ಶುಕ್ರವಾರ, ಡಿಸೆಂಬರ್ 13, 2019
27 °C

ಮೊದಲ ರ‍್ಯಾಂಕ್‌ ಮೇಲೆ ರೋಜರ್‌ ಫೆಡರರ್‌ ಕಣ್ಣು

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಮೊದಲ ರ‍್ಯಾಂಕ್‌ ಮೇಲೆ ರೋಜರ್‌ ಫೆಡರರ್‌ ಕಣ್ಣು

ರೋಟರ್‌ಡಾಮ್‌, ನೆದರ್ಲೆಂಡ್ಸ್‌: ಸ್ವಿಟ್ಜರ್‌ಲೆಂಡ್‌ನ ಆಟಗಾರ ರೋಜರ್ ಫೆಡರರ್‌ ಸೋಮವಾರದಿಂದ ಇಲ್ಲಿ ಆರಂಭವಾಗಲಿರುವ ರೋಟರ್‌ಡಾಮ್‌ ವಿಶ್ವ ಟೆನಿಸ್ ಟೂರ್ನಿಯಲ್ಲಿ ಮೊದಲ ರ‍್ಯಾಂಕಿಂಗ್ ಸ್ಥಾನಕ್ಕೆ ಏರುವ ಕನಸಿನೊಂದಿಗೆ ಕಣಕ್ಕಿಳಿಯಲಿದ್ದಾರೆ.

ಈ ಟೂರ್ನಿಯಲ್ಲಿ ಫೆಡರರ್ ಸೆಮಿಫೈನಲ್ ಪ್ರವೇಶಿಸಿದರೆ ರ‍್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನದಲ್ಲಿರುವ ರಫೆಲ್‌ ನಡಾಲ್ ಅವರನ್ನು ಹಿಂದಿಕ್ಕಲಿದ್ದಾರೆ. ಈ ಮೂಲಕ ಎಟಿಪಿ ರ‍್ಯಾಂಕಿಂಗ್ ಇತಿಹಾಸದಲ್ಲಿಯೇ ಮೊದಲ ಸ್ಥಾನಕ್ಕೆ ಏರಿದ ಅತ್ಯಂತ ಹಿರಿಯ ಆಟಗಾರ ಎನಿಸಿಕೊಳ್ಳಲಿದ್ದಾರೆ.

ನಡಾಲ್ ಅವರಿಗಿಂತ ಫೆಡರರ್‌ ಕೇವಲ 155 ಪಾಯಿಂಟ್ಸ್‌ ಹಿಂದೆ ಇದ್ದಾರೆ. ಸ್ವಿಸ್ ಆಟಗಾರ 2003ರಲ್ಲಿ ಆಂಡ್ರೆ ಅಗಸ್ಸಿ ಅವರನ್ನು ಹಿಂದಿಕ್ಕುವ ಮೂಲಕ ಅಗ್ರಸ್ಥಾನ ಪಡೆದುಕೊಂಡಿದ್ದರು.

ಇತ್ತೀಚೆಗಷ್ಟೇ ಆಸ್ಟ್ರೇಲಿಯಾ ಓಪನ್‌ನಲ್ಲಿ ಫೆಡರರ್‌ ತಮ್ಮ ವೃತ್ತಿಜೀನವದ 20ನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಗೆದ್ದುಕೊಂಡಿದ್ದರು. 2013ರ ಬಳಿಕ ಅವರು ರೋಟರ್‌ಡಾಮ್‌ ಟೂರ್ನಿಯಲ್ಲಿ ಆಡಿರಲಿಲ್ಲ.

36 ವರ್ಷದ ಫೆಡರರ್‌ ಅಹೋಯ್ ಅಂಗಳದಲ್ಲಿ ಈಗಾಗಲೇ 2005 ಹಾಗೂ 2012ರಲ್ಲಿ ಪ್ರಶಸ್ತಿ ಗೆದ್ದಿದ್ದಾರೆ. ಈ ಬಾರಿ ಫೆಡರರ್‌ ಮೊದಲ ಶ್ರೇಯಾಂಕದೊಂದಿಗೆ ತಮ್ಮ ಅಭಿಯಾನ ಆರಂಭಿಸಲಿದ್ದಾರೆ. ಎರಡನೇ ಶ್ರೇಯಾಂಕದಲ್ಲಿ ಸ್ಟಾನಿಸ್ಲಾನ್ ವಾವ್ರಿಂಕಾ ಆಡಲಿದ್ದಾರೆ.

2017ರಲ್ಲಿ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ವಾವ್ರಿಂಕಾ ಈಗ ಚೇತರಿಸಿಕೊಂಡು ಕಣಕ್ಕಿಳಿದಿದ್ದಾರೆ.

‘12 ತಿಂಗಳ ಅಂತರದಲ್ಲಿ ಮೂರು ಗ್ರ್ಯಾನ್‌ಸ್ಲಾಮ್‌ ಗೆದ್ದುಕೊಂಡಿದ್ದೇನೆ. ಗೆಲುವಿನ ಹಸಿವು ಇದ್ದರೆ ಮಾತ್ರ ಸತತವಾಗಿ ಜಯ ಒಲಿಯುತ್ತದೆ. ಈ ವರ್ಷ ನಾನು ಉತ್ತಮವಾಗಿ ಆಡಿದ್ದೇನೆ. ಇದೇ ಆಟ ಮುಂದುವರಿಸುವ ವಿಶ್ವಾಸವಿದೆ’ ಎಂದು ಫೆಡರರ್‌ ಹೇಳಿದ್ದಾರೆ.

ಮೊದಲ ಸುತ್ತಿನಲ್ಲಿ ದಿಮಿತ್ರೊವ್‌ ಜಪಾನ್‌ನ ಯೂಚಿ ಸುಗಿತ ಮೇಲೂ, ಜರ್ಮನಿಯ ಅಲೆಕ್ಸಾಂಡರ್‌ ಜ್ವೆರವ್ ಸ್ಪೇನ್‌ನ ಡೇವಿಡ್‌ ಫೆರರ್‌ ಎದುರೂ ಆಡಲಿದ್ದಾರೆ. ಬೆಲ್ಜಿಯಂನ ಡೇವಿಡ್‌ ಗೊಫಿನ್ ಅವರು ವಾವ್ರಿಂಕಾ ಮೇಲೂ, ಥಾಮಸ್‌ ಬೆರ್ಡಿಕ್‌ ಆರನೇ ಶ್ರೇಯಾಂಕದ ಫ್ರೆಂಚ್‌ನ ಲೂಕಾಸ್ ಪೊಯಿಲ್ಲೆ ವಿರುದ್ಧವೂ ಆಡಲಿದ್ದಾರೆ.

ಹಾಲಿ ಚಾಂಪಿಯನ್ ಜೊ ವಿಲ್ಪ್ರೆಡ್‌ ಸೊಂಗ ಹಾಗೂ ನಿಕ್‌ ಕಿರ್ಗೊಸ್ ಅವರು ಗಾಯದ ಸಮಸ್ಯೆಯಿಂದಾಗಿ ಟೂರ್ನಿಯಲ್ಲಿ ಆಡುತ್ತಿಲ್ಲ.

ಪ್ರತಿಕ್ರಿಯಿಸಿ (+)