ಭಾನುವಾರ, ಡಿಸೆಂಬರ್ 8, 2019
24 °C

ಹೆದ್ದಾರಿಯಲ್ಲಿ ಸಂಗ್ರಹವಾದ ಕೊಳಚೆ ನೀರು: ಸಾರ್ವಜನಿಕರ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೆದ್ದಾರಿಯಲ್ಲಿ ಸಂಗ್ರಹವಾದ ಕೊಳಚೆ ನೀರು: ಸಾರ್ವಜನಿಕರ ಆಕ್ರೋಶ

ಪಡುಬಿದ್ರಿ: ರಾಷ್ಟ್ರೀಯ ಹೆದ್ದಾರಿಯ ಪಡುಬಿದ್ರಿ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ತೆರಳುವ ದ್ವಾರದ ಸಮೀಪ ಹೋಟೆಲ್‌ಗಳ ಕೊಳಚೆ ನೀರು ಸಂಗ್ರಹವಾಗುತ್ತಿದ್ದು, ಸಾರ್ವಜನಿಕರು ಗ್ರಾಮ ಪಂಚಾಯಿತಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಲ್ಲಿನ ಕೆಲವೊಂದು ಹೋಟೆಲ್‌ಗಳ ಕೊಳಚೆ ನೀರು ಚರಂಡಿಗಳಿಗೆ ಹರಿಯಬಿಡಲಾಗುತ್ತಿದೆ. ಚರಂಡಿಯಲ್ಲಿ ಹರಿಯುವ ನೀರು ದೇವಸ್ಥಾನಕ್ಕೆ ತೆರಳುವ ಮುಖ್ಯದ್ವಾರದ ಬಳಿ ಇರುವ ಗುಂಡಿಯಲ್ಲಿ ಸಂಗ್ರಹವಾಗುತ್ತಿದೆ. ಮಳೆಗಾಲದಲ್ಲಿಯೂ ಇಲ್ಲಿ ನೀರು ಹರಿಯುತ್ತಿದ್ದು, ಜನ ಅದರಲ್ಲಿಯೇ ಸಂಚರಿಸಬೇಕಾದ ಪ್ರಸಂಗ ಎದುರಾಗಿತ್ತು. ಈ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿ ನಡೆಯುತ್ತಿದ್ದು, ಕೊಳಚೆನೀರು ತುಂಬಿರುವುದರಿಂದ ಕಾಮಗಾರಿ ಮಾಡಲು ತೊಂದರೆಯಾಗುತ್ತಿದೆ ಎಂದು ಗುತ್ತಿಗೆದಾರ ಕಂಪೆನಿಯ ಎಂಜನಿಯರ್‌ಗಳು ದೂರಿದ್ದಾರೆ.

ಈ ಕೊಳಚೆನೀರು ತುಂಬಿ ಎಲ್ಲೆಡೆಗೂ ದುರ್ನಾತ ಬೀರುತ್ತಿದೆ. ಹಿಂದೆಯೂ ಇದೇ ರೀತಿ ನೀರು ಹರಿಯುತ್ತಿದ್ದ ಬಗ್ಗೆ ಗ್ರಾಮ ಪಂಚಾಯಿತಿಗೆ ದೂರು ಬಂದಿತ್ತು. ಆ ಬಳಿಕ ಸೂಕ್ತ ಕ್ರಮ ಕೈಗೊಂಡು ಸಮಸ್ಯೆ ಬಗೆ ಹರಿಸಲಾಗಿದೆ ಎಂದು ಪಿಡಿಒ ಪಂಚಾಕ್ಷರಿ ಸ್ವಾಮಿ ಕೆರಿಮಠ ತಿಳಿಸಿದ್ದಾರೆ.

ಈಗಲೂ ಕೊಳಚೆ ನೀರು ತುಂಬಿರುವ ಬಗ್ಗೆ ಜನರಿಂದ ದೂರುಗಳು ಬಂದಿವೆ. ಎರಡು ದಿನಗಳಲ್ಲಿ ಸಮಸ್ಯೆ ಬಗೆಹರಿಸುವಂತೆ ಹೋಟೆಲ್ ಮಾಲೀಕರಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)