೆ ಪದಾರ್ಥಗಳನ್ನು ಬೀಳಿಸಿಕೊಳ್ಳುವುದು ಅಂದರೆ ಸಂಯೋಜಿತವಾಗಿ ಕೆಲಸ ಮಾಡಿಕೊಳ್ಳದಿರುವುದು. ಪ್ರಮುಖವಾಗಿ, ಮಕ್ಕಳ ಬೆಳವಣಿಗೆ ಕುಂಠಿತವಾಗಿರುವುದು ಬುದ್ಧಿಮಾಂದ್ಯತೆಯ ಲಕ್ಷಣಗಳಾಗಿವೆ.

 

 

ಪ್ರತಿಕ್ರಿಯಿಸಿ (+)