ಮಂಗಳವಾರ, ಡಿಸೆಂಬರ್ 10, 2019
20 °C

ಆರ್‌ಎಸ್‌ಎಸ್‌ ಕೇವಲ ಮೂರು ದಿನಗಳಲ್ಲಿ ’ಸೇನೆ’ ಸಜ್ಜುಗೊಳಿಸಬಲ್ಲದು: ಮೋಹನ್ ಭಾಗವತ್

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಆರ್‌ಎಸ್‌ಎಸ್‌ ಕೇವಲ ಮೂರು ದಿನಗಳಲ್ಲಿ ’ಸೇನೆ’ ಸಜ್ಜುಗೊಳಿಸಬಲ್ಲದು: ಮೋಹನ್ ಭಾಗವತ್

ನವದೆಹಲಿ: ಅಗತ್ಯವಿದ್ದಲ್ಲಿ ಕೇವಲ ಮೂರು ದಿನಗಳಲ್ಲಿ ’ಸೇನೆ’ ಸಜ್ಜುಗೊಳಿಸಬಲ್ಲ ಸಾಮರ್ಥ್ಯವನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್‌) ಹೊಂದಿದೆ ಎಂದು ಸಂಘಟನೆಯ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

10 ದಿನಗಳ ಬಿಹಾರ ಪ್ರವಾಸದಲ್ಲಿರುವ ಭಾಗವತ್‌, ಇಲ್ಲಿನ ಮುಜಾಫಿರ್‌ ನಗರದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಸ್ವಯಂಸೇವಕರನ್ನು ಉದ್ದೇಶಿಸಿ ಮಾತನಾಡಿದರು.

‘ಭಾರತೀಯ ಸೇನೆ ಸೇನಾ ಸಿಬ್ಬಂದಿಯನ್ನು ಸಿದ್ಧಗೊಳಿಸಲು 6–7 ತಿಂಗಳ ಕಾಲಾವಕಾಶ ತೆಗೆದುಕೊಳ್ಳುತ್ತದೆ. ಈ ಕೆಲಸವನ್ನು ಆರ್‌ಎಸ್‌ಎಸ್‌ ಕೇವಲ ಮೂರು ದಿನಗಳಲ್ಲಿ ಮಾಡಬಲ್ಲದು. ಇದು ನಮ್ಮ ಸಾಮರ್ಥ್ಯ. ದೇಶಕ್ಕೆ ಕಠಿಣ ಪರಿಸ್ಥಿತಿ ಎದುರಾಗಾದ ಸಂವಿಧಾನವು ಅವಕಾಶ ಕಲ್ಪಿಸಿದಲ್ಲಿ ಸ್ವಯಂ ಸೇವಕರು ಮುಂದೆ ನಿಂತು ಹೋರಾಟ ನಡೆಸಬಲ್ಲರು’ ಎಂದಿದ್ದಾರೆ.

ನಮ್ಮದು ಸೇನೆ ಅಥವಾ ಅರೆ ಸೇನಾ ಪಡೆಯಲ್ಲ ಎಂದು ಹೇಳಿರುವ ಅವರು, ‘ನಮ್ಮದು ಪರಿವಾರದ ಸಂಘಟನೆ. ಸೇನೆಯಲ್ಲಿರುವ ಶಿಸ್ತು ನಮ್ಮಲ್ಲಿದೆ ಮತ್ತು ಸೇನೆಯಂತೆಯೇ ಸನ್ನದ್ಧರಾಗಿದ್ದೇವೆ. ತುರ್ತು ಸಂದರ್ಭಗಳಲ್ಲಿ ದೇಶಕ್ಕಾಗಿ ಸಂತಸದಿಂದ ಪ್ರಾಣ ತ್ಯಾಗ ಮಾಡಲು ಆರ್‌ಎಸ್‌ಎಸ್‌ ಸ್ವಯಂ ಸೇವಕರು ಸಿದ್ಧರಿದ್ದಾರೆ’ ಎಂದಿದ್ದಾರೆ.

‘ಭಾರತ ಶಕ್ತಿಶಾಲಿ ಹಿಂದೂ ರಾಷ್ಟ್ರವಾಗುವ ದಿನ ಆರ್‌ಎಸ್‌ಎಸ್‌ನ ಅವಶ್ಯಕತೆ ಇರುವುದಿಲ್ಲ. ನಂತರ ಸಂಘದ ಸದಸ್ಯರು ಸಾಮಾನ್ಯ ಸಭೆಗಳನ್ನು ನಡೆಸಲಿದ್ದಾರೆ. ಪ್ರತಿದಿನ ನಡೆಯುವ ಶಾಖೆಗಳಿಗೆ ಪ್ರತಿಯೊಬ್ಬ ಭಾರತೀಯನೂ ಹಾಜರಾಗಬೇಕು. ಪ್ರತಿದಿನ ಸಾಧ್ಯವಾಗದಿದ್ದರೆ ತಿಂಗಳಿಗೆ ಒಮ್ಮೆಯಾದರೂ ಭಾಗವಹಿಸಹುದು. ಹೆಚ್ಚಿನ ಸಮಯವಿದ್ದರೆ ಸಂಘಟನೆಯ ಆರು ಮೂಲಭೂತ ತತ್ವಗಳನ್ನು ಅನುಸರಿಸಬಹುದು’ ಎಂದು ಹೇಳಿದರು. 

ಈ ಹೇಳಿಕೆಗೆ ಬಿಹಾರ ವಿರೋಧ ಪಕ್ಷ ರಾಷ್ಟ್ರೀಯ ಜನತಾ ದಳ ಆಕ್ಷೇಪ ವ್ಯಕ್ತಪಡಿಸಿದೆ. ‘ದೇಶಕ್ಕಾಗಿ ಅಪಾರ ತ್ಯಾಗಗಳನ್ನು ಮಾಡಿರುವ ಭಾರತೀಯ ಸೇನೆ ಅತ್ಯಂತ ಗೌರವಯುತವಾದುದ್ದು. ಆದರೆ ಆರ್‌ಎಸ್‌ಎಸ್‌ ಸಾಮರ್ಥ್ಯ ಹೆಚ್ಚು ಎನ್ನುವ ಮೂಲಕ ಸೇನೆಯ ಸಾಮರ್ಥ್ಯವನ್ನು ಭಾಗವತ್‌ ಅಲ್ಲಗಳೆದಿದ್ದಾರೆ. ತಕ್ಷಣೆವೇ ತಮ್ಮ ಮಾತಿಗೆ ಕ್ಷಮೆಯಾಚಿಸಬೇಕು’ ಎಂದು ಪಕ್ಷದ ವಕ್ತಾರ ಮೃತ್ಯಂಜಯ ತಿವಾರಿ ಆಗ್ರಹಿಸಿದ್ದಾರೆ.

ಭಾಗವತ್‌ ಹೇಳಿಕೆಗೆ ಸಾಮಾಜಿಕ ಮಾಧ್ಯಮಗಳಲ್ಲೂ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, #ApologiseRSS ಹ್ಯಾಷ್‌ ಟ್ಯಾಗ್‌ ಟ್ವಿಟರ್‌ನಲ್ಲಿ ಟ್ರೆಂಡ್‌ ಆಗಿದೆ.

ಸದ್ಯ ಈ ಹೇಳಿಕೆ ರಾಜಕೀಯ ವಲಯದಲ್ಲಿ ತೀವ್ರ ವಿವಾದ ಹುಟ್ಟುಹಾಕಿದೆ. ಆದರೆ, ಹೇಳಿಕೆಯನ್ನು ತಿರುಚಲಾಗಿದೆ ಎಂದಿರುವ ಆರ್‌ಎಸ್‌ಎಸ್‌ ಮೋಹನ್‌ ಭಾಗವತ್‌ ಅವರ ಭಾಷಣದ ವಿಡಿಯೊ ತುಣಕನ್ನು ಪ್ರಕಟಿಸಿದೆ. ‘ಇಲ್ಲಿ ಭಾರತೀಯ ಸೇನೆ ಮತ್ತು ಆರ್‌ಎಸ್‌ಎಸ್‌ ಸ್ವಯಂ ಸೇವಕರ ನಡುವೆ ಹೋಲಿಕೆ ಮಾಡಲಾಗಿಲ್ಲ’ ಎಂದು ಅಖಿಲ ಭಾರತೀಯ ಪ್ರಚಾರ್ ಪ್ರಮುಖ ಡಾ.ಮನಮೋಹನ್‌ ವೈದ್ಯ ಹೇಳಿಕೆ ನೀಡಿದ್ದಾರೆ.

ಪ್ರತಿಕ್ರಿಯಿಸಿ (+)