ಸೋಮವಾರ, ಡಿಸೆಂಬರ್ 9, 2019
22 °C

ರಿಯಾಲಿಟಿ ಷೋ ಆಡಿಷನ್‌ನಲ್ಲಿ ಗಲಾಟೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಿಯಾಲಿಟಿ ಷೋ ಆಡಿಷನ್‌ನಲ್ಲಿ ಗಲಾಟೆ

ಬೆಂಗಳೂರು: ಖಾಸಗಿ ವಾಹಿನಿಯೊಂದರ ರಿಯಾಲಿಟಿ ಷೋ ಆಡಿಷನ್‌ನಲ್ಲಿ ಆಯೋಜಕರು ಅಶ್ಲೀಲ ಪ್ರಶ್ನೆ ಕೇಳಿದ್ದಾರೆ ಎಂದು ಆರೋಪಿಸಿ ಯುವತಿ ಹಾಗೂ ಆಕೆಯ ಸಂಬಂಧಿಕರು, ಆಡಿಷನ್‌ ನಡೆಯುತ್ತಿದ್ದ ಕೊಠಡಿಗೆ ನುಗ್ಗಿ ಗಲಾಟೆ ಮಾಡಿದರು.

ಮಹಾರಾಣಿ ಅಮ್ಮಣ್ಣಿ ಕಾಲೇಜಿನಲ್ಲಿ ಭಾನುವಾರ ಆಡಿಷನ್‌ ಕರೆಯಲಾಗಿತ್ತು. ರಾಜ್ಯದ ವಿವಿಧ ಭಾಗಗಳಿಂದ 500ಕ್ಕೂ ಹೆಚ್ಚು ಯುವತಿಯರು ಇದರಲ್ಲಿ ಪಾಲ್ಗೊಂಡಿದ್ದರು. ಒಬ್ಬೊಬ್ಬರನ್ನೇ ಕೊಠಡಿಗೆ ಕರೆದು, ಸಂದರ್ಶನ ನಡೆಸುವ ಮೂಲಕ ಆಯ್ಕೆ ಮಾಡಲಾಗುತ್ತಿತ್ತು.

ಕೊಠಡಿಯೊಳಗೆ ಹೋಗಿದ್ದ ಯುವತಿ, ‘ಅಶ್ಲೀಲ ಪ್ರಶ್ನೆ ಕೇಳುತ್ತಿದ್ದಿರಲ್ಲಾ’ ಎಂದು ಕೂಗಾಡುತ್ತಲೇ ಹೊರಗೆ ಬಂದರು. ನಂತರ, ಕರೆ ಮಾಡಿ ಸಂಬಂಧಿಕರನ್ನು ಸ್ಥಳಕ್ಕೆ ಕರೆಸಿಕೊಂಡರು. ಎಲ್ಲರೂ ಒಟ್ಟಾಗಿ ಕೊಠಡಿಗೆ ನುಗ್ಗಿ ಆಯೋಜಕರೊಂದಿಗೆ ವಾಗ್ವಾದ ನಡೆಸಿದರು. ಸ್ಥಳಕ್ಕೆ ಬಂದ ಮಲ್ಲೇಶ್ವರ ಪೊಲೀಸರು, ಆಡಿಷನ್‌ ಬಂದ್‌ ಮಾಡಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಸುದ್ದಿಗಾರರ ಜತೆ ಮಾತನಾಡಿದ ಯುವತಿ, ‘ನನಗೆ ಮೊದಲಿನಿಂದಲೂ ಸಿನಿಮಾದಲ್ಲಿ ನಟಿಸಬೇಕೆಂಬ ಆಸೆ ಇದೆ. ರಿಯಾಲಿಟಿ ಷೋಗೆ ಆಯ್ಕೆಯಾದರೆ ಅದು ಸುಲಭ ಎಂದು ತಿಳಿದು ಆಡಿಷನ್‌ಗೆ ಬಂದಿದ್ದೆ’ ಎಂದರು.

‘ಸಂದರ್ಶನಕ್ಕೆ ಹೋದಾಗ ಆಯೋಜಕರ ಪೈಕಿ ಒಬ್ಬಾತ, ‘ನಿನಗೆ ಸೆಕ್ಸ್‌ ಮಾಡೋಕೆ ಬರುತ್ತಾ’ ಎಂದು ಕೇಳಿದ್ದ. ಆಗ ನನಗೆ ಭಯವಾಗಿ, ತಲೆಬಗ್ಗಿಸಿದೆ. ಮತ್ತೊಬ್ಬ, ‘ನಿನಗೆ ಬಾಯ್‌ ಫ್ರೆಂಡ್‌ ಇದ್ದಾನಾ’ ಎಂದು ಪ್ರಶ್ನಿಸಿದ. ಉತ್ತರಿಸಲು ಮುಜುಗರವಾಯಿತು. ‘ಕೊಠಡಿಯಲ್ಲಿದ್ದ ಹುಡುಗನೊಬ್ಬನಿಗೆ ಮುತ್ತು ಕೊಡು’ ಎಂದು ಇನ್ನೊಬ್ಬ ಹೇಳಿದ್ದ. ಅಲ್ಲದೆ, ಸ್ಥಳದಲ್ಲಿ ಬಟ್ಟೆ ಬಿಚ್ಚಿ ಪುನಃ ಧರಿಸುವಂತೆ ಒತ್ತಾಯಿಸಿದ್ದ’ ಎಂದು ಯುವತಿ ದೂರಿದರು.

‘ಆಯೋಜಕರು ಹೇಳಿದಂತೆ ಮಾಡದಿದ್ದರೆ ಸ್ಪರ್ಧಿಗಳನ್ನು ಹೊರ ಹಾಕುತ್ತಾರೆ. ನಾವು ಏನೇನೋ ಕನಸು ಇಟ್ಟುಕೊಂಡು ಬಂದಿರುತ್ತೇವೆ. ಈ ರೀತಿ ಅಸಭ್ಯ ಪ್ರಶ್ನೆ ಕೇಳುವುದು ಎಷ್ಟು ಸರಿ’ ಎಂದು ಅವರು ಪ್ರಶ್ನಿಸಿದರು.

ಪೊಲೀಸರಿಗೆ ಆಯೋಜಕರ ಹೇಳಿಕೆ: ಸ್ಥಳಕ್ಕೆ ಬಂದಿದ್ದ ಪೊಲೀಸರು, ಘಟನೆ ಬಗ್ಗೆ ಆಯೋಜಕರನ್ನು ಪ್ರಶ್ನಿಸಿದರು. ಆಗ ಆಯೋಜಕರು, ‘ಹಲವು ರಿಯಾಲಿಟಿ ಷೋಗಳನ್ನು ಮಾಡಿದ್ದೇವೆ. ಅಶ್ಲೀಲ ಪ್ರಶ್ನೆಯನ್ನು ಕೇಳಿಲ್ಲ. ಒಬ್ಬ ಯುವತಿ ಮಾತ್ರ ಆರೋಪ ಮಾಡುತ್ತಿದ್ದಾರೆ. ಉಳಿದವರೆಲ್ಲ ಯಥಾಪ್ರಕಾರ ಆಡಿಷನ್‌ ಕೊಟ್ಟಿದ್ದಾರೆ. ಅಶ್ಲೀಲ ಪ್ರಶ್ನೆ ಕೇಳಿದವರು ಯಾರು ಎಂದು ಕೇಳಿದರೂ ಯುವತಿ ಉತ್ತರಿಸುತ್ತಿಲ್ಲ’ ಎಂದು ಹೇಳಿಕೆ ನೀಡಿದ್ದಾರೆ.

ಮಲ್ಲೇಶ್ವರ ಪೊಲೀಸರು, ‘ಗಲಾಟೆ ನಡೆಯುತ್ತಿದ್ದರಿಂದ ಸ್ಥಳಕ್ಕೆ ಹೋಗಿ ಪರಿಸ್ಥಿತಿ ತಿಳಿಗೊಳಿಸಿದೆವು. ದೂರು ಕೊಡುವಂತೆ ಯುವತಿಗೆ ಹೇಳಿದ್ದೇವೆ. ಇದುವರೆಗೂ ದೂರು ಕೊಟ್ಟಿಲ್ಲ. ಮುಂಜಾಗ್ರತಾ ಕ್ರಮವಾಗಿ ಆಯೋಜಕರಿಂದ ಹೇಳಿಕೆ ಪಡೆದಿದ್ದೇವೆ’ ಎಂದರು.

ಪ್ರತಿಕ್ರಿಯಿಸಿ (+)