ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ‘ಭರತನೃತ್ಯ’ದ ಮೆರುಗು

Last Updated 11 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಆಂಗಿಕಾಭಿನಯ ಹಾಗೂ ಭಾವಾಭಿನಯ ಮಿಳಿತವಾದ ಭರತನಾಟ್ಯ ನಮ್ಮ ಪುರಾತನರು ನೀಡಿದ ಅಪರೂಪದ ಕೊಡುಗೆ. ಅಲಂಕಾರ ಶಾಸ್ತ್ರ, ವೇದಾಂತ ಶಾಸ್ತ್ರಗಳ ಆಳ ಮಂಥನದಿಂದ ಹುಟ್ಟಿದ, ‘ಭರತನೃತ್ಯ’ ಎಂಬ ಹೊಸ ಶೈಲಿಯ ನೃತ್ಯ ಪ್ರಕಾರವೂ ಛಾಪು ಮೂಡಿಸಿದೆ. ಪದ್ಮಾ ಸುಬ್ರಹ್ಮಣ್ಯ ಅವರಿಂದ ಪ್ರವರ್ಧಮಾನಕ್ಕೆ ಬಂದ ಇದನ್ನು ಅಷ್ಟೇ ಆಸ್ಥೆಯಿಂದ ಪಳಗಿಸಿಕೊಂಡು, ಪ್ರಚುರಪಡಿಸುತ್ತಿರುವವರು ಡಾ. ಶೋಭಾ ಶಶಿಕುಮಾರ್.

ಇದೇ ಸೋಮವಾರ (ಫೆ.12) ಗಾಯನ ಸಮಾಜದಲ್ಲಿ ಶೋಭಾ ಶಿವಕುಮಾರ್ ಅವರು ಭರತನೃತ್ಯ ಪ್ರದರ್ಶಿಸಲಿದ್ದಾರೆ. ಸಾಹಿತ್ಯ, ಪುರಾಣಗಳನ್ನು ಆಧರಿಸಿ ನೃತ್ಯ ವಿನ್ಯಾಸ ಮಾಡುವ ಕೌಶಲ ಇವರಿಗೆ ಸಿದ್ಧಿಸಿದೆ. ಈ ಬಾರಿ ಅವರು ಕಾಳಿದಾಸ, ಕುಮಾರವ್ಯಾಸ, ಅಕ್ಕಮಹಾದೇವಿ, ಡಿವಿಜಿ ಹಾಗೂ ಶತಾವಧಾನಿ ಆರ್.ಗಣೇಶ್ ಅವರ ಸಾಹಿತ್ಯಕ್ಕೆ ಕರಣಗಳನ್ನು ಅಳವಡಿಸಿದ ಭರತನೃತ್ಯ ಪ್ರದರ್ಶಿಸಲಿದ್ದಾರೆ.

ಏನೇನು ಪ್ರದರ್ಶನ: ಏಕವ್ಯಕ್ತಿ ಪ್ರದರ್ಶನ ಇವರ ಶಕ್ತಿ. ಮೊದಲಿಗೆ ಕುಮಾರವ್ಯಾಸ ಭಾರತದಿಂದ ಊರ್ವಶಿ ಪ್ರಕರಣವನ್ನು ಎತ್ತಿಕೊಂಡಿದ್ದಾರೆ. ಪ್ರಾಚೀನ ನಾಟ್ಯ ಪರಂಪರೆಯ ಕೌಶಲಗಳಾದ ಕರಣಗಳನ್ನು ಪ್ರಸ್ತುತ ಪಡಿಸಲಿದ್ದಾರೆ. ಇಲ್ಲಿ ಅಭಿನಯಕ್ಕೆ ಹೆಚ್ಚು ಅವಕಾಶವಿದ್ದು ಪಾತ್ರಗಳನ್ನು ನಾಟಕೀಯತೆಯಿಂದ ತೋರಿಸುವಲ್ಲಿ ಇವು ಮಹತ್ವದ ಪಾತ್ರ ವಹಿಸುತ್ತವೆ ಎಂಬುದು ಶೋಭಾ ಅವರ ಮಾತು. ಅಂದರೆ ವಸ್ತುವಿನ ನಿರೂಪಣೆ, ನೃತ್ಯದ ಸೊಬಗು ಮೇಳೈಸಿ ಅದೊಂದು ಅದ್ಭುತವಾದ ದೃಶ್ಯರೂಪಕವಾಗುತ್ತದೆ.

‘ಕೆಲವರನ್ನು ಹೊರತುಪಡಿಸಿದರೆ ಬಹುತೇಕರು ಕೈಹಾಕದ ಕ್ಷೇತ್ರವಿದು ಎಂದೇ ಹೇಳಬಹುದು. ಅತಿಶಯವಾದ, ಸಾಕಷ್ಟು ಶಕ್ತಿಯುತವಾದ ಸಾಹಿತ್ಯವನ್ನು ನೃತ್ಯಕ್ಕೆ ಅಳವಡಿಸುವ ಕ್ಲಿಷ್ಟ ಕೆಲಸವಿದು’ ಎನ್ನುತ್ತಾರೆ ಅವರು. ಮಂಕುತಿಮ್ಮನ ಕಗ್ಗದ ಎರಡೂ ಪದ್ಯಗಳು ನೃತ್ಯದ ಜೊತೆ ವೇದಿಕೆ ಮೇಲೆ ವಿರಾಜಿಸಲಿವೆ. ಕಗ್ಗದ ತಾತ್ಪರ್ಯವನ್ನು ಲೌಕಿಕದ ವಸ್ತುಗಳನ್ನಿಟ್ಟುಕೊಂಡು ಅರ್ಥ ಮಾಡಿಸುವ ಯತ್ನವಿದು.

ಶತಾವಧಾನಿ ಆರ್. ಗಣೇಶ್ ಅವರ ಪುಷ್ಠಿಯುತ ಸಾಹಿತ್ಯ ಹಾಗೂ ಅದರ ಹೊಸತನವೇ ನೃತ್ಯದ ಮೆರುಗನ್ನು ಹೆಚ್ಚಿಸುತ್ತದೆ ಎಂದು ಹೇಳುತ್ತಾ ಪುಳಕಿತರಾಗುತ್ತಾರೆ ಶೋಭಾ ಶಶಿಕುಮಾರ್.

ಯಾರೂ ಸೃಜಿಸದ ವಸ್ತು, ಹೋಗದ ಹಾದಿ ಹಾಗೂ ಸಂದರ್ಭಗಳೇ ಅವರ ಕೃತಿಯ ವಸ್ತುಗಳು. ‘ಅಷ್ಟನಾಯಕ’ ಎಂಬ ಪರಿಕಲ್ಪನೆ ಸೃಷ್ಟಿಸಿದ್ದೇ ಅವರು. ಈ ಪೈಕಿ ‘ನರ್ಮ ಪ್ರಸಾದಕ’ ಎಂಬ, ಕೋಪಿಸಿಕೊಂಡ ಹೆಂಡತಿಯನ್ನು ಸಮಾಧಾನಪಡಿಸಲು ಯತ್ನಿಸುವ ನಾಯಕನ ಪ್ರಸಂಗವನ್ನು ಶೋಭಾ ಅವರು ಆಯ್ದುಕೊಂಡಿದ್ದಾರೆ.

ದುಂಬಿಯೊಂದು ಶಾಕುಂತಲೆಯನ್ನು ಸುತ್ತುಹಾಕುವಾಗ ಆಕೆ ತೋರುವ ಪ್ರತಿಕ್ರಿಯೆಗಳನ್ನು ಕಾಳಿದಾಸ ವರ್ಣಿಸಿರುವ ರೀತಿಯೇ ರಮ್ಯವಾಗಿದೆ. ಇಂತಹ ಕಾವ್ಯಾತ್ಮಕ ಪ್ರಸಂಗವನ್ನು ದೃಶ್ಯಕ್ಕೆ ಅಳವಡಿಸುವ ಸವಾಲುಗಳನ್ನು ಶೋಭಾ ಶಶಿಕುಮಾರ್ ರಂಗದ ಮೇಲೆ ಪ್ರಸ್ತುತಪಡಿಸಲಿದ್ದಾರೆ. ವಿವೇಕ, ಲೋಕನೀತಿಗಳೇ ತುಂಬಿರುವ ಈ ರೂಪಕವೂ ಪ್ರೇಕ್ಷಕರನ್ನು ರಂಜಿಸಲಿದೆ.

‘ಬೆಟ್ಟದ ಮೇಲೊಂದು ಮನೆಯ ಮಾಡಿ’ ಎಂಬ ವಚನದಲ್ಲಿ ಅಕ್ಕ, ಪರಿಸ್ಥಿತಿಯಿಂದ ಓಡಿಹೋಗದೇ, ಇದ್ದು ಎದುರಿಸಬೇಕು ಎಂಬ ತತ್ವ ಸಾರುತ್ತಾಳೆ. ಸಾಹಿತ್ಯದ ಶ್ರೇಷ್ಠತನವನ್ನು ನೃತ್ಯದ ಚೌಕಟ್ಟಿನಲ್ಲಿ ಹಿಡಿದಿಡುವ ಧನ್ಯತೆ ನನ್ನದು ಎನ್ನುತ್ತಾರೆ ಅವರು.

ನೃತ್ಯದ ಮತ್ತೊಂದು ಆತ್ಮವೇ ಸಂಗೀತ. ಕಛೇರಿ ಕಲಾವಿದರಾಗಿ ಹೆಸರಾಗಿರುವ ಬಾಲಸುಬ್ರಮಣ್ಯ ಶರ್ಮಾ ಅವರು ಇವರ ನೃತ್ಯಕ್ಕೆ ಸಂಗೀತ ಒದಗಿಸಿ ರೂಪಕಗಳನ್ನು ಕಳೆಗಟ್ಟುವಂತೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT