ಮಂಗಳವಾರ, ಡಿಸೆಂಬರ್ 10, 2019
20 °C

ರೈತರ ಮೇಲೆ ಎನ್‌ಡಿಎ ಅತಿಕ್ರಮಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೈತರ ಮೇಲೆ ಎನ್‌ಡಿಎ ಅತಿಕ್ರಮಣ

ರಾಯಚೂರು: ಕೇಂದ್ರದಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ರೈತರ ರಕ್ಷಣೆಗಾಗಿ ಬೆಂಬಲ ಬೆಲೆ ನೀಡುವುದು ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೊಳಿಸಲಾಗಿತ್ತು. ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ರೈತರನ್ನು ರಕ್ಷಣೆ ಮಾಡುವ ಯೋಜನೆ ತೆಗೆದುಹಾಕಿ, ರೈತರ ಮೇಲೆ ಅತಿಕ್ರಮಣ ಮಾಡುವ ನೀತಿ ರೂಪಿಸುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದರು. ಸಿಂಧನೂರಿನಲ್ಲಿ ಜನಾಶೀರ್ವಾದ ಯಾತ್ರೆಯ ನಿಮಿತ್ತ ರೈತರೊಂದಿಗೆ ಸಂವಾದ ಭಾನುವಾರ ನಡೆಸಿದರು.

ರೈತರು ನಿಯತ್ತಿನಿಂದ ಸಂಪಾದಿಸಿದ್ದ ಹಣವನ್ನು ಕಸಿದುಕೊಂಡು ಪರೋಕ್ಷವಾಗಿ ಉದ್ಯಮಿಗಳಿಗೆ ಲಾಭ ಮಾಡಲು ನೋಟು ಅಮಾನ್ಯೀಕರಣ ಜಾರಿಗೊಳಿಸಿದರು. ಇದರಿಂದ ರೈತರು ಹಾಗೂ ಬಡವರು ಬ್ಯಾಂಕುಗಳ ಎದುರು ಸರದಿ ಸಾಲಿನಲ್ಲಿ ನಿಲ್ಲಬೇಕಾಯಿತು. ಆದರೆ, ಉದ್ಯಮಿಗಳು ಹಿಂಬಾಗಿಲಿನಿಂದ ಕಪ್ಪು ಹಣವನ್ನು ಕಾನೂನು ಬದ್ಧ ಮಾಡಿಕೊಂಡರು ಎಂದು ಆರೋಪಿಸಿದರು.

ದೇಶದಲ್ಲಿ ರೈತರು, ಉದ್ಯಮಿ ಪತಿಗಳು, ವ್ಯಾಪಾರಿಗಳು ಸೇರಿದಂತೆ ಎಲ್ಲರಿಗೂ ಸಮಸ್ಯೆಗಳಿವೆ. ಉದ್ಯಮಿಗಳ ಸಮಸ್ಯೆ ಪರಿಹಾರಕ್ಕೆ ಎನ್‌ಡಿಎ ಸರ್ಕಾರ ಒಂದು ವರ್ಷದಲ್ಲಿ ₹1.5 ಲಕ್ಷ ಕೋಟಿ ಸಾಲ ಮನ್ನಾ ಮಾಡಿದೆ. ಆದರೆ, ರೈತರ ಸಾಲ ಮನ್ನಾ ಮಾಡುತ್ತಿಲ್ಲ. ರೈತರ ಸಾಲ ಮನ್ನಾ ಮಾಡಿದರೆ ಪ್ರತಿಕೂಲ ಪರಿಣಾಮವಾಗುತ್ತದೆ ಎನ್ನುತ್ತಾರೆ. ಆದರೆ, ಉದ್ಯಮಿಪತಿಗಳ ವಿಷಯದಲ್ಲಿ ಆ ರೀತಿ ನಡೆದುಕೊಳ್ಳುತ್ತಿಲ್ಲ ಎಂದರು.

ರೈತರ ಸಾಲ ಏಕೆ ಮನ್ನಾ ಮಾಡುವುದಿಲ್ಲ ಎಂದು ಪ್ರಧಾನಿ ಕಚೇರಿಗೆ ನೇರವಾಗಿ ಹೋಗಿ ಪ್ರಶ್ನಿಸಿದರೂ ಉತ್ತರ ಕೊಡಲಿಲ್ಲ. ಅದೇ ಪ್ರಶ್ನೆಯನ್ನು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪಂಜಾಬ್‌ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ಅವರಿಗೆ ಕೇಳಿದೆ, ಹತ್ತು ದಿನಗಳೊಳಗೆ ಸಾಲಮನ್ನಾ ಘೋಷಿಸಿದರು. ಅವರಿಗೆ ಸಾಧ್ಯವಾಗಿದ್ದು, ಕೇಂದ್ರ ಸರ್ಕಾರಕ್ಕೆ ಏಕೆ ಸಾಧ್ಯವಾಗಲಿಲ್ಲ ಎಂದು ಪ್ರಶ್ನಿಸಿದರು.

ಯುಪಿಎ ಸರ್ಕಾರದ ಅವಧಿಯಲ್ಲಿ ₹70 ಸಾವಿರ ಕೋಟಿ ಸಾಲ ಮನ್ನಾ ಮಾಡಲಾಗಿತ್ತು. ಈಗ ರೈತರು ಸಂಕಷ್ಟದಲ್ಲಿದ್ದು, ನ್ಯಾಯ ಕೇಳುತ್ತಿದ್ದಾರೆ. ಆದರೆ, ಕೇಂದ್ರ ಸರ್ಕಾರ ನ್ಯಾಯ ಕೊಡುತ್ತಿಲ್ಲ. ಕಾಂಗ್ರೆಸ್‌ ಪಕ್ಷ ರೈತರನ್ನು ದೇಶದ ಬೆನ್ನೆಲುಬು ಎಂದು ಪರಿಗಣಿಸಿತ್ತು. ಕೇಂದ್ರದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದರೆ ರೈತರ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಮದ್ಯ ನಿಷೇಧದ ಬಗ್ಗೆ ಹಲವು ರಾಜ್ಯಗಳಲ್ಲಿ ಆಗಿರುವ ಪರಿಣಾಮಗಳನ್ನು ಅಧ್ಯಯನ ಮಾಡಲಾಗಿದೆ. ಮಹಾರಾಷ್ಟ್ರ, ಆಂಧ್ರಪ್ರದೇಶ, ಕೇರಳ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಮದ್ಯ ನೀಷೇಧ ಮಾಡಿ, ಪುನಃ ಜಾರಿಗೊಳಿಸಲಾಗಿದೆ. ಒಂದು ರಾಜ್ಯ ಮದ್ಯ ನಿಷೇಧಿಸಿದರೆ ಪಕ್ಕದ ರಾಜ್ಯದಿಂದ ಕಾನೂನು ಬಾಹಿರ ಮದ್ಯ ಸರಬರಾಜು ಆಗುತ್ತದೆ. ಗುಜರಾತಿನಲ್ಲಿ ಅದೇ ಪರಿಸ್ಥಿತಿ ಎದುರಾಗಿದೆ. ಆದ್ದರಿಂದ ಮದ್ಯ ನಿಷೇಧ ವಿಷಯದಲ್ಲಿ ರಾಷ್ಟ್ರೀಯ ನೀತಿ ಜಾರಿಯಾಗಬೇಕು ಎಂದು ಹೇಳಿದರು.

ನಾರಾಯಣ ಪುರ ಬಲದಂಡೆ ಕಾಲುವೆಯ ಆಧುನೀಕರಣಕ್ಕೆ ಈಗಾಗಲೇ ಡಿಪಿಆರ್ ಸಿದ್ದವಾಗಿದೆ. ಈಗ ರೈತರು ಬಳಕೆ ಮಾಡುವ ಪಂಪ್‌ಸೆಟ್‌ಗಳಿಗೆ ಏಳು ಗಂಟೆ ವಿದ್ಯುತ್‌ ಪೂರೈಸಲಾಗುತ್ತಿದೆ. ಇದನ್ನು ಇನಷ್ಟು ಹೆಚ್ಚಿಸಲು ಕ್ರಮ ಜರುಗಿಸಲಾಗುವುದು ಎಂದರು.

ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ, ಸಂಸದರಾದ ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ, ಕೆ.ರೆಹಮಾನ್‌ ಖಾನ್‌, ಬಿ.ಕೆ.ಹರಿಪ್ರಸಾದ್, ಕೆ.ಎಚ್.ಮುನಿಯಪ್ಪ, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್‌, ಎಸ್‌.ಆರ್.ಪಾಟೀಲ್‌, ಸಚಿವರಾದ ಎಚ್‌.ಎಂ.ರೇವಣ್ಣ, ಡಿ.ಕೆ.ಶಿವಕುಮಾರ್ ಇದ್ದರು.

ಕಪ್ಪು ಬಾವುಟ ಪ್ರದರ್ಶನ

ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗೊಳಿಸಲು ಒತ್ತಾಯಿಸಿ ದಲಿತಪರ ಸಂಘಟನೆಗಳ ಕಾರ್ಯಕರ್ತರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆಗಮಿಸಿದ ಬಸ್ಸಿಗೆ ಕಪ್ಪು ಬಾವುಟ ಪ್ರದರ್ಶಿಸಿ ಬಸ್‌ ತಡೆದು ನಿಲ್ಲಿಸಿದರು. ಕೂಡಲೇ ಪೊಲೀಸರು ಧಾವಿಸಿ ಕಾರ್ಯಕರ್ತರನ್ನು ಚದುರಿಸಿದರು. ರಾಹುಲ್ ಗಾಂಧಿ ವಿರುದ್ಧ ಘೋಷಣೆ ಕೂಗಿದ ಕಾರ್ಯಕರ್ತರು ಬಸ್‌ನ ಮೇಲೆ ಕೆಲವು ಚಪ್ಪಲಿ ತೂರಿದ ಘಟನೆ ನಡೆಯಿತು.

* * 

ತುಂಗಭದ್ರ ಆಣೆಕಟ್ಟಿನಲ್ಲಿ ಹೂಳು ತುಂಬಿರುವುದರಿಂದ ಅದಕ್ಕೆ ಪರ್ಯಾಯವಾಗಿ ಫ್ಲಡ್‌ ಫ್ಲೋ ಕೆನಾಲ್‌ ನಿರ್ಮಾಣವನ್ನು ಗಂಭೀರವಾಗಿ ಪರಿಗಣಿಸಿ ಜಾರಿಗೊಳಿಸುತ್ತೇವೆ. 

ಸಿದ್ದರಾಮಯ್ಯ, ಮುಖ್ಯಮಂತ್ರಿ

ಪ್ರತಿಕ್ರಿಯಿಸಿ (+)