ಬುಧವಾರ, ಡಿಸೆಂಬರ್ 11, 2019
17 °C

ಸೋಂಕಿತರ ಅಂತರ್‌ಜಾತಿ ವಿವಾಹ ಇಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೋಂಕಿತರ ಅಂತರ್‌ಜಾತಿ ವಿವಾಹ ಇಂದು

ವಿಜಯಪುರ: ವಧು ಹುಟ್ಟಿನಿಂದ ಸೋಂಕಿತೆ. ಆಕೆಗೀಗ 24ರ ಹರೆಯ. ವರ ಸ್ವಯಂಕೃತ ಅಪರಾಧದಿಂದ ಸೋಂಕು ತಗುಲಿಸಿಕೊಂಡವ. ಈ ಸೋಂಕಿತರಿಬ್ಬರ ಅಂತರ್ಜಾತಿ ವಿವಾಹಕ್ಕೆ ಇಲ್ಲಿನ ಬಾಲಾಶ್ರಮ ಶೃಂಗಾರಗೊಂಡಿದೆ.  20ರಿಂದ 22 ಅನಾಥ ಮಕ್ಕಳು, ಜಿಲ್ಲಾಡಳಿತದ ಅಧಿಕಾರಿಗಳು ಮದುವೆಗೆ ಸಾಕ್ಷಿಯಾಗಲಿದ್ದಾರೆ.

ಸೋಮವಾರ (ಫೆ. 12) ಬೆಳಿಗ್ಗೆ 9.35ರ ಶುಭ ಮುಹೂರ್ತದಲ್ಲಿ ವಿಜಯಪುರ ಜಿಲ್ಲಾ ಆಸ್ಪತ್ರೆಯ ಎಆರ್‌ಟಿಯ ಹಿರಿಯ ಆಪ್ತ ಸಮಾಲೋಚಕ ರವಿ ಕಿತ್ತೂರು ಪೌರೋಹಿತ್ಯದಲ್ಲಿ ವಧು–ವರರಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು, ಎನ್‌ಜಿಓ ಒಕ್ಕೂಟದ ಪದಾಧಿಕಾರಿಗಳು, ಟಿ.ಪಿ.ಅಲೆಕ್ಸಾಂಡರ್‌ ಫೌಂಡೇಷನ್, ಇನ್ಸಾಫ್ ಸಂಸ್ಥೆ ಸೇರಿದಂತೆ ರೋಟರಿ ಪರಿವಾರದವರು ಸಹ ಸೋಂಕಿತರ ವಿವಾಹಕ್ಕೆ ಶುಭಹಾರೈಸಲು ಕಾತರರಾಗಿದ್ದಾರೆ.

ರವಿ ಪೌರೋಹಿತ್ಯ: ‘ವಧು ಹುಟ್ಟಿನಿಂದಲೇ ಸೋಂಕಿತೆ. ತಂದೆ–ತಾಯಿ ಇಬ್ಬರೂ ಎಚ್‌ಐವಿ ಸೋಂಕಿನಿಂದ ಐದಾರು ವರ್ಷದ ಹಿಂದೆಯೇ ಮೃತಪಟ್ಟಿದ್ದಾರೆ. ಅಜ್ಜಿ ಇದ್ದರೂ ಕಾಳಜಿಯಿಲ್ಲ. ಸಾಮಾಜಿಕ ಕಾರ್ಯಕರ್ತ ಪೀಟರ್‌ ಅಲೆಕ್ಸಾಂಡರ್‌ ತಮ್ಮ ಫೌಂಡೇಷನ್‌ ವತಿಯಿಂದಲೇ ಹಲ ವರ್ಷಗಳಿಂದ ಆಶ್ರಯ ನೀಡಿದ್ದಾರೆ.

‘ಒಂಟಿ ಜೀವನಕ್ಕೆ ಬೇಸತ್ತಿದ್ದ ಯುವತಿ ಎರಡು ವರ್ಷದ ಹಿಂದೆ ಬೆಂಗಳೂರಿಗೆ ಹೋಗಿದ್ದರು. ಬೌರಿಂಗ್‌ ಆಸ್ಪತ್ರೆಯ ಎಆರ್‌ಟಿ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ವಾತಾವರಣಕ್ಕೆ ಹೊಂದಿಕೊಳ್ಳುವುದು ಕಷ್ಟವಾಗಿ ಮರಳಿ, ಬಾಲಾಶ್ರಮದಲ್ಲಿ ಆಶ್ರಯ ಪಡೆದಿದ್ದರು. ದಾಂಪತ್ಯ ಜೀವನದ ಕನಸು ಕಂಡಿದ್ದರೂ, ಜೋಡಿ ಸಿಗದೆ ನಿರಾಸೆಯ ಕೂಪದಲ್ಲಿ ಮುಳುಗಿದ್ದರು’ ಎಂದು ವಿಜಯಪುರ ಜಿಲ್ಲಾ ಆಸ್ಪತ್ರೆಯ ಎಆರ್‌ಟಿ ಕೇಂದ್ರದ ಹಿರಿಯ ಆಪ್ತ ಸಮಾಲೋಚಕ ರವಿ ಕಿತ್ತೂರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ತನ್ನ ತಪ್ಪಿನಿಂದಲೇ ಸೋಂಕು ತಗುಲಿಸಿಕೊಂಡಿದ್ದ ಯುವಕನಿಗೆ ತಾಯಿ ಇದ್ದಾರೆ. ಎರಡು ಮನೆ ಇವೆ. ಭದ್ರತಾ ಕಾವಲುಗಾರನಾಗಿ ಕೆಲಸ ನಿರ್ವಹಿಸುತ್ತಿದ್ದಾನೆ. ತನ್ನಿಂದ ಮತ್ತೊಬ್ಬರ ಬಾಳು ಹಾಳಾಗಬಾರದು ಎಂಬ ಕಾರಣಕ್ಕೆ ಸೋಂಕಿತ ಕನ್ಯೆಯ ಹುಡುಕಾಟ ನಡೆಸಿದ್ದ. ಹಾಸನ, ಬೆಳಗಾವಿಯಲ್ಲಿ ನಡೆದ ಸೋಂಕಿತರ ವಧು–ವರಾನ್ವೇಷಣೆ ಸಮಾವೇಶದಲ್ಲಿ ಪಾಲ್ಗೊಂಡರೂ ಮದುವೆ ನಿಶ್ಚಯವಾಗಿರಲಿಲ್ಲ. ಎರಡೂ ಕಡೆ ನನ್ನ ಮೊಬೈಲ್‌ ನಂಬರ್‌ ನೀಡಿ ಸಂಪರ್ಕಿಸುವಂತೆ ಸೂಚಿಸಿದ್ದರು. ಅದರಂತೆ ಯುವಕ ನನ್ನನ್ನು ಸಂಪರ್ಕಿಸಿದ್ದ’ ಎಂದು ವಿವರಿಸಿದರು.

‘ಇಬ್ಬರ ಮಾಹಿತಿಯನ್ನು ಸಮರ್ಪಕವಾಗಿ ಸಂಗ್ರಹಿಸಿದ ಮೇಲೆ ಮದುವೆಯ ವಿಷಯ ಪ್ರಸ್ತಾಪಿಸಿದೆ. ಇಬ್ಬರೂ ಪರಸ್ಪರ ಮೆಚ್ಚಿ ಒಪ್ಪಿಗೆ ಸೂಚಿಸಿದ್ದಾರೆ. ಇದೇ ಮೊದಲ ಬಾರಿಗೆ ಜಿಲ್ಲಾಡಳಿತದ ಸಮ್ಮುಖದಲ್ಲಿ, ಎಆರ್‌ಟಿ ಕೇಂದ್ರದ ಪೌರೋಹಿತ್ಯದಲ್ಲಿ ಬಾಲಾಶ್ರಮದಲ್ಲಿ ವಿವಾಹ ನಡೆಸುತ್ತಿದ್ದೇವೆ’ ಎಂದು ರವಿ ತಿಳಿಸಿದರು.

ಬೆಳ್ಳಿ ಸಂಭ್ರಮ

‘ವಿಜಯಪುರ ಜಿಲ್ಲಾ ಆಸ್ಪತ್ರೆಯ ಎಆರ್‌ಟಿ ಕೇಂದ್ರದ ಪೌರೋಹಿತ್ಯದಲ್ಲಿ ನಡೆಯುತ್ತಿರುವ ಸೋಂಕಿತರ 25ನೇ ವಿವಾಹವಿದು. ರಜತ ಮಹೋತ್ಸವದ ಸಡಗರವನ್ನು ‘ಪರಸ್ಪರರನ್ನು ಪ್ರೀತಿಸಿ’ ಎಂಬ ಧ್ಯೇಯ ವಾಕ್ಯದೊಂದಿಗೆ ವಿಶ್ವ ವಿವಾಹ ದಿನಾಚರಣೆಯಂದೇ ನಡೆಸುತ್ತಿದ್ದೇವೆ’ ಎಂದು ರವಿ ಕಿತ್ತೂರ ಹೇಳಿದರು.

‘ಇದೂವರೆಗೂ 24 ಮದುವೆ ನೆರವೇರಿಸಲಾಗಿದೆ. ಇದರಲ್ಲಿ ಎಂಟು ಜೋಡಿ ಸೋಂಕಿಲ್ಲದ ಆರೋಗ್ಯವಂತ ಮಗುವನ್ನು ಪಡೆದಿದ್ದಾರೆ. ಸಮಾಜದಲ್ಲಿ ಎಲ್ಲರಂತೆಯೇ ದಾಂಪತ್ಯ ಜೀವನವನ್ನು ಸಾಗಿಸುತ್ತಿದ್ದಾರೆ’ ಎಂದರು.

* * 

ಅಪ್ಪ–ಅಮ್ಮ ಸತ್ತ ಬಳಿಕ ಅನಾಥ ಪ್ರಜ್ಞೆ ಕಾಡುತ್ತಿತ್ತು. ಮಾನಸಿಕವಾಗಿ ಕುಗ್ಗಿ ಹೋಗಿದ್ದೆ. ಜೀವನವೇ ಬೇಡವಾಗಿತ್ತು. ವಿವಾಹ ನಿಶ್ಚಯವಾಗಿದ್ದು, ಖುಷಿಯಾಗಿದೆ

ಸೋಂಕಿತ ವಧು

ಪ್ರತಿಕ್ರಿಯಿಸಿ (+)