ಶುಕ್ರವಾರ, ಡಿಸೆಂಬರ್ 6, 2019
26 °C
ಮಾಸ್ಕೊ ನಗರದ ಹೊರವಲಯದಲ್ಲಿ ದುರಂತ

ವಿಮಾನ ಅಪಘಾತ: 71 ಮಂದಿ ಸಾವು

ಎಎಫ್‌ಪಿ Updated:

ಅಕ್ಷರ ಗಾತ್ರ : | |

ವಿಮಾನ ಅಪಘಾತ: 71 ಮಂದಿ ಸಾವು

ಮಾಸ್ಕೊ: ರಷ್ಯಾದ ವಿಮಾನವೊಂದು ನಗರದ ಹೊರವಲಯದಲ್ಲಿ ಭಾನುವಾರ ಪತನಗೊಂಡಿದ್ದು, ಎಲ್ಲ 71 ಪ್ರಯಾಣಿಕರು ಸಾವಿಗೀಡಾಗಿದ್ದಾರೆ.

ಸರಟೊವ್‌ ಏರ್‌ಲೈನ್ಸ್‌ಗೆ ಸೇರಿದ ‘ಅನ್‌ಟೊನೋವ್ ಆನ್‌–148’ ಹೆಸರಿನ ಈ ವಿಮಾನವು ನಗರದ ಡೊಮೊಡೆದೊವೊ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಾರಾಟ ಆರಂಭಿಸಿದ ಕೆಲವೇ ನಿಮಿಷಗಳಲ್ಲಿ ಪತನವಾಗಿದೆ.

ಉರಲ್ಸ್‌ನ ಒರಸ್ಕ್‌ ನಗರಕ್ಕೆ ತೆರಳುತ್ತಿದ್ದ ವಿಮಾನವು ಮಾಸ್ಕೊ ನಗರದ ಹೊರವಲಯದಲ್ಲಿರುವ ರಾಮೆನ್‌ಸ್ಕಿಯಲ್ಲಿ ಅಪಘಾತಕ್ಕೀಡಾಗಿದೆ. ವಿಮಾನ ಹಾರಾಟ ಆರಂಭಿಸಿದ ನಾಲ್ಕು ನಿಮಿಷಗಳಲ್ಲೇ ರಾಡಾರ್‌ ವ್ಯಾಪ್ತಿಯಲ್ಲಿ ಕಾಣಿಸಿಕೊಳ್ಳಲಿಲ್ಲ ಎಂದು ಮೂಲಗಳು ತಿಳಿಸಿವೆ. ಈ ವಿಮಾನವನ್ನು ಏಳು ವರ್ಷಗಳ ಹಿಂದೆ ತಯಾರಿಸಲಾಗಿತ್ತು.

ವಿಮಾನದಲ್ಲಿ 65 ಪ್ರಯಾಣಿಕರು ಹಾಗೂ 6 ಸಿಬ್ಬಂದಿ ಇದ್ದರು. ವಿಮಾನದ ಕೆಲ ಅವಶೇಷಗಳು ದಟ್ಟವಾದ ಮಂಜಿನಲ್ಲಿ ಪತ್ತೆಯಾಗಿವೆ.

‘ರಷ್ಯಾದಲ್ಲಿ ಇತ್ತೀಚಿನ ದಿನಗಳಲ್ಲಿ ದಟ್ಟವಾದ ಮಂಜು ಬೀಳುವುದು ಸಾಮಾನ್ಯವಾಗಿತ್ತು. ಇದರಿಂದ ಸ್ಪಷ್ಟವಾಗಿ ಏನೂ ಗೋಚರಿಸುತ್ತಿರಲಿಲ್ಲ. ಇದು ಸಹ ವಿಮಾನ ಅಪಘಾತಕ್ಕೆ ಕಾರಣವಿರಬಹುದು. ಆದರೆ, ದುರಂತಕ್ಕೆ ಸ್ಪಷ್ಟವಾದ ಕಾರಣ ತಿಳಿದು ಬಂದಿಲ್ಲ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ವಿಮಾನ ಅಪಘಾತಕ್ಕೆ ಹಲವು ಕಾರಣಗಳು ಇರಬಹುದು. ಹವಾಮಾನ ವೈಪರೀತ್ಯ, ತಾಂತ್ರಿಕ ತೊಂದರೆ ಅಥವಾ ಪೈಲಟ್‌ಗಳ ಲೋಪ ಇರಬಹುದು. ಹೀಗಾಗಿ, ಎಲ್ಲ ಅಂಶಗಳ ಬಗ್ಗೆಯೂ ಪರಿಶೀಲಿಸಲಾಗುತ್ತಿದೆ’ ಎಂದು ಅವರು ತಿಳಿಸಿದ್ದಾರೆ.

2001ರ ಮಾರ್ಚ್‌ 19ರಂದು ಬೋಯಿಂಗ್ 737 ಫ್ಲೈ ದುಬೈ ವಿಮಾನ ರೊಸ್ಟೊವ್‌–ಆನ್‌–ದಾನ್‌ ನಗರದಲ್ಲಿ ಪತನವಾದ ಕಾರಣ 55 ಮಂದಿ ಸಾವಿಗೀಡಾಗಿದ್ದರು. 2002ರ ಏಪ್ರಿಲ್‌ 10ರಂದು ಪೊಲಂಡ್‌ ಅಧ್ಯಕ್ಷ ಮತ್ತು ಇತರ ಹಿರಿಯ ಅಧಿಕಾರಿಗಳು ಪ್ರಯಾಣಿಸುತ್ತಿದ್ದ ’ಟುಪೊಲೆವ್‌–154’ವಿಮಾನ ಅಪಘಾತಕ್ಕೀಡಾಗಿ 96 ಮಂದಿ ಮೃತಪಟ್ಟಿದ್ದರು.

ಪ್ರತಿಕ್ರಿಯಿಸಿ (+)