ಬುಧವಾರ, ಡಿಸೆಂಬರ್ 11, 2019
23 °C

ನಗುವಿನ ಮೇಲೆ ಜಿಎಸ್‍ಟಿ ಇಲ್ಲ: ಮೋದಿ ಟೀಕೆಗೆ ರೇಣುಕಾ ಚೌಧರಿ ತಿರುಗೇಟು

ಪಿಟಿಐ Updated:

ಅಕ್ಷರ ಗಾತ್ರ : | |

ನಗುವಿನ ಮೇಲೆ ಜಿಎಸ್‍ಟಿ ಇಲ್ಲ: ಮೋದಿ ಟೀಕೆಗೆ ರೇಣುಕಾ ಚೌಧರಿ ತಿರುಗೇಟು

ಪಣಜಿ: ‘ನಗುವಿನ ಮೇಲೆ ಜಿಎಸ್‍ಟಿ ಇಲ್ಲ. ನಗಲು ನನಗೆ ಯಾರ ಅನುಮತಿಯೂ ಬೇಕಾಗಿಲ್ಲ’ ಎಂದು ಕಾಂಗ್ರೆಸ್ ಸಂಸದೆ ರೇಣುಕಾ ಚೌಧರಿ ಹೇಳಿದ್ದಾರೆ.

ಇಲ್ಲಿ ಭಾನುವಾರ ನಡೆದ ಸಂವಾದ ಕಾರ್ಯಕ್ರಮದ ನಂತರ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಮಾತು ಹೇಳಿದ್ದಾರೆ. ರಾಜ್ಯಸಭೆಯಲ್ಲಿ ತಮ್ಮ ನಗುವನ್ನು ರಾಮಾಯಣದ ಪಾತ್ರವೊಂದಕ್ಕೆ ಹೋಲಿಸಿ ಟೀಕೆ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರೇಣುಕಾ ಅವರು ಈ ಮೂಲಕ ತಿರುಗೇಟು ನೀಡಿದ್ದಾರೆ.

‘ಮೋದಿ ಅವರ ಮಾತುಗಳು ಮಹಿಳೆಯರ ಬಗ್ಗೆ ಅವರ ಮನಸ್ಥಿತಿ ಎಂಥದ್ದು ಎಂಬುದನ್ನು ತೋರಿಸುತ್ತದೆ. ಮೋದಿಯವರ ಟೀಕೆಯ ವಿರುದ್ಧ ಇಡೀ ದೇಶದ ಮಹಿಳೆಯರು ನನ್ನ ಬೆಂಬಲಕ್ಕೆ ಬಂದಿದ್ದಾರೆ. ಟ್ವಿಟರ್‍ನಲ್ಲಿ #Laugh like Surpankha ಮತ್ತು #Laugh Like Renuka Chowdhury ಎಂಬ ಹ್ಯಾಷ್‍ಟ್ಯಾಗ್‍ಗಳು ವೈರಲ್ ಆಗಿವೆ' ಎಂದು ಅವರು ಹೇಳಿದ್ದಾರೆ.

'ನಾನು ಐದು ಬಾರಿ ಸಂಸದೆಯಾಗಿದ್ದೇನೆ. ರಾಮಾಯಣದ ಕೆಟ್ಟ ಪಾತ್ರವೊಂದಕ್ಕೆ ನನ್ನನ್ನು ಹೋಲಿಸಿ ಪ್ರಧಾನಿ ಟೀಕಿಸುತ್ತಾರೆ. ಇವತ್ತಿನ ಮಹಿಳೆ ಸಂಪೂರ್ಣ ಬದಲಾಗಿದ್ದಾಳೆ, ಅವಳ ಪರವಾಗಿ ಅವಳೇ ಮಾತನಾಡುತ್ತಾಳೆ ಎಂಬುದನ್ನು ಮೋದಿ ಮರೆತಂತಿದೆ. ಸಂಸತ್ತು ನಮ್ಮ ಸಮಾಜದ ಪ್ರತಿಬಿಂಬವಾಗಿರುತ್ತದೆ. ಅಲ್ಲಿ ಕಾನೂನುಗಳನ್ನು ರಚಿಸಲಾಗುತ್ತದೆ. ಆದರೆ ಮಹಿಳೆಯರನ್ನು ಹೇಗೆ ನಡೆಸಿಕೊಳ್ಳಬೇಕು ಮತ್ತು ಅವರಿಗೂ ಪುರುಷರಿಗಿರುವಷ್ಟೇ ಹಕ್ಕುಗಳು ಇವೆ ಎಂಬುದನ್ನು ಸಂಸದರಿಗೆ ನಾವು ಕಲಿಸಿಕೊಡಬೇಕಿದೆ' ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

*

ಜೋರಾಗಿ ನಗುವುದು ನನ್ನ ಸ್ವಭಾವದಲ್ಲೇ ಬಂದಿದೆ. ಆದರೆ ಈ ಘಟನೆಯ ನಂತರ ನಗುವುದರ ಬಗ್ಗೆ ನಾನು ತುಂಬಾ ಯೋಚಿಸುತ್ತಿದ್ದೇನೆ.

–ರೇಣುಕಾ ಚೌಧರಿ, ಕಾಂಗ್ರೆಸ್ ಸಂಸದೆ

*

ನಡೆದಿದ್ದೇನು?

* ರಾಜ್ಯಸಭೆಯಲ್ಲಿ ಮೋದಿ ಭಾಷಣದ ವೇಳೆ ಜೋರಾಗಿ ನಕ್ಕಿದ್ದ ರೇಣುಕಾ, ಸಭಾಪತಿಯಿಂದ ಛೀಮಾರಿ.

* ರಾಮಾಯಣ ಧಾರಾವಾಹಿಯ ನಂತರ ಇಂತಹ ನಗುವನ್ನು ನೋಡಿದ್ದು ಇದೇ ಮೊದಲು ಎಂದಿದ್ದ ಮೋದಿ.

* ರೇಣುಕಾರ ನಗುವನ್ನು ಶೂರ್ಪನಕಿಯ ನಗುವಿಗೆ ಹೋಲಿಸಿ ಟ್ವೀಟ್ ಮಾಡಿದ್ದ ಸಚಿವ ಕಿರಣ್ ರಿಜಿಜು

ಪ್ರತಿಕ್ರಿಯಿಸಿ (+)