ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿಗೆ ಕ್ರಿಕೆಟ್ ‘ಶಕ್ತಿಕೇಂದ್ರ’

Last Updated 11 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಕಳೆದ ವರ್ಷ ಡಿಸೆಂಬರ್‌ ಮಧ್ಯದಲ್ಲಿ ತೂಫಾನ್ ಘೋಷ್ ಅವರನ್ನು ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ (ಎನ್‌ಸಿಎ) ಮುಖ್ಯ ಕಾರ್ಯಾಚರಣೆ ಅಧಿಕಾರಿಯಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ನೇಮಕ ಮಾಡಿತು. ಆಗ, ದೊಡ್ಡ ಕೊಡುಗೆಯೊಂದನ್ನು ಸಿಲಿಕಾನ್ ಸಿಟಿ ಮಡಿಲಿಗೆ ಹಾಕಲು ಮಂಡಳಿ ನಿರ್ಧರಿಸಿದೆ ಎಂಬ ಮಾತು ಕೇಳಿಬಂದಿತ್ತು. ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿರುವ ತೂಫಾನ್‌ ಅವರು ಎನ್‌ಸಿಎಯಲ್ಲಿ ‘ಬಿರುಗಾಳಿ’ ವೇಗದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಲಿದ್ದಾರೆ ಎಂಬ ಊಹೆಗೂ ಈ ನೇಮಕಾತಿ ಕಾರಣವಾಗಿತ್ತು.

ಇದಾಗಿ ಒಂದೇ ತಿಂಗಳಲ್ಲಿ ಬಿಸಿಸಿಐ ಸಿಹಿಸುದ್ದಿಯನ್ನು ನೀಡಿದೆ. ಅದರ ಕೇಂದ್ರ ಕಚೇರಿಯನ್ನು ಬೆಂಗಳೂರಿಗೆ ಸ್ಥಳಾಂತರಿಸಲು ಚಿಂತನೆ ನಡೆಸಿರುವುದು ಬಹಿರಂಗವಾಗಿದೆ.

ಸ್ವಂತ ಕಟ್ಟಡದ ಕನಸು
ಜಗತ್ತಿನ ಶ್ರೀಮಂತ ಕ್ರಿಕೆಟ್ ಸಂಸ್ಥೆಯಾಗಿರುವ ಬಿಸಿಸಿಐಗೆ ಸ್ವಂತ ಕಟ್ಟಡ ಇಲ್ಲ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಸಂಸ್ಥೆಯ ಕಚೇರಿ ಇದೆ. ಎನ್‌ಸಿಎಗೂ ಸ್ವಂತ ಕಟ್ಟಡವಿಲ್ಲ. ಚಿನ್ನಸ್ವಾಮಿ ಕ್ರೀಡಾಂಗಣದ ಒಂದು ಭಾಗದಲ್ಲಿ ಇದರ ಅಸ್ತಿತ್ವ. ಎನ್‌ಸಿಎ ಸ್ವಂತ ಕಾಲ ಮೇಲೆ ನಿಲ್ಲಬೇಕು ಎಂಬ ಉದ್ದೇಶದಿಂದ ಬೆಂಗಳೂರು ಉತ್ತರದ ಬಾಗಲೂರು ಬಳಿ 40 ಎಕರೆ ಸ್ಥಳವನ್ನು ಬಿಸಿಸಿಐ ಖರೀದಿಸಿದೆ. ಇಲ್ಲಿ ಎನ್‌ಸಿಎ ಸ್ಥಾಪನೆಗೆ ಸಂಬಂಧಿಸಿದ ಕೆಲಸಗಳು ಸದ್ಯದಲ್ಲೇ ಆರಂಭವಾಗಲಿವೆ.

ಇದರ ಹೊಣೆ ಘೋಷ್ ಅವರ ಹೆಗಲ ಮೇಲಿದೆ. ಇದೇ ಸ್ಥಳವನ್ನು ಆಡಳಿತ ಕೇಂದ್ರವನ್ನಾಗಿಸಿ ಎಲ್ಲವನ್ನೂ ‘ಸ್ವಂತ’ ಮಾಡಿಕೊಳ್ಳುವುದು ಬಿಸಿಸಿಐ ಉದ್ದೇಶ. ಇದಕ್ಕಾಗಿ ಮಂಡಳಿಯ ಹಂಗಾಮಿ ಅಧ್ಯಕ್ಷ ಸಿ.ಕೆ.ಖನ್ನಾ ಅವರು ಎಲ್ಲ ಸದಸ್ಯರ ಅಭಿಪ್ರಾಯ ಕೋರಿ ಪತ್ರ ಬರೆದಿದ್ದಾರೆ.

ಬಾಡಿಗೆ ಕಟ್ಟಡದಲ್ಲಿ ಕಚೇರಿ, ಓಡಾಡಲು ಇಕ್ಕಟ್ಟಾದ ಸ್ಥಳ ಇತ್ಯಾದಿ ಸಮಸ್ಯೆಗಳಿಂದ ಬೇಸರಗೊಂಡಿರುವ ಸದಸ್ಯರು ಸ್ಥಳಾಂತರಕ್ಕೆ ವಿರೋಧ ವ್ಯಕ್ತಪಡಿಸಲಾರರು ಎಂಬ ವಿಶ್ವಾಸ ಮಂಡಳಿಗೆ ಇದೆ. ಮುಂಬೈನಲ್ಲಿ ಬಿಸಿಸಿಐ ಮಹತ್ವದ ಸಭೆಗಳು ಹೋಟೆಲ್‌ನಲ್ಲಿ ನಡೆಯುತ್ತವೆ. ಬೆಂಗಳೂರಿನಲ್ಲಿ ಸ್ವಂತ ಕಟ್ಟಡ ಆದ ನಂತರ ಈ ‘ಹೊರೆ’ಯನ್ನು ಕೂಡ ಇಳಿಸಲು ಮಂಡಳಿಗೆ ಸಾಧ್ಯವಾಗಲಿದೆ.

ಪ್ರತಿಷ್ಠೆಯ ವಿಷಯ ಆಗಿರುವುದರಿಂದ ಮುಂಬೈ ಕ್ರಿಕೆಟ್ ಸಂಸ್ಥೆಯಿಂದ ವಿರೋಧದ ದನಿ ಎದ್ದರೂ ಏಳಬಹುದು ಎಂಬ ಆತಂಕವಿತ್ತು. ಆದರೆ ಇಲ್ಲಿಯವರೆಗೆ ಅಂಥ ನಡೆಯ ಬಗ್ಗೆ ಮಾಹಿತಿ ಇಲ್ಲದ್ದರಿಂದ ಅವರು ಕೂಡ ‘ಹೋದರೆ ಹೋಗಲಿ’ ಎಂಬ ನೀತಿಗೆ ಅಂಟಿಕೊಂಡಿರಬಹುದು ಎಂದು ಊಹಿಸಲಾಗಿದೆ.

ಕ್ರಿಕೆಟ್‌ಗೆ ಅಲ್ಲ; ಆಡಳಿತಕ್ಕೆ ಮಾತ್ರ
ಎನ್‌ಸಿಎಯಲ್ಲಿ ಮೂಲಸೌಲಭ್ಯ ಕಲ್ಪಿಸುವುದರಿಂದ ಕ್ರಿಕೆಟ್‌ಗೆ, ವಿಶೇಷವಾಗಿ ಸ್ಥಳೀಯ ಕ್ರಿಕೆಟ್‌ಗೆ ತುಂಬ ಅನುಕೂಲ ಇದೆ. ಆದರೆ ಬಿಸಿಸಿಐ ಆಡಳಿತ ಇಲ್ಲಿಗೆ ಸ್ಥಳಾಂತರ ಆಗುವುದರಿಂದ ಇಂಥ ಲಾಭ ಏನೂ ಇಲ್ಲ. ಆಡಳಿತ ಇಲ್ಲೇ ಇದೆ ಎಂಬುದೊಂದು ಬಿಟ್ಟರೆ, ಇಲ್ಲಿನ ಕ್ರಿಕೆಟ್‌ಗೆ ಭಾರಿ ಕೊಡುಗೆಯೇನೂ ಇದರಿಂದ ನಿರೀಕ್ಷಿಸುವಂತಿಲ್ಲ. ಆದರೆ ಉದ್ಯೋಗ ಮತ್ತು ಪ್ರವಾಸೋದ್ಯಮದ ದೃಷ್ಟಿಯಿಂದ ಒಂದಷ್ಟು ಬೆಳವಣಿಗೆಗೆ ಇದು ಸಹಕಾರಿ ಆಗಲಿದೆ ಎಂಬುದು ಹಿರಿಯ ಕ್ರಿಕೆಟಿಗರ ಅಭಿಪ್ರಾಯ. ಅಂದಾಜು ₹ 500 ಕೋಟಿ ಮೊತ್ತ ವೆಚ್ಚ ಮಾಡಿ ಮೂಲಸೌಲಭ್ಯಗಳನ್ನು ಕಲ್ಪಿಸುವುದರಿಂದ ಎನ್‌ಸಿಎದಲ್ಲಿ ಕ್ರಿಕೆಟ್‌ ಚಟುವಟಿಕೆ ಮತ್ತು ಬಿಸಿಸಿಐ ಕಚೇರಿಯಲ್ಲಿ ಆಡಳಿತ ಹೊಸ ದಿಕ್ಕಿನಲ್ಲಿ ಹೆಜ್ಜೆ ಇರಿಸಲು ನೆರವಾಗಲಿದೆ ಎಂಬುದು ವಿಶ್ವಾಸ.

ಅಂದು ಐಸಿಸಿ; ಇಂದು ಬಿಸಿಸಿಐ
ವಿಶ್ವಕ್ಕೆ ಕ್ರಿಕೆಟ್ ಪರಿಚಯಿಸಿದ ಇಂಗ್ಲೆಂಡ್‌ನಿಂದ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ ವಲಸೆ ಹೋದಂತೆ ಭಾರತದ ಕ್ರಿಕೆಟ್‌ ಚಟುವಟಿಕೆಯ ಹೆಜ್ಜೆ ಗುರುತು ಮೂಡಿಸಿದ ಮುಂಬೈಯಿಂದ ದೇಶದ ಕ್ರಿಕೆಟ್ ನಿಯಂತ್ರಣ ಸಂಸ್ಥೆಯೂ ಸ್ಥಳಾಂತರಕ್ಕೆ ಸಿದ್ಧವಾಗಿದೆ.

ಸ್ಥಾಪನೆಯಾಗಿ 96 ವರ್ಷಗಳ ನಂತರ ಐಸಿಸಿ ಮುಖ್ಯ ಕಚೇರಿಯನ್ನು ಲಂಡನ್‌ನ ಲಾರ್ಡ್ಸ್‌ನಿಂದ ದುಬೈಗೆ ಸ್ಥಳಾಂತರಿಸಲಾಗಿತ್ತು. ತೆರಿಗೆ ಉಳಿತಾಯದ ದೃಷ್ಟಿಯಿಂದ 90ರ ದಶಕದಲ್ಲಿ ಕಚೇರಿಯನ್ನು ಬದಲಿಸುವ ಆಲೋಚನೆ ಮಾಡಿದ ಐಸಿಸಿ ಮೊದಮೊದಲು ಆರ್ಥಿಕ ವ್ಯವಹಾರಗಳನ್ನು ಮೊನಾಕೊಗೆ ವರ್ಗಾಯಿಸಿತು. ನಂತರ ಮುಖ್ಯ ಕಚೇರಿಯನ್ನು ದುಬೈಗೆ ಸ್ಥಳಾಂತರಿಸಲು ನಿರ್ಧರಿಸಿತು.

ಈ ವಿಷಯವನ್ನು ಮತಕ್ಕೆ ಹಾಕಲಾಯಿತು. 11–1 ಅಂತರದಲ್ಲಿ ಈ ಪ್ರಸ್ತಾವಕ್ಕೆ ಸದಸ್ಯ ಮಂಡಳಿಗಳಿಂದ ಜಯ ಲಭಿಸಿತು. ಹೀಗಾಗಿ 2005ರಲ್ಲಿ ಸ್ಥಳಾಂತರವಾಯಿತು.
ಬಿಸಿಸಿಐ ಕೂಡ ಸ್ಥಳಾಂತರಕ್ಕೆ ಸಂಬಂಧಿಸಿ ಸದಸ್ಯ ಸಂಸ್ಥೆಗಳ ಅಭಿಪ್ರಾಯ ಕೇಳಿದ್ದು ಸರ್ವಾನುಮತದ ಒಪ್ಪಿಗೆ ಲಭಿಸಿದರೆ ಬೆಂಗಳೂರಿಗೆ ಸ್ಥಳಾಂತರ ಆಗುವುದು ಖಚಿತ.

ಬಿಸಿಸಿಐ ಸ್ಥಾಪನೆ, ಬೆಳವಣಿಗೆ
ಬ್ರಿಟಿಷ್‌ ವಸಾಹತುಗಳ ಮೂಲಕ ದೇಶಕ್ಕೆ ಕಾಲಿಟ್ಟ ಕ್ರಿಕೆಟ್ ಕ್ರೀಡೆ ಅರಂಭದಲ್ಲಿ ತಳವೂರಿದ್ದು ಮುಂಬೈಯಲ್ಲಿ. ಅಲ್ಲಿನ ಪಾರ್ಸಿಗಳು ಈ ಕ್ರೀಡೆಯಲ್ಲಿ ಹೆಚ್ಚು ಪಳಗಿದ್ದರು. ಇಂಗ್ಲಿಷರು ಮತ್ತು ಪಾರ್ಸಿಗಳ ನಡುವೆ ಪಂದ್ಯಗಳು ನಡೆಯುತ್ತಿದ್ದುದರ ಬಗ್ಗೆಯೂ ಬಿಸಿಸಿಐ ವೆಬ್‌ಸೈಟ್‌ನಲ್ಲಿ ಉಲ್ಲೇಖವಿದೆ.

ಅನೇಕ ವರ್ಷಗಳ ಕಾಲ ಮುಂಬೈಯಲ್ಲೇ ಇದ್ದ ಕ್ರಿಕೆಟ್ ಚಟುವಟಿಕೆ ನಂತರ ಕೋಲ್ಕತ್ತ ಮತ್ತು ಇತರ ಪ್ರದೇಶಗಳಿಗೆ ವ್ಯಾಪಿಸಿತು. ವಿವಿಧ ಮಗ್ಗಲುಗಳಲ್ಲಿ ಬೆಳೆದ ಕ್ರಿಕೆಟ್‌ಗೆ ಮೂಗುದಾರ ಹಾಕುವುದಕ್ಕಾಗಿ ಸ್ಥಾಪನೆಗೊಂಡದ್ದು ಬಿಸಿಸಿಐ.

1928ರಲ್ಲಿ ಭಾರತದ ನಾಲ್ಕು ಭಾಗಗಳ ಒಟ್ಟು ಆರು ಕ್ರಿಕೆಟ್ ಸಂಸ್ಥೆಗಳ ಪದಾಧಿಕಾರಿಗಳು ಒಟ್ಟುಗೂಡಿ ನಡೆಸಿದ ಸಭೆಯಲ್ಲಿ ಪ್ರಾವಿಷನಲ್ ಕ್ರಿಕೆಟ್‌ ಮಂಡಳಿ ಸ್ಥಾಪಿಸಲಾಯಿತು. ನಂತರ ಇದಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಎಂದು ಹೆಸರಿಡಲಾಯಿತು. ಅಂದಿನಿಂದ ಇಲ್ಲಿಯ ವರೆಗೂ ಮಂಡಳಿ ಮುಂಬೈಯಿಂದ ಕಾರ್ಯಾಚರಿಸುತ್ತಿದೆ.

ಬೆಂಗಳೂರು ಸೂಕ್ತ ಸ್ಥಳ
ಬಿಸಿಸಿಐ ಕಚೇರಿ ಬೆಂಗಳೂರಿಗೆ ಸ್ಥಳಾಂತರ ಆಗುತ್ತಿದೆ ಎಂಬುದು ಹೆಮ್ಮೆಯ ವಿಷಯ. ಇಂಥ ನಿರ್ಧಾರ ಕೈಗೊಂಡಿದ್ದರಿಂದ ಸಂತಸವಾಗುತ್ತಿದೆ. ಬಿಸಿಸಿಐನಂಥ ಸಂಸ್ಥೆಯೊಂದರ ಕಚೇರಿಗೆ ಬೆಂಗಳೂರಿಗಿಂತ ಉತ್ತಮ ಸ್ಥಳ ಬೇರೊಂದಿಲ್ಲ ಎಂದೆನಿಸುತ್ತದೆ. ಇಲ್ಲಿಂದ ಪ್ರಪಂಚದ ಮೂಲೆಮೂಲೆಗೂ ವಾಯುಯಾನ ಸೌಲಭ್ಯವಿರುವುದರಿಂದ ಕ್ರಿಕೆಟ್‌ಗೆ ಸಂಬಂಧಪಟ್ಟ ಎಲ್ಲರ ಓಡಾಟಕ್ಕೂ ಅನುಕೂಲ ಆಗಲಿದೆ. 40 ಎಕರೆ ಜಾಗದಲ್ಲಿ ಸುಸಜ್ಜಿತ ಕಚೇರಿ ಮತ್ತು ಮೂಲಸೌಲಭ್ಯಗಳನ್ನು ಕಲ್ಪಿಸಬಹುದಾಗಿದೆ.
– ಬ್ರಿಜೇಶ್ ಪಟೇಲ್‌, ಹಿರಿಯ ಕ್ರಿಕೆಟಿಗ


***

ಸುಸೂತ್ರ ಆಡಳಿತಕ್ಕೆ ಉತ್ತಮ ಅವಕಾಶ

ಬಿಸಿಸಿಐ ಕಚೇರಿ ಸ್ಥಳಾಂತರಗೊಂಡರೆ ಇಲ್ಲಿನ ಕ್ರಿಕೆಟ್ ಚಟುವಟಿಕೆ ಗರಿಗೆದರುತ್ತದೆ ಎಂದು ಹೇಳಲಾಗದು. ಆದರೆ ಸಂಸ್ಥೆಯ ಆಡಳಿತಕ್ಕೆ ಸಂಬಂಧಿಸಿ ಇದು ಅತ್ಯುತ್ತಮ ಬೆಳವಣಿಗೆ. ಬಿಸಿಸಿಐಗೆ ಎಲ್ಲೂ ಸ್ವಂತ ಆಸ್ತಿ ಇಲ್ಲ. ಹೀಗಾಗಿ ಇಲ್ಲಿನ 40 ಎಕರೆ ಪ್ರದೇಶದಲ್ಲಿ ಮೂಲಸೌಕರ್ಯಗಳು ಒಳಗೊಂಡ ಕಚೇರಿ ನಿರ್ಮಾಣವಾದರೆ ಆಡಳಿತ ಸುಸೂತ್ರವಾಗಿ ನಡೆಯಲು ಅನುಕೂಲ ಆಗಲಿದೆ.

ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಳ್ಳುವುದು ಖುಷಿಯ ಸಂಗತಿ. ಅಕಾಡೆಮಿಗೆ ಬರುವವರೆಲ್ಲರೂ ಈಗ ಹೋಟೆಲ್‌ಗಳಲ್ಲಿ ಉಳಿದುಕೊಳ್ಳುವ ಪರಿಸ್ಥಿತಿ ಇದೆ. ಹೊಸ ಕಟ್ಟಡದಲ್ಲಿ ಅತ್ಯಾಧುನಿಕ ಸೌಲಭ್ಯಗಳುಳ್ಳ ಕೊಠಡಿಗಳನ್ನು ಕೂಡ ನಿರ್ಮಿಸುತ್ತಿರುವುದರಿಂದ ಹೊರಗಿನಿಂದ ಬರುವವರಿಗೆ ಅನುಕೂಲ ಆಗಲಿದೆ.
– ಶಾಂತಾ ರಂಗಸ್ವಾಮಿ, ಹಿರಿಯ ಕ್ರಿಕೆಟ್ ಆಟಗಾರ್ತಿ


***

ಮಂಡಳಿಯ ಹಣ ಉಳಿತಾಯ

ಕ್ರಿಕೆಟ್ ಅಭಿವೃದ್ಧಿಗಾಗಿಯೇ ಸರ್ಕಾರದಿಂದ ಖರೀದಿಸಿರುವ 40 ಎಕರೆ ಜಾಗವನ್ನು ಸಂಪೂರ್ಣವಾಗಿ ಬಳಸಿಕೊಂಡು ಮೂಲಸೌಲಭ್ಯಗಳನ್ನು ಸೃಷ್ಟಿಸಬೇಕು. ಇಲ್ಲಿಗೆ ಬಿಸಿಸಿಐ ಕಚೇರಿಯೂ ಸ್ಥಳಾಂತರಗೊಂಡರೆ ಉತ್ತಮ. ಮುಂಬೈಯಲ್ಲಿ ಕೇಂದ್ರ ಕಚೇರಿ ಇದ್ದರೂ ಸಭೆ, ಕಾರ್ಯಕ್ರಮಗಳನ್ನು ಹೋಟೆಲ್‌ಗಳಲ್ಲಿ ಮಾಡಬೇಕಾದ ಪರಿಸ್ಥಿತಿ ಇದೆ. ಬೆಂಗಳೂರಿಗೆ ಸ್ಥಳಾಂತರಗೊಂಡ ನಂತರ ಈ ಹೊರೆ ತಪ್ಪಲಿದ್ದು ಮಂಡಳಿಯ ಹಣ ಉಳಿತಾಯ ಆಗಲಿದೆ. ಹೀಗಾಗಿ ಇದು ಉತ್ತಮ ನಿರ್ಧಾರ.
– ದೊಡ್ಡ ಗಣೇಶ, ಕೆಎಸ್‌ಸಿಎ ವ್ಯವಸ್ಥಾಪನ ಮಂಡಳಿ ಸದಸ್ಯ

ಹಾದಿ ಸುಗಮವಾದರೆ ಒಳ್ಳೆಯದು

ಬಿಸಿಸಿಐ ಕಚೇರಿ ಬೆಂಗಳೂರಿನಲ್ಲಿ ಸ್ಥಾಪನೆಯಾಗುವುದು ಖುಷಿಯ ವಿಷಯ. ಆದರೆ ಸದ್ಯ ಈ ಬಗ್ಗೆ ಸಲಹೆಗಳನ್ನು ಕೇಳಿದ್ದಾರಷ್ಟೇ. ಮುಂದಿನ ದಾರಿಯ ಬಗ್ಗೆ ಏನೂ ಗೊತ್ತಿಲ್ಲ. ಕಚೇರಿ ಸ್ಥಳಾಂತರವಾದರೆ ಸ್ಥಳೀಯ ಕ್ರಿಕೆಟ್‌ಗೆ ಭಾರಿ ಪ್ರಯೋಜನವೇನೂ ಇಲ್ಲ. ಆದರೆ ಆಡಳಿತದ ದೃಷ್ಟಿಯಿಂದ ಇದು ನಮಗೆಲ್ಲ ಸಂತಸ ತರುವ ಸಂಗತಿ.
– ಸಂತೋಷ್ ಮೆನನ್‌, ಕೆ.ಎಸ್‌.ಸಿ.ಎಸಹಾಯಕ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT