ಗುರುವಾರ , ಡಿಸೆಂಬರ್ 12, 2019
25 °C
ಯೂಟ್ಯೂಬ್‌ನಲ್ಲಿ ಹಾಡುಗಳು ಲಭ್ಯ

ವೈರಾಗ್ಯ ಮೂರ್ತಿಗೆ ಸ್ವರಾಭಿಷೇಕ

ಕೆ.ಎಸ್‌.ಸುನಿಲ್‌ Updated:

ಅಕ್ಷರ ಗಾತ್ರ : | |

ವೈರಾಗ್ಯ ಮೂರ್ತಿಗೆ ಸ್ವರಾಭಿಷೇಕ

ಶ್ರವಣಬೆಳಗೊಳ: ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವ ಪ್ರಯುಕ್ತ ತ್ಯಾಗ ಮೂರ್ತಿಗೆ 12 ಭಾಷೆಗಳಲ್ಲಿ ಗೀತೆಗಳನ್ನು ಹಾಡಿ ಗಾಯಕ ದಂಪತಿ ನುಡಿನಮನ ಸಲ್ಲಿಸಿದ್ದಾರೆ.

ಗೊಮ್ಮಟೇಶ್ವರನ ಜೀವನ, ತಪಸ್ಸು, ಸಾಧನೆ, ಕೀರ್ತಿಯನ್ನು ಜಗಕ್ಕೆಲ್ಲ ಸಾರುವ ಗೀತೆಗಳಿಗೆ ಶ್ರವಣಬೆಳಗೊಳದ ಗಾಯಕರಾದ ಸರ್ವೇಶ್‌ ಜೈನ್‌ ಮತ್ತು ಸೌಮ್ಯಾ ಜೈನ್ ಕಂಠದಾನ ಮಾಡಿದ್ದಾರೆ.

ಪ್ರಾಕೃತ, ಕನ್ನಡ, ಸಂಸ್ಕೃತ, ತಮಿಳು, ಇಂಗ್ಲಿಷ್, ಹಿಂದಿ, ಮಾರವಾಡಿ, ಮರಾಠಿ, ತುಳು, ಬಂಗಾಳಿ, ತೆಲುಗು, ಮಲೆಯಾಳ ಭಾಷೆಗಳಲ್ಲಿ ಸಾಹಿತಿಗಳು ಬಾಹುಬಲಿ ಕುರಿತು ರಚಿಸಿರುವ ಗೀತೆಗಳನ್ನು ಆಯ್ಕೆ ಮಾಡಿಕೊಂಡು, ಅವುಗಳಿಗೆ ಸ್ವರ ಸಂಯೋಜಿಸಿ ಹಾಡಿರುವ ‘ಜೈನ್‌ ಬೀಟ್ಸ್‌’ ಎಂಬ ಆಲ್ಬಂ ಸಿದ್ಧಗೊಂಡಿದೆ.

ಆಲ್ಬಂ ಹೊರತರಲು ಈ ಗಾಯಕ ದಂಪತಿ ಮೂರು ವರ್ಷ ಶ್ರಮಪಟ್ಟಿದ್ದಾರೆ. ಇವರ ಯೋಜನೆಗೆ ವೈದ್ಯರಾದ ಮಹಾವೀರ ಚೌಗಲಾ ಹುಲ್ಲೋಳಿ ಸಾಥ್‌ ನೀಡಿದ್ದಾರೆ. ಈ ಪೈಕಿ ಆಲ್ಬಂನಲ್ಲಿರುವ ‘ಬಾಹುಬಲಿ ಸ್ವಾಮಿ ಜಗಕ್ಕೆಲ್ಲಾ ಸ್ವಾಮಿ’ (ಕನ್ನಡ), ‘ಶ್ರವಣ ಬೆಳ್‌ಗುಳಿ ಚಾವು ಚಲಾ’ (ಮರಾಠಿ) ಗೀತೆಗಳು ಈಗಾಗಲೇ ಭಕ್ತರು, ಸಂಗೀತಾಸಕ್ತರ ಮನಸೂರೆಗೊಂಡಿವೆ.

ಇಂಗ್ಲಿಷ್ ಗೀತೆಗೆ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಪಲ್ಲವಿ ರಚಿಸಿರುವುದು ಮತ್ತೊಂದು ವಿಶೇಷ. ಯೂಟ್ಯೂಬ್‌ನಲ್ಲಿ ಹನ್ನೆರಡು ಹಾಡುಗಳನ್ನು ಅಪ್‌ಲೋಡ್‌ ಮಾಡಲಾಗಿದೆ. ಆಸಕ್ತರು www.jainbeats.myshopify.com ವೆಬ್‌ಸೈಟ್‌ನಲ್ಲಿ ಹಾಡುಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು.

‘ಬಾಹುಬಲಿ ತಪಸ್ಸು ಮಾಡಿದ್ದು 12 ವರ್ಷ, ಮೂರ್ತಿ ನಿರ್ಮಾಣಕ್ಕೆ ತೆಗೆದುಕೊಂಡ ಸಮಯ 12 ವರ್ಷ ಹಾಗೂ 12 ವರ್ಷಕ್ಕೊಮ್ಮೆ ಮಹಾಮಸ್ತಕಾಭಿಷೇಕ ನಡೆಯುತ್ತದೆ. ಹೀಗಾಗಿ ಶಾಂತಿದೂತನಿಗೆ ಹನ್ನೆರಡು ಗೀತೆಗಳಿಂದ ಸ್ವರಾಭಿಷೇಕ ಮಾಡಲು ನಿರ್ಧರಿಸಿದೆ. ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ಸಲಹೆ, ಮಾರ್ಗದರ್ಶನ ನೀಡಿದರು. ಪ್ರಾಕೃತ ಗೀತೆಯ ರಾಗ ಸಂಯೋಜನೆಗೆ ಸಾಕಷ್ಟು ಪ್ರಯೋಗ ನಡೆಸಲಾಯಿತು. ಹಲವು ಸುಧಾರಣೆಯ ನಂತರ ಸ್ವಾಮೀಜಿ ಈ ಪ್ರಾಕೃತ ಗೀತೆಯ ರಾಗಕ್ಕೆ ಒಪ್ಪಿಗೆ ನೀಡಿದರು’ ಎಂದು ಗಾಯಕ ಸರ್ವೇಶ್ ಜೈನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಾಹುಬಲಿ ಕುರಿತ ಹಾಡುಗಳ ಹಲವಾರು ಸಿ.ಡಿಗಳು ಬಂದಿವೆ. ಆದರೆ ಈವರೆಗೂ ಒಂದೇ ಆಲ್ಬಂನಲ್ಲಿ 12 ಭಾಷೆಗಳ ಹಾಡುಗಳು ಇರಲಿಲ್ಲ. ಇದೇ 17ರಂದು ಬಾಹುಬಲಿಗೆ ಮಜ್ಜನ ಮುಗಿದ ಬಳಿಕ ಸಂಜೆ ಚಾವುಂಡರಾಯ ವೇದಿಕೆ ಸಭಾಮಂಟಪದ ಸಾಂಸ್ಕೃತಿಕ ವೇದಿಕೆಯಲ್ಲಿ ಬಹುಭಾಷಾ ಸಂಗೀತ ಸಂಜೆಯಲ್ಲಿ ಈ ಗೀತೆಗಳ ಗಾಯನ ನಡೆಯಲಿದೆ’ ಎಂದು ವಿವರಿಸಿದರು.

ಮುಖ್ಯಾಂಶಗಳು

* ಯೋಜನೆಗೆ ಮೂರು ವರ್ಷದ ಶ್ರಮ

* ಯೂಟ್ಯೂಬ್‌ನಲ್ಲಿ ಹಾಡುಗಳ ಅಪ್‌ಲೋಡ್‌

* ಇಂಗ್ಲಿಷ್‌ ಗೀತೆಗೆ ಸ್ವಾಮೀಜಿ ಪಲ್ಲವಿ

* 17ರಂದು ಸಂಗೀತ ಸಂಜೆಯಲ್ಲಿ ಗಾಯನ

ಪ್ರತಿಕ್ರಿಯಿಸಿ (+)