ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುಭಮನ್‌ ಗಿಲ್ ಶತಕದ ಮಿಂಚು: ಪಂಜಾಬ್ ತಂಡಕ್ಕೆ ರೋಚಕ ಜಯ

Last Updated 11 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಆಲೂರು ಕ್ರೀಡಾಂಗಣದಲ್ಲಿ ಭಾನುವಾರ ಸೇರಿದ್ದ ಸಾವಿರಕ್ಕೂ ಹೆಚ್ಚು ಕ್ರಿಕೆಟ್‌ಪ್ರಿಯರನ್ನು ರೋಚಕತೆಯ ತುತ್ತತುದಿಗೆ ಕರೆದುಕೊಂಡು ಹೋಗಿದ್ದ ಪಂದ್ಯದಲ್ಲಿ ಕರ್ನಾಟಕ ತಂಡವು ಸೋತಿತು. ಯುವರಾಜ್ ಸಿಂಗ್ ನಾಯ ಕತ್ವದ ಪಂಜಾಬ್ ತಂಡವು ಗೆದ್ದಿತು.

ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಎ ಗುಂಪಿನ ಪಂದ್ಯದಲ್ಲಿ ವಿನಯಕುಮಾರ್ ನಾಯಕತ್ವದ ಕರ್ನಾಟಕ ತಂಡವು 4 ರನ್‌ಗಳಿಂದ ಸೋತಿತು. ಆದರೆ, 19 ವರ್ಷದೊಳಗಿನವರ ವಿಶ್ವಕಪ್ ವಿಜೇತ ಭಾರತ ತಂಡದ ಸರಣಿ ಶ್ರೇಷ್ಠ ಶುಭಮನ್ ಗಿಲ್ (ಅಜೇಯ 123; 122ಎ, 8ಬೌಂ, 6ಸಿ) ಮತ್ತು ದಕ್ಷಿಣ ಆಫ್ರಿಕಾ ಎದುರಿನ ಟ್ವೆಂಟಿ–20 ಸರಣಿಯಲ್ಲಿ ಆಡಲು ತೆರಳುತ್ತಿರುವ ಕೆ.ಎಲ್. ರಾಹುಲ್ (107; 91ಎ, 8ಬೌಂ, 5ಸಿ) ಅವರ ಶತಕಗಳ ಸೊಬಗನ್ನೂ ನೋಡುಗರು ಕಣ್ತುಂಬಿಕೊಂಡರು.

ಮೈದಾನ ಹಸಿಯಾಗಿದ್ದರಿಂದ ಒಂದೂವರೆ ತಾಸು ತಡವಾಗಿ ಆರಂಭವಾದ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ತಂಡ ಬ್ಯಾಟಿಂಗ್ ಮಾಡಿತು. ವಿನಯಕುಮಾರ್ ಹಾಕಿದ ಮೊದಲ ಎಸೆತದಲ್ಲಿಯೇ ಮನನ್ ವೊಹ್ರಾ ವಿಕೆಟ್ ಉರುಳಿತು. ಆದರೂ ನಂತರ ಮಿಂಚಿದ ಗಿಲ್ ಶತಕದ ಬಲದಿಂದ ತಂಡವು 42 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 269 ರನ್ ಗಳಿಸಿತು. ಗುರಿ ಬೆನ್ನತ್ತಿದ ಕರ್ನಾಟಕ ತಂಡದ ಇನಿಂಗ್ಸ್ ಹಲವು ನಾಟಕೀಯ ತಿರುವುಗಳನ್ನು ಕಂಡಿತು. ಬ್ಯಾಟ್ಸ್‌ಮನ್‌ಗಳ ಸ್ವರ್ಗದಂತಿದ್ದ ಪಿಚ್‌ನಲ್ಲಿ ಕೊನೆಯ ಹಂತದಲ್ಲಿ ಎಡವಿತು. ಅದರಿಂದಾಗಿ 42 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 265 ರನ್ ಗಳಿಸಿತು.

ಕರ್ನಾಟಕದ ಇನಿಂಗ್ಸ್ ಆರಂಭಿಸಿದ ಮಯಂಕ್ ಅಗರವಾಲ್ ಮತ್ತು ಕರುಣ್ ನಾಯರ್ ತಂಡದ ಮೊತ್ತ 38 ರನ್‌ಗಳಾಗುವಷ್ಟರಲ್ಲಿ ಪೆವಿಲಿಯನ್‌ಗೆ ಮರಳಿದರು. ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ರಾಹುಲ್ ತಮ್ಮ ಖಾತೆ ತೆರೆದದ್ದು 18 ಎಸೆತಗಳನ್ನು ಆಡಿದ ನಂತರ. ಅರ್ಧಶತಕ ಗಳಿಸಿದ ನಂತರ ಬೀಸಾಟ ಆರಂಭಿಸಿದ ಅವರು ಕೇವಲ 88 ಎಸೆತಗಳಲ್ಲಿ ಶತಕ ಪೂರೈಸಿದರು. ತಂಡವನ್ನು ಗೆಲುವಿನ ಸನಿಹ ತಂದರು.

ಐದು ಅಮೋಘ ಸಿಕ್ಸರ್‌ಗಳು, ಎಂಟು ಬೌಂಡರಿಗಳ ಚಿತ್ತಾರ ಬಿಡಿಸಿದ್ದ ಅವರು ತಂಡದ ಗೆಲುವಿಗೆ ಇನ್ನೂ 20 ರನ್‌ಗಳು ಬೇಕಾಗಿದ್ದ ಸಂದರ್ಭದಲ್ಲಿ ಔಟಾಗಿದ್ದು ಹಿನ್ನಡೆಗೆ ಕಾರಣವಾಯಿತು. ಯುವಿ ಬಳಗದ ಫೀಲ್ಡರ್‌ಗಳು ಮತ್ತು ಬೌಲರ್‌ಗಳು ಮೇಲುಗೈ ಸಾಧಿಸಲು ಸಾಧ್ಯವಾಯಿತು.ಕೊನೆಯ ಎರಡು ಓವರ್‌ಗಳಲ್ಲಿ 19 ರನ್‌ಗಳ ಅಗತ್ಯವಿತ್ತು.

ಕ್ರೀಸ್‌ನಲ್ಲಿದ್ದ ನಾಯಕ ವಿನಯ ಕುಮಾರ್ (ಔಟಾಗದೆ 26) ಮತ್ತು ಪ್ರವೀಣ ದುಬೆ (5 ರನ್) ಅವರ ಪ್ರಯತ್ನ ಸಾಕಾಗಲಿಲ್ಲ. ಕೊನೆಯ ಓವರ್‌ನಲ್ಲಿ ಗೆಲುವಿಗೆ 13 ರನ್‌ಗಳ ಅವಶ್ಯಕತೆ ಇತ್ತು. ಬರೀಂದರ್ ಸ್ರಾನ್ ಮಾಡಿುದ ಆ ಓವರ್‌ನ ಮೊದಲ ಎಸೆತದಲ್ಲಿ ದುಬೆ ಬೌಂಡರಿ ಬಾರಿಸಿದರು.

ಪ್ರೇಕ್ಷಕರು ಸಂಭ್ರಮಿಸಿದರು. ಆದರೆ ನಂತರದ ಎಸೆತಲ್ಲಿ ಎರಡನೇ ರನ್ ಓಡಿದ ಅವರನ್ನುಫೀಲ್ಡರ್ ಮನನ್ ವೊಹ್ರಾ ರನ್‌ಔಟ್ ಮಾಡಿದರು. ನಾಲ್ಕು ಎಸೆತಗಳಲ್ಲಿ 9 ರನ್‌ ಗಳಿಸಲು ವಿನಯಕುಮಾರ್ ಮಾಡಿದ ಪ್ರಯತ್ನಕ್ಕೆ ಸ್ರಾನ್ ಅವಕಾಶ ನೀಡಲಿಲ್ಲ. ಇದರಿಂದಾಗಿ ತಂಡವು ಸೋಲಬೇಕಾಯಿತು.


–ಕರ್ನಾಟಕ ತಂಡದ ಕೆ.ಎಲ್‌. ರಾಹುಲ್‌ ಬ್ಯಾಟಿಂಗ್ ವೈಖರಿ

ರಾಹುಲ್–ಪವನ್ ಜೊತೆಯಾಟದ ರಂಗು: ಕಳೆದ ಎರಡೂ ಪಂದ್ಯಗಳಲ್ಲಿ ದೊಡ್ಡ ಮೊತ್ತ ಗಳಿಸುವಲ್ಲಿ ವಿಫಲರಾಗಿದ್ದ ಅವರು ಎಚ್ಚರಿಕೆಯಿಂದ ಆಡಿದರು.

13ನೇ ಓವರ್‌ನಲ್ಲಿ ಅವರ ಜೊತೆಗೂಡಿದ ಎಡಗೈ ಬ್ಯಾಟ್ಸ್‌ಮನ್ ಪವನ್ ದೇಶಪಾಂಡೆ (53; 51ಎ, 4ಬೌಂ, 1ಸಿ) ರನ್‌ ಗಳಿಕೆಗೆ ವೇಗ ನೀಡಿದರು. ಇವರಿಬ್ಬರೂ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 100 ರನ್ ಸೇರಿಸಿದರು. ರಾಹುಲ್‌ಗಿಂತ ಪವನ್ ವೇಗವಾಗಿ ರನ್ ಗಳಿಸಿದರು.

ಪಂಜಾಬ್‌ ಬೌಲರ್‌ಗಳ ಎಸೆತಗಳನ್ನು ಲೀಲಾಜಾಲವಾಗಿ ಎದುರಿಸಿದರು. ರಾಹುಲ್‌ಗಿಂತ ಮೊದಲೇ ಅರ್ಧಶತಕದ ಗಡಿ ದಾಟಿದರು. ಗುರುಕೀರತ್ ಮಾನ್ ಎಸೆತದಲ್ಲಿ ಪವನ್ ಎತ್ತಿದ ಸಿಕ್ಸರ್‌ಗೆ ಚೆಂಡು ಪಾರ್ಕಿಂಗ್‌ ಸ್ಥಳದಲ್ಲಿದ್ದ ಕಾರಿಗೆ ಅಪ್ಪಳಿಸಿತು. ಸ್ಪಿನ್ನರ್ ಅಭಿಷೇಕ್ ಶರ್ಮಾ ಎಸೆತದಲ್ಲಿ ಪವನ್ ಔಟಾದ ನಂತರ ರಾಹುಲ್ ಬಿರುಸಿನ ಆಟವಾಡಿದರು. ಕೆ. ಗೌತಮ್ (16 ರನ್) ಕೂಡ ಬೀಸಾಟವಾಡಿದರು. ಇದರಿಂದಾಗಿ ರನ್‌ ಗಳಿಕೆಯ ವೇಗ ಹೆಚ್ಚಿತು. ಆದರೆ ಅನಿರುದ್ಧ ಜೋಶಿ, ಆರ್. ಸಮರ್ಥ್ ಹೆಚ್ಚು ರನ್‌ ಗಳಿಸಲಿಲ್ಲ.

ಗಿಲ್ ಶತಕ: 18 ವರ್ಷದ ಶುಭಮನ್ ಗಿಲ್ ಏಕಾಂಗಿಯಾಗಿ ಬ್ಯಾಟಿಂಗ್ ಮಾಡಿ ಪಂಜಾಬ್ ತಂಡವು ಸವಾಲಿನ ಮೊತ್ತ ಪೇರಿಸಲು ಕಾರಣರಾದರು.

ನ್ಯೂಜಿಲೆಂಡ್‌ನಲ್ಲಿ ವಿಶ್ವಕಪ್ ಗೆದ್ದ ನಂತರ ನೇರವಾಗಿ ಬೆಂಗಳೂರಿಗೆ ಬಂದು ತಮ್ಮ ತವರಿನ ತಂಡವನ್ನು ಸೇರಿಕೊಂಡಿದ್ದಾರೆ. ಶುಭಮನ್ ಇಲ್ಲಿ ಗಳಿಸಿದ ಆಕರ್ಷಕ ಶತಕವನ್ನು ಅವರ ತಂದೆ ಲಖ್ವಿಂದರ್ ಸಿಂಗ್ ಕಣ್ತುಂಬಿಕೊಂಡರು.

ಕರ್ನಾಟಕದ ಅನುಭವಿ ಬೌಲರ್‌ ವಿನಯಕುಮಾರ್, ಕಳೆದ ಪಂದ್ಯದಲ್ಲಿ ಮಿಂಚಿದ್ದ ಪ್ರಸಿದ್ಧ ಕೃಷ್ಣ, ಆಫ್‌ಸ್ಪಿನ್ನರ್ ಕೆ. ಗೌತಮ್ ಮತ್ತು ಟಿ. ಪ್ರದೀಪ್ ಅವರ ಎಸೆತಗಳನ್ನು ಶುಭಮನ್ ದಂಡಿಸಿದರು. ಅಭಿಮನ್ಯು ಮಿಥುನ್ ಮತ್ತು ಕೈಬೆರಳಿಗೆ ಗಾಯವಾಗಿರುವ ಕಾರಣಕ್ಕೆ ಶ್ರೇಯಸ್ ಗೋಪಾಲ್ ಈ ಪಂದ್ಯದಲ್ಲಿ ಆಡಲಿಲ್ಲ. ಸಿ.ಎಂ. ಗೌತಮ್ ಕೂಡ ಕಣಕ್ಕಿಳಿಯಲಿಲ್ಲ. ರಾಹುಲ್ ವಿಕೆಟ್‌ಕೀಪಿಂಗ್ ನಿರ್ವಹಿಸಿದರು. ಪ್ರವೀಣ ದುಬೆ ಮತ್ತು ಪ್ರದೀಪ್ ಸ್ಥಾನ ಪಡೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT