ಶುಕ್ರವಾರ, ಡಿಸೆಂಬರ್ 13, 2019
27 °C

ಎಲ್ಲೆಲ್ಲೂ ‘ಕೆಮೊ’

ರೇಷ್ಮಾ ಶೆಟ್ಟಿ Updated:

ಅಕ್ಷರ ಗಾತ್ರ : | |

ಎಲ್ಲೆಲ್ಲೂ ‘ಕೆಮೊ’

ಮೊದಲು ಸೈನಿಕರ ಮೈಮೇಲಷ್ಟೇ ಕಾಣಿಸುತ್ತಿದ್ದ ಕೆಮೊ ಪ್ರಿಂಟ್ ಬಟ್ಟೆಗಳು ಈಗ ತರುಣ– ತರುಣಿಯರ ನೆಚ್ಚಿನ ದಿರಿಸಾಗಿದೆ. ಮೊದಲೆಲ್ಲಾ ಗಾಢ ಹಸಿರು, ತಿಳಿಕೆಂಪು, ಕಪ್ಪು, ತಿಳಿಕ್ರೀಮ್ ಬಣ್ಣ ಮಿಳಿತವಾಗಿ ರೂಪುಗೊಂಡಿರುವ ಈ ಡ್ರೆಸ್ ನೆನಪಿಸಿಕೊಂಡರೆ ಸೈನಿಕರೇ ಮನದ ಭಿತ್ತಿಯ ಮೇಲೆ ಮೂಡುತ್ತಿದ್ದರು. ಆದರೆ ಈಗ ಹಾಗಿಲ್ಲ, ಎಲ್ಲ ವಯೋಮಾನದವರ ದೇಹಕ್ಕೂ ಇದು ಒಪ್ಪುತ್ತಿದೆ, ಸಿಂಗರಿಸುತ್ತಿದೆ.

ಕೆಮೊ ಪ್ರಿಂಟ್ ಡ್ರೆಸ್‌ನಲ್ಲಿ ಮೊದಲು ಚಾಲ್ತಿಯಲ್ಲಿದ್ದಿದ್ದು ಟೀ ಶರ್ಟ್‌. ಬೆಳ್ಳಿತೆರೆಯ ಮೇಲೆ ನಟರು ಕೆಮೊ ಪ್ರಿಂಟ್‌ ದಿರಿಸು ಧರಿಸಿ ಅದಕ್ಕೆ ಹೊಸತನ ದಕ್ಕಿಸಿಕೊಟ್ಟರು. ಈಗ ಕೆಮೊ ಪ್ರಿಂಟ್‌ನಲ್ಲಿ ನಾನಾ ಥರದ ವಿನ್ಯಾಸಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಮಕ್ಕಳು, ಮಹಿಳೆಯರು, ಪುರುಷರು... ವಿವಿಧ ವಯೋಮಾನದವರಿಗೆ ಇಷ್ಟವಾಗುವ ರೀತಿಯಲ್ಲಿ ಸಮಕಾಲೀನ ಫ್ಯಾಷನ್‌ಗೆ ತಕ್ಕಂತಹ ಡ್ರೆಸ್‌ಗಳೂ ಲಭ್ಯವಿವೆ. ಜಾಕೆಟ್‌ಗಳು, ತ್ರಿಪೋರ್ತ್‌ ಪ್ಯಾಂಟ್‌ಗಳು, ನೈಟ್ ಪ್ಯಾಂಟ್‌ಗಳು, ಒಳ ಉಡುಪುಗಳು, ಮಕ್ಕಳ ಉಡುಪುಗಳು ಇವೆಲ್ಲಾ ಕೆಮೊ ಪ್ರಿಂಟ್‌ನ ಕೆಲವು ರೂಪಗಳು. ಬ್ಯಾಗ್‌ ಮತ್ತು ಶೂಗಳು ಈ ಪಟ್ಟಿಗೆ ಹೊಸ ಸೇರ್ಪಡೆ.

ಜಾಕೆಟ್‌: ಕೇವಲ ಚಳಿಗಾಲ ಮಾತ್ರವಲ್ಲ, ಎಲ್ಲ ಋತುಮಾನಕ್ಕೂ ಕೆಮೊ ಪ್ರಿಂಟ್‌ ಜಾಕೆಟ್ ಸಲ್ಲುತ್ತದೆ. ಜೀನ್ಸ್‌ಗೆ ಕೆಮೊ ಪ್ರಿಂಟ್‌ ಜಾಕೆಟ್‌ ಚೆನ್ನಾಗಿ ಒಪ್ಪುತ್ತದೆ. ಸ್ಕರ್ಟ್ ಧರಿಸಿ ಅದರ ಮೇಲೆ ಉದ್ದನೆಯ ಜಾಕೆಟ್ ಧರಿಸಿದರೆ ಹೊಸ ಲುಕ್ ಬರುವುದರಲ್ಲಿ ಸಂಶಯವಿಲ್ಲ. ಕೆಮೊ ಪ್ರಿಂಟ್‌ನ ಉದ್ದನೆಯ ಜಾಕೆಟ್‌ ಕೂಡ ಮಾರುಕಟ್ಟೆಯಲ್ಲಿ ಈಗ ಲಭ್ಯವಿದೆ.

ಟೀಶರ್ಟ್‌: ಮೊದಲು ಹುಡುಗರಿಗಷ್ಟೇ ಸೀಮಿತವಾಗಿದ್ದ ಕೆಮೊ ಪ್ರಿಂಟ್‌ ಟೀಶರ್ಟ್‌ ಈಗ ಹುಡುಗಿಯರ ಮೈಮೇಲೂ ರಾರಾಜಿಸುತ್ತಿದೆ.ಪ್ರಿಂಟ್‌ನಲ್ಲಿ ಬದಲಾವಣೆಯಾಗದಿದ್ದರೂ ಬಣ್ಣದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಕಪ್ಪುಬಣ್ಣದ ಜೀನ್ಸ್‌ನೊಂದಿಗೆ ಕೆಮೊ ಪ್ರಿಂಟ್‌ ಟೀಶರ್ಟ್‌ಗಳು ಒಪ್ಪುತ್ತವೆ. ತುಂಬುತೋಳಿನ ಟೀಶರ್ಟ್‌ಗಳು ಸಹ ಇತ್ತೀಚೆಗೆ ಹೆಚ್ಚು ಜನರನ್ನು ಆರ್ಕಷಿಸುತ್ತಿವೆ.

ಬ್ಯಾಗ್‌: ಭಿನ್ನ ರೀತಿಯ ಕೈಚೀಲ, ಪರ್ಸ್‌ಗಳನ್ನು ಹಿಡಿಯುವ ಮಹಿಳೆಯರು ಈಚೆಗೆ ಕೆಮೊ ಪ್ರಿಂಟ್‌ ಬ್ಯಾಗ್‌ಗಳತ್ತ ವಾಲುತ್ತಿದ್ದಾರೆ. ಬ್ಯಾಕ್‌ಪ್ಯಾಕ್, ಹ್ಯಾಂಡ್‌ಬ್ಯಾಗ್, ವ್ಯಾನಿಟಿ ಬ್ಯಾಗ್ ಸೇರಿದಂತೆ ಎಲ್ಲಾ ರೀತಿಯ ಬ್ಯಾಗ್‌ಗಳು ಕೆಮೊ ಪ್ರಿಂಟ್‌ನಲ್ಲಿ ಲಭ್ಯ. ಇದರಲ್ಲೂ ಮಹಿಳೆ ಹಾಗೂ ಪುರುಷರಿಗೆ ಭಿನ್ನವಾದ ವಿನ್ಯಾಸಗಳಿವೆ.

ರಾತ್ರಿ ಉಡುಪು: ಕೆಮೊ ಪ್ರಿಂಟ್‌ ಇರುವ ನೈಟ್ ಪ್ಯಾಂಟ್‌, ಟೀ ಶರ್ಟ್‌, ನೈಟ್ ಫ್ರಾಕ್‌ಗಳು ಈಗ ಫ್ಯಾಷನ್ ಟ್ರೆಂಡ್ ಆಗಿವೆ. ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೇಕ ವಿನ್ಯಾಸ ಲಭ್ಯ. ಕೆಮೊ ಪ್ರಿಂಟ್ ಹೊಂದಿರುವ ಒಳ ಉಡುವುಗಳೂ ಈಚೆಗೆ  ಯುವಜನರನ್ನು ಆಕರ್ಷಿಸುತ್ತಿದೆ. ಸ್ಪೋರ್ಟ್ಸ್‌ ಬಟ್ಟೆಯಲ್ಲೂ ಕೆಮೊ ಪ್ರಿಂಟ್‌ ಇರುವ ಡ್ರೆಸ್‌ಗಳು ಸಿಗುತ್ತವೆ.

ಮಕ್ಕಳ ಉಡುಪು: ಟೀಶರ್ಟ್‌, ಫ್ರಾಕ್‌, ಟೋಪಿ, ಡಂಗ್ರಿ, ಉದ್ದನೆ ಚಡ್ಡಿ...  ಹತ್ತಾರು ನಮೂನೆಯ ಮಕ್ಕಳ ಉಡುಪುಗಳು ಬೇಕಾದಷ್ಟು ನಮೂನೆಯಲ್ಲಿವೆ. ಮಕ್ಕಳಿಗೆ ಬಣ್ಣದ ಈ ಬಟ್ಟೆಗಳು ಇಷ್ಟವಾಗುವುದರಲ್ಲಿ ಸಂಶಯವಿಲ್ಲ. ಕೆಮೊ ಪ್ರಿಂಟ್‌ ಹೊಂದಿದ ಶೂಗಳು ಇತ್ತೀಚಿನ ಟ್ರೆಂಡ್‌. ಗಾಢ ಬಣ್ಣದವಲ್ಲದಿದ್ದರೂ ತಿಳಿಬಣ್ಣದಲ್ಲಿ ಕೆಮೊ ಪ್ರಿಂಟ್ ಹೊಂದಿರುವ ಶೂಗಳು ಇಂದು ಹೆಚ್ಚು ಬೇಡಿಕೆಯಲ್ಲಿದೆ.

ಪ್ರತಿಕ್ರಿಯಿಸಿ (+)