ಸೋಮವಾರ, ಡಿಸೆಂಬರ್ 9, 2019
19 °C
ಭದ್ರಾವತಿ ತಾಲ್ಲೂಕಿನ ಮೈದೊಳಲು ಗ್ರಾಮದಲ್ಲಿ ಅಸ್ವಸ್ಥರಾದ 45 ಜನ

ಕಲುಷಿತ ನೀರು ಸೇವನೆ: ತಂದೆ, ಮಗ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲುಷಿತ ನೀರು ಸೇವನೆ: ತಂದೆ, ಮಗ ಸಾವು

ಹೊಳೆಹೊನ್ನೂರು (ಶಿವಮೊಗ್ಗ ಜಿಲ್ಲೆ): ಭದ್ರಾವತಿ ತಾಲ್ಲೂಕಿನ ಮೈದೊಳಲು ಗ್ರಾಮದಲ್ಲಿ ಕಲುಷಿತ ನೀರು ಕುಡಿದ ಪರಿಣಾಮ ಭಾನುವಾರ ತಂದೆ ಹಾಗೂ ಮಗ ಮೃತಪಟ್ಟಿದ್ದು, 45 ಜನ ಅಸ್ವಸ್ಥಗೊಂಡಿದ್ದಾರೆ.

ಗ್ರಾಮದ ಶಿವಪ್ಪ (75), ಪುತ್ರ ಹನುಮಂತಪ್ಪ (35) ಮೃತರು.

ಗ್ರಾಮ ಪಂಚಾಯ್ತಿ ಸರಬರಾಜು ಮಾಡಿದ ನಲ್ಲಿ ನೀರನ್ನು ಕುಡಿದಿದ್ದರಿಂದ ತೀವ್ರ ಅಸ್ವಸ್ಥಗೊಂಡ ಶಿವಪ್ಪ, ಹನುಮಂತಪ್ಪ ಹಾಗೂ ಸಿದ್ದಮ್ಮ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಹನುಮಂತಪ್ಪ ಬೆಳಿಗ್ಗೆ ಮೃತಪಟ್ಟಿದ್ದರೆ, ಶಿವಪ್ಪ ಮಧ್ಯಾಹ್ನ ಸಾವಿಗೀಡಾದರು.

ಅಸ್ವಸ್ಥಗೊಂಡ 45 ಜನರು ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಖಾಸಗಿ ಕ್ಲಿನಿಕ್‌ಗಳಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದುಕೊಂಡರು. ತೀವ್ರವಾಗಿ ಅಸ್ವಸ್ಥಗೊಂಡ 12 ಜನರನ್ನು ಮೆಗ್ಗಾನ್‌ ಹಾಗೂ ಸುಬ್ಬಯ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗ್ರಾಮದಲ್ಲಿ ನಾಲ್ಕೈದು ದಿನಗಳ ಹಿಂದೆ ಕೆಲವರಲ್ಲಿ ವಾಂತಿ–ಭೇದಿ ಕಾಣಿಸಿಕೊಂಡಿತ್ತು. ಮಂದಿರದ ಹಿಂಭಾಗದ ಟ್ಯಾಂಕ್‌ನ ನೀರನ್ನು ಬಳಸುತ್ತಿದ್ದ ಅನೇಕರಲ್ಲಿ ಶನಿವಾರದಿಂದ ವಾಂತಿ–ಭೇದಿ ಕಾಣಿಸಿಕೊಂಡಿದೆ.

ಕುದಿಸಿ ಆರಿಸಿದ ನೀರನ್ನೇ ಕುಡಿಯುವಂತೆ ಗ್ರಾಮ ಪಂಚಾಯ್ತಿಯಿಂದ ಭಾನುವಾರ ಬೆಳಿಗ್ಗೆ ಮುನ್ನೆಚ್ಚರಿಕಾ ಕ್ರಮವಾಗಿ ಡಂಗುರ ಹೊಡೆಸಲಾಗಿದೆ. ವೈದ್ಯಾಧಿಕಾರಿಗಳ ತಂಡ ಗ್ರಾಮಕ್ಕೆ ಬಂದು, ನೀರಿನ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದೆ.

ನೀರಿನ ಓವರ್‌ಹೆಡ್‌ ಟ್ಯಾಂಕ್‌ ಅನ್ನು ಕೂಡಲೇ ಸ್ವಚ್ಛಗೊಳಿಸಿ ಕ್ಲೋರಿನ್‌ ಹಾಕಬೇಕು. ಪ್ರಯೋಗಾಲಯದಿಂದ ವರದಿ ಬರುವವರೆಗೂ ಟ್ಯಾಂಕರ್ ಮೂಲಕ ಗ್ರಾಮಕ್ಕೆ ಕುಡಿಯುವ ನೀರು ಸರಬರಾಜು ಮಾಡಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಹನುಮಂತಪ್ಪ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗೆ ಸೂಚಿಸಿದರು.

ಪರಿಹಾರಕ್ಕೆ ಒತ್ತಾಯ

‘ಕಳೆದ ವರ್ಷ ಜನರಿಗೆ ವಾಂತಿ–ಭೇದಿಯಾದಾಗ ಗ್ರಾಮ ಪಂಚಾಯ್ತಿ ಸಿಬ್ಬಂದಿ ಟ್ಯಾಂಕ್‌ ಸ್ವಚ್ಛಗೊಳಿಸಿದ್ದು ಬಿಟ್ಟರೆ ಮತ್ತೆ ಸ್ವಚ್ಛಗೊಳಿಸಿಲ್ಲ. ಪಂಚಾಯ್ತಿಯ ನಿರ್ಲಕ್ಷ್ಯದಿಂದಾಗಿ ಅಸ್ವಸ್ಥಗೊಂಡು ಜನರು ಆಸ್ಪತ್ರೆಗೆ ಸೇರುವಂತಾಗಿದೆ. ಅವರ ಚಿಕಿತ್ಸೆಯ ವೆಚ್ಚವನ್ನು ಗ್ರಾಮ ಪಂಚಾಯ್ತಿಯೇ ಭರಿಸಬೇಕು. ಮೃತರಿಗೆ ಪರಿಹಾರವನ್ನೂ ನೀಡಬೇಕು’ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

* ಗ್ರಾಮಸ್ಥರು ಇನ್ನೆರಡು ದಿನ ಟ್ಯಾಂಕ್‌ ನೀರನ್ನು ಕುಡಿಯಲು ಬಳಸಬಾರದು. ವರದಿ ಬಂದ ಬಳಿಕ ಜನ ಅಸ್ವಸ್ಥಗೊಂಡಿರುವುದರ ಹಿಂದಿನ ಕಾರಣ ನಿಖರವಾಗಿ ಗೊತ್ತಾಗಲಿದೆ.

– ಗುಡದ್ದಪ್ಪ ಕಸವಿ, ಭದ್ರಾವತಿ ತಾಲ್ಲೂಕು ವೈದ್ಯಾಧಿಕಾರಿ

ಪ್ರತಿಕ್ರಿಯಿಸಿ (+)