ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೇಷ್ಠ ‘ಶುಭ’ ಸಂದರ್ಭ

Last Updated 11 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಫೆಬ್ರುವರಿ 2017ರಲ್ಲಿ ಇಂಗ್ಲೆಂಡ್ ಎದುರು 19 ವರ್ಷದೊಳಗಿನವರ ಏಕದಿನ ಕ್ರಿಕೆಟ್ ಟೂರ್ನಿ ನಡೆಯಿತು. ಮೊದಲ ಎರಡು ಪಂದ್ಯಗಳಲ್ಲಿ ಪ್ರಮುಖ ಬ್ಯಾಟ್ಸ್‌ಮನ್ ಚೆಂಡನ್ನು ಮೇಲಕ್ಕೆ ಹೊಡೆದು ಔಟಾದ. ಇದನ್ನು ತರಬೇತುದಾರ ರಾಹುಲ್ ದ್ರಾವಿಡ್ ಗಮನಿಸಿದರು. ‘ನೀನು ಉತ್ತಮ ಬ್ಯಾಟ್ಸ್‌ಮನ್. ಸುಮ್ಮನೆ ಮೇಲಕ್ಕೆ ಯಾಕೆ ಹೊಡೀತೀಯ? ತಿದ್ದಿಕೋ’ ಎಂದು ಬುದ್ಧಿ ಹೇಳಿದರು. ಮುಂದಿನ ಎರಡು ಏಕದಿನ ಪಂದ್ಯಗಳಲ್ಲಿ ಹುಡುಗ ಸತತವಾಗಿ ಶತಕಗಳನ್ನು ಗಳಿಸಿದ.

ದ್ರಾವಿಡ್ ಹೇಳಿಕೊಟ್ಟ ಇಂಥ ಹಲವು ಪಾಠಗಳನ್ನು ಕಣ್ಣಿಗೊತ್ತಿಕೊಳ್ಳುವ ಹುಡುಗನ ಹೆಸರು ಶುಭಮನ್ ಗಿಲ್.  ಐಸಿಸಿಯ 19 ವರ್ಷದೊಳಗಿನವರ ವಿಶ್ವಕಪ್ ಗೆದ್ದು ಭಾರತ ಬೀಗುತ್ತಿರುವುದು ಗೊತ್ತೇ ಇದೆ. ಟೂರ್ನಿಯಲ್ಲಿ ಒಟ್ಟು 341 ರನ್ ಕಲೆಹಾಕಿದ ಶುಭಮನ್ ‘ಸರಣಿ ಶ್ರೇಷ್ಠ’ ಎನಿಸಿಕೊಂಡ. ಪಾಕಿಸ್ತಾನದ ಎದುರು ಮಹತ್ವದ ಘಟ್ಟದಲ್ಲಿ ಗಳಿಸಿದ ಶತಕಕ್ಕೆ ಹೆಚ್ಚೇ ತೂಕವಿತ್ತು.

ಶುಭಮನ್ ಪ್ರತಿ ಹನಿ ಬೆವರಿನ ಲೆಕ್ಕ ಅವನ ಅಪ್ಪ ಲಖ್ವಿಂದರ್ ಸಿಂಗ್ ಅವರಿಗೆ ಗೊತ್ತು. ಪಂಜಾಬ್‌ನ ಫಜಿಲ್ಕಾದಲ್ಲಿ ಕೃಷಿ ಭೂಮಿಯಲ್ಲಿ ಹಸಿರು ಕಾಣುತ್ತಾ ಖುಷಿಯಿಂದ ಇದ್ದ ಲಖ್ವಿಂದರ್, ಕ್ರಿಕೆಟಿಗ ಆಗಬೇಕೆಂದು ಬಯಸಿದ್ದರು. ಅದು ಆಗಿರಲಿಲ್ಲ. ಮಗ ಹುಟ್ಟಿದ್ದೇ ಆ ಕನಸನ್ನು ದಾಟಿಸಿಬಿಟ್ಟರು. ಶುಭಮನ್ ಮೂರರ ಬಾಲಕನಾಗಿದ್ದಾಗಲೇ ಕ್ರಿಕೆಟ್ ಗೀಳು ಹತ್ತಿತ್ತು. ರಾತ್ರಿ ಒಂದೆರಡು ಸಲವಾದರೂ ಚೆಂಡನ್ನು ಪುಟ್ಟ ಬ್ಯಾಟ್‌ನಿಂದ ಹೊಡೆಯದೇ ಇದ್ದರೆ ನಿದ್ದೆಯನ್ನೇ ಮಾಡುತ್ತಿರಲಿಲ್ಲ.

ಟಿ.ವಿಯಲ್ಲಿ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷ್ಮಣ್ ಆಟವನ್ನು ಕಣ್ಣು ಮಿಟುಕಿಸದೆ ನೋಡುತ್ತಿದ್ದ. ಗೋಡೆಗೆ ಚೆಂಡನ್ನು ಎಸೆದು, ಅವರಂತೆ ಡ್ರೈವ್ ಮಾಡಲು ಯತ್ನಿಸುತ್ತಿದ್ದ. ಇದನ್ನೆಲ್ಲ ಗಮನಿಸಿದ ಅಪ್ಪ, ಹೊಲಕ್ಕೆ ಕೆಲಸಕ್ಕೆ ಬರುತ್ತಿದ್ದವರ ಮಕ್ಕಳನ್ನೆಲ್ಲ ಕರೆಸಿದರು. ಶುಭಮನ್ ದಣಿಯುವವರೆಗೆ ಅವನಿಗೆ ಆ ಮಕ್ಕಳು ಚೆಂಡು ಹಾಕಬೇಕಿತ್ತು. ಅದಕ್ಕೆ ಕೂಲಿಯನ್ನೂ ಕೊಡುವಷ್ಟು ಲಖ್ವಿಂದರ್ ಧಾರಾಳಿಯಾಗಿದ್ದರು.

ಮಗನನ್ನು ವೃತ್ತಿಪರ ಕ್ರಿಕೆಟಿಗ ಮಾಡಬೇಕೆಂದು ಅವರು ಸಂಕಲ್ಪ ಮಾಡಿದರು. ತಮ್ಮ ಹಳ್ಳಿಯಿಂದ 300 ಕಿ.ಮೀ. ದೂರದ ಮೊಹಾಲಿಯಲ್ಲಿದ್ದ ಪಂಜಾಬ್ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣಕ್ಕೆ ಸಮೀಪದಲ್ಲೇ ಒಂದು ಬಾಡಿಗೆ ಮನೆ ಹಿಡಿದರು. ಅಲ್ಲಿ ಭಾರತ-ಪಾಕಿಸ್ತಾನದ ನಡುವೆ ಪಂದ್ಯವೊಂದು ನಡೆದಾಗ, ಮಗನನ್ನು ಕರೆದುಕೊಂಡು ಹೋಗಿ ತೋರಿಸಿದರು. ಶುಭಮನ್ ಅಲ್ಲಿ ನಡೆಯುತ್ತಿದ್ದ ಕ್ರಿಕೆಟ್ ಅಭ್ಯಾಸ ನೋಡಿಕೊಂಡೇ ಬೆಳೆದ. ಮುಂದೆ ಆಡುವವರ ಸಾಲಿನಲ್ಲಿ ತಾನೂ ಒಬ್ಬನಾದ.

ಕಳೆದ ಕೆಲವು ತಿಂಗಳುಗಳಲ್ಲಿ ಅವನಿಗೆ ಬದುಕು ಹಲವು ಪಾಠಗಳನ್ನು ಕಲಿಸಿದೆ. ಪಕ್ಕೆನೋವಿನಿಂದ ಎರಡು ತಿಂಗಳು ಒದ್ದಾಡಿದ. ಅದರಿಂದಾಗಿಯೇ ಕೆಲವು ಪ್ರಥಮ ದರ್ಜೆ ಪಂದ್ಯಗಳನ್ನು ಆಡಲು ಆಗಲಿಲ್ಲ. ಕಳೆದ ವರ್ಷ ರಣಜಿ ಋತುವಿನಲ್ಲಿ ಅವನಿಗೆ ಅವಕಾಶ ಸಿಕ್ಕಿತು. ಮೊದಲ ಪಂದ್ಯದಲ್ಲಿ ಅರ್ಧ ಶತಕ ಗಳಿಸಿದ ಅವನು, 2ನೇ ಪಂದ್ಯದಲ್ಲೇ 129 ರನ್ ಕಲೆಹಾಕಿದ್ದು ವಿಶೇಷ. ಜೂನಿಯರ್ ವಿಶ್ವಕಪ್ ನಡೆಯುವ ಹೊತ್ತಿನಲ್ಲೇ ಇಂಡಿಯನ್ ಪ್ರೀಮಿಯರ್ ಕ್ರಿಕೆಟ್ ಲೀಗ್ ಹರಾಜಿನಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಮಾಲೀಕರು 1.8 ಕೋಟಿ ರೂಪಾಯಿ ಬೆಲೆ ಕೊಟ್ಟು ಇವನನ್ನು ಸೇರಿಸಿಕೊಂಡರು. ‘ನೀನು ಸೆಲೆಕ್ಟ್ ಆದೆ’ ಎಂದು ಅಮ್ಮ ಫೋನ್ ಮಾಡಿ ಹೇಳಿದಾಗ ಶುಭಮನ್, ‘ಯಾವ ತಂಡಕ್ಕೆ?’ ಎಂದು ಕೇಳಿದನೇ ವಿನಾ ‘ಎಷ್ಟು ಹಣಕ್ಕೆ?’ ಎನ್ನಲಿಲ್ಲ.

2013-14, 2014-15 ಎರಡೂ ವರ್ಷ ಭಾರತದ ಶ್ರೇಷ್ಠ ಕಿರಿಯ ಕ್ರಿಕೆಟಿಗ ಎಂಬ ಪ್ರಶಸ್ತಿಯನ್ನು ಬಿಸಿಸಿಐ ನೀಡಿ ಗೌರವಿಸಿದೆ. ದೊಡ್ಡ ಸ್ಕೋರ್ ಗಳಿಸುವುದು ಇವನಿಗೆ ಚಾಳಿ. ಅಂತರ ಜಿಲ್ಲಾ ಮಟ್ಟದ 16 ವರ್ಷದೊಳಗಿನವರ ಕ್ರಿಕೆಟ್ ಟೂರ್ನಿಯ ಪಂದ್ಯವೊಂದರಲ್ಲಿ ಮೊದಲ ವಿಕೆಟ್‌ಗೆ ನಿರ್ಮಲ್ ಸಿಂಗ್ ಜೊತೆ 587 ರನ್ ಜೊತೆಯಾಟದಲ್ಲಿ ಇವನು ಆಡಿದ್ದ. ಅದು ಆ ಹಂತದ ಆಟದಲ್ಲಿ ಮೂಡಿದ ದಾಖಲೆ. 277 ಎಸೆತಗಳಲ್ಲಿ 351 ರನ್ ಅದರಲ್ಲಿ ಇವನ ಕಾಣ್ಕೆ.

ಹತ್ತೊಂಬತ್ತು ವರ್ಷದೊಳಗಿನವರ ಏಕದಿನ ಕ್ರಿಕೆಟ್ ಪಂದ್ಯಗಳಲ್ಲಿ ಇವನ ಸರಾಸರಿ 97.12. ಇದು ಸರ್ ಡಾನ್ ಬ್ರಾಡ್ಮನ್ ಸರಾಸರಿಯನ್ನು ನೆನಪಿಸುವಂತಿದೆ. ಹಾಗೆಂದರೆ, ‘ಅಂಥ ದೊಡ್ಡ ಮನುಷ್ಯರೆಲ್ಲಿ; ನಾನೆಲ್ಲಿ?’ ಎಂದು ಶುಭಮನ್ ಸಂಕೋಚದಿಂದಲೇ ಪ್ರತಿಕ್ರಿಯಿಸುತ್ತಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT