ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುರಿಗಾಹಿ ಹುಡುಗ ಗೋಲ್ ಕೀಪರ್ ಆದ

Last Updated 2 ಜುಲೈ 2018, 20:26 IST
ಅಕ್ಷರ ಗಾತ್ರ

ಟೆಹರಾನ್ ಬೀದಿಗಳಲ್ಲಿ ಅಲೆಮಾರಿಯಾಗಿದ್ದ ಹುಡುಗ ಪೋರ್ಚುಗಲ್ ತಂಡದ ಕ್ರಿಸ್ಟಿಯಾನೊ ರೊನಾಲ್ಡೊ ಒದ್ದ ಚೆಂಡನ್ನು ತಡೆದು ಮೊನ್ನೆ ಸುದ್ದಿಯಾದ. ಆ ಪೆನಾಲ್ಟಿ ಅವಕಾಶದಲ್ಲಿ ರೊನಾಲ್ಡೊ ಯಶಸ್ವಿಯಾಗಿದ್ದಿದ್ದರೆ, ಇರಾನಿನ ಬಿರಾನ್ವಾಂಡ್ ಎಂಬ ಯುವಕ ಸುದ್ದಿಯೇ ಆಗುತ್ತಿರಲಿಲ್ಲ.

ವಿಶ್ವಕಪ್ ಫುಟ್ ಬಾಲ್ ಪಂದ್ಯಗಳ ಗ್ರೂಪ್ ‘ಬಿ’ಯ ಕೊನೆಯ ಪಂದ್ಯದಲ್ಲಿ ಇರಾನ್ ತಂಡದ ಆಟವನ್ನು ಇಡೀ ವಿಶ್ವವೇ ಕೊಂಡಾಡಿತು. ಸೋಲು-ಗೆಲುವಿನ ಸಮತೂಕ ಎನ್ನಬಹುದಾದ ಪಂದ್ಯ ಅದು.

ಬಿರಾನ್ವಾಂಡ್ ಈಗ 25ರ ತರುಣ. 1.94 ಮೀಟರ್ ಎತ್ತರದ ದೇಹ. ಲೊರೆಸ್ತಾನ್ ನ ಸರಬ್-ಎ-ಯಾಸ್ ಎಂಬ ಸಣ್ಣ ಹಳ್ಳಿಯಲ್ಲಿ ಹುಟ್ಟಿದ ಆತ ಮೂರನೇ ವಯಸ್ಸಿನಲ್ಲಿ ಕುರಿಗಾಹಿಯಾಗಿದ್ದ. ಅವನದ್ದು ಅಲೆಮಾರಿಗಳ ಕುಟುಂಬ. ಬೆಟ್ಟತಪ್ಪಲಿನಲ್ಲೇ ಹೆಚ್ಚಾಗಿ ಅಲ್ಲಲ್ಲಿ ಬಿಡಾರ ಹೂಡುತ್ತಿದ್ದದ್ದು.

ಕುರಿಗಳನ್ನು ಮೇಯಲು ಬಿಟ್ಟು, ಬಿರಾನ್ವಾಂಡ್ ಒಂದಿಷ್ಟು ಹುಡುಗರನ್ನು ಸೇರಿಸಿಕೊಂಡು ಫುಟ್ ಬಾಲ್ ಹಾಗೂ ‘ದಲ್ ಪರಾನ್’ ಎಂಬ ಆಟಗಳನ್ನು ಆಡುತ್ತಿದ್ದ. ದೂರದವರೆಗೆ ಕಲ್ಲುಗಳನ್ನು ಗುರಿ ಇಟ್ಟು ಎಸೆಯುವ ಆಟವೇ ದಲ್ ಪರಾನ್. ಅಲ್ಲಿ ಇಡುತ್ತಿದ್ದ ಗುರಿಯೇ ಮುಂದೆ ಫುಟ್ ಬಾಲ್ ನಲ್ಲಿ ಗೋಲ್ ಕೀಪರ್ ಆಗಿ ಚೆಂಡನ್ನು ಎತ್ತ ಎಸೆಯಬೇಕು ಎಂಬ ಸಮಯಪ್ರಜ್ಞೆಯನ್ನು ಬೆಳೆಸಿತು.

ಬಿರಾನ್ವಾಂಡ್ ಹನ್ನೆರಡನೇ ವಯಸ್ಸಿನಲ್ಲಿದ್ದಾಗ ಕುಟುಂಬ ಸರಬೈಸ್ ಎಂಬಲ್ಲಿ ನೆಲೆಗೊಂಡಿತು. ಸ್ಥಳೀಯ ಫುಟ್ ಬಾಲ್ ತಂಡದ ಪರವಾಗಿ ಸ್ಟ್ರೈಕರ್ ಆಗಿ ಆಡುತ್ತಿದ್ದಾಗ ಒಮ್ಮೆ ಗಂಭೀರ ಗಾಯವಾಯಿತು. ಅಲ್ಲಿಂದಾಚೆಗೆ ಫುಟ್ ಬಾಲ್ ಸ್ಟ್ರೈಕರ್ ಆಗುವ ಕನಸಿಗೆ ತಣ್ಣೀರು. ಅದರಿಂದ ಕಲ್ಲವಿಲಗೊಳ್ಳದ ಬಿರಾನ್ವಾಂಡ್ ಗೋಲ್ ಕೀಪರ್ ಆಗಿ ಪಳಗಲು ಪಣತೊಟ್ಟ. ತಾನು ಅಭ್ಯಾಸ ಮಾಡುತ್ತಿದ್ದ ತಂಡದ ಗೋಲ್ ಕೀಪರ್ ಒಮ್ಮೆ ಗಾಯಗೊಂಡಾಗ ಈತನಿಗೆ ಆಡುವ ಅವಕಾಶ ಸಿಕ್ಕಿತು. ಗೋಲುಗಳು ಹೋಗದಂತೆ ತಡೆದ ವೈಖರಿಯೇ ತಂಡದಲ್ಲಿ ಸ್ಥಾನವನ್ನು ಖಾತರಿಪಡಿಸಿತು.

ಆದರೆ, ಅಪ್ಪ ಮೊರ್ತೆಜಾಗೆ ಮಗ ಸದಾ ಕಾಲ ಫುಟ್ ಬಾಲ್ ಆಡುವುದು ಇಷ್ಟವಿರಲಿಲ್ಲ. ಅದರಿಂದ ಹೊಟ್ಟೆ ತುಂಬುವುದಿಲ್ಲ ಎಂದು ಅವರು ಪದೇ ಪದೇ ಬುದ್ಧಿಮಾತು ಹೇಳುತ್ತಿದ್ದರು. ಮನೆಯಿಂದ ಟೆಹರಾನ್‌ಗೆ ಫುಟ್ ಬಾಲ್ ಪ್ರತಿಭೆ ಓಡಿಹೋದ. ಅಲ್ಲಿ ಇರಾನಿಯನ್ ಫುಟ್ ಬಾಲ್ ಭವಿಷ್ಯ ಇದೆ ಎನ್ನುವುದು ಗೊತ್ತಿತ್ತು. ಅಲ್ಲಿಗೆ ಹೋಗಲು ಸಂಬಂಧಿಕರೊಬ್ಬರು ಹಣಸಹಾಯ ಮಾಡಿದರು. ಹೊಸೇನ್ ಫೀಜ್ ಎಂಬ ಹೆಸರಾಂತ ಕೋಚ್ ಬಳಿಗೆ ಹೋಗಿ, ತರಬೇತಿ ಕೊಡುವಂತೆ ಕೇಳಿಕೊಂಡ. ಅವರು ಆಗಲೇ 3,200 ರೂಪಾಯಿ ಶುಲ್ಕ ಕೇಳಿದರು. ಜೇಬಿನಲ್ಲಿ ಹಣವೇ ಇಲ್ಲದ ಬಿರಾನ್ವಾಂಡ್ ಕ್ಲಬ್ ನ ಬಾಗಿಲ ಎದುರೇ ಆ ದಿನ ರಾತ್ರಿ ಮಲಗಿಬಿಟ್ಟ.

ಮರುದಿನ ಬೆಳಿಗ್ಗೆ ಕಣ್ಣು ಬಿಟ್ಟು ನೋಡಿದರೆ ಪಕ್ಕದಲ್ಲಿ ಹಣವಿತ್ತು. ಅದನ್ನು ತರಬೇತುದಾರರಿಗೆ ಕೊಟ್ಟ.ಗುರುವಿಗಾಗಿ ಹುಡುಕಿಕೊಂಡು ಬಂದು, ಬಾಗಿಲ ಎದುರೇ ಮಲಗಿದ್ದ ಅವನನ್ನು ಕಂಡು ಹೊಸೇನ್ ಮನಸ್ಸು ಕರಗಿತ್ತು.

ತಮ್ಮ ತಂಡದ ನಾಯಕನಿಗೆ ಸಹಾಯ ಮಾಡುವಂತೆ ಅವರು ಕೇಳಿಕೊಂಡರು. ಅವನು ಶುಲ್ಕವನ್ನು ಪಕ್ಕದಲ್ಲಿ ಇಟ್ಟುಹೋಗಿದ್ದ. ಜವಳಿ ಕಾರ್ಖಾನೆಯಲ್ಲಿ ಅರೆಕಾಲಿಕ ಕೆಲಸ ಮಾಡಿಕೊಂಡು, ಕಾರುಗಳನ್ನು ತೊಳೆಯುತ್ತಾ ಬಂದ ಚಿಕ್ಕಾಸನ್ನು ಸೇರಿಸಿಡುತ್ತಾ ಬಿರಾನ್ವಾಂಡ್ ಫುಟ್ ಬಾಲ್ ಪ್ರೀತಿಯನ್ನೂ ಉಳಿಸಿಕೊಂಡ. ಪರ್ಷಿಯನ್ ಗಲ್ಫ್ ಪ್ರೊ ಲೀಗ್ ಫುಟ್ ಬಾಲ್‌ನಲ್ಲಿ ಕಳೆದ ವರ್ಷ 718 ನಿಮಿಷ ಒಂದೂ ಗೋಲನ್ನು ಬಿಟ್ಟುಕೊಡದ ಟೂರ್ನಿಯ ದಾಖಲೆ ಬರೆದ.

ರೊನಾಲ್ಡೊ ಕೂಡ ಈಗ ಈ ಹುಡುಗನ ಇತಿ ವೃತ್ತಾಂತ ಕೇಳುತ್ತಿರಬಹುದು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT