ಸೋಮವಾರ, ಡಿಸೆಂಬರ್ 9, 2019
17 °C

‘ಗಳಿಸಿದ ಅಂಕ ಸಾರ್ಥಕವಾದ ಕ್ಷಣ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಗಳಿಸಿದ ಅಂಕ ಸಾರ್ಥಕವಾದ ಕ್ಷಣ’

ಬೆಂಗಳೂರು: ‘ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಸಂತೋಷಕ್ಕಿಂತ, ಎಂಜಿನಿಯರಿಂಗ್‌ ಶುಲ್ಕ ಭರಿಸಲು ಆ ಅಂಕಗಳು ನೆರವಾಯಿತು ಎಂಬ ಖುಷಿಯೇ ಜಾಸ್ತಿಯಿದೆ’ ಎಂದು ಗರಿಷ್ಠ ಮೊತ್ತದ ವಿದ್ಯಾರ್ಥಿ ವೇತನ ಪಡೆದ ಟಿ.ಬಿ. ಶಿಲ್ಪಾ ಸಂತಸ ಹಂಚಿಕೊಂಡರು.

ರಾವ್ ಬಹದ್ದೂರ್ ಧರ್ಮಪ್ರವರ್ತ ಗುಬ್ಬಿ ತೋಟದಪ್ಪ ಧರ್ಮಸಂಸ್ಥೆ ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ವಿದ್ಯಾರ್ಥಿವೇತನ ವಿತರಣೆ ಕಾರ್ಯಕ್ರಮದಲ್ಲಿ ಅವರು ಅನಿಸಿಕೆ ಹಂಚಿಕೊಂಡರು.

‘ನನ್ನ ತಂದೆ ಕೃಷಿಕರು. ಎಂಜಿನಿಯರಿಂಗ್‌ ಓದಿಸಲು ಅವರು ಪಡುವ ಕಷ್ಟ ಗೊತ್ತಿದೆ. ಕಾಲೇಜು ಶುಲ್ಕ, ಪುಸ್ತಕಗಳಿಗಾಗಿ ಈ ಹಣವನ್ನು ಬಳಸಿಕೊಳ್ಳುತ್ತೇನೆ’ ಎಂದು ಹೇಳಿದರು.

‘ನನ್ನೂರು ಬಾಗಲಕೋಟೆ. ಈಗ ಆರ್‌ಎನ್‌ಎಸ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌ ಓದುತ್ತಿದ್ದೇನೆ. ಅಪ್ಪ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಾರೆ. ತೋಟದಪ್ಪ ಧರ್ಮಸಂಸ್ಥೆಯ ಉಚಿತ ಹಾಸ್ಟೆಲ್‌ ಸಿಕ್ಕಿರುವುದು ಹಾಗೂ ಈಗ ಈ ವಿದ್ಯಾರ್ಥಿವೇತನ ದೊರೆತಿರುವುದು ನನ್ನ ಓದುವ ಆಸೆಗೆ ಒತ್ತಾಸೆ ನೀಡಿವೆ’ ಎಂದ ಪಲ್ಲವಿ ಪಿ. ಕುಂಬಾರ್ ಅವರ ಮಾತಿನಲ್ಲಿ ₹25 ಸಾವಿರ ಮೊತ್ತದ ವಿದ್ಯಾರ್ಥಿ ವೇತನ ಪಡೆದ ಖುಷಿ ತುಂಬಿತ್ತು.

‘ಹೆಚ್ಚು ಶುಲ್ಕವಾದರೂ ಪರವಾಗಿಲ್ಲ, ಮಗಳಿಗೆ ಉತ್ತಮ ಶಿಕ್ಷಣ ಸಿಗಬೇಕು ಎಂಬ ಕನಸಿನೊಂದಿಗೆ ಪಿ.ಇ.ಎಸ್‌. ಕಾಲೇಜಿಗೆ ಸೇರಿಸಿದ್ದಾರೆ. ವಿದ್ಯಾರ್ಥಿವೇತನದಿಂದ ಅವರಿಗೆ ಒಂದಿಷ್ಟು ಒತ್ತಡ ಕಡಿಮೆ ಆಗುತ್ತದೆ. ಎಂಜಿನಿಯರಿಂಗ್‌ನಲ್ಲೂ ಹೆಚ್ಚಿನ ಅಂಕ ಪಡೆಯುವ ಗುರಿ ಇಟ್ಟುಕೊಂಡಿದ್ದೇನೆ’ ಎಂದು ತುಮಕೂರಿನ ಎಂ.ಎನ್‌. ವಿನುತಾ ತಿಳಿಸಿದರು.

ಭಾರತೀಯ ವಿಜ್ಞಾನ ಸಂಸ್ಥೆಯ ಗೌರವ ಪ್ರಾಧ್ಯಾಪಕ ಪ್ರೊ.ಎಂ.ಕೆ.ಸೂರಪ್ಪ, ‘ನಮ್ಮ ದೇಶದಲ್ಲಿ ಅನೇಕ ಸಮಸ್ಯೆಗಳಿವೆ. ಅದನ್ನೇ ವಿದ್ಯಾರ್ಥಿಗಳು ಅವಕಾಶವೆಂದು ಭಾವಿಸಿ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ದಾರಿಯ ಬಗ್ಗೆ ಚಿಂತಿಸಬೇಕು. ಯುವ ಚಿಂತನೆಗಳು ನಮ್ಮ ದೇಶಕ್ಕೆ ಅಗತ್ಯವಿದೆ’ ಎಂದರು.

ಗದಗ ಜಿಲ್ಲೆಯ ದಿಂಗಾಲೇಶ್ವರ ಮಠದ ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿದರು. ಪಿಯುಸಿ, ಪದವಿ ಹಾಗೂ ಸ್ನಾತಕೋತ್ತರ ಪದವಿಗಳಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.

ವಿದ್ಯಾರ್ಥಿವೇತನ ಪಡೆದವರು

81 ವಿದ್ಯಾರ್ಥಿನಿಯರು

101 ವಿದ್ಯಾರ್ಥಿಗಳು

20.15 ಲಕ್ಷ ವಿದ್ಯಾರ್ಥಿವೇತನದ ಒಟ್ಟು ಮೊತ್ತ

ಪ್ರತಿಕ್ರಿಯಿಸಿ (+)