7

ಮತದಾರರ ಓಲೈಕೆಗೆ ಸೀರೆ, ಕಂಬಳಿ

Published:
Updated:
ಮತದಾರರ ಓಲೈಕೆಗೆ ಸೀರೆ, ಕಂಬಳಿ

ಬೆಂಗಳೂರು: ವಿಧಾನಸಭೆ ಚುನಾವಣೆ ಘೋಷಣೆಯಾಗುವ ಮೊದಲೇ ‘ಉಡುಗೊರೆ’ ಹಂಚುವ ಮೂಲಕ ಮತದಾರರನ್ನು ಓಲೈಸಲು ರಾಜಕೀಯ ಪಕ್ಷಗಳು ಮುಂದಾಗಿವೆ.

ಭಾನುವಾರ ನಡೆದ ಮಹದೇವಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಾರತ್ತಹಳ್ಳಿ ಮತ್ತು ದೊಡ್ಡನೆಕ್ಕುಂದಿ ವಾರ್ಡ್ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶಕ್ಕೆ ಬಂದವರಿಗೆ ಅದ್ದೂರಿ ಬಾಡೂಟ ಕಾದಿತ್ತು. ಜೊತೆಗೆ ಮಹಿಳೆಯರಿಗೆ ಸೀರೆ, ಗಂಡಸರಿಗೆ ಕಂಬಳಿ ವಿತರಿಸಲಾಯಿತು.

ಉಡುಗೊರೆ ನೀಡುವ ಬಗ್ಗೆ ಎರಡೂ ವಾರ್ಡ್‌ಗಳ ಜನರಿಗೆ ಮೊದಲೇ ಮಾಹಿತಿ ನೀಡಿ, ಟೋಕನ್ ವಿತರಿಸಲಾಗಿತ್ತು. ಸಮಾವೇಶದ ವೇದಿಕೆಯ ಮುಂಭಾಗದಲ್ಲಿ ಪ್ರತ್ಯೇಕ ಕೌಂಟರ್‌ಗಳನ್ನು ತೆರೆದು ವಿತರಿಸಿದ ಉಡುಗೊರೆಯನ್ನು ಪಡೆಯಲು ಜನ ಮುಗಿಬಿದ್ದರು.

2013ರ ಚುನಾವಣೆಯಲ್ಲಿ ಕೆಲವೇ ಮತಗಳ ಅಂತರದಿಂದ ಸೋಲು ಕಂಡಿದ್ದ, ಮತ್ತೆ ಟಿಕೆಟ್‌ ಸಿಗುವ ನಿರೀಕ್ಷೆಯಲ್ಲಿರುವ ಕಾಂಗ್ರೆಸ್‌ನ ಎ.ಸಿ. ಶ್ರೀನಿವಾಸ್‌ ಈ ವ್ಯವಸ್ಥೆ ಮಾಡಿದ್ದರು ಎಂದು ಹೇಳಲಾಗಿದೆ. ಸಮಾವೇಶದಲ್ಲಿ ಸುಮಾರು ಸಾವಿರ ಜನ ಭಾಗವಹಿಸಿದ್ದರು.

‘ಕಾಂಗ್ರೆಸ್‍ ಅಭಿವೃದ್ಧಿಪಡಿಸಿದ ಮನೆಗಳಲ್ಲಿ ಬಿಜೆಪಿ ನಾಯಕರು ಕೊಳೆಗೇರಿ ವಾಸ್ತವ್ಯದ ಹೆಸರಿನಲ್ಲಿ ತಂಗಲು ಹೋಗುತ್ತಿದ್ದಾರೆ’ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ವ್ಯಂಗ್ಯವಾಡಿದರು.

ಸಮಾವೇಶದಲ್ಲಿ ಮಾತನಾಡಿದ ಅವರು, ‘ಕೊಳೆಗೇರಿಗಳಲ್ಲಿನ ಗುಡಿಸಲುಗಳು ನಿರ್ಮೂಲನೆ ಆಗಿ, ಮಹಡಿ ಮನೆಗಳು ತಲೆಎತ್ತಿವೆ. ಬಿಜೆಪಿಯವರು ಮತಕ್ಕಾಗಿ ಸ್ಲಂಗಳಿಗೆ ಹೋಗುತ್ತಿದ್ದಾರೆ’ ಎಂದು ಲೇವಡಿ ಮಾಡಿದರು.

ಇದೇ ಸಂದರ್ಭದಲ್ಲಿ, ಬಿಬಿಎಂಪಿ ಮಾರತ್ತಹಳ್ಳಿ ವಾರ್ಡ್‌ ಸದಸ್ಯ ಎನ್. ರಮೇಶ್ ಕಾಂಗ್ರೆಸ್‌ ಸೇರಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry