ಡಿ.ಸಿ- ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಮಧ್ಯೆ ವಾಗ್ವಾದ:

7

ಡಿ.ಸಿ- ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಮಧ್ಯೆ ವಾಗ್ವಾದ:

Published:
Updated:

ಉಡುಪಿ: ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು ಮತ್ತು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರ ಮಧ್ಯೆ ಕೆಲ ದಿನಗಳ ಹಿಂದೆ ವಾಗ್ವಾದವಾಗಿದ್ದ ವಿಷಯ ತಡವಾಗಿ ಬೆಳಕಿಗೆ ಬಂದಿದೆ.

‘ಮಲ್ಪೆಯಲ್ಲಿ ಕೆಲ ದಿನಗಳ ಹಿಂದೆ ಏರ್ಪಡಿಸಿದ್ದ ‘ಉಡುಪಿ ಪರ್ಬ’ ಕಾರ್ಯಕ್ರಮದ ದಿನ ಇಬ್ಬರ ಮಧ್ಯೆ ವಾಗ್ವಾದವಾಗಿದ್ದು ನಿಜ. ಅಂದು ಸಂಜೆ 6 ಗಂಟೆಗೆ ಕಾರ್ಯಕ್ರಮ ನಿಗದಿಯಾಗಿದ್ದ ಕಾರಣ ಸರಿಯಾದ ಸಮಯಕ್ಕೆ ಅಲ್ಲಿಗೆ ಹೋಗಿದ್ದೆ. ಆದರೆ 7.30 ಆದರೂ ಆರಂಭವಾಗಲಿಲ್ಲ. ಇನ್ನೊಂದು ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿದ್ದ ಕಾರಣ ಅಲ್ಲಿಂದ ಹೋಗುವ ದಾರಿ ಮಧ್ಯೆ ಡಿ.ಸಿ. ಸಿಕ್ಕರು. ಕಾರ್ಯಕ್ರಮ ತಡವಾದ ಬಗ್ಗೆ ಹಾಗೂ ಎಷ್ಟು ಗಂಟೆಗೆ ಆರಂಭವಾಗಲಿದೆ ಎಂದು ಅವರನ್ನು ಪ್ರಶ್ನಿಸಿದ್ದೆ’ ಎಂದು ದಿನಕರ ಬಾಬು ‘ಪ್ರಜಾವಾಣಿ’ಗೆ ತಿಳಿಸಿದರು.

‘ಅದಾದ ಕೆಲ ಹೊತ್ತಿನ ನಂತರ ಕರೆ ಮಾಡಿದ ಜಿಲ್ಲಾಧಿಕಾರಿ ಅವರು, 'ನಾನು ಜೋರಾಗಿ ಮಾತನಾಡಿದೆ' ಎಂದು ಆರೋಪಿಸಿದರು. ‘ನಿಮ್ಮನ್ನು ನೋಡಿಕೊಳ್ಳುತ್ತೇನೆ’ ಎಂದರು. ಅದಕ್ಕೆ ಪ್ರತಿಕ್ರಿಯೆಯಾಗಿ ‘ನಾನೂ ಸಹ ನಿಮ್ಮನ್ನು ನೋಡಿಕೊಳ್ಳುತ್ತೇನೆ’ ಎಂದು ಹೇಳಿದೆ ಎಂದರು.

‘ಆ ವಿಷಯ ತಿಳಿದ ಅಂದಿನ ಎಸ್ಪಿ ಸಂಜೀವ್ ಪಾಟೀಲ್ ಅವರು ಕರೆ ಮಾಡಿ ಮಾತನಾಡಿದರು. ‘ಎಲ್ಲವನ್ನು ಸರಿ ಮಾಡುವ’ ಎಂದರು. ಡಿವೈಎಸ್ಪಿ ಕುಮಾರಸ್ವಾಮಿ ಅವರು ಸಹ ಕರೆ ಮಾಡಿ, 'ಮನೆಗೆ ಬರುತ್ತೇನೆ, ಮಾತನಾಡುವ' ಎಂದರು. ‘ನಾನೇ ಬರುವುದು ಬೇಡ. ಏನೂ ಸಮಸ್ಯೆ ಇಲ್ಲ’ ಎಂದು ಹೇಳಿದೆ. ಅಲ್ಲಿಗೇ ಆ ವಿಷಯವನ್ನು ಕೈಬಿಡಲಾಯಿತು. ಆ ನಂತರ ಅವರೊಂದಿಗೆ ಹಲವು ಬಾರಿ ಮಾತನಾಡಿದ್ದೇನೆ’ ಎಂದರು.

‘ನಾನು ಯಾರೊಂದಿಗೆ ಜೋರಾಗಿ ಮಾತನಾಡುವವನಲ್ಲ. ಆದರೆ, ಕಾರ್ಯಕ್ರಮ ತಡವಾಗಿದ್ದೇಕೆ ಎಂದು ಕೇಳಿದ್ದನ್ನೇ ಅವರು ತಪ್ಪಾಗಿ ಭಾವಿಸಿದರು’ ಎಂದರು.

ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿ ನಡೆಸಿದ ಸಮತಾ ಸೈನಿಕ ದಳದ ರಾಜ್ಯಾಧ್ಯಕ್ಷ ಡಾ.ಎಂ. ವೆಂಕಟಸ್ವಾಮಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಲೋಲಾಕ್ಷ ಅವರು, ದಲಿತ ಸಮುದಾಯಕ್ಕೆ ಸೇರಿರುವ ದಿನಕರ ಬಾಬು ಅವರನ್ನು ಅಗೌರವದಿಂದ ಕಂಡಿರುವ ಜಿಲ್ಲಾಧಿಕಾರಿ ಅವರ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ದಿನಕರ ಬಾಬು ಅವರು ಜಿಲ್ಲಾ ಪಂಚಾಯಿತಿಯಲ್ಲಿ ಕೆಲ ಕಾಲ ಹೊರಗುತ್ತಿಗೆ ಕಾರು ಚಾಲಕರಾಗಿ ಸಹ ಕೆಲಸ ಮಾಡಿದ್ದರು. ಆ ಸಂದರ್ಭದಲ್ಲಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry