ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಕಾಸಕ್ಕೆ ಮೋದಿ, ವಿನಾಶಕ್ಕೆ ರಾಹುಲ್ ಸಂಕೇತ: ಅನಂತ್‌ ಕುಮಾರ್‌

Last Updated 11 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ವಿಕಾಸಕ್ಕೆ ಪ್ರಧಾನಿ ನರೇಂದ್ರ ಮೋದಿ, ವಿನಾಶಕ್ಕೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಸರ್ವನಾಶಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಕೇತ’ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್‌ ಹೇಳಿದರು.

ಬಿಜೆಪಿ ಮಾಧ್ಯಮ ವಿಭಾಗದವರಿಗೆ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ‘ಮೋದಿ ನೇತೃತ್ವದಲ್ಲಿ ದೇಶ ವಿಕಾಸವಾಗುತ್ತಿದೆ. ಸಿದ್ದರಾಮಯ್ಯ ನೇತೃತ್ವದ ಭ್ರಷ್ಟ ಸರ್ಕಾರವನ್ನು ಸಮರ್ಥಿಸಿಕೊಳ್ಳುವ ರಾಹುಲ್‌, ಕರ್ನಾಟಕವನ್ನು ವಿನಾಶದ ಕಡೆ ದೂಡುತ್ತಿದ್ದಾರೆ’ ಎಂದು ಟೀಕಿಸಿದರು.

‘ಕಾಂಗ್ರೆಸ್ ಪಕ್ಷದಲ್ಲಿ ನೆಹರೂ, ಗಾಂಧಿ ಕುಟುಂಬದವರನ್ನು ಬಿಟ್ಟು ಮತ್ತೊಬ್ಬರು ಆ ಪಕ್ಷದ ಅಧ್ಯಕ್ಷರಾಗಲು ಸಾಧ್ಯವೇ ಇಲ್ಲ. ಆದರೆ, ಕಠಿಣ ಶ್ರಮ, ತ್ಯಾಗ ಮನೋಭಾವ ಇದ್ದರೆ ಬಿಜೆಪಿಯಲ್ಲಿ ಯಾರಾದರೂ ಅತ್ಯುನ್ನತ ಹುದ್ದೆಗೆ ಏರಬಹುದು. ಸಾಮಾನ್ಯ ರೈತನ ಮಗ ರಾಮನಾಥ ಕೋವಿಂದ್‌ ರಾಷ್ಟ್ರಪತಿಯಾದರು, ಚಹಾ ಮಾರುತ್ತಿದ್ದ ನರೇಂದ್ರ ಮೋದಿ ಪ್ರಧಾನಿಯಾದರು. ಇಂತಹ ಸಂಗತಿಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ಕೆಲಸವನ್ನು ಮಾಧ್ಯಮ ವಿಭಾಗ ಮಾಡಬೇಕಾಗಿದೆ’ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ಸಲಹೆ ನೀಡಿದರು.

‘ಕಾಂಗ್ರೆಸ್‌ ಮುಕ್ತ ಕರ್ನಾಟಕದ ಗುರಿ ಸಾಧನೆಯಾಗಿ, ಯಡಿಯೂರಪ್ಪ ಮುಖ್ಯಮಂತ್ರಿಯಾಗುವುದು ಖಚಿತ’ ಎಂದೂ ವಿಶ್ವಾಸ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ತಲೆ ತಿರುಕ: ಯಡಿಯೂರಪ್ಪ

‘ಮುಖ್ಯಮಂತ್ರಿ ಸಿದ್ದರಾಮಯ್ಯ ತಲೆ ತಿರುಕ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

ಇಲ್ಲಿನ ಲಕ್ಷ್ಮಣಪುರಿ ಕೊಳೆಗೇರಿಯಲ್ಲಿ ಸಮೀಕ್ಷಾ ವರದಿ ಬಿಡುಗಡೆ ಮಾಡಿ ಮಾತನಾಡಿದ ಅವರು, ‘ನಾನು ಸ್ಲಂನಲ್ಲಿ ವಾಸ್ತವ್ಯ ಹೂಡಿದ್ದನ್ನು ಸಿದ್ದರಾಮಯ್ಯ ಟೀಕಿಸಿದ್ದಾರೆ. ಸ್ಲಂನಲ್ಲಿ ವಾಸ್ತವ್ಯ ಮಾಡುವುದು ಹೋಗಲಿ, ಪರಿಶಿಷ್ಟ ಜಾತಿಯವರ ಮನೆಯಲ್ಲಿ ತಿಂಡಿ ತಿನ್ನಲೂ ಅವರು ಹೋಗುವುದಿಲ್ಲ. ಅಂತಹವರ ಬಗ್ಗೆ ನಾನು ಮಾತನಾಡುವುದಿಲ್ಲ. ಇಂತಹ ತಲೆತಿರುಕರೇ ಇರುವ ಸರ್ಕಾರ ಇನ್ನೇನು ಮೂರು ತಿಂಗಳಿನಲ್ಲಿ ತೊಲಗಲಿದೆ’ ಎಂದರು.

ಕೊಳೆಗೇರಿ ನಿವಾಸಿಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ನೀಡಿದ ಅನುದಾನವನ್ನು ಬಳಸಿಕೊಳ್ಳದ ಮುಖ್ಯಮಂತ್ರಿ, ದಲಿತರ ಉದ್ಧಾರ ಮಾಡಿರುವುದಾಗಿ ಫ್ಲೆಕ್ಸ್ ಹಾಕಿಸಿಕೊಂಡು, ಜಾಹೀರಾತು ನೀಡುತ್ತಿದ್ದಾರೆ. ಕೊಳೆಗೇರಿ ನಿವಾಸಿಗಳಿಗೆ ಯಾವುದೇ ಸೌಲಭ್ಯವನ್ನೂ ಈ ಸರ್ಕಾರ ನೀಡಿಲ್ಲ ಎಂದು ಯಡಿಯೂರಪ್ಪ ಹರಿಹಾಯ್ದರು.

ರಾಹುಲ್‌ ನಾಟಕ: ಶೆಟ್ಟರ್‌ ಟೀಕೆ

ಹುಬ್ಬಳ್ಳಿ: ‘ಹಿಂದೂ ವಿಚಾರಗಳನ್ನು ವಿರೋಧಿಸುತ್ತಲೇ ಬಂದ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ, ಇದೀಗ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಮಠ–ಮಂದಿರಗಳತ್ತ ಮುಖ ಮಾಡಿದ್ದಾರೆ. ಜಾತ್ಯತೀತ ಎಂಬ ಹೆಸರಿನಲ್ಲಿ ನಾಟಕವಾಡುತ್ತಿದ್ದಾರೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌ ಭಾನುವಾರ ಇಲ್ಲಿ ಟೀಕಿಸಿದರು.

‘ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಶತಃಸಿದ್ಧ. ಕೊಪ್ಪಳ ಪ್ರವಾಸ ಕೈಗೊಂಡಿರುವ ರಾಹುಲ್‌ ಗಾಂಧಿ ಕಾಂಗ್ರೆಸ್‌ನ ಅಂತಿಮ ಯಾತ್ರೆಗೆ ಬಂದಿದ್ದಾರೆ’ ಎಂದು ಲೇವಡಿ ಮಾಡಿದರು.

‘ಅಲ್ಪಸಂಖ್ಯಾತರ ವಿರುದ್ಧದ ಪ್ರಕರಣಗಳನ್ನು ಹಿಂದಕ್ಕೆ ಪಡೆಯಲು ಮುಂದಾಗಿದ್ದ ಸರ್ಕಾರ, ಸಮಾಜ ಒಡೆಯುವ ಕೆಲಸ ಮಾಡುತ್ತಿದೆ. ಮಠಗಳನ್ನು ಮುಜರಾಯಿ ಇಲಾಖೆಗೆ ಒಳಪಡಿಸುವ ನಿರ್ಣಯಕ್ಕೆ ಬಂದಿತ್ತು; ಸಾರ್ವಜನಿಕರು ಮತ್ತು ಬಿಜೆಪಿ ವಿರೋಧ ವ್ಯಕ್ತಪಡಿಸಿದ್ದರಿಂದ ಅದನ್ನು ಕೈಬಿಟ್ಟಿತು’ ಎಂದರು.

‘ಕಳಸಾ–ಬಂಡೂರಿ, ಮಹದಾಯಿ ವಿಚಾರದಲ್ಲಿ ಕಾಂಗ್ರೆಸ್‌ ಸ್ಪಷ್ಟ ನಿಲುವು ತಿಳಿಸಬೇಕು ಎಂದು ಒತ್ತಾಯಿಸಿದ ಅವರು, ಪ್ರಧಾನಿ ನರೇಂದ್ರ ಮೋದಿ ಮಧ್ಯಸ್ಥಿಕೆ ವಹಿಸಬೇಕು ಎಂದು ಹೇಳುತ್ತಲೇ ಇರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಡಿಯುವ ನೀರಿನ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT