ಶುಕ್ರವಾರ, ಡಿಸೆಂಬರ್ 6, 2019
24 °C
ಯಶವಂತಪುರ, ಜಯನಗರದ ಮಾರೇನಹಳ್ಳಿಯಲ್ಲಿ ಅವಘಡ

ವಾಲಿದ ಕಟ್ಟಡ: ಬೀದಿಗೆ ಬದುಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಲಿದ ಕಟ್ಟಡ: ಬೀದಿಗೆ ಬದುಕು

ಬೆಂಗಳೂರು: ನಗರದ ಯಶವಂತಪುರ ಹಾಗೂ ಜಯನಗರ 5ನೇ ಬ್ಲಾಕ್‌ನ ಮಾರೇನಹಳ್ಳಿಯಲ್ಲಿ ಎರಡು ಕಟ್ಟಡಗಳು ವಾಲಿವೆ.

ಯಶವಂತಪುರದ ತ್ರಿವೇಣಿ ರಸ್ತೆಯ 3ನೇ ಅಡ್ಡರಸ್ತೆಯಲ್ಲಿರುವ ಮೂರು ಅಂತಸ್ತಿನ ಕಟ್ಟಡವು ಭಾನುವಾರ ಬೆಳಿಗ್ಗೆ 11.30ರ ಸುಮಾರಿಗೆ ವಾಲಿದ್ದು, ಸ್ಥಳೀಯ ನಿವಾಸಿಗಳಲ್ಲಿ ಆತಂಕ ಮನೆ ಮಾಡಿದೆ.

ಈ ಕಟ್ಟಡವು ವಿಜಯಲಕ್ಷ್ಮಿ ಎಂಬುವರಿಗೆ ಸೇರಿದ್ದು, ಇಲ್ಲಿ ಮೂರು ಕುಟುಂಬಗಳು ವಾಸವಾಗಿವೆ. ಕಟ್ಟಡ ವಾಲಿರುವುದರಿಂದ ಅಲ್ಲಿದ್ದ ಕುಟುಂಬಗಳ ಸದಸ್ಯರು ಬೇರೆಡೆ ಸ್ಥಳಾಂತರಗೊಂಡಿದ್ದಾರೆ.

ಪಾಲಿಕೆ ವತಿಯಿಂದ ರಾಜಕಾಲುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಕಾಲುವೆಯಲ್ಲಿದ್ದ ಕಲ್ಲುಗಳನ್ನು ಜೆಸಿಬಿ ಮೂಲಕ ಕಿತ್ತಿದ್ದಾರೆ. ಇದರಿಂದ ಕಟ್ಟಡದ ಅಡಿಪಾಯಕ್ಕೆ ಹಾನಿಯಾಗಿದ್ದು, 2–3 ಇಂಚು ವಾಲಿದೆ. ಪಾಲಿಕೆ ಅಧಿಕಾರಿಗಳ ಅವೈಜ್ಞಾನಿಕ ಕಾಮಗಾರಿಯೇ ಇದಕ್ಕೆ ಕಾರಣ ಎಂದು ವಿಜಯಲಕ್ಷ್ಮಿ ಅವರ ಅಳಿಯ ರವಿಚಂದ್ರ ದೂರಿದರು.

ಈ ಘಟನೆ ಮಧ್ಯಾಹ್ನ ನಡೆದರೂ ಪಾಲಿಕೆ ಅಧಿಕಾರಿಗಳು ಯಾವುದೇ ಪರಿಹಾರ ಕ್ರಮಗಳನ್ನು ಕೈಗೊಂಡಿಲ್ಲ. ಎಂಜಿನಿಯರ್‌ಗಳು ಸ್ಥಳಕ್ಕೆ ಬಂದು ಹೋಗುತ್ತಿದ್ದಾರೆಯೇ ವಿನಃ ಯಾವುದೇ ಸ್ಪಂದನೆ ನೀಡುತ್ತಿಲ್ಲ ಎಂದು ಆರೋಪಿಸಿದರು.

‘ನಮಗೆ ಈಗ ದಿಕ್ಕು ತೋಚುತ್ತಿಲ್ಲ. ಇಡೀ ಕುಟುಂಬ ಬೀದಿಗೆ ಬಿದ್ದಿದೆ’ ಎಂದು ಅಳಲು ತೋಡಿಕೊಂಡರು.

ವಾಲಿದ 4 ಅಂತಸ್ತಿನ ಕಟ್ಟಡ: ಮಾರೇನ ಹಳ್ಳಿಯ 4ನೇ ಮುಖ್ಯರಸ್ತೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ನಾಲ್ಕು ಅಂತಸ್ತಿನ ಕಟ್ಟಡ ವಾಲಿದ್ದು, ಅದನ್ನು ಧ್ವಂಸಗೊಳಿಸಲಾಗುತ್ತಿದೆ.

ಕಟ್ಟಡವು ಮೂರು ತಿಂಗಳ ಹಿಂದೆಯೇ ವಾಲಿತ್ತು. ಆದರೆ, ಇದನ್ನು ರಹಸ್ಯವಾಗಿ ಇಟ್ಟಿದ್ದ ಮಾಲೀಕ ಲೋಗನಾಥನ್‌, ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಮುಂದುವರಿಸಿದ್ದರು. ಕಟ್ಟಡ ಕುಸಿಯದಂತೆ ತಡೆಯುವ ಉದ್ದೇಶದಿಂದ 15 ದಿನಗಳ ಹಿಂದೆ ನೆಲಮಾಳಿಗೆಯ ವಾಣಿಜ್ಯ ಮಳಿಗೆಗಳ ಬಳಿ ಸಿಮೆಂಟ್‌ ಇಟ್ಟಿಗೆಗಳನ್ನು ಬಳಸಿ ತಡೆಗೋಡೆ ನಿರ್ಮಿಸಿದ್ದರು. ಇದರಿಂದಾಗಿ ಕಟ್ಟಡ ವಾಲಿರುವ ವಿಷಯ ಸ್ಥಳೀಯರಿಗೆ ಗೊತ್ತಾಗಿತ್ತು. ಅಲ್ಲದೆ, ಈ ವೇಳೆಗಾಗಲೇ ಅಕ್ಕಪಕ್ಕದ ಮನೆಗಳಿಗೂ ಹಾನಿ ಉಂಟಾಗಿತ್ತು.

ಕಟ್ಟಡ ಕುಸಿದು ಅನಾಹುತ ಸಂಭವಿಸುವ ಮುನ್ನವೇ ಅದನ್ನು ಧ್ವಂಸಗೊಳಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದರು. ಇದಕ್ಕೆ ಮಾಲೀಕರು ಒಪ್ಪಿರಲಿಲ್ಲ. ಹೀಗಾಗಿ, ಸ್ಥಳೀಯ ಪಾಲಿಕೆ ಸದಸ್ಯರು ಹಾಗೂ ಪೊಲೀಸರಿಗೆ ದೂರು ನೀಡಿದ್ದರು. ಕಟ್ಟಡ ತೆರವುಗೊಳಿಸುವಂತೆ ಪಟ್ಟು ಹಿಡಿದಿದ್ದರು.

ಈ ಕಟ್ಟಡವನ್ನು 500 ಚದರ ಅಡಿಯ ನಿವೇಶನದಲ್ಲಿ ನಿರ್ಮಿಸಲಾಗಿದೆ. ನೆಲಮಾಳಿಗೆಯಲ್ಲಿ ಎರಡು ವಾಣಿಜ್ಯ ಮಳಿಗೆಗಳಿವೆ. ಶೇ 90ರಷ್ಟು ಕಟ್ಟಡದ ಕಾಮಗಾರಿ ಪೂರ್ಣಗೊಂಡಿದೆ.

ಈ ನಿವೇಶನದಲ್ಲಿ ಎರಡು ಅಂತಸ್ತಿನ ಕಟ್ಟಡ ನಿರ್ಮಿಸಲು ಮಾತ್ರ ಬಿಬಿಎಂಪಿ ಅನುಮತಿ ನೀಡಿದೆ. ಆದರೆ, ನಿಯಮ ಉಲ್ಲಂಘಿಸಿ ನಾಲ್ಕು ಅಂತಸ್ತುಗಳನ್ನು ನಿರ್ಮಿಸಲಾಗಿದೆ. ಕಟ್ಟಡದ ಅಡಿಪಾಯ ಸಡಿಲಗೊಂಡಿದೆ. ಅಲ್ಲದೆ, ಕಟ್ಟಡದ ಭಾರ ಹೆಚ್ಚಾಗಿದ್ದು, ರಸ್ತೆ ಕಡೆಗೆ 4 ಇಂಚು ವಾಲಿದೆ. ಇದರಿಂದ ಅಕ್ಕಪಕ್ಕದ ಮನೆಗಳ ನಿವಾಸಿಗಳು ಬೀಗ ಹಾಕಿಕೊಂಡು ಬೇರೆಡೆ ತೆರಳಿದ್ದಾರೆ.

ಕಟ್ಟಡದ ಧ್ವಂಸಗೊಳಿಸುವ ಗುತ್ತಿಗೆಯನ್ನು ಚೇತನಾ ಸರ್ವಿಸ್‌ ಸಂಸ್ಥೆಗೆ ನೀಡಲಾಗಿದೆ. ಎಂಟು ಕಾರ್ಮಿಕರು ಕೆಲಸ ಮಾಡುತ್ತಿದ್ದು, ನಾಲ್ಕನೇ ಮಹಡಿಯ ಚಾವಣಿಯನ್ನು ತೆರವುಗೊಳಿಸುವ ಕೆಲಸದಲ್ಲಿ ನಿರತರಾಗಿದ್ದರು.

4 ತಿಂಗಳ ಹಿಂದೆ ಬಿದ್ದ ಭಾರಿ ಮಳೆಯಿಂದಾಗಿ ಈ ಭಾಗದಲ್ಲಿ ನೀರು ನಿಂತಿತ್ತು. ಇದರಿಂದ ಭೂಮಿಯು ಸಡಿಲಗೊಂಡು ಕಟ್ಟಡ ವಾಲಿದೆ ಎಂದು ಕಟ್ಟಡದ ಮಾಲೀಕರ ಸಂಬಂಧಿ ತಿಳಿಸಿದರು.

‘ಮನೆ ಖಾಲಿ ಮಾಡಿ ಹೋಗುವುದೆಲ್ಲಿಗೆ?’

‘ಮನೆ ಖಾಲಿ ಮಾಡಿಕೊಂಡು ಹೋಗುವಂತೆ ಬಿಬಿಎಂಪಿ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ನಾವು ಬಾಡಿಗೆ ಮನೆಯಲ್ಲಿ ವಾಸವಾಗಿದ್ದೇವೆ. ದಿಢೀರನೇ ಹೋಗಿ ಎಂದರೆ ಎಲ್ಲಿಗೆ ಹೋಗುವುದು. ಕಟ್ಟಡದ ಮಾಲೀಕರು ಮಾಡಿದ ತಪ್ಪಿಗೆ ನಾವು ತೊಂದರೆ ಅನುಭವಿಸಬೇಕೆ’ ಎಂದು ಸ್ಥಳೀಯ ನಿವಾಸಿ ರಾಮಕ್ಕ ಪ್ರಶ್ನಿಸಿದರು.

ಗುತ್ತಿಗೆದಾರರು ಕಟ್ಟಡವನ್ನು ಧ್ವಂಸಗೊಳಿಸುತ್ತಿದ್ದಾರೆ. ಕಟ್ಟಡದ ಅವಶೇಷಗಳು ಮನೆ ಮೇಲೆ ಬೀಳುವ ಅಪಾಯವಿದೆ. ಪಾಲಿಕೆ ಅಥವಾ ಕಟ್ಟಡದ ಮಾಲೀಕರು ಆರ್ಥಿಕ ಸಹಾಯ ಮಾಡಿದರೆ ಬೇರೆಡೆ ತೆರಳುತ್ತೇವೆ ಎಂದರು.

ಈಜಿಪುರದಲ್ಲಿ ವಾಲಿತ್ತು 5 ಅಂತಸ್ತಿನ ಕಟ್ಟಡ

ಈಜಿಪುರದ ಜೆ.ಜೆ. ಚರ್ಚ್‌ ಬಳಿ ನಿರ್ಮಾಣ ಹಂತದ ಐದು ಹಂತಸ್ತಿನ ಕಟ್ಟಡವು 2017ರ ಆಗಸ್ಟ್‌ 16ರಂದು ವಾಲಿತ್ತು. ರಮೇಶ್‌ ಎಂಬುವರು 800 ಚದರ ಅಡಿ ಅಳತೆಯ ನಿವೇಶನದಲ್ಲಿ 5 ಅಂತಸ್ತಿನ ಕಟ್ಟಡವನ್ನು ನಿರ್ಮಿಸಿದ್ದರು. ಕಟ್ಟಡದ ಅಂತಿಮ ಹಂತದ ಕೆಲಸಗಳಷ್ಟೇ ಬಾಕಿ ಇದ್ದವು. ಆದರೆ, ಎರಡು ಅಂತಸ್ತಿನ ಮನೆ ಕಟ್ಟಲು ಮಾತ್ರ ಬಿಬಿಎಂಪಿ ಅನುಮತಿ ನೀಡಿತ್ತು.

*

ಕಟ್ಟಡದ ಮೇಲಿನ 2 ಅಂತಸ್ತುಗಳನ್ನು ಕಾರ್ಮಿಕರ ಮೂಲಕ ಕೆಡವಿ, ಬಳಿಕ ಯಂತ್ರಗಳ ಸಹಾಯದಿಂದ ಧ್ವಂಸಗೊಳಿಸುತ್ತೇವೆ.

–ಎಂ.ಎಚ್‌.ಕೃಷ್ಣಮೂರ್ತಿ, ಮಾಲೀಕ, ಚೇತನಾ ಸರ್ವಿಸ್‌ ಸಂಸ್ಥೆ

*–ಮಾರೇನಹಳ್ಳಿಯಲ್ಲಿ ವಾಲಿರುವ ಕಟ್ಟಡ

ಪ್ರತಿಕ್ರಿಯಿಸಿ (+)