ಭಾನುವಾರ, ಡಿಸೆಂಬರ್ 8, 2019
24 °C

ಫುಟ್‌ಪಾತ್ ಮೇಲೆ ಶೌಚಾಲಯ: ಚರ್ಚೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಫುಟ್‌ಪಾತ್ ಮೇಲೆ ಶೌಚಾಲಯ: ಚರ್ಚೆ

ರಾಮನಗರ: ಫುಟ್‌ಪಾತ್‌ ಅತಿಕ್ರಮಣದ ವಿರುದ್ಧ ಸಮರ ಸಾರುವುದಾಗಿ ಹೇಳಿಕೊಂಡಿದ್ದ ನಗರಸಭೆಯು ಸದ್ದಿಲ್ಲದೆ ಸುಮ್ಮನಾಗಿದೆ. ಮತ್ತೊಂದೆಡೆ, ಪಾದಚಾರಿ ಮಾರ್ಗದಲ್ಲಿ ಶೌಚಾಲಯ ನಿರ್ಮಿಸುವ ಮೂಲಕ ತಾನೇ ಸುದ್ದಿಯಾಗುತ್ತಿದೆ.

ನಗರದ ಮಹಾತ್ಮಗಾಂಧಿ ಉದ್ಯಾನದ ಮುಂಭಾಗ ಪಾದಚಾರಿ ಮಾರ್ಗದ ಮೇಲೆ ಶೌಚಾಲಯ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದೆ.  ನಾಲ್ಕಾರು ಜಾಗ ಹುಡುಕಿ ಎಲ್ಲಿಯೂ ಸಿಗದ ಕಾರಣ ಅನಿವಾರ್ಯವಾಗಿ ಪಾದಚಾರಿ ಮಾರ್ಗವನ್ನೇ ಆಯ್ಕೆ ಮಾಡಿಕೊಳ್ಳಲಾಗಿದೆ.

ಉದ್ಯಾನದ ಮುಂಭಾಗದ ಫುಟ್‌ಪಾತ್‌ಗೆ ಹಾಕಲಾಗಿದ್ದ ನೆಲಹಾಸನ್ನು ಕಿತ್ತು ಅಲ್ಲಿ ಶೌಚಾಲಯಕ್ಕೆ ಅಡಿಪಾಯ ಹಾಕಲಾಗುತ್ತಿದೆ. ಸುಮಾರು 8X8 ಅಡಿ ವಿಸ್ತೀರ್ಣದಲ್ಲಿ ನಿರ್ಮಾಣವಾಗುತ್ತಿರುವ ಈ ಶೌಚಾಲಯವು ಸಂಪೂರ್ಣ ಅಂಗವಿಕಲರಿಗೆ ಮೀಸಲಾಗಿರಲಿದೆ. ಏಕಕಾಲದಲ್ಲಿ ನಾಲ್ಕು ಮಂದಿ ಇದನ್ನು ಬಳಕೆ ಮಾಡಬಹುದಾಗಿದೆ.

ಆದರೆ ಖಾಲಿ ನಿವೇಶನ, ಮೈದಾನ ಬಿಟ್ಟು ಪಾದಚಾರಿ ಮಾರ್ಗವನ್ನೇ ಆಯ್ಕೆ ಮಾಡಿಕೊಂಡ ನಗರಸಭೆ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ಷೇಪ ವ್ಯಕ್ತವಾಗಿದೆ.

‘ಸಾರ್ವಜನಿಕರಿಗಾಗಿ ಶೌಚಾಲಯ ನಿರ್ಮಾಣಕ್ಕೆ ನಗರಸಭೆಯು ಮುಂದಾಗಿರುವುದು ಉತ್ತಮ ಕೆಲಸ. ಜನನಿಬಿಡ ಪ್ರದೇಶಗಳಲ್ಲಿಯೇ ಲಭ್ಯವಿರುವ ಸರ್ಕಾರಿ ಜಾಗವನ್ನು ಬಳಸಿಕೊಳ್ಳಬಹುದಿತ್ತು. ಎಲ್ಲವನ್ನೂ ಬಿಟ್ಟು ಪಾದಚಾರಿ ಮಾರ್ಗವನ್ನೇ ಆರಿಸಿಕೊಂಡಿದ್ದು ಏಕೆ?’ ಎಂದು ಸ್ಥಳೀಯರಾದ ಉಮಾಶಂಕರ್ ಎಂಬುವರು ಪ್ರಶ್ನಿಸಿದರು. ‘ದೊಡ್ಡ ದೊಡ್ಡ ನಗರಗಳಲ್ಲಿ ಸ್ಥಳಾವಕಾಶದ ಕೊರತೆಯಿಂದ ಹೀಗೆ ಮಾಡಬಹುದು. ಆದರೆ ರಾಮನಗರದಲ್ಲಿ ಇಷ್ಟೆಲ್ಲ ಜಾಗ ಇರುವುವಾಗ ಹೀಗೆ ಮಾಡುವುದು ಏಕೆ’ ಎಂದರು.

ನಗರಸಭೆ ಸಮರ್ಥನೆ: ಆದರೆ ತನ್ನಕ್ರಮವನ್ನು ನಗರಸಭೆಯು ಸಮರ್ಥಿಸಿಕೊಂಡಿದೆ. ‘ಈಗ ನಿರ್ಮಾಣವಾಗುತ್ತಿರುವ ಶೌಚಾಲಯವು ಅಂಗವಿಕಲರಿಗೆ ಮೀಸಲಾಗಿದೆ. ಅವರ ಓಡಾಟಕ್ಕೆ ಅನುಕೂಲವಾಗುವಂತೆ ರಸ್ತೆ ಪಕ್ಕವೇ ಕಟ್ಟಲಾಗುತ್ತಿದೆ’ ಎಂದು ಪೌರಾಯುಕ್ತ ಕೆ.ಮಾಯಣ್ಣ ಗೌಡ ‘ಪ್ರಜಾವಾಣಿ’ ಗೆ ಪ್ರತಿಕ್ರಿಯಿಸಿದರು.

‘ಮೈಸೂರು, ಬೆಂಗಳೂರಿನಂತಹ ದೊಡ್ಡ ದೊಡ್ಡ ನಗರಗಳಲ್ಲಿಯೂ ಪಾದಚಾರಿ ಮಾರ್ಗಗಳ ಮೇಲೆಯೇ ಶೌಚಾಲಯಗಳಿವೆ. ಜನರ ಅನುಕೂಲಕ್ಕಾಗಿಯೇ ಇವುಗಳನ್ನು ಕಟ್ಟಲಾಗುತ್ತಿದೆ’ ಎಂದು ಸಮರ್ಥಿಸಿಕೊಂಡರು.

ನಡೆಯದ ಕಾರ್ಯಾಚರಣೆ: ನವೆಂಬರ್‌ 30ರಂದು ನಡೆದ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಫುಟ್‌ಪಾತ್‌ ಅತಿಕ್ರಮಣ ವಿಷಯವು ಹೆಚ್ಚು ಚರ್ಚೆಯಾಗಿತ್ತು. ಮುಂದಿನ 15 ದಿನಗಳ ನಂತರ ನಗರಸಭೆಯಿಂದ ಫುಟ್‌ಪಾತ್‌ ತೆರವು ಕಾರ್ಯಾಚರಣೆ ಆರಂಭಿಸಲಾಗುವುದು ಎಂದು ಅಧ್ಯಕ್ಷ ಪಿ. ರವಿಕುಮಾರ್ ಎಚ್ಚರಿಸಿದ್ದರು.

‘ಈ ಸಭೆ ನಡೆದು ಎರಡೂವರೆ ತಿಂಗಳು ಕಳೆಯುತ್ತಿದೆ. ಇಷ್ಟಾದರೂ ತೆರವು ಕಾರ್ಯಾಚರಣೆ ಬಗ್ಗೆ ಸದ್ದಿಲ್ಲದಾಗಿದೆ. ಈ ನಡುವೆ ಫುಟ್‌ಪಾತ್‌ನಲ್ಲಿ ಶೌಚಾಲಯ ನಿರ್ಮಾಣಕ್ಕೆ ಮುಂದಾಗುವ ಮೂಲಕ ಆಡಳಿತ ವರ್ಗವೇ ತಪ್ಪು ಸಂದೇಶ ರವಾನಿಸಿದಂತೆ ಆಗಿದೆ’ ಎಂದು ನಗರಸಭೆ ಸದಸ್ಯ ಆರ್.ಎ. ಮಂಜುನಾಥ್ ಅಸಮಾಧಾನ ವ್ಯಕ್ತಪಡಿಸಿದರು.

‘ಕೆಲವು ಬಲಾಢ್ಯರು ಅಲ್ಲಲ್ಲಿ ಪಾದಚಾರಿ ಮಾರ್ಗ ಅತಿಕ್ರಮಣ ಮಾಡಿಕೊಂಡು ಶೆಲ್ಟರ್‌ ನಿರ್ಮಿಸಿಕೊಂಡಿದ್ದಾರೆ. ಇವುಗಳನ್ನು ತೆರವುಗೊಳಿಸುವಂತೆ ಅಂದಿನ ಸಭೆಯಲ್ಲಿ ಪ್ರಸ್ತಾಪಿಸಿದ್ದೆ. ಅಧ್ಯಕ್ಷರು ನೀಡಿದ್ದ ಭರವಸೆಯಂತೆ ಇನ್ನಾದರೂ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಬೇಕು’ ಎಂದು ಅವರು ಆಗ್ರಹಿಸಿದರು. ಈ ಕುರಿತು ಪ್ರತಿಕ್ರಿಯೆ ಪಡೆಯಲು ನಗರಸಭೆ ಅಧ್ಯಕ್ಷರಾದ ರವಿಕುಮಾರ್ ವರು ಮೊಬೈಲ್ ಸಂಪರ್ಕಕ್ಕೆ ಲಭ್ಯವಾಗಲಿಲ್ಲ.

ಜೀತೇಂದ್ರ.ಆರ್‌

ತೆರವಾಗದ ಶೆಲ್ಟರ್‌

ನಗರಸಭೆಯ ಕಚೇರಿ ಮುಂಭಾಗವೇ ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿಕೊಂಡು ವಾಹನ ನಿಲುಗಡೆಗೆ ಶೆಲ್ಟರ್‌ ನಿರ್ಮಿಸಿಕೊಳ್ಳಲಾಗಿದೆ. ಈ ಬಗ್ಗೆ ಪತ್ರಿಕೆಯಲ್ಲಿ ವರದಿ ಪ್ರಕಟವಾಗಿ, ಸಾರ್ವಜನಿಕ ವಲಯದಲ್ಲಿ ಚರ್ಚೆಯಾದರೂ ಸಂಬಂಧಿಸಿದವರು ಮಾತ್ರ ಜಾಣ ಕುರುಡು ಪ್ರದರ್ಶಿಸತೊಡಗಿದ್ದಾರೆ. ಇಂದಿಗೂ ಈ ಶೆಲ್ಟರ್‌ ಹಾಗೆಯೇ ಇದೆ.

* *

ಟ್‌ಪಾತ್‌ ತೆರವು ಕಾರ್ಯಾಚರಣೆ ನಡೆಸುವುದಾಗಿ ಹೇಳಿ ಎರಡು ತಿಂಗಳೇ ಕಳೆದಿದೆ. ಅಧ್ಯಕ್ಷರು, ಅಧಿಕಾರಿಗಳು ಸುಮ್ಮನಾಗಿರುವುದು ಸರಿಯಲ್ಲ

ಆರ್.ಎ. ಮಂಜುನಾಥ್‌

ನಗರಸಭೆ ಸದಸ್ಯ

ಪ್ರತಿಕ್ರಿಯಿಸಿ (+)