ಗುರುವಾರ , ಡಿಸೆಂಬರ್ 12, 2019
25 °C

ವಾಹನ ದಟ್ಟಣೆ ಕೇಂದ್ರಗಳಾದ ವೃತ್ತಗಳು

ನಾಗರಾಜ ಚಿನಗುಂಡಿ Updated:

ಅಕ್ಷರ ಗಾತ್ರ : | |

ವಾಹನ ದಟ್ಟಣೆ ಕೇಂದ್ರಗಳಾದ ವೃತ್ತಗಳು

ರಾಯಚೂರು: ದಿನದ 24 ಗಂಟೆಯೂ ವಾಹನಗಳು ಸಂಚರಿಸುವ ನಗರ ಮಧ್ಯಭಾಗದ ಹಗರಿ–ಜೆಡಚೆರ್ಲಾ ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಎಂಟು ವೃತ್ತ (ಸರ್ಕಲ್‌)ಗಳಿದ್ದು, ಪ್ರತಿದಿನವೂ ಈ ವೃತ್ತಗಳಲ್ಲಿ ವಾಹನದಟ್ಟಣೆ ಉಂಟಾಗುತ್ತದೆ. ಆದರೆ, ವಾಹನಗಳ ದಟ್ಟಣೆ ನಿಯಂತ್ರಿಸಲು ಬಹುತೇಕ ವೃತ್ತಗಳಲ್ಲಿ ಪೊಲೀಸರೆ ಇರುವುದಿಲ್ಲ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಯರಮರಸ್‌ ಸಮೀಪ ಬೈಪಾಸ್‌ ವೃತ್ತ, ನಾರದಗಡ್ಡೆ ಮಾರ್ಗ, ಗಂಜ್‌ವೃತ್ತ, ಮನ್ಸಲಾಪುರ ರಸ್ತೆ, ಟಿಪ್ಪು ಸುಲ್ತಾನ್‌ ಸರ್ಕಲ್‌, ಕೋರ್ಟ್‌ ಸರ್ಕಲ್‌, ಬಸವೇಶ್ವರ ವೃತ್ತ, ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತ, ಡಾ.ಬಾಬು ಜಗಜೀವನರಾಮ ವೃತ್ತ, ಆರ್‌ಟಿಒ ಕ್ರಾಸ್‌ನಲ್ಲಿ ವಾಹನಗಳ ದಟ್ಟಣೆ ಸಮಾನ್ಯವಾಗಿ ಕಂಡು ಬರುತ್ತದೆ. ಅಡ್ಡ ರಸ್ತೆಗಳಿಂದ ಬರುವ ವಾಹನಗಳು ಹಾಗೂ ರಾಷ್ಟೀಯ ಹೆದ್ದಾರಿಯಲ್ಲಿ ಸಂಚರಿಸುವ ಬೃಹತ್‌ ಲಾರಿಗಳಿಂದಾಗಿ ಬೈಕ್‌, ಕಾರು ಹಾಗೂ ಇನ್ನಿತರೆ ವಾಹನಗಳ ಸವಾರರು ಸುಗಮ ಸಂಚಾರಕ್ಕೆ ಕಾದು ನಿಲ್ಲುವ ಪರಿಸ್ಥಿತಿ ಪ್ರತಿನಿತ್ಯ ಕಾಣುತ್ತದೆ.

ಮುಖ್ಯವಾಗಿ ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತ ಹಾಗೂ ಡಾ.ಬಾಬು ಜಗಜೀವನರಾಂ ವೃತ್ತಗಳಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಾರೆ. ರಸ್ತೆ ಕಾಮಗಾರಿ ನಡೆಯುತ್ತಿರುವುದರಿಂದ ವಾಹನಗಳು ಅಡ್ಡಾದಿಡ್ಡಿ ನುಗ್ಗುತ್ತವೆ. ರಸ್ತೆಯಲ್ಲಿ ಬೈಕ್‌ ಹಾಗೂ ಕಾರುಗಳನ್ನು ನಿಲುಗಡೆ ಮಾಡುವವರಿಂದಲೂ ಸಮಸ್ಯೆ ಸೃಷ್ಟಿಯಾಗುತ್ತಿದೆ. ವಾಹನ ನಿಲುಗಡೆ ಮಾಡಿದವರನ್ನು ಹುಡುಕಿ ವಾಹನ ಪಕ್ಕಕ್ಕೆ ತೆಗೆದುಹಾಕಿ, ವಾಹನಗಳ ಸಂಚಾರಕ್ಕೆ ಪೊಲೀಸರು ಅನುವು ಮಾಡುತ್ತಾರೆ.

ಬಸವನಭಾವಿ ವೃತ್ತ, ಪಟೇಲ್‌ ಚೌಕ್‌, ಶಶಿಮಹಲ್‌, ಆದರ್ಶ ವೇಬ್ರಿಡ್ಜ್‌, ಜೈನ್‌ ಮಂದಿರ ರಸ್ತೆ, ಪೆಟ್ಲಾಬುರ್ಜ್‌, ಪರಿಹರ ರಸ್ತೆ, ಚಂದ್ರಕಾಂತ ರಸ್ತೆ, ಗೋಶಾಲಾ ರಸ್ತೆ, ಅರಬವಾಡಾ ಸರ್ಕಲ್‌, ಕೇಂದ್ರ ಬಸ್‌ ನಿಲ್ದಾಣದ ಎದುರು ಸಂಚಾರ ನಿಯಂತ್ರಣಕ್ಕೆ ಪೊಲೀಸರನ್ನು ನಿಯೋಜಿಸುತ್ತಿಲ್ಲ. ಕೇವಲ ವಾಹನಗಳ ಸಮಸ್ಯೆ ಆಗುವುದಿಲ್ಲ; ಯಾವುದೋ ವಿಷಯಕ್ಕೆ ವಾಹನ ಅಥವಾ ಬೈಕ್‌ ಸವಾರರು ರಸ್ತೆಯಲ್ಲೆ ಪರಸ್ಪರ ಜಗಳವಾಡುತ್ತಾ ನಿಲ್ಲುತ್ತಾರೆ. ಇಂಥವರನ್ನು ರಸ್ತೆ ಪಕ್ಕಕ್ಕೆ ತಂದು, ಸಂಚಾರಕ್ಕೆ ಅನುವು ಮಾಡಿಕೊಡುವುದಕ್ಕೂ ಪೊಲೀಸರು ಬೇಕಾಗುತ್ತದೆ.

‘ಸಂಚಾರ ಠಾಣೆಯಲ್ಲಿ ಸದ್ಯ 32 ಪೊಲೀಸರು ಕರ್ತವ್ಯದಲ್ಲಿದ್ದಾರೆ. ಲಭ್ಯವಿರುವ ಕಾನ್‌ಸ್ಟೇಬಲ್‌ ಹಾಗೂ ಎಎಸ್‌ಐಗಳನ್ನು ಬಳಸಿಕೊಂಡು 12 ವೃತ್ತಗಳಲ್ಲಿ ಸಂಚಾರ ನಿಯಂತ್ರಣ ಮಾಡಿಸುತ್ತಿದ್ದೇವೆ. ಬೇರೆ ವೃತ್ತಗಳಲ್ಲಿ ಸಂಚಾರ ದಟ್ಟಣೆ ಆಗಿದ್ದರೆ ಹೋಗಿ ಪರಿಹಾರ ಮಾಡುತ್ತೇವೆ. ಎಲ್ಲ ಕಡೆಗೆ ಪೊಲೀಸರನ್ನು ನಿಯೋಜಿಸುವುದು ಸದ್ಯಕ್ಕೆ ಸಾಧ್ಯವಾಗುತ್ತಿಲ್ಲ’ ಎನ್ನುತ್ತಾರೆ ಸಂಚಾರ ಠಾಣೆಯ ಪಿಎಸ್‌ಐ ಸಿದ್ದರಾಮೇಶ್ವರ ಗಡೇದ ಅವರು.

‘ನಗರದಲ್ಲಿ ರಸ್ತೆಗಳು ಕಿರಿದಾಗಿವೆ. ವಾಹನಗಳ ಸಂಖ್ಯೆ ವಿಪರೀತ ಹೆಚ್ಚಾಗುತ್ತಿದೆ. ಸಂಚಾರ ಪೊಲೀಸರಿದ್ದರೆ ಮಾತ್ರ ಎಲ್ಲರೂ ಸುಗಮವಾಗಿ ಒಂದು ಕಡೆಯಿಂದ ಇನ್ನೊಂದು ಹೋಗಿ ತಲುಪಬಹುದು. ವಾಹನ ನಿಯಂತ್ರಣ ಮಾಡದಿದ್ದರೆ ತುಂಬಾ ಕಷ್ಟವಾಗುತ್ತದೆ. ನಗರದ ಎಲ್ಲ ವೃತ್ತಗಳಲ್ಲಿ ಸಂಚಾರ ಪೊಲೀಸರನ್ನು ಕಡ್ಡಾಯವಾಗಿ ನಿಯೋಜಿಸಬೇಕು’ ಎನ್ನುತ್ತಾರೆ ನಿಜಲಿಂಗಪ್ಪ ಕಾಲೋನಿ ನಿವಾಸಿ ರಾಜೇಶ ಹಿರೇಮಠ.

* * 

ಸಂಚಾರ ಠಾಣೆಯಲ್ಲಿ ಕೆಲವು ಕಾನ್‌ಸ್ಟೆಬಲ್‌ ಹುದ್ದೆಗಳು ಖಾಲಿ ಉಳಿದಿವೆ. ಲಭ್ಯವಿರುವ ಕಾನ್‌ಸ್ಟೆಬಲ್‌ ಹಾಗೂ ಎಎಸ್‌ಐಗಳನ್ನು ಸಂಚಾರ ನಿಯಂತ್ರಣಕ್ಕೆ ನಿಯೋಜಿಸಲಾಗಿದೆ.

ಸಿದ್ದರಾಮೇಶ್ವರ ಗಡೇದ ಪಿಎಸ್‌ಐ, ಸಂಚಾರ ಪೊಲೀಸ್‌ ಠಾಣೆ 

ಪ್ರತಿಕ್ರಿಯಿಸಿ (+)