4

ಮೆಟ್ರೊ ನಿಲ್ದಾಣ ಸಂಪರ್ಕಕ್ಕೆ ‘ಇ– ಆಟೊ’

Published:
Updated:
ಮೆಟ್ರೊ ನಿಲ್ದಾಣ ಸಂಪರ್ಕಕ್ಕೆ ‘ಇ– ಆಟೊ’

ಬೆಂಗಳೂರು: ‘ನಮ್ಮ ಮೆಟ್ರೊ’ ಪ್ರಯಾಣಿಕರ ಅನುಕೂಲಕ್ಕಾಗಿ ‘ಇ–ಆಟೊ’ಗಳನ್ನು ಪರಿಚಯಿಸಲು ಬಿಎಂಆರ್‌ಸಿಎಲ್‌ ಹಾಗೂ ಸಾರಿಗೆ ಇಲಾಖೆ ಚಿಂತನೆ ನಡೆಸಿವೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗೆ ನಡೆಸಿದ್ದ ಬಜೆಟ್‌ ಪೂರ್ವಭಾವಿ ಸಭೆಯಲ್ಲಿ ಎರಡೂ ಇಲಾಖೆಯ ಅಧಿಕಾರಿಗಳು ‘ಇ– ಆಟೊ’ ಪ್ರಸ್ತಾವ ಮಂಡಿಸಿದ್ದಾರೆ. ಅದಕ್ಕೆ ಸಿದ್ದರಾಮಯ್ಯ ಹಾಗೂ ಸಾರಿಗೆ ಸಚಿವ ಎಚ್‌.ಎಂ. ರೇವಣ್ಣ ಆಸಕ್ತಿ ತೋರಿಸಿದ್ದು, ಈ ಬಾರಿಯ ಬಜೆಟ್‌ನಲ್ಲೇ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ.

‘ಮೆಟ್ರೊ ನಿಲ್ದಾಣದ ಸುತ್ತಮುತ್ತಲ 2 ಕಿ.ಮೀ ವ್ಯಾಪ್ತಿಯಲ್ಲಿ ಮನೆ ಮಾಡುತ್ತಿರುವವರ ಸಂಖ್ಯೆ ಅಧಿಕವಾಗಿದೆ. ಅವರು ನಿಲ್ದಾಣಕ್ಕೆ ಹೋಗುವಾಗ, ಆಟೊದವರು ಬರುವುದಿಲ್ಲ. ಅನಿವಾರ್ಯವಾಗಿ ಸ್ವಂತ ವಾಹನಗಳಲ್ಲೇ ಹೋಗಿ ನಿಲ್ದಾಣ ಬಳಿ ನಿಲ್ಲಿಸುತ್ತಿದ್ದಾರೆ. ಆಟೊದವರ ವರ್ತನೆಯಿಂದ ಮಕ್ಕಳು ಹಾಗೂ ವೃದ್ಧರು ನಡೆದುಕೊಂಡು ನಿಲ್ದಾಣಕ್ಕೆ ಹೋಗುತ್ತಿದ್ದಾರೆ. ಇಂಥ ಸಮಸ್ಯೆಗಳಿಗೆ ಪರಿಹಾರವಾಗಿ ಪರಿಸರ ಸ್ನೇಹಿ ಎಲೆಕ್ಟ್ರಿಕ್‌ ಆಟೊಗಳನ್ನು ಪರಿಚಯಿಸಲು ಉದ್ದೇಶಿಸಲಾಗಿದೆ’ ಎಂದು ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡಿದ್ದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಪ್ರಸ್ತಾವದ ಸಾಧಕ– ಬಾಧಕಗಳನ್ನು ತಿಳಿದು ವರದಿ ನೀಡುವಂತೆ ವಾರ್ತಾ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪಿ.ಮಣಿವಣ್ಣನ್ ಅವರಿಗೆ ಮುಖ್ಯಮಂತ್ರಿ ಸೂಚಿಸಿದ್ದಾರೆ. ಹೀಗಾಗಿ ಅವರು, ಆಟೊ ಮಾಲೀಕರು ಹಾಗೂ ಚಾಲಕರ ಸಂಘಟನೆಗಳ ಮುಖಂಡರೊಂದಿಗೆ ಚರ್ಚೆಯನ್ನೂ ನಡೆಸಿದ್ದಾರೆ’ ಎಂದು ಅವರು ವಿವರಿಸಿದರು.

ನಗರದಲ್ಲಿ 41 ಮೆಟ್ರೊ ನಿಲ್ದಾಣಗಳಿವೆ. ಅವುಗಳ ಸುತ್ತಲಿನ 2 ಕಿ.ಮೀ ವ್ಯಾಪ್ತಿಯಲ್ಲಿ ಇ–ಆಟೊಗಳನ್ನು ಓಡಿಸಬಹುದು ಎಂದು ಪ್ರಸ್ತಾವದಲ್ಲಿ ತಿಳಿಸಲಾಗಿದೆ.

ನಿಲ್ದಾಣ ಹಾಗೂ 2 ಕಿ.ಮೀ ದೂರದ ವಸತಿಪ್ರದೇಶಗಳಲ್ಲಿ ಇ–ಆಟೊ ಕೌಂಟರ್‌ ತೆರೆಯಲಾಗುತ್ತದೆ. ನಿಲ್ದಾಣಕ್ಕೆ ಹೋಗಬೇಕಾದ ಪ್ರಯಾಣಿಕರು, ಆ ಕೌಂಟರ್‌ಗೆ ಬಂದು ಅಲ್ಲಿಂದ ಪ್ರಯಾಣಿಸಬಹುದು. ಜತೆಗೆ ನಿಲ್ದಾಣದಲ್ಲಿರುವ ಕೌಂಟರ್‌ ಬಳಿಯಿಂದ ವಸತಿಪ್ರದೇಶಗಳಲ್ಲಿರುವ ಕೌಂಟರ್‌ವರೆಗೆ ಆಟೊದಲ್ಲಿ ಹೋಗಬಹುದಾಗಿದೆ.

‘ಇ– ಆಟೊಗಳಲ್ಲಿ ನಾಲ್ಕು ಮಂದಿ ಪ್ರಯಾಣಿಸಲು ಅವಕಾಶ ನೀಡಿ, ಒಬ್ಬರಿಗೆ ₹10 ಪ್ರಯಾಣ ದರ ನಿಗದಿಪಡಿಸಬಹುದು. ಆಟೊ ಸಾಗುವ ಮಾರ್ಗಮಧ್ಯೆಯೂ ಪ್ರಯಾಣಿಕರು ಹತ್ತಲೂಬಹುದು. ಆವಾಗಲೂ ಪ್ರಯಾಣಿಕರು ₹10 ರೂಪಾಯಿ ಕೊಡಬೇಕಾಗುತ್ತದೆ. ಈ ಆಟೊಗಳಲ್ಲಿ ಮೀಟರ್‌ ಇರುವುದಿಲ್ಲ. ಒಮ್ಮೆ ಹತ್ತಿ ಇಳಿದರೆ ನಿಗದಿತ ದರವನ್ನು ಕೊಡಲೇ ಬೇಕು. ಇವುಗಳ ವೇಗದ ಮಿತಿ ಗಂಟೆಗೆ 25 ಕಿ.ಮೀ ಇರಲಿದೆ’ ಎಂಬ ಅಂಶ ಪ್ರಸ್ತಾವದಲ್ಲಿದೆ.

‘ಇ–ಆಟೊಗಳ ಚಾರ್ಜಿಂಗ್‌ಗಾಗಿ ಮೆಟ್ರೊ ನಿಲ್ದಾಣಗಳಲ್ಲಿ ವ್ಯವಸ್ಥೆ ಮಾಡಬೇಕು. ಒಂದು ಆಟೊವನ್ನು ಒಮ್ಮೆ ಚಾರ್ಜ್‌ ಮಾಡಿದರೆ, 100 ಕಿ.ಮೀ ಸಂಚರಿಸುತ್ತದೆ. ತುರ್ತು ಸಂದರ್ಭಗಳಲ್ಲಿ ಬಳಕೆಗಾಗಿ ಬ್ಯಾಟರಿ ಸಹ ಆಟೊದಲ್ಲಿ ಇರಲಿದೆ’

‘ಇ–ಆಟೊಗಳನ್ನು ಒದಗಿಸಲು ಕೈನೆಟಿಕ್ ಕಂಪನಿಯವರು ಆಸಕ್ತಿ ತೋರಿದ್ದಾರೆ. ಒಂದು ಆಟೊ ಬೆಲೆ ₹1.28 ಲಕ್ಷವಿದೆ. ಅವು ಪರಿಸರ ಸ್ನೇಹಿ ಆಗಿವೆ. ಚಾಲ್ತಿಯಲ್ಲಿರುವ ಎಲೆಕ್ಟ್ರಿಕ್‌ ವಾಹನಗಳ ನಿಯಮದಂತೆ, ಹೊಸ ಇ–ಆಟೊ ಖರೀದಿಸಲು ಮಾಲೀಕರಿಗೆ ಸಹಾಯಧನ ನೀಡಬಹುದು’ ಎಂಬುದು ಪ್ರಸ್ತಾವದಲ್ಲಿರುವುದಾಗಿ ಅಧಿಕಾರಿ ಹೇಳಿದರು.

ಪ್ರಾಯೋಗಿಕ ಜಾರಿ

ಆರಂಭಿಕ ಹಂತದಲ್ಲಿ ಮೈಸೂರು ರಸ್ತೆಯಿಂದ ಬೈಯಪ್ಪನಹಳ್ಳಿವರೆಗೆ (ನೆರಳೆ) ಹಾಗೂ ನಾಗಸಂದ್ರದಿಂದ ಯಲಚೇನಹಳ್ಳಿವರೆಗಿನ (ಹಸಿರು) ಮಾರ್ಗದಲ್ಲಿರುವ ಕೆಲ ನಿಲ್ದಾಣಗಳಲ್ಲಿ ಆಟೊಗಳು ಓಡಾಡಲಿವೆ. ಸದ್ಯ 2 ಕಿ.ಮೀ ವ್ಯಾಪ್ತಿಯ ಮಿತಿ ಇದೆ. ಕ್ರಮೇಣ ವ್ಯಾಪ್ತಿ ವಿಸ್ತರಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚೆಯಾಗಿದೆ.

* ಮೆಟ್ರೊ ನಿಲ್ದಾಣಕ್ಕೆ ಇ–ಆಟೊ ಓಡಿಸಲು ನಾವೂ ಒತ್ತಾಯ ಮಾಡುತ್ತಿದ್ದೇವೆ. ಮುಖ್ಯಮಂತ್ರಿ ಅವರಿಂದ ಉತ್ತಮ ಸ್ಪಂದನೆ ಸಿಕ್ಕಿದೆ.

– ಸೋಮಶೇಖರ್‌, ಬೆಂಗಳೂರು ಆಟೊ ಚಾಲಕರ ಸೌಹಾರ್ದ ಕೋ–ಆಪರೇಟಿವ್‌ ಸೊಸೈಟಿ ಅಧ್ಯಕ್ಷ

ಮುಖ್ಯಾಂಶಗಳು

* ಆಟೊದಲ್ಲಿ ನಾಲ್ಕು ಮಂದಿ ಪ್ರಯಾಣಕ್ಕೆ ಅವಕಾಶ

* ಒಬ್ಬರಿಗೆ ₹10 ಪ್ರಯಾಣ ದರ

* ಆಟೊಗಳ ವೇಗದ ಮಿತಿ ಗಂಟೆಗೆ 25 ಕಿ.ಮೀ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry