ಶುಕ್ರವಾರ, ಡಿಸೆಂಬರ್ 6, 2019
25 °C

ದೇವರ ಫೋಟೊಗಳಿಗೆ ಬೆಂಕಿ ಹಚ್ಚಿದ ದಲಿತರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇವರ ಫೋಟೊಗಳಿಗೆ ಬೆಂಕಿ ಹಚ್ಚಿದ ದಲಿತರು

ಕಲಬುರ್ಗಿ: ಜೇವರ್ಗಿ ತಾಲ್ಲೂಕು ಕೊಂಡಗೂಳಿ ಗ್ರಾಮ ದೇವತೆಯ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ದಲಿತರ ಮೇಲೆ ನಡೆದ ಹಲ್ಲೆಗೆ ‘ದೇವರು’ಗಳೇ ಕಾರಣ ಎಂದು ಆರೋಪಿಸಿ ಅಲ್ಲಿನ ದಲಿತರು ಭಾನುವಾರ ದೇವರ ಫೋಟೊಗಳಿಗೆ ಬೆಂಕಿ ಹಚ್ಚಿದರು.

ತಮ್ಮ ಮನೆಗಳಲ್ಲಿದ್ದ ಹಿಂದೂ ದೇವರುಗಳ ಫೋಟೊ ಮತ್ತು ದೇವರ ಮೂರ್ತಿಗಳನ್ನು ಮನೆಯ ಮುಂಭಾಗದಲ್ಲಿ ಗುಡ್ಡೆ ಹಾಕಿ, ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ‘ಹಿಂದೂಗಳ ಜಾತ್ರೆಯಲ್ಲಿ ಪಾಲ್ಗೊಂಡಿದ್ದರಿಂದ ನಮ್ಮ ಮೇಲೆ ಹಲ್ಲೆ ನಡೆದಿದೆ. ಹೀಗಾಗಿ ಹಿಂದೂ ದೇವರುಗಳು ಮನೆಯಲ್ಲಿ ಇರಬಾರದು’ ಎಂದು ಘೋಷಣೆ ಕೂಗಿದರು.

ಗ್ರಾಮ ದೇವತೆ ಮರೆಮ್ಮದೇವಿ ತೇರು ಎಳೆಯುವ ವಿಷಯಕ್ಕೆ ಸಂಬಂಧಿಸಿದಂತೆ ಶುಕ್ರವಾರ (ಫೆ.9) ದಲಿತರು ಮತ್ತು ಗ್ರಾಮಸ್ಥರ ಮಧ್ಯೆ ಪರಸ್ಪರ ಮಾರಾಮಾರಿ ನಡೆದಿತ್ತು. ಕಲ್ಲು ತೂರಾಟ ನಡೆದು 8ಜನ ಗಾಯಗೊಂಡಿದ್ದರು. ಇದನ್ನು ಖಂಡಿಸಿ ದಲಿತ ಮುಖಂಡರು ಶನಿವಾರ (ಫೆ10) ಗ್ರಾಮದ ಕೆಲವರ ಮನೆಗಳ ಮೇಲೆ ಕಲ್ಲು ತೂರಿದ್ದರು. ಈ ಗ್ರಾಮದಲ್ಲಿ ಲಿಂಗಾಯತರು ಮತ್ತು ಕುರುಬರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ.

15 ಜನರ ಬಂಧನ

‘ಕೊಂಡಗೂಳಿಯಲ್ಲಿ ತೇರು ಎಳೆಯುವ ವಿಷಯಕ್ಕೆ ನಡೆದ ಮಾರಾಮಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ 15 ಜನರನ್ನು ಬಂಧಿಸಲಾಗಿದೆ. ಗ್ರಾಮದಲ್ಲಿ ಪರಿಸ್ಥಿತಿ ಶಾಂತವಾಗಿದ್ದು,  ಬಿಗಿ ಬಂದೋಬಸ್ತ್ ಒದಗಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರತಿಕ್ರಿಯಿಸಿ (+)