ಭಾನುವಾರ, ಜೂನ್ 7, 2020
30 °C

ಸೋಮವಾರ, 12–2–1968

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೋಮವಾರ, 12–2–1968

ಶ್ರೀ ದೀನದಯಾಳು ಉಪಾಧ್ಯಾಯರ ಕೊಲೆ: ಕಾಲುಗಳ ಕೀಲು ಮುರಿತ, ತಲೆಗೆ ತೂತು

ವಾರಾಣಸಿ, ಫೆ. 11– ಭಾರತೀಯ ಜನಸಂಘದ ಅಧ್ಯಕ್ಷ ಶ್ರೀ ದೀನದಯಾಳು ಉಪಾಧ್ಯಾಯ ಅವರು ಇಂದು ಬೆಳಗಿನ ಜಾವ ಮುಗಲ್ ಸರಾಯ್ ನಿಲ್ದಾಣದ ಬಳಿ ಸತ್ತು ಬಿದ್ದುದು ಕಂಡುಬಂದಿತು.

ಮುಗಲ್ ಸರಾಯ್ ನಿಲ್ದಾಣಕ್ಕೆ ಸುಮಾರು ನೂರು ಗಜಗಳ ದೂರದಲ್ಲಿ ಮೃತದೇಹ ಬಿದ್ದುದನ್ನು ರೈಲ್ವೆಕ್ಯಾಬಿನ್‌ಮನ್ ಮೊದಲು ತಿಳಿಸಿದನೆಂದು ರೈಲ್ವೆ ಪೊಲೀಸ್ ಅಧಿಕಾರಿ ತಿಳಿಸಿದರು. ಅವರ ತಲೆಯಲ್ಲಿ ತೂತಾದ ಗುರುತುಗಳಿವೆ. ಎರಡು ಕಾಲುಗಳು ಮುರಿದಿವೆ. ಬಲ ತೋಳಿನ ಮೇಲೆ ರಕ್ತದ ಕಲೆಗಳಿವೆ.

ಐದು ರೂಪಾಯಿಯ ಒಂದು ನೋಟು ಅವರ ಮುಷ್ಟಿಯಲ್ಲಿತ್ತು. 26 ರೂಪಾಯಿಗಳು ಮತ್ತು ಕೈಗಡಿಯಾರ ಅವರ ಬಳಿ ಇತ್ತು.

ಶ್ರೀ ಉಪಾಧ್ಯಾಯರು ಲಖನೌದಿಂದ ಪಟ್ನಕ್ಕೆ ಪ್ರಯಾಣ ಮಾಡುತ್ತಿದ್ದರು. ಪಠಾಣ ಕೋಟ್ –ಸೀಲ್ಡಾ ಎಕ್ಸ್‌ಪ್ರೆಸ್‌ನಲ್ಲಿ ಪ್ರಥಮ ದರ್ಜೆ ಬೋಗಿಯಲ್ಲಿ ಅವರು ಪ್ರಯಾಣ ಮಾಡುತ್ತಿದ್ದರು. ಅವರ ಬಳಿ ಇದ್ದ ರೈಲ್ವೆ ಟಿಕೆಟ್ಟಿನಿಂದ ಅವರು ಯಾರು ಎಂಬುದನ್ನು ಗುರುತಿಸಲು ಸಾಧ್ಯವಾಯಿತು.

ಪ್ರಧಾನಿ ದುಃಖ: ಶ್ರೀ ದೀನದಯಾಳು ಉಪಾಧ್ಯಾಯ ಅವರ ಸಾವಿನ ವಾರ್ತೆ ತಿಳಿದು ನನಗೆ ಆಘಾತ ಉಂಟಾಯಿತು ಎಂದು ಪ್ರಧಾನಿ ಇಂದಿರಾ ಗಾಂಧಿ ಅವರು ತಿಳಿಸಿದ್ದಾರೆ.

ಈ ದುರಂತ ಘಟನೆಯ ಮೂಲವನ್ನು ಕಂಡು ಕೊಳ್ಳುವುದಕ್ಕೆ ಉತ್ತರ ಪ್ರದೇಶ ಸರಕಾರವು ಸಾಧ್ಯವಾದ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ನಾನು ಭಾವಿಸುತ್ತೇನೆ ಎಂದೂ ಅವರು ಶ್ರೀ ಉಪಾಧ್ಯಾಯ ಅವರ ಸಾವಿನ ಬಗ್ಗೆ ನೀಡಿದ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.

ದೇಶದಲ್ಲಿ ಅರಾಜಕತೆ ಹೆಚ್ಚುತ್ತಿರುವ ಬಗ್ಗೆ ಇಂದಿರಾ ಆತಂಕ

ನವದೆಹಲಿ, ಫೆ. 11– ರಾಷ್ಟ್ರದಲ್ಲಿ ಶಾಂತಿ ಮತ್ತು ಶಿಸ್ತಿನ ಪರಿಸ್ಥಿತಿ ದಿನೇದಿನೇ ಹದಗೆಡುತ್ತಿರುವ ಬಗ್ಗೆ ಪ್ರಧಾನ ಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ಅವರು ತಮ್ಮ ತೀವ್ರ ಆತಂಕವನ್ನು ವ್ಯಕ್ತಪಡಿಸಿದ್ದಾರೆ.

ಪ್ರಧಾನ ಮಂತ್ರಿಗಳು ಪಾರ್ಲಿಮೆಂಟ್ ಬಜೆಟ್ ಅಧಿವೇಶನದ ಮುನ್ನಾ ದಿನವಾದ ಇಂದು ಕಾಂಗ್ರೆಸ್ ಪಾರ್ಲಿಮೆಂಟರಿ ಪಕ್ಷದ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.