ಶುಕ್ರವಾರ, ಡಿಸೆಂಬರ್ 13, 2019
27 °C

‘ಹಿತಶತ್ರುಗಳಿದ್ದರೆ ಕಾಂಗ್ರೆಸ್‌ಗೆ ಸೋಲು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಹಿತಶತ್ರುಗಳಿದ್ದರೆ ಕಾಂಗ್ರೆಸ್‌ಗೆ ಸೋಲು’

ದೇವನಹಳ್ಳಿ: ‘ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯನ್ನು ಸೋಲಿಸಲು ಪ್ರತಿಪಕ್ಷದವರು ಬೇಕಾಗಿಲ್ಲ, ನಮ್ಮ ಪಕ್ಷದಲ್ಲಿರುವ ಶತ್ರುಗಳೇ ಸಾಕು. ಗೊಂದಲ ನಿವಾರಿಸುವುದು ನನ್ನ ಜವಾಬ್ದಾರಿಯಲ್ಲ’ ಎಂದು ಕೆಪಿಸಿಸಿ ಕಾರ್ಯಕಾರಿ ಸಮಿತಿ ಸದಸ್ಯೆ ಹಾಗೂ ಜಿಲ್ಲಾ ಕಾಂಗ್ರೆಸ್‌ ವೀಕ್ಷಕಿ ಜಯಮಾಲ ತಿಳಿಸಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಶನಿವಾರ ನಡೆದ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹ ಕುರಿತು ನಡೆದ ಸಭೆಯಲ್ಲಿ ಅವರು ಮಾತನಾಡಿದರು.

‘ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರ ಅಭಿಪ್ರಾಯವನ್ನು ಹೈಕಮಾಂಡ್‌ಗೆ ತಿಳಿಸುವುದಷ್ಟೇ ನನ್ನ ಕರ್ತವ್ಯ’ ಎಂದು ತಿಳಿಸಿದರು. ‌‌‌

ಕೆಪಿಸಿಸಿ ರಾಜ್ಯ ಪರಿಶಿಷ್ಟ ಜಾತಿ ಘಟಕದ ಸಂಚಾಲಕ ಮಾಳಿಗೇನಹಳ್ಳಿ ಪ್ರಕಾಶ್‌ ಮಾತನಾಡಿ, ಕಾಂಗ್ರೆಸ್‌ ಸರ್ಕಾರ ಜನರ ಆಶಯಕ್ಕೆ ತಕ್ಕಂತೆ ಕೆಲಸ ಮಾಡುತ್ತಿದೆ. ಪಕ್ಷದ ಆಂತರಿಕ ಗೊಂದಲ ನಿವಾರಿಸಿ, ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು ಎಂದು ಸಲಹೆ ನೀಡಿದರು.

ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಹಿಂದಿನ ಮಾನದಂಡವನ್ನು ಬಿಟ್ಟು ಅಭ್ಯರ್ಥಿಯನ್ನು ಆಯ್ಕೆ ಮಾಡುವ ಅನಿವಾರ್ಯತೆ ಇದೆ ಎಂದು ಅಭಿಪ್ರಾಯಪಟ್ಟರು.

ಇಡೀ ದೇಶದ ಕಣ್ಣು ಕರ್ನಾಟಕದ ಚುನಾವಣೆಯತ್ತ ನೆಟ್ಟಿದೆ, ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರ ಕೊರತೆ ಇಲ್ಲ ಎಂದು ತಿಳಿಸಿದರು.

ಆಕಾಂಕ್ಷಿಗಳ ಪಟ್ಟಿ ಹೆಚ್ಚಿದೆ. ಕೇವಲ ಐದು ಆಕಾಂಕ್ಷಿಗಳ ಹೆಸರು ಹೇಳಿ ಎಂದರೆ ಹೇಗೆ ಎಂದು ಜಯಮಾಲರನ್ನು ಪ್ರಶ್ನಿಸಿದರು.

ಬ್ಲಾಕ್‌ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಎಸ್‌.ಪಿ ಮುನಿರಾಜು ಮಾತನಾಡಿ, ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಲ್ಲಿ ಈವರೆಗೂ ಜಾತಿ ಲೆಕ್ಕದಲ್ಲಿ ಅಭ್ಯರ್ಥಿ ಆಯ್ಕೆ ನಡೆದಿಲ್ಲ ಎಂದು ತಿಳಿಸಿದರು.

ಯಾವುದೇ ಜಾತಿಯ ಅರ್ಹರಿಗೆ ಹೈಕಮಾಂಡ್‌ ಟಿಕೆಟ್‌ ನೀಡಿದರೆ, ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಶ್ರಮಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಟಿಕೆಟ್‌ ಆಕಾಂಕ್ಷಿತರಾದ ಕೆ.ವೆಂಕಟಸ್ವಾಮಿ, ಎಸ್.ಜಿ.ಮಂಜುನಾಥ್‌, ಎಸ್‌.ಜಿ.ನಾರಾಯಣಸ್ವಾಮಿ, ಜಿ.ಸುರೇಶ್‌, ಎ.ಚಿನ್ನಪ್ಪ, ಎಂ.ನಾರಾಯಣಸ್ವಾಮಿ, ಶಾಂತಕುಮಾರ್‌, ಬೆಂಗಳೂರು ಪೂರ್ವ ತಾಲ್ಲೂಕು ಭೂ ನ್ಯಾಯ ಮಂಡಳಿ ಸದಸ್ಯ ಎಂ.ಬಿ.ಬಾಬು, ತಿರುಮಲ ಅಪ್ಪಣ್ಣ ಇದ್ದರು.

ಮತ್ತಿಬ್ಬರು ಆಕಾಂಕ್ಷಿತರಾದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಛಲವಾದಿ ನಾರಾಯಣಸ್ವಾಮಿ, ಅಲ್ಲಾಳಸಂದ್ರ ಮಾರುತಿ ಸಭೆಗೆ ಗೈರು ಹಾಜರಾಗಿದ್ದರು.

ಮಧ್ಯಾಹ್ನ 12ರಿಂದ 6ರವರೆಗೆ ಹೋಬಳಿಯ ಕಾಂಗ್ರೆಸ್‌ ಪದಾಧಿಕಾರಿಗಳು, ಮುಖಂಡರು, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಸದಸ್ಯರು, ವಿವಿಧ ಸ್ಥಳೀಯ ಸಹಕಾರ ಸಂಘಗಳ ನಾಯಕರು, ಆಕಾಂಕ್ಷಿತ ಅಭ್ಯರ್ಥಿಗಳ ಅಭಿಪ್ರಾಯವನ್ನು ಜಯಮಾಲ ಸಂಗ್ರಹಿಸಿದರು.

* ಎಲ್ಲೋ ಕುಳಿತುಕೊಂಡು, ಯಾರೋ ಶಿಫಾರಸು ಮಾಡಿದ ತಕ್ಷಣ ಟಿಕೆಟ್‌ ನೀಡಿದರೆ ಪಕ್ಷದ ಅಭ್ಯರ್ಥಿ ಗೆಲುವು ಕಷ್ಟವಾಗಲಿದೆ.

–ಮಾಳಿಗೇನಹಳ್ಳಿ ಪ್ರಕಾಶ್‌

ಮುಖ್ಯಾಂಶಗಳು

* ರಾಜ್ಯ ಪರಿಶಿಷ್ಟ ಜಾತಿ ಘಟಕದ ಸಂಚಾಲಕ

* ಛಲವಾದಿ ನಾರಾಯಣ ಸ್ವಾಮಿ, ಅಲ್ಲಾಳಸಂದ್ರ ಮಾರುತಿ ಗೈರು

* ನಿಷ್ಠಾವಂತ ಕಾರ್ಯಕರ್ತರ ಕೊರತೆ ಇಲ್ಲ

* ಮಧ್ಯಾಹ್ನ 12ರಿಂದ 6ರವರೆಗೆ ಅಭಿಪ್ರಾಯ ಸಂಗ್ರಹ

ಪ್ರತಿಕ್ರಿಯಿಸಿ (+)