ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೂಲನ್ ‘200’

Last Updated 11 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಜೂಲನ್ ಗೋಸ್ವಾಮಿ ಹೆಸರು ಕೇಳಿದವರಿಗೆಲ್ಲ ಮಹಿಳಾ ಕ್ರಿಕೆಟ್‌ನ ಮಹತ್ವದ ವಿಶ್ವದಾಖಲೆಗಳ ಅಂಕಿ ಸಂಖ್ಯೆಗಳು ಬರುವುದು ಸಹಜ. ಹದಿನೈದು ವರ್ಷಗಳಿಂದ ಭಾರತದ ಮಹಿಳಾ ತಂಡದ ಬೌಲಿಂಗ್ ವಿಭಾಗದ ‘ಸಾರಥಿ’ ಜೂಲನ್ ಈಗ ಮತ್ತೊಂದು ಸಾಧನೆ ಮಾಡಿದ್ದಾರೆ. ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ 200 ವಿಕೆಟ್‌ ಗಳಿಸಿದ ಸಾಧನೆ ಮಾಡಿದ್ದಾರೆ. ಈ ಸಾಧನೆ ಮಾಡಿದ ವಿಶ್ವದ ಏಕೈಕ ಬೌಲರ್ ಶ್ರೇಯ ಅವರದ್ದಾಗಿದೆ.

ಹತ್ತು ತಿಂಗಳುಗಳ ಹಿಂದಷ್ಟೇ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು (181) ಬೌಲರ್‌ ಎಂಬ ಸಾಧನೆಯ ಶಿಖರವೇರಿದ್ದರು. ನಂತರ ವಿಶ್ವಕಪ್‌ನಲ್ಲಿ ಭಾರತ ತಂಡವು ಫೈನಲ್ ಪ್ರವೇಶಿಸುವಲ್ಲಿ ಮಹತ್ವದ ಕಾಣಿಕೆ ನೀಡಿದ್ದರು. ಬಂಗಾಳದ ಆಟಗಾರ್ತಿ ನಿರಂತರವಾಗಿ ಬೆಳೆಯುತ್ತಿದ್ದಾರೆ. ಹಲವು ಸಾಧನೆಗಳ ಮೈಲುಗಲ್ಲುಗಳನ್ನು ಸ್ಥಾಪಿಸುತ್ತಿದ್ದಾರೆ. ತನಗಿಂತ ಕಿರಿಯ ಆಟಗಾರ್ತಿಯರಿಗೆ  ಆದರ್ಶವಾಗುತ್ತಿದ್ದಾರೆ. ಆದರೆ ಈ ಮಟ್ಟಕ್ಕೆ ಬೆಳೆಯುವುದು ಜೂಲನ್ ಅವರಿಗೆ ಸುಲಭವಾಗಿರಲಿಲ್ಲ ಬಾಲ್ಯದಿಂದಲೂ ಹಲವು ಪ್ರತಿಕೂಲ ಪರಿಸ್ಥಿತಿಗಳನ್ನು ದಾಟಿ ಬಂದಿದ್ದಾರೆ.

ಕೋಲ್ಕತ್ತದಿಂದ 80 ಕಿಲೋಮೀಟರ್ಸ್‌ ದೂರದಲ್ಲಿರುವ ಪುಟ್ಟ ಊರು ಚಕ್ಡಾದಲ್ಲಿ 1982ರಲ್ಲಿ ಜೂಲನ್ ಜನಿಸಿದರು. ಅವರ ತಂದೆ ವಾಯುಪಡೆಯಲ್ಲಿ ಉದ್ಯೋಗಿಯಾಗಿದ್ದರು. ಅವರ ಮೂವರು ಪುತ್ರಿಯರಲ್ಲಿ ಜೂಲನ್ ದೊಡ್ಡವರು.  ತನ್ನ ಸಹೋದರಿಯರೊಂದಿಗೆ ವಾಲಿಬಾಲ್, ಫುಟ್‌ಬಾಲ್‌ ಆಡುತ್ತಿದ್ದರು. ಎಂಟನೇ ವಯಸ್ಸಿನಲ್ಲಿದ್ದಾಗ ತಮ್ಮ ಮನೆ ಮುಂದೆ ಕ್ರಿಕೆಟ್ ಆಡುತ್ತಿದ್ದ ಹುಡುಗರೊಂದಿಗೆ ಸೇರಿಕೊಂಡರು. ಟೆನಿಸ್‌ಬಾಲ್‌ ಬೌಲಿಂಗ್ ಮಾಡುವಾಗ ಅತಿ ನಿಧಾನವಾಗಿ ಅವರು ಎಸೆತಗಳನ್ನು ಹಾಕುತ್ತಿದ್ದರು.ಬ್ಯಾಟ್ಸ್‌ಮನ್‌ಗಳು ಆ ಎಸೆತಗಳನ್ನು ಸಿಕ್ಸರ್‌ಗೆ ಎತ್ತುತ್ತಿದ್ದರು. ಜೂಲನ್ ಬ್ಯಾಟಿಂಗ್ ಮಾಡುವಾಗ ಹುಡುಗರು ಬಿರುಗಾಳಿ ವೇಗದಲ್ಲಿ ಎಸೆತಗಳನ್ನು ಹಾಕಿ ಔಟ್ ಮಾಡುತ್ತಿದ್ದರು.  'ಕ್ರಿಕೆಟ್ ಹುಡುಗಿಯರಿಗಲ್ಲ ಹೋಗು' ಎನ್ನುವ ಕಟಕಿಗಳು ಬೇರೆ. ಆ ಮಾತುಗಳೇ ಜೂಲನ್ ಮನದಲ್ಲಿ ಛಲದ ಬೀಜ ಬಿತ್ತಿದವು. ಮನರಂಜನೆಗಾಗಿ ಆಡುತ್ತಿದ್ದ ಆಟವನ್ನು ಗಂಭೀರವಾಗಿ ಪರಿಗಣಿಸಿದರು.

ಚೆಂಡನ್ನು ಜೋರಾಗಿ ಎಸೆಯುವ ಅಭ್ಯಾಸವನ್ನು ಏಕಾಂಗಿಯಾಗಿ ಮಾಡಿದರು. ಇದನ್ನು ಗಮನಿಸಿದ ತಂದೆ-ತಾಯಿ ದಿಗಿಲುಗೊಂಡರು. "ಕ್ರಿಕೆಟ್‌ನಲ್ಲಿ ಭವಿಷ್ಯ ಇಲ್ಲ. ಓದು-ಬರಹ ಮಾಡಿ ಉದ್ಯೋಗ ಹಿಡಿದು ಜೀವನ ರೂಪಿಸಿಕೊ' ಎಂದು ಬುದ್ಧಿ ಹೇಳಿದರು. ಅದಕ್ಕೆ ಬಗ್ಗದ ಜೂಲನ್ ಅವರಿಗೆ ಗದರಿಸುವ ಯತ್ನ ಮಾಡಿದರು ಆದರೆ, ಜೂಲನ್ ಜಗ್ಗಲಿಲ್ಲ. ತಮ್ಮೂರಿನ ಕ್ರಿಕೆಟ್ ಕ್ಲಬ್‌ಗೆ ತರಬೇತಿ ಪಡೆಯಲು ಸೇರಿಕೊಂಡರು.

ಆದರೆ 1997ರಲ್ಲಿ ಅವರ ಜೀವನಕ್ಕೆ ಮಹತ್ವದ ತಿರುವು ಲಭಿಸಿತು. ಈಡನ್ ಗಾರ್ಡನ್‌ನಲ್ಲಿ ನಡೆದ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ಮಹಿಳಾ ತಂಡಗಳ ನಡುವಣ ನಡೆದ ಫೈನಲ್ ಪಂದ್ಯ ನೋಡಿದರು.  ಉಭಯ ದೇಶಗಳ ಆಟಗಾರ್ತಿಯರ ಆಟದಿಂದ ಪ್ರಭಾವಿತರಾದ ಅವರು ಕ್ರಿಕೆಟ್‌ಗೆ ತಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿಕೊಳ್ಳಲು ನಿರ್ಧರಿಸಿದರು. ತಮ್ಮ ಊರಿನ ಅಕಾಡೆಮಿ ತೊರೆದರು. ಕೋಲ್ಕತ್ತದ ವಿವೇಕಾನಂದ ಪಾರ್ಕ್‌ನಲ್ಲಿರುವ ಕ್ರಿಕೆಟ್ ಅಕಾಡೆಮಿ ಸೇರಿದರು. ಪ್ರತಿದಿನ ಬೆಳಿಗ್ಗೆ 5 ಗಂಟೆಗೆ ತಮ್ಮ ಊರಿನಿಂದ ಲೋಕಲ್ ಟ್ರೈನ್‌ನಲ್ಲಿ ಕೋಲ್ಕತ್ತಕ್ಕೆ ಹೋಗುತ್ತಿದ್ದರು. ಬೆಳಿಗ್ಗೆ 7.30ರಿಂದ ಸುಮಾರು 2 ತಾಸುಗಳ ತರಬೇತಿ ಪಡೆದು ಊರಿಗೆ ಮರಳುತ್ತಿದ್ದರು. ಜೊತೆಗೆ ವಿದ್ಯಾಭ್ಯಾಸಕ್ಕೂ ಒತ್ತು ನೀಡಿದರು. ಅವರ ಶ್ರಮಕ್ಕೆ ಬೆಲೆ ಸಿಕ್ಕಿತು. ಮುಂದಿನ ಎರಡೇ ವರ್ಷಗಳಲ್ಲಿ ಬಂಗಾಳ ತಂಡಕ್ಕೆ ಅವರು ಆಯ್ಕೆಯಾದರು. 2002ರಲ್ಲಿ ಭಾರತ ತಂಡಕ್ಕೂ ಅವರು ಪದಾರ್ಪಣೆ ಮಾಡಿದರು.

ವೇಗದ ಬೌಲರ್ ಶ್ರೇಯ:

2007ರಲ್ಲಿ ಇಂಗ್ಲೆಂಡ್ ಪ್ರವಾಸಕ್ಕೆ ತೆರಳಿದ್ದ ಭಾರತ ತಂಡದಲ್ಲಿ ಅವರಿದ್ದರು. ಟೆಸ್ಟ್ ಪಂದ್ಯದಲ್ಲಿ ಅವರು (78ಕ್ಕೆ10) ಅಮೋಘ ಬೌಲಿಂಗ್ ಮೂಲಕ ಭಾರತಕ್ಕೆ ಗೆಲುವಿನ ಕಾಣಿಕೆ ನೀಡಿದ್ದರು. ಅಲ್ಲದೇ ಪ್ರತಿ ಗಂಟೆಗೆ 120 ಕಿಲೋಮೀಟರ್ಸ್ ವೇಗದಲ್ಲಿ ಬೌಲಿಂಗ್ ಮಾಡಿದ ಅವರು ವಿಶ್ವದ ಅತಿ ವೇಗದ ಮಹಿಳಾ ಬೌಲರ್ ಶ್ರೇಯಕ್ಕೂ ಪಾತ್ರರಾದರು. ‘ನೀನು ತುಂಬಾ ನಿಧಾನವಾಗಿ ಬೌಲಿಂಗ್ ಮಾಡ್ತಿ. ಎದುರಾಳಿ ತಂಡಕ್ಕೆ ಹೆಚ್ಚು ರನ್ ನೀಡಿ ನಾವು ಸೋಲುವಂತೆ ಮಾಡುತ್ತಿ. ಬರೀ ಬ್ಯಾಟಿಂಗ್, ಫೀಲ್ಡಿಂಗ್ ಮಾಡು ಸಾಕು' ಎಂದು ಬಾಲ್ಯದಲ್ಲಿ ಲೇವಡಿ ಮಾಡಿದ್ದ ಹುಡುಗರು ಬೆರಗಾಗುವ ಸಾಧನೆಯನ್ನು ಮಾಡಿದರು.  ಅದೇ ವರ್ಷ ಐಸಿಸಿ ವರ್ಷದ ಆಟಗಾರ್ತಿ ಪುರಸ್ಕಾರವನ್ನೂ ತಮ್ಮದಾಗಿಸಿಕೊಂಡರು.

ವಿಶ್ವಕಪ್ ಗೆದ್ದ ನಂತರವೇ ನಿವೃತ್ತಿಯಾಗುವುದಾಗಿ ಹೇಳಿರುವ ಜೂಲನ್ 35ರ ಹರೆಯದಲ್ಲಿಯೂ ದೈಹಿಕ ಸಾಮರ್ಥ್ಯ ಕಾಪಾಡಿಕೊಂಡು ಸಾಧನೆಗಳ ಶಿಖರ ಏರುತ್ತಿದ್ಧಾರೆ. v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT