ಬುಧವಾರ, ಡಿಸೆಂಬರ್ 11, 2019
16 °C

ಸಾಹಸ, ರೋಮಾಂಚನದ ಚಳಿಗಾಲದ ಒಲಿಂಪಿಕ್ಸ್‌...

Published:
Updated:
ಸಾಹಸ, ರೋಮಾಂಚನದ ಚಳಿಗಾಲದ ಒಲಿಂಪಿಕ್ಸ್‌...

ಕಣ್ಣು ಹಾಯಿಸಿದಷ್ಟೂ ಸುಂದರವಾಗಿ ಕಾಣುವ ಚೆಲುವು, ಮೈಕೊರೆಯುವ ಚಳಿ, ಸ್ವಲ್ಪ ಎಚ್ಚರ ತಪ್ಪಿದರೂ ಪ್ರಾಣವೇ ಹೋಗುವಂತಹ ಅಪಾಯಕಾರಿ ಕ್ರೀಡೆಗಳ ರೋಚಕತೆಯ ಸಂಗಮ ಚಳಿಗಾಲದ ಒಲಿಂಪಿಕ್ಸ್‌ ಮತ್ತೆ ಬಂದಿದೆ. ಭಾರತದಲ್ಲಿ ಚಳಿಯ ತೀವ್ರತೆ ನಿಧಾನವಾಗಿ ಕಡಿಮೆಯಾಗಿ ಬಿಸಿ ಏರುತ್ತಿದೆ. ಆದರೆ ಒಲಿಂಪಿಕ್ಸ್‌ಗೆ ಆತಿಥ್ಯ ವಹಿಸಿರುವ ದಕ್ಷಿಣ ಕೊರಿಯಾದ ಪೆಂಗ್‌ಯಾಂಗ್‌ ನಗರ ಚಳಿಯ ಅಬ್ಬರದಿಂದ ರಂಗೇರುತ್ತಿದೆ.

90 ವರ್ಷಗಳ ಇತಿಹಾಸವಿರುವ ಚಳಿಗಾಲದ ಒಲಿಂಪಿಕ್ಸ್‌ಗೆ ದಕ್ಷಿಣ ಕೊರಿಯಾ ಮೊದಲ ಬಾರಿಗೆ ಆತಿಥ್ಯ ವಹಿಸಿದೆ. ಸಾಹಸ, ರೋಮಾಂಚನ, ಕುತೂಹಲ ಈ ಒಲಿಂಪಿಕ್ಸ್‌ನ ವಿಶೇಷತೆ.

ಈ ಬಾರಿಯ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ 15 ಕ್ರೀಡೆಗಳ 115 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯುತ್ತಿವೆ. ಬಿಗ್ ಏರ್‌ ಸ್ನೋ ಬೋರ್ಡ್‌, ಮಾಸ್‌ ಸ್ಟಾರ್ಟ್‌ ಸ್ಪೀಡ್‌ ಸ್ಕೇಟಿಂಗ್‌, ಮಿಶ್ರ ಡಬಲ್ಸ್ ವಿಭಾಗದ ಕರ್ಲಿಂಗ್‌ ಮೊದಲ ಬಾರಿಗೆ ಸ್ಥಾನ ಪಡೆದಿದ್ದು ಈ ಸಲದ ವಿಶೇಷ. ಈಕ್ವೆಡಾರ್, ಕೊಸೊವ, ಮಲೇಷ್ಯಾ, ನೈಜೇರಿಯಾ ಮತ್ತು ಸಿಂಗಪುರ ದೇಶಗಳ ಸ್ಪರ್ಧಿಗಳು ಕೂಡ ಮೊದಲ ಸಲ ಮಂಜಿನ ಗಡ್ಡೆಯಲ್ಲಿ ಸಾಹಸ ತೋರಿಸಲು ಅಣಿಯಾಗಿದ್ದಾರೆ.

ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಸಾಮಾನ್ಯವಾಗಿ ಅಮೆರಿಕ, ಕೆನಡ. ಸ್ವಿಟ್ಜರ್‌ಲೆಂಡ್‌, ರಷ್ಯಾ, ಜರ್ಮನಿ, ಜಪಾನ್‌, ಇಟಲಿ, ದಕ್ಷಿಣ ಕೊರಿಯಾ, ಸ್ವೀಡನ್‌, ನಾರ್ವೆ, ಫ್ರಾನ್ಸ್‌, ಫಿನ್‌ಲ್ಯಾಂಡ್‌, ಅಸ್ಟ್ರೀಯಾ ದೇಶಗಳ ಕ್ರೀಡಾಪಟುಗಳೇ ಹೆಚ್ಚು. ಈ ಸಲ ಅಮೆರಿಕ ಮತ್ತು ಕೆನಡಾ ದೇಶಗಳನ್ನು ಪ್ರತಿನಿಧಿಸಿದವರ ಸಂಖ್ಯೆ 200ಕ್ಕಿಂತಲೂ ಹೆಚ್ಚಿದೆ.

ಪ್ರತಿ ಒಲಿಂಪಿಕ್ಸ್‌ನಲ್ಲಿಯೂ ಪಾಲ್ಗೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. 1924ರಲ್ಲಿ ಮೊದಲ ಬಾರಿಗೆ ಚಳಿಗಾಲದ ಒಲಿಂಪಿಕ್ಸ್‌ ನಡೆದಾಗ 16 ರಾಷ್ಟ್ರಗಳಷ್ಟೇ ಭಾಗವಹಿಸಿದ್ದವು. ಈ ಬಾರಿ 92 ರಾಷ್ಟ್ರಗಳ 2,952 ಕ್ರೀಡಾಪಟುಗಳು ಪಾಲ್ಗೊಂಡಿದ್ದಾರೆ.

ಈಡೇರದ ಪದಕದ ಕನಸು

1964ರ ಚಳಿಗಾಲದ ಒಲಿಂಪಿಕ್ಸ್‌ನಿಂದ ಭಾರತದ ಸ್ಪರ್ಧಿಗಳು ಈ ಕೂಟದಲ್ಲಿ ಭಾಗವಹಿಸುತ್ತಿದ್ದಾರೆ. ಆದರೆ ಇದುವರೆಗೂ ಪದಕ ಗೆಲ್ಲಲು ಸಾಧ್ಯವಾಗಿಲ್ಲ.

ಪೋಲೆಂಡ್‌ ಮೂಲದ ಜೆರ್ಮಿ ಬುಜಕೊವಸ್ಕಿ ಮೊದಲ ಬಾರಿಗೆ ಈ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿ ಅಲ್ಪೈನ್‌ ಸ್ಕಿಯಿಂಗ್‌ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. 1968ರ ಒಲಿಂಪಿಕ್ಸ್‌ನಲ್ಲಿಯೂ ಅವರು ಪಾಲ್ಗೊಂಡಿದ್ದರು.

1988ರ ಕೂಟದ ಅಲ್ಪೈನ್‌ ಸ್ಕಿಯಿಂಗ್‌ ಸ್ಪರ್ಧೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಗುಲ್‌ ಮುಸ್ತಫಾದೇವ್‌ ಪಾಲ್ಗೊಂಡಿದ್ದರು. ಹಲವು ಅಂತರರಾಷ್ಟ್ರೀಯ ಕೂಟಗಳಲ್ಲಿ ಭಾಗವಹಿಸಿದ್ದ ಉಲ್‌ 2005ರಲ್ಲಿ ಚೀನಾದಲ್ಲಿ ನಡೆದ ಜೂನಿಯರ್‌ ಏಷ್ಯನ್‌ ಚಳಿಗಾಲದ ಕ್ರೀಡಾಕೂಟದಲ್ಲಿ ಭಾರತ ಜೂನಿಯರ್‌ ತಂಡದ ಕೋಚ್‌ ಕೂಡ ಆಗಿದ್ದರು.

ಪುರುಷರ ವಿಭಾಗದ ಸ್ಲಲೋಮ್‌ ಸ್ಪರ್ಧೆಯಲ್ಲಿ ಕಿಶೋರ್ ರತ್ನಬಾಯ್‌ ಭಾಗವಹಿಸಿದರೂ ಗಮನಾರ್ಹ ಪ್ರದರ್ಶನ ನೀಡಿರಲಿಲ್ಲ. ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡ ಭಾರತದ ಮೊದಲ ಮಹಿಳಾ ಕ್ರೀಡಾಪಟು ಎನಿಸಿಕೊಂಡಿರುವ ಶೈಲಜಾ ಕುಮಾರ ಕೂಡ ಅಪಾಯದ ಹಾದಿಯಲ್ಲಿ ಸಾಹಸ ಮೆರೆದಿದ್ದಾರೆ. 1992ರ ಒಲಿಂಪಿಕ್ಸ್‌ನ ಜೈಂಟ್ ಸ್ಲಲೋಮ್‌ನಲ್ಲಿ ಲಾಲ್‌ ಚುನಿ, ನಾನಕ್ ಚಂದ್ ಪಾಲ್ಗೊಂಡಿದ್ದರು.

ಭಾರತದ ಸ್ಪರ್ಧಿಗಳ ಸಾಧನೆ

16 ವರ್ಷದವರಾಗಿದ್ದಾಗಲೇ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡ ಹಿಮಾಚಲಪ್ರದೇಶದ ಶಿವಕೇಶವನ್‌ ಮೇಲೆ ಈ ಬಾರಿ ಸಾಕಷ್ಟು ನಿರೀಕ್ಷೆಯಿದೆ. 1998ರಲ್ಲಿ 28ನೇ ಸ್ಥಾನ ಪಡೆದಿದ್ದರು. 2002ರಲ್ಲಿ 33ನೇ ಸ್ಥಾನಕ್ಕೆ ಕುಸಿದರು.

ನಂತರದ ಕೆಲ ಒಲಿಂಪಿಕ್ಸ್‌ಗಳ ಜೈಂಟ್ ಸ್ಲಲೋಮ್‌ ವಿಭಾಗದಲ್ಲಿ ಹೀರಾ ಲಾಲ್‌ ಅವರಿಗೆ ಸ್ಪರ್ಧೆ ಪೂರ್ಣಗೊಳಿಸಲು ಸಾಧ್ಯವಾಗಿರಲಿಲ್ಲ. ಕ್ರಾಸ್‌ ಕಂಟ್ರಿ ಸ್ಕೀಯಿಂಗ್‌ನಲ್ಲಿ ಬಹದ್ದೂರ್‌ ಗುಪ್ತಾ ಅರ್ಹತಾ ಸುತ್ತಿನಿಂದಲೇ ಹೊರಬಿದ್ದಿದ್ದರು.

ಜೈಂಟ್ ಸ್ಲಲೋಮ್‌ನ ಅಲ್ಪೀನ್‌ ಸ್ಕಿಯೀಂಗ್‌ ವಿಭಾಗದಲ್ಲಿ ಜೈಮಾಂಗ್‌ ನಾಮ್ಗಿಲ್‌, ಲಡಾಕ್‌ನಲ್ಲಿ ಜನಿಸಿದ ತಾಷಿ ಲ್ಯಾಂಡಪ್‌, ಕ್ರಾಸ್‌ ಕಂಟ್ರಿ ಸ್ಕೀಯಿಂಗ್‌ನ 15 ಕಿ.ಮೀ. ಫ್ರೀಸ್ಟೈಲ್‌ ವಿಭಾಗದಲ್ಲಿ ಸ್ಪರ್ಧಿಸಿದ್ದರು. ಭಾರತೀಯ ಸೈನ್ಯದಲ್ಲಿದ್ದ ತಾಷಿ 83ನೇ ಸ್ಥಾನ ಪಡೆದಿದ್ದರು.

ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ನಲ್ಲಿ ಜನಿಸಿದ ಹಿಮಾಂಶು ಠಾಕೂರ್‌ 2014ರ ಚಳಿಗಾಲದ ಒಲಿಂಪಿಕ್ಸ್‌ನ ಜೈಂಟ್ ಸ್ಲಲೋಮ್‌ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಜಮ್ಮು ಮತ್ತು ಕಾಶ್ಮೀರದ ನದೀಮ್‌ ಇಕ್ಬಾಲ್‌ ಕ್ರಾಸ್‌ ಕಂಟ್ರಿ ಸ್ಕೀಯಿಂಗ್‌ನಲ್ಲಿ ಪುರುಷರ 15 ಕಿ.ಮೀ. ಕ್ಲಾಸಿಕಲ್‌ ವಿಭಾಗದಲ್ಲಿ 85ನೇ ಸ್ಥಾನ ಪಡೆದಿದ್ದರು. ಜಗದೀಶ ಸಿಂಗ್‌ ಕೂಡ ಇದೇ ಸ್ಪರ್ಧೆಯಲ್ಲಿದ್ದರು.

ಶಿವಕೇಶವನ್‌ ಎಂಬ ಸಾಹಸಿ

ಲಗ್‌ (ಜಾರುಮಣೆ) ಸ್ಪರ್ಧೆಯಲ್ಲಿ ಹಿಂದಿನ ಐದು ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿರುವ ಶಿವಕೇಶವನ್‌ ಸಾಹಸ ಮೆಚ್ಚುವಂಥದ್ದು.

ಹಿಮಬಿದ್ದಾಗ ಇಳಿಜಾರಿನಲ್ಲಿ ಜಾರುವುದಕ್ಕೆ ಬಳಸುವ ಸಾಧನವನ್ನು ಲಗ್‌ ಎಂದು ಕರೆಯುತ್ತಾರೆ. ಮೇಲುಮುಖವಾಗಿ ಬಾಗಿದ ಮಣೆಯ ಮುಂದೆ ಚಾಚಿರುವ ಕಂಬಿಗಳ ಮೇಲೆ ಕಾಲುಗಳನ್ನು ಇಟ್ಟು ಕೆಳಮುಖವಾಗಿ ಜಾರಲಾಗುತ್ತದೆ. ಜಾರುವ ಮಾರ್ಗದಲ್ಲಿ ತಿರುವು ಪಡೆಯಲು ಬೈಕ್‌ಗಳಿಗೆ ಇರುವ ಹ್ಯಾಂಡಲ್ ಮಾದರಿಯಲ್ಲಿ ಫ್ಲಿಪ್‌ ಸ್ಟಿಯರಿಂಗ್‌ ಇರುತ್ತದೆ. ಲಗ್‌ ಸ್ಪರ್ಧೆಯಲ್ಲಿ ಸಿಂಗಲ್‌ ಮತ್ತು ಡಬಲ್ಸ್‌ ವಿಭಾಗಗಳು ಇವೆ. ಬಾಬ್‌ಸ್ಲೈಗ್‌ ಮತ್ತು ಸ್ಕೆಲಟನ್‌ ಎನ್ನುವ ಎರಡು ಪ್ರಕಾರಗಳು ಕೂಡ ಇವೆ.

‘ಹಿಂದಿನ ಸ್ಪರ್ಧೆಗಳಿಗಿಂತಲೂ ಈ ಬಾರಿ ಉತ್ತಮ ಪ್ರದರ್ಶನ ನೀಡುತ್ತೇನೆ. ಅಗ್ರ 20ರೊಳಗೆ ಸ್ಥಾನ ಪಡೆಯುತ್ತೇನೆ. ಪದಕ ಗೆಲ್ಲುವ ಆಸೆಯಂತೂ ಇದ್ದೇ ಇದೆ. ಬಹುಶಃ ನನ್ನ ಪಾಲಿಗೆ ಇದು ಕೊನೆಯ ಚಳಿಗಾಲದ ಒಲಿಂಪಿಕ್ಸ್‌’ ಎಂದು 36 ವರ್ಷದ ಶಿವಕೇಶವನ್‌ ಹೇಳಿದ್ದಾರೆ. ಆದ್ದರಿಂದ ಅವರ ಸ್ಪರ್ಧೆ ಕುತೂಹಲಕ್ಕೆ ಕಾರಣವಾಗಿದೆ.

ಪ್ರೋತ್ಸಾಹದ ಕೊರತೆ

ಅಪಾಯಕಾರಿ ಸಾಹಸ ಪ್ರದರ್ಶಿಸುವ ಶಿವಕೇಶವನ್‌ ಲಗ್‌ ಸ್ಪರ್ಧೆಯಲ್ಲಿ ಏಷ್ಯಾ ಕಪ್‌ ಮತ್ತು ಏಷ್ಯನ್‌ ಚಾಂಪಿಯನ್‌ಷಿಪ್‌ಗಳಲ್ಲಿ ಒಟ್ಟು ಹತ್ತು ಪದಕಗಳನ್ನು ಜಯಿಸಿದ್ದಾರೆ. ಗಂಟೆಗೆ 134.3 ಕಿ.ಮೀ. ವೇಗದಲ್ಲಿ ಮುನ್ನುಗ್ಗಿದ್ದು ಅವರ ಶ್ರೇಷ್ಠ ಸಾಧನೆ ಎನಿಸಿದೆ.

ತಮ್ಮ 14ನೇ ವಯಸ್ಸಿನಲ್ಲಿದ್ದಾಗಲೇ ಅವರು ಲಗ್‌ ಸ್ಪರ್ಧೆಯತ್ತ ಆಸಕ್ತಿ ಬೆಳೆಸಿಕೊಂಡರು. ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸಿದ ಕಿರಿಯ ಕ್ರೀಡಾಪಟು ಎನಿಸಿಕೊಂಡರು. ಲಗ್‌ ಸ್ಪರ್ಧೆಗೆ ಅರ್ಹತೆ ಪಡೆದ ಮೊದಲ ಭಾರತೀಯ ಶಿವಕೇಶವನ್‌. 2012ರಲ್ಲಿ ಅವರಿಗೆ ಅರ್ಜುನ ಪ್ರಶಸ್ತಿ ಲಭಿಸಿದೆ.

ಆದರೂ ಶಿವಕೇಶವನ್‌ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಸಾಕಷ್ಟು ಸಲ ಆರ್ಥಿಕ ಮುಗ್ಗಟ್ಟು ಎದುರಿಸಿದ್ದಾರೆ. 2010ರ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ತಮ್ಮ ಕ್ರೀಡೆಗೆ ಸಂಬಂಧಿಸಿದ ಸಲಕರಣೆಗಳನ್ನು ಖರೀದಿಸಲು ಹಣ ಇಲ್ಲದೇ ಪರದಾಡಿದ್ದರು. ಆಗ ಭಾರತದ ಐದು ಜನ ವಕೀಲರು ಸೇರಿ ₹ 4.5 ಲಕ್ಷ ಹಣ ನೀಡಿದ್ದರು.

ಮಂಜುಗಡ್ಡೆಯ ನಡುವೆ ನಡೆಯುವ ಕ್ರೀಡೆಯಾದ್ದರಿಂದ ಸುರಕ್ಷಾ ಕವಚಗಳು, ರಕ್ಷಣಾ ಸಾಮಗ್ರಿಗಳನ್ನು ಖರೀದಿಸಬೇಕು. ಅಂತರರಾಷ್ಟ್ರೀಯ ಸ್ಪರ್ಧಿಗಳಿಗೆ ಪೈಪೋಟಿ ಒಡ್ಡಲು ಅಗತ್ಯವಿರುವಷ್ಟು ತರಬೇತಿ ಪಡೆಯಬೇಕು. ಈ ಎಲ್ಲಾ ಸೌಲಭ್ಯ ಹೊಂದಿಸಿಕೊಂಡು ಜೀವ ಕೈಯಲ್ಲಿ ಹಿಡಿದುಕೊಂಡು ಸ್ಪರ್ಧಿಸಬೇಕು. ಈ ರೀತಿಯ ಕಠಿಣ ಸವಾಲನ್ನು ಆರನೇ ಬಾರಿ ಎದುರಿಸಲು ಸಜ್ಜಾಗಿರುವ ಶಿವಕೇಶವನ್‌ ದಕ್ಷಿಣ ಕೊರಿಯಾದ ನೆಲದಲ್ಲಿ ಭಾರತದ ರಾಷ್ಟ್ರಧ್ವಜ ಎತ್ತಿಹಿಡಿಯುವರೇ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಎಲ್ಲರನ್ನೂ ಒಂದುಗೂಡಿಸುವ ಕ್ರೀಡೆ

ಮನುಷ್ಯರ ಮತ್ತು ದೇಶಗಳ ನಡುವಿನ ಸಂಬಂಧಗಳನ್ನು ಗಟ್ಟಿಗೊಳಿಸುವ ಶಕ್ತಿ ಕ್ರೀಡೆಗಿದೆ. ವೈರತ್ವವನ್ನು ಕರಗಿಸಿ ಪ್ರೀತಿ ಅರಳಿಸುವ ಸಾಮರ್ಥ್ಯವೂ ಕ್ರೀಡೆ ಹೊಂದಿದೆ. ಇದು ಇಂದು, ನಿನ್ನೆಯ ಮಾತಲ್ಲ. ಮೊದಲ ಒಲಿಂಪಿಕ್ಸ್ ಆರಂಭದಿಂದಲೂ ಕ್ರೀಡೆ ಎಲ್ಲ ಸಂಬಂಧಗಳನ್ನು ಸಮತೂಕದ ತಕ್ಕಡಿಯಲ್ಲಿ ಕೊಂಡೊಯ್ಯತ್ತಿದೆ.

ಕ್ಷಿಪಣಿ ಪರೀಕ್ಷೆ, ಅಲ್ಲಿನ ರಾಷ್ಟ್ರನಾಯಕರ ಪ್ರಚೋದಾನಾತ್ಮಕ ಹೇಳಿಕೆ ಮತ್ತು ಹಿಂದಿನ ವೈರತ್ವದಿಂದ ಉತ್ತರ ಮತ್ತು ದಕ್ಷಿಣ ಕೊರಿಯ ದೇಶಗಳ ನಡುವಿನ ಬಾಂಧವ್ಯ ಹಾಳಾಗಿತ್ತು. ಈ ದೇಶಗಳು ಚಳಿಗಾಲದ ಒಲಿಂಪಿಕ್ಸ್‌ ಮೂಲಕ ಸೌಹಾರ್ದತೆ ಮೆರೆದಿವೆ.

ಉತ್ತರ ಕೊರಿಯದ ಕ್ರೀಡಾಪಟುಗಳು, ಪತ್ರಕರ್ತರು, ಅಧಿಕಾರಿಗಳ ತಂಡ ದಕ್ಷಿಣ ಕೊರಿಯಾಕ್ಕೆ ಬಂದಿದೆ. 2000ರಲ್ಲಿ ಸಿಡ್ನಿಯಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿಯೂ ಎರಡೂ ದೇಶಗಳ ಅಥ್ಲೀಟ್‌ಗಳು ಮೊದಲ ಬಾರಿಗೆ ಜೊತೆಯಾಗಿ ಪಥಸಂಚಲನದಲ್ಲಿ ಪಾಲ್ಗೊಂಡಿದ್ದವು. ಅಥೆನ್ಸ್ ಒಲಿಂಪಿಕ್ಸ್‌ನಲ್ಲಿ ಒಂದೇ ಧ್ವಜದಡಿ ಭಾಗವಹಿಸಿದ್ದವು. ಈಗ ಮತ್ತೆ ಒಂದಾಗಿ ಘನತೆ ಮೆರೆದಿವೆ.

ಪ್ರತಿಕ್ರಿಯಿಸಿ (+)