ಶುಕ್ರವಾರ, ಡಿಸೆಂಬರ್ 6, 2019
26 °C

‘ಬಯಲು ಶೌಚ ಮುಕ್ತ ಸಿಂದಗಿ’

ಶಾಂತೂ ಹಿರೇಮಠ Updated:

ಅಕ್ಷರ ಗಾತ್ರ : | |

‘ಬಯಲು ಶೌಚ ಮುಕ್ತ ಸಿಂದಗಿ’

ಸಿಂದಗಿ: ನಗರದ ಆರು ವಾರ್ಡ್ ಗಳನ್ನು ಬಯಲು ಶೌಚಮುಕ್ತವನ್ನಾಗಿ ಮುಂದಾಗಿರುವ ಪುರಸಭೆ ಸಮರೋಪಾದಿಯಲ್ಲಿ ಶೌಚಾಲಯಗಳನ್ನು ನಿರ್ಮಿಸಲು ಕಾರ್ಯಪ್ರವೃತ್ತವಾಗಿದೆ.

ನಗರದ ವಾರ್ಡ್‌ ನಂ. 15ರಲ್ಲಿ ವೈಯಕ್ತಿಕ ಶೌಚಾಲಯ ನಿರ್ಮಾಣ ಕಾಮಗಾರಿ ಭರದಿಂದ ನಡೆಯುತ್ತಿದ್ದು, ಪುರಸಭೆ ಸದಸ್ಯ ಭೀಮು ಕಲಾಲ ಕಾರ್ಯಕ್ಕೆ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಈ ಕಾರ್ಯಕ್ಕೆ ಪುರಸಭೆಯ ಹಿರಿಯ ಸದಸ್ಯ ರಾಜಶೇಖರ ಕೂಚಬಾಳ ಕೈಜೋಡಿಸಿದ್ದು, ವಾರ್ಡ್‌ ನಂ.15 ಅನ್ನು ತಾವು ಪ್ರತಿನಿಧಿಸದಿದ್ದರೂ, ಈ ವಾರ್ಡ್‌ನಲ್ಲಿ ಶೌಚಾಲಯ ನಿರ್ಮಾಣ ಕಾರ್ಯದ ಉಸ್ತುವಾರಿಯನ್ನು ಸ್ವತಃ ಅವರೇ ವಹಿಸಿಕೊಂಡಿರುವುದು ಸಹ ಮೆಚ್ಚುಗೆಗೆ ಪಾತ್ರವಾಗಿದೆ.

‘ನನ್ನ ವಾರ್ಡ್‌ನಲ್ಲಿ ಸ್ವಚ್ಛ ಭಾರತ ಅಭಿಯಾನ ಯೋಜನೆಯಡಿ ಎಸ್.ಸಿ/ಎಸ್‌.ಟಿ ಅನುದಾನದಡಿ ಹೈಟೆಕ್ ಸಮುದಾಯ ಶೌಚಾಲಯ ಕಟ್ಟಿಸಿದ್ದಾರೆ. ಕಮೋಡ್ ಒಳಗೊಂಡು ಪ್ರತ್ಯೇಕ ಕೊಳವೆಬಾವಿ ಇದೆ. ಕೈ ತೋಟ ಇದೆ. ಈ ಶೌಚಾಲಯ ಇನ್ನು ಉದ್ಘಾಟನೆಗೊಂಡಿಲ್ಲ’ ಎಂದು ಸದಸ್ಯ ರಾಜಶೇಖರ ಕೂಚಬಾಳ ಹೇಳುತ್ತಾರೆ.

‘ಪ್ರತಿ ನಿತ್ಯ ಬೆಳಿಗ್ಗೆ ಈ ಶೌಚಾಲಯದ ಎದುರಿನ ರಸ್ತೆಯಲ್ಲಿ ಹೂ ಮಾಲೆಯೊಂದಿಗೆ ನಿಂತುಕೊಂಡು ಬಯಲು ಶೌಚಾಲಯಕ್ಕೆ ಹೋಗುವವರ ಕೊರಳಲ್ಲಿ ಹಾಕಿ ಕೈ ಮುಗಿದು ಸಮುದಾಯ ಶೌಚಾಲಯ ಬಳಸಿ ಎಂದು ಬೇಡಿಕೊಳ್ಳುವೆ’ ಎಂದು ಅವರು ‘ಪ್ರಜಾವಾಣಿ’ಗೆ ವಿವರಿಸಿದರು.

‘15 ನೇ ವಾರ್ಡ್ ಹಿರಿಯ ಸದಸ್ಯ ಭೀಮು ಕಲಾಲ ಶೌಚಾಲಯ ನಿರ್ಮಾಣಕ್ಕೆ ಬೇಕಾದ ಪೈಪ್ ಗಳ ಜೋಡಣೆಗಾಗಿ ತಮ್ಮ ಸ್ವಂತ ಹಣ ನೀಡುತ್ತಿರುವುದು ಅನುಕರಣೀಯ’ ಎಂದೂ ಕೂಚಬಾಳ ಹೇಳಲು ಮರೆಯಲಿಲ್ಲ.

‘23ನೇ ವಾರ್ಡ್ ನಿವಾಸಿಗಳ ಪೈಕಿ ಶೇ 90 ರಷ್ಟು ವೈಯಕ್ತಿಕ ಶೌಚಾಲಯ ಹೊಂದಿಲ್ಲ. ಬಹಿರ್ದೆಸೆಗಾಗಿ ಈ ವಾರ್ಡ ಮಹಿಳೆಯರು ಕಿ.ಮೀ. ದೂರ ಕ್ರಮಿಸಬೇಕಾದ ಅನಿವಾರ್ಯತೆ ಇದೆ. ಈ ಹಿನ್ನೆಲೆಯಲ್ಲಿ ವಾರ್ಡ್ ಸದಸ್ಯ ಗೊಲ್ಲಾಳಪ್ಪ ಬಂಕಲಗಿ ಕುಡಿಯುವ ನೀರಿನ ಮೇಲ್ಮಟ್ಟದ ಟ್ಯಾಂಕ್ ಬಳಿ ಗಾಂಧಿ ಪ್ರತಿಷ್ಠಾನ ಸ್ವಯಂ ಸೇವಾ ಸಂಘಟನೆಗೆ ಲೀಸ್ ಮೇಲೆ ಸಮುದಾಯ ಶೌಚಾಲಯ ಕಟ್ಟಲು ಅನುಮತಿ ದೊರಕಿಸಿ ಕೊಟ್ಟಿರುವುದು ಮಾದರಿ ಕಾರ್ಯ’ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

‘ಉಳಿದ ವಾರ್ಡ್ ಗಳ ಸದಸ್ಯರು ಅದರಲ್ಲೂ ವಾರ್ಡ್ ನಂ. 3 ಮತ್ತು 23ರ ಸದಸ್ಯರು ತಮ್ಮ ವಾರ್ಡ್ ಗಳಲ್ಲಿ  ವೈಯಕ್ತಿಕ ಶೌಚಾಲಯ ನಿರ್ಮಾಣ ಮಾಡಲೇಬೇಕಿದೆ. ಈ ಕಾರ್ಯಕ್ಕಾಗಿ ಪುರಸಭೆಯ ಎಲ್ಲ 23 ಜನ ಸದಸ್ಯರು ತಮಗೆ ಬರುವ ಅನುದಾನವನ್ನು ಕೇವಲ ಶೌಚಾಲಯ ನಿರ್ಮಾಣಕ್ಕೆ ಬಳಕೆ ಮಾಡಿಕೊಂಡರೆ ಒಳ್ಳೆಯದು’ ಎಂದು ಹೆಸರು ಹೇಳಲು ಇಚ್ಛಿಸದ ಹಿರಿಯ ನಾಗರಿಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

* * 

ನಗರದ 1,8,9,10,11,15 ವಾರ್ಡ್ ಗಳನ್ನು ಸಂಪೂರ್ಣ ಬಯಲು ಶೌಚಮುಕ್ತ ಮಾಡುವ ಸಂಕಲ್ಪದೊಂದಿಗೆ ಪುರಸಭೆ ಕಾರ್ಯಪ್ರವೃತ್ತವಾಗಿದೆ

ಎ.ಎಸ್.ಪಾಂಡೆ

ಹಿರಿಯ ಆರೋಗ್ಯ ನಿರೀಕ್ಷಕ, ಪುರಸಭೆ

 

ಪ್ರತಿಕ್ರಿಯಿಸಿ (+)