ಸೋಮವಾರ, ಡಿಸೆಂಬರ್ 9, 2019
21 °C

ಯತ್ನಾಳ್‌ಗೆ ಶಾ ಬುಲಾವ್; ನಾಳೆ ಸಭೆ

Published:
Updated:
ಯತ್ನಾಳ್‌ಗೆ ಶಾ ಬುಲಾವ್; ನಾಳೆ ಸಭೆ

ವಿಜಯಪುರ: ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಪ್ರಬಲವಾಗಿರುವ ಲಿಂಗಾಯತ ಪಂಚಮಸಾಲಿ ಸಮುದಾಯವನ್ನು ತನ್ನತ್ತ ಆಕರ್ಷಿಸಲು ಬಿಜೆಪಿ ಹೈಕಮಾಂಡ್ ಕಸರತ್ತು ನಡೆಸಿದೆ.

ಈ ಭಾಗದ ಲಿಂಗಾಯತ ಮುಖಂಡ ಹಾಗೂ ವಿಧಾನ ಪರಿಷತ್‌ನ ಪಕ್ಷೇತರ ಸದಸ್ಯ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಇದೇ 9ರಂದು ಕರೆ ಮಾಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ನವದೆಹಲಿಯಲ್ಲಿರುವ ಪಕ್ಷದ ಕೇಂದ್ರ ಕಚೇರಿಯಲ್ಲಿ ಮಂಗಳವಾರ (ಫೆ. 13) ಬೆಳಿಗ್ಗೆ 11ಕ್ಕೆ ತಮ್ಮನ್ನು ಭೇಟಿಯಾಗುವಂತೆ ಸೂಚಿಸಿದ್ದಾರೆ. ಶಾ ಭೇಟಿಯನ್ನು ಯತ್ನಾಳ ಕೂಡ ಖಚಿತಪಡಿಸಿದ್ದು ಬಿಜೆಪಿಗೆ ಮರಳುವ ಸುಳಿವನ್ನೂ ನೀಡಿದ್ದಾರೆ.

‘ಬಸನಗೌಡ ತಮ್ಮ ಪೂರ್ವ ನಿಗದಿತ ಕಾರ್ಯಕ್ರಮ ಮುಂದೂಡಿ ನವದೆಹಲಿಗೆ ತೆರಳಲು ಭಾನುವಾರ ಸಂಜೆಯೇ ವಿಜಯಪುರದಿಂದ ಹೊರಟರು’ ಎಂದು ಅವರ ಆಪ್ತರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಈ ಭಾಗದ ಸಚಿವರಾದ, ಲಿಂಗಾಯತ ಸಮುದಾಯದ ಎಂ.ಬಿ.ಪಾಟೀಲ, ಡಾ. ಶರಣಪ್ರಕಾಶ ಪಾಟೀಲ, ವಿನಯ ಕುಲಕರ್ಣಿ ಅವರು ಲಿಂಗಾಯತ ಪ್ರತ್ಯೇಕ ಧರ್ಮದ ಹಕ್ಕೊತ್ತಾಯ ಚಳವಳಿ ನಡೆಸಿದ ಬಳಿಕ, ದಶಕದಿಂದಲೂ ಬಿಜೆಪಿಯ ಭದ್ರ ಮತಬ್ಯಾಂಕ್‌ ಆಗಿದ್ದ ಲಿಂಗಾಯತರು ಕಾಂಗ್ರೆಸ್‌ನತ್ತಲೂ ತಮ್ಮ ಚಿತ್ತ ಹರಿಸಿದ್ದಾರೆ. ಬಿಜೆಪಿಯ ಆಂತರಿಕ ಸಮೀಕ್ಷೆ, ಗುಪ್ತಚರ ವರದಿಯಲ್ಲೂ ಈ ಅಂಶ ಪ್ರಸ್ತಾಪವಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಈ ವಿಷಯವಾಗಿ, ವಿಧಾನಸಭಾ ಚುನಾವಣಾ ಉಸ್ತುವಾರಿಗಳಾದ ಕೇಂದ್ರ ಸಚಿವರಾದ ಪ್ರಕಾಶ್‌ ಜಾವಡೇಕರ್‌, ಪೀಯೂಷ್‌ ಗೋಯಲ್‌ ಅವರ ಜತೆ ಚರ್ಚಿಸಿದ್ದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ‘ಉತ್ತರ ಕರ್ನಾಟಕದಲ್ಲಿ ಎರಡು ಸಮಸ್ಯೆಗಳು ಬಿಜೆಪಿಗೆ ಕಗ್ಗಂಟಾಗಿವೆ. ಒಂದು ಮಹದಾಯಿ; ಮತ್ತೊಂದು ಯತ್ನಾಳ. ಇವೆರಡನ್ನೂ ಪರಿಹರಿಸದಿದ್ದರೆ ಹೆಚ್ಚಿನ ಸ್ಥಾನ ಗೆಲ್ಲಲಾಗುವುದಿಲ್ಲ’ ಎಂದು ಹೇಳಿದ್ದರು.

ಇದಕ್ಕೆ ಪೂರಕವಾಗಿ ಯತ್ನಾಳ ಸಹ ವೀರಶೈವ ಲಿಂಗಾಯತ ಪರವೇ ತಮ್ಮ ನಿಲುವು ಪ್ರದರ್ಶಿಸಿದ್ದರು. ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಲಿಂಗಾಯತ ಚಳವಳಿಯಲ್ಲಿ ಪಾಲ್ಗೊಂಡಿದ್ದು, ಮುಂಬರುವ ಚುನಾವಣೆಯಲ್ಲಿ ಪಂಚಮಸಾಲಿ ಸಮಾಜದ ಮತಗಳು ಹೆಚ್ಚಿನ ಪ್ರಮಾಣದಲ್ಲಿ ಕಾಂಗ್ರೆಸ್‌ ಪಾಲಾಗುವುದನ್ನು ತಪ್ಪಿಸಲು ಹಾಗೂ ಈ ಭಾಗದಲ್ಲಿ ವೈಯಕ್ತಿಕ ವರ್ಚಸ್ಸು ಹೊಂದಿರುವ ಯತ್ನಾಳರನ್ನು ಬಿಜೆಪಿಗೆ ಮರು ಸೇರ್ಪಡೆಗೊಳಿಸಿಕೊಳ್ಳಲು ಮಾತುಕತೆ ನಡೆಸಲಿಕ್ಕಾಗಿಯೇ ಅಮಿತ್‌ ಶಾ ಬುಲಾವ್‌ ನೀಡಿದ್ದಾರೆ’ ಎನ್ನುತ್ತವೆ ಮೂಲಗಳು.

‘ಗೊಂದಲಕ್ಕೆ ತೆರೆ; ಶುಭ ಶಿವರಾತ್ರಿ’

‘ಎರಡು ವರ್ಷಗಳಿಂದ ಮಾತೃಪಕ್ಷಕ್ಕೆ ಮರಳುವ ಕುರಿತಂತೆ ನಡೆದಿದ್ದ ಎಲ್ಲ ಗೊಂದಲಗಳಿಗೆ ಇದೀಗ ಇತಿಶ್ರೀ ಬಿದ್ದಂತಾಗಿದೆ. ಶಿವರಾತ್ರಿಯ ಶುಭ ದಿನದಂದು ಅಮಿತ್‌ ಶಾ ಅವರನ್ನು ಭೇಟಿಯಾಗುವೆ’ ಎಂದು ಬಸನಗೌಡ ಪಾಟೀಲ ಯತ್ನಾಳ ‘ಪ್ರಜಾವಾಣಿ’ಗೆ ತಿಳಿಸಿದರು.

‘ಇಲ್ಲಿನ ವಿದ್ಯಮಾನ ಕುರಿತಂತೆ ಶಾ ಜತೆ ಚರ್ಚಿಸುವೆ. ಅವರು ಪ್ರಸ್ತಾಪಿಸುವ ವಿಷಯಗಳ ಕುರಿತೂ ಮಾತನಾಡುವೆ. ಸೇರ್ಪಡೆಯಾಗುವಂತೆ ಹೇಳಿದರೆ, ದಿನ ನಿಗದಿಪಡಿಸಿಕೊಂಡು ಬರುವೆ. ವಿಜಯಪುರದ ಡಾ.ಬಾಬಾ ಸಾಹೇಬ್‌ ಅಂಬೇಡ್ಕರ್‌ ಜಿಲ್ಲಾ ಕ್ರೀಡಾಂಗಣದಲ್ಲಿ 1 ಲಕ್ಷ ಜನರ ಸಮ್ಮುಖದಲ್ಲಿ ಬಿಜೆಪಿಗೆ ಮರಳುವೆ’ ಎಂದರು.

ಪ್ರತಿಕ್ರಿಯಿಸಿ (+)