ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

122 ಕೆ.ಜಿ. ತಾಮ್ರದ ಗ್ರಂಥ ಲೋಕಾರ್ಪಣೆ

ಮಕ್ಕಳಿಗೆ ಅಕ್ಷರಾಭ್ಯಾಸ, ಜಿನವಾಣಿ ಸ್ತುತಿ ಗಾಯನ
Last Updated 11 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಶ್ರವಣಬೆಳಗೊಳ: ಬಾಹುಬಲಿಯ 88ನೇ ಮಹಾಮಸ್ತಕಾಭಿಷೇಕದ ಅಂಗವಾಗಿ ನಾಲ್ಕನೇ ದಿನವಾದ ಭಾನುವಾರ ಪಂಚಕಲ್ಯಾಣ ಪ್ರತಿಷ್ಠಾಪನೆ ಮಹೋತ್ಸವದ ವಿಧಿ-ವಿಧಾನಗಳು ನೆರವೇರಿದವು.

ಬೆಳಗ್ಗೆ ಸುಪ್ರಭಾತ, ಜಿನದರ್ಶನ, 24 ತೀರ್ಥಂಕರರಿಗೆ ಪಂಚಾಮೃತ ಅಭಿಷೇಕ, ಸರ್ವ ಮಹಾಶಾಂತಿ ಮಂತ್ರ, 24 ತೀರ್ಥಂಕರರ ನಿರ್ವಾಣ ಕಲ್ಯಾಣ ಅರ್ಘ್ಯ, ತ್ರಿಕುಂಡ ಹೋಮ, ಅಂಕುರಾರ್ಪಣೆ ಮತ್ತು ಆದಿನಾಥ ತೀರ್ಥಂಕರನಿಗೆ ಪ್ರಥಮ ಆಹಾರ ವಿಧಿಗಳು ನಡೆದವು.

ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಈಕ್ಷು ರಸವನ್ನು (ಕಬ್ಬಿನ ಹಾಲು) ಭಕ್ತ ಸಮೂಹ ಪ್ರಸಾದವಾಗಿ ಸ್ವೀಕರಿಸಿದರು. ಮಧ್ಯಾಹ್ನ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಲಾಯಿತು.

ಆದಿನಾಥ ತೀರ್ಥಂಕರನ ಪಂಚಕಲ್ಯಾಣದ ಕೇವಲಜ್ಞಾನ ಕಲ್ಯಾಣದ ಪ್ರಯುಕ್ತ ಸಮವಸರಣದ ಉದ್ಘಾಟನೆಯನ್ನು ಕ್ಷೇತ್ರದ ಪೀಠಾಧಿಪತಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನೇತೃತ್ವದಲ್ಲಿ ಸೌಧರ್ಮ ಇಂದ್ರ ಇಂದ್ರಾಣಿ ಪದವಿಧಾರರಾದ ಭಾಗ್‌ಚಂದ್‌, ಸುನೀತಾದೇವಿ ಚೂಡೀವಾಲಾ ದಂಪತಿ ನೆರವೇರಿಸಿದರು.

ಆದಿನಾಥನಿಗೆ ಕೇವಲಜ್ಞಾನವಾದ ತಕ್ಷಣ ದೇವೇಂದ್ರನು ಕುಬೇರನಿಗೆ ಸಮವಸರಣ ರಚಿಸಲು ಆಜ್ಞೆ ಮಾಡುತ್ತಾನೆ. ಕುಬೇರನು ಸಮವಸರಣ ರಚನೆಯಾ
ಗುವ ನಗರವನ್ನು ಶೃಂಗಾರಗೊಳಿಸುತ್ತಾನೆ. ಇದರಲ್ಲಿ ಎಲ್ಲ ಜೀವಿಗಳು ತಮ್ಮ ವೈರತ್ವ ಮರೆತು ಪ್ರೀತಿ, ಕರುಣೆ, ಸ್ನೇಹದಿಂದ ಇರುತ್ತವೆ.

ಸಮವಸರಣದ ಮಧ್ಯದಲ್ಲಿ ಚತುರ್ಮುಖ ಜಿನಬಿಂಬವಿದ್ದು, ಸುತ್ತಲೂ 12 ವೃತ್ತಗಳ ವೇದಿ ರಚಿಸಲಾಗಿತ್ತು.

ಮೊದಲ ಪೀಠದಲ್ಲಿ ಮುನಿಗಳು, ಎರಡನೆಯದರಲ್ಲಿ ಆರ್ಯಿಕೆಯರು, ಮೂರನೆಯದರಲ್ಲಿ ಪ್ರತಿಮಾಧಾರಿಗಳು, ನಂತರ ನಾಲ್ಕು ಗತಿಗಳ ಜೀವಿಗಳು, ನಾಲ್ಕು ದಿಕ್ಕಿನಲ್ಲೂ ಮಾನಸ್ತಂಭಗಳು, ಎಂಟು ಪ್ರಾತಿಹಾರ್ಯಗಳು ಇವೆ. ಇದೇ ವೇಳೆ ವಿಶುದ್ಧ ಸಾಗರ ಮಹಾರಾಜರ ಪ್ರಾಕೃತ ಭಾಷೆಯ 122 ಕೆ.ಜಿ. ತಾಮ್ರದ ‘ನಿಜಾತ್ಮ ತರಂಗಣಿ’ ಗ್ರಂಥವನ್ನು ಲೋಕಾರ್ಪಣೆ ಮಾಡಲಾಯಿತು. ಭಕ್ತರು ಜಿನವಾಣಿ ಸ್ತುತಿ ಹಾಡಿದರು.

ಇಂದ್ರ ಇಂದ್ರಾಣಿ ಪದವಿಧಾರಕರು ಸಮವಸರಣಕ್ಕೆ ರತ್ನವೃಷ್ಟಿ, ಸ್ವರ್ಣವೃಷ್ಟಿ, ರಜತವೃಷ್ಟಿ ಮತ್ತು ಪುಷ್ಪವೃಷ್ಟಿ ಮಾಡಿದರು. ಕಾರ್ಯಕ್ರಮಕ್ಕೂ ಮೊದಲು ಸಂಸ್ಕಾರ್‌ ಮಂಟಪದಿಂದ ಸರ್ವಾಹ್ಣ ಯಕ್ಷನನ್ನು ಮೆರವಣಿಗೆ ಮೂಲಕ ಚಾವುಂಡರಾಯ ಸಭಾಮಂಟಪದ ಸಮವಸರಣಕ್ಕೆ ಕರೆತರಲಾಯಿತು.

ಇಂದ್ರ ಇಂದ್ರಾಣಿಯರು ಸಂಗೀತ ನೃತ್ಯದೊಂದಿಗೆ ಉದ್ಘಾಟನೆ ನೆರವೇರಿಸಿದರು. ಮಂಗಲವಾದ್ಯ, ಮೈಸೂರು ಬ್ಯಾಂಡ್‌ಸೆಟ್‌, 108 ತುತ್ತೂರಿಗಳು, 108 ಜಾಗಟೆ, ಚಂಡೆವಾದ್ಯ ಮೊಳಗಿದವು. ಅಷ್ಟಕನ್ನಿಕೆಯರು, ವಿವಿಧ ಇಂದ್ರ ಪದವಿಧಾರಕರು, ವೈಭವದ ಸಮವಸರಣ ಉದ್ಘಾಟನೆಗೆ ಸಹಸ್ರಾರು ಜನರು ಸಾಕ್ಷಿಯಾದರು.

ಆಚಾರ್ಯರು ಮತ್ತು ಸಂಘಸ್ಥ ತ್ಯಾಗಿಗಳು ಸಾನ್ನಿಧ್ಯ ವಹಿಸಿದ್ದರು. ಪ್ರತಿಷ್ಠಾಚಾರ್ಯ ಹಸ್ಮುಖ್‌ ಜೈನ್‌ ಧಾರ್ಮಿಕ ವಿಧಿ-ವಿಧಾನ ನೆರವೇರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT