ಸೋಮವಾರ, ಡಿಸೆಂಬರ್ 9, 2019
22 °C

ಹವಳ ದಿಬ್ಬದಲ್ಲೂ ಪ್ಲಾಸ್ಟಿಕ್‌!

Published:
Updated:
ಹವಳ ದಿಬ್ಬದಲ್ಲೂ ಪ್ಲಾಸ್ಟಿಕ್‌!

ಅತಳ ವಿತಳ ಪಾತಾಳವನ್ನೆಲ್ಲಾ ಆವರಿಸಿಕೊಂಡಿರುವ ವಸ್ತು ಯಾವುದಪ್ಪಾ ಎಂದು ಕೇಳಿದರೆ, ಮುಲಾಜಿಲ್ಲದೆ ಪ್ಲಾಸ್ಟಿಕ್‌ ಎಂದು ಹೇಳಬಹುದು. ಆಳಸಾಗರದಲ್ಲಿ ಹುದುಗಿರುವ ಹವಳ ದಿಬ್ಬದಲ್ಲಿಯೂ ಪ್ಲಾಸ್ಟಿಕ್‌ ಆವರಿಸಿಕೊಂಡಿದ್ದು, ಹವಳ ದಿಬ್ಬಗಳಿಗೇ ಅಪಾಯ ಎದುರಾಗಿದೆ.

ಜಗತ್ತಿನಲ್ಲೇ ಅತ್ಯಧಿಕ ಹವಳ ದ್ವೀಪಗಳಿವೆ ಎನ್ನಲಾಗುವ ಏಷ್ಯಾ ಪೆಸಿಫಿಕ್‌ ವಲಯದಲ್ಲಿ ವಿಜ್ಞಾನಿಗಳು ನಡೆಸಿದ ಅಧ್ಯಯನದಲ್ಲಿ, ಶೇ 89ರಷ್ಟು ಹವಳ ದ್ವೀಪಗಳಲ್ಲಿ ಪ್ಲಾಸ್ಟಿಕ್‌ ಸಮಸ್ಯೆ ಕಂಡುಬಂದಿದೆ. ಇದರಿಂದಾಗಿ ಹವಳ ದಿಬ್ಬಗಳ ಅಸ್ತಿತ್ವಕ್ಕೇ ಧಕ್ಕೆ ಉಂಟಾಗುತ್ತಿದೆ.

ಪ್ರತಿ ವರ್ಷ ಕನಿಷ್ಠ 80 ಲಕ್ಷ ಟನ್‌ಗಳಷ್ಟು ಪ್ಲಾಸ್ಟಿಕ್‌ ಮತ್ತು ಮೈಕ್ರೋಪ್ಲಾಸ್ಟಿಕ್‌ ತ್ಯಾಜ್ಯ ಸಮುದ್ರ ಸೇರುತ್ತದೆ. ಹವಳ ದ್ವೀಪಗಳಲ್ಲಿ ಕಂಡುಬಂದಿರುವ ಪ್ಲಾಸ್ಟಿಕ್‌ ತ್ಯಾಜ್ಯಗಳಿಂದಾಗಿ ಅಲ್ಲಿಗೆ ಆಮ್ಲಜನಕ ಮತ್ತು ಬೆಳಕು ಪೂರೈಕೆಗೆ ಅಡಚಣೆಯಾಗುತ್ತಿದೆ. ಅಲ್ಲದೆ ಚೂಪಾದ ‍ಪ್ಲಾಸ್ಟಿಕ್‌ ತ್ಯಾಜ್ಯಗಳು ಹವಳ ದಿಬ್ಬಗಳಿಗೆ ಭೌತಿಕವಾಗಿಯೂ ಹಾನಿ ಉಂಟುಮಾಡುತ್ತಿವೆ.

‘ಹವಳಗಳೂ ನಮ್ಮ ನಿಮ್ಮಂತೆಯೇ ಜೀವಿಗಳು. ಅವುಗಳಿಗೆ ಬಾಹ್ಯ ವಸ್ತುಗಳಿಂದ ಸೋಂಕು ಮತ್ತು ಗಾಯಗಳಾಗುತ್ತವೆ. ಕೊಳಕು ಚಾಕುಗಳಿಂದ ನಮಗೆ ನಾವೇ ಗಾಯ ಮಾಡಿಕೊಂಡಂತಹ ಪರಿಸ್ಥಿತಿಯನ್ನು ಹವಳಗಳು ಅನುಭವಿಸುತ್ತಿವೆ’ ಎಂದು, ಅಧ್ಯಯನ ನಿರತ ತಂಡವೊಂದರ ಸದಸ್ಯೆ, ಅಮೆರಿಕದ ಕರ್ನೆಲ್‌ ವಿಶ್ವವಿದ್ಯಾಲಯದ ಜೋಲಿ ಲ್ಯಾಂಬ್‌ ವಿವರಿಸಿದ್ದಾರೆ.

ಇನ್ನೊಂದು ಮಾಹಿತಿ ಪ್ರಕಾರ, ಮಾಲ್ಡೀವ್ಸ್‌ನ ಶೇ 60ರಷ್ಟು ಹವಳ ದ್ವೀಪಗಳು ಅಪಾಯದಲ್ಲಿವೆ. ಸಮುದ್ರದ ಮೇಲ್ಮೈ ಬಿಸಿಯಾಗುತ್ತಿರುವುದರಿಂದ ಅಲ್ಲಿನ ಹವಳಗಳು ಬಣ್ಣ ಕಳೆದುಕೊಳ್ಳುತ್ತಿವೆ.

ಪ್ರತಿಕ್ರಿಯಿಸಿ (+)