ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಗಿ ಸಾಗಿಸಿದ ದಲಿತ ರೈತನ ಮೇಲೆ ಹಲ್ಲೆ

ಕಣದಲ್ಲಿ ಕಾಳುಕಡ್ಡಿ ಬೇರ್ಪಡಿಸಿ ಲಗೇಜ್‌ ಆಟೊದಲ್ಲಿ ಸಾಗಿಸುವ ವೇಳೆ ಸವರ್ಣೀಯರಿಂದ ಕೃತ್ಯ
Last Updated 11 ಫೆಬ್ರುವರಿ 2018, 13:03 IST
ಅಕ್ಷರ ಗಾತ್ರ

ಮಾಗಡಿ: ತಾಲ್ಲೂಕಿನ ಕಲ್ಲೂರು ಗ್ರಾಮದಲ್ಲಿ ದಲಿತ ರೈತರೊಬ್ಬರು ಹೊಲದಿಂದ ಮನೆಗೆ ರಾಗಿ ಸಾಗಿಸಲು ಸವರ್ಣೀಯರು ಅಡ್ಡಿಪಡಿಸಿ, ಹಲ್ಲೆ ನಡೆಸಿದ್ದಾರೆ. ತಾವರೆಕೆರೆ ಪೊಲೀಸರು ದಲಿತ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿ ಮೂವರನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ.

ಕಲ್ಲೂರಿನ ದಲಿತ ರೈತ ತಿರುಮಲಗಿರಯ್ಯ, ನಂಜುಂಡಪ್ಪ ಅವರ ಜಮೀನಿನಲ್ಲಿ ಪಾಲುದಾರಿಕೆಯಲ್ಲಿ ಬೆಳೆದಿದ್ದ ರಾಗಿಮೆದೆಯನ್ನು ಕಣದಲ್ಲಿ ಕಾಳುಕಡ್ಡಿ ಬೇರ್ಪಡಿಸಿ ರಾಗಿಯನ್ನು ಚೀಲಕ್ಕೆ ತುಂಬಿ ಲಗೇಜ್‌ ಆಟೊದಲ್ಲಿ ಮನೆಗೆ ತೆಗೆದುಕೊಂಡು ಸವರ್ಣೀಯರ ಜಮೀನಿನಲ್ಲಿ ಹೋಗುತ್ತಿದ್ದರು. ಪಕ್ಕದ ಜಮೀನಿನ ಮಾಲೀಕ ಕೆ.ಟಿ.ನರಸಿಂಹಮೂರ್ತಿ, ದಿಲೀಪ, ರೋಹಿತ್, ಹೇಮಂತ ಹಾಗೂ ನೀಲಮ್ಮ ಎಂಬುವವರು ತಮ್ಮ ಜಮೀನಿನಲ್ಲಿ ದಲಿತ ವ್ಯಕ್ತಿ ರಾಗಿ ತೆಗೆದುಕೊಂಡು ಹೋಗಲು ಅವಕಾಶ ಕೊಡುವುದಿಲ್ಲ ಎಂದು ಅಡ್ಡಿಪಡಿಸಿ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ್ದರು ಎಂದು ದೂರಲಾಗಿದೆ.

ಮನನೊಂದ ತಿರುಮಲಗಿರಯ್ಯ ರಾಗಿ ಮೂಟೆಗಳನ್ನು ಕೆ.ಟಿ.ನರಸಿಂಹ ಮೂರ್ತಿ ಅವರ ಹೊಲದಲ್ಲಿಯೇ ಬಿಟ್ಟು ಜೀವ ಬೆದರಿಕೆಯಿಂದ ತಾವರೆಕೆರೆ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದರು.

ಸರ್ಕಲ್‌ ಇನ್‌ಸ್ಪೆಕ್ಟರ್‌ ಶಬರೀಶ್ ಸ್ಥಳಕ್ಕೆ ಭೇಟಿ ನೀಡಿದ್ದರು. ಪಕ್ಕದ ಜಮೀನಿನ ಮಾಲೀಕ ಕೆ.ಟಿ.ನರಸಿಂಹಮೂರ್ತಿ ಸ್ಥಳಕ್ಕೆ ಬಂದು ಯಾವುದೇ ಕಾರಣಕ್ಕೂ ದಲಿತ ವ್ಯಕ್ತಿ ಜಮೀನಿನಲ್ಲಿ ಸಂಚರಿಸಲು ಬಿಡುವುದಿಲ್ಲ ಎಂದು ಸರ್ಕಲ್‌ ಇನ್‌ಸ್ಪೆಕ್ಟರ್‌ ಮುಂದೆಯೇ ಅಡ್ಡಿಪಡಿಸಿದರು. ಪ್ರಕರಣ ದಾಖಲಿಸಿರುವ ಪೊಲೀಸರು, ದಲಿತರ ಮೇಲೆ ಹಲ್ಲೆ ನಡೆಸಿ ದೌರ್ಜನ್ಯ ನಡೆಸಿದ್ದ ನೀಲಮ್ಮ, ದಿಲೀಪ, ಹೇಮಂತ ಅವರನ್ನು ಬಂಧಿಸಿದ್ದಾರೆ.

ತಾಲ್ಲೂಕು ದಲಿತ ಸಂಘರ್ಷ ಸಮಿತಿ ಸಂಚಾಲಕ ದೊಡ್ಡಯ್ಯ ಮಾತನಾಡಿ, ಇಂದಿಗೂ ದಲಿತ ಸಮುದಾಯ, ಸವರ್ಣೀಯರ ಶೋಷಣೆಗೆ ಒಳಗಾಗುತ್ತಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ದಲಿತರಿಗೆ ಸಾಮಾಜಿಕ ನ್ಯಾಯ ಕೊಡಿಸುತ್ತಿಲ್ಲ ಎಂದು ದೂರಿದರು.

ದಲಿತ ಮುಖಂಡರಾದ ಶ್ರೀನಿವಾಸ್, ಗಂಗಾಧರ್, ದೊಡ್ಡಿ ಲಕ್ಷ್ಮಣ, ವಿ.ಜಿ.ರಾಮಕೃಷ್ಣಯ್ಯ, ನರಸಿಂಹಯ್ಯ, ಹನುಮಂತ ಇದ್ದರು.
**
ಕ್ರಮಕ್ಕೆ ಆಗ್ರಹಿಸಿ ಹೋರಾಟ

ಘಟನೆಯ ಒಂದನೇ ಆರೋಪಿ ಕೆ.ಟಿ.ನರಸಿಂಹ ಮೂರ್ತಿ ಅವರನ್ನು ಬಂಧಿಸದೇ ಉಳಿದ ಆರೋಪಿಗಳನ್ನು ಮಾತ್ರ ಬಂಧಿಸಿದ್ದು, ಘಟನೆಯ ಮೂಲ ಆರೋಪಿಗೆ ಪೊಲೀಸರೇ ರಕ್ಷಣೆ ನೀಡುವ ಮೂಲಕ ಪೊಲೀಸ್ ಅಧಿಕಾರಿಗಳು ದಲಿತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ದೊಡ್ಡಯ್ಯ ದೂರಿದರು.

ಕೂಡಲೇ ಪ್ರಮುಖ ಆರೋಪಿಯನ್ನು ಬಂಧಿಸಿ ದಲಿತರಿಗೆ ನ್ಯಾಯ ಒದಗಿಸಬೇಕು. ಇಲ್ಲದಿದ್ದರೆ ಪೊಲೀಸ್ ಠಾಣೆಯ ಮುಂದೆ ಉಗ್ರ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT