ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ‘ಭದ್ರಕೋಟೆ’ ಭೇದಿಸಲು ಸಜ್ಜು

Last Updated 12 ಫೆಬ್ರುವರಿ 2018, 7:22 IST
ಅಕ್ಷರ ಗಾತ್ರ

ಯಾದಗಿರಿ: ಕಾಂಗ್ರೆಸ್‌ಗೆ ನಿರಂತರ ನೆಲೆ ಒದಗಿಸಿರುವ ‘ಗುರುಮಠಕಲ್‌’ ಭದ್ರಕೋಟೆಯನ್ನು ಭೇದಿಸಲು ಜೆಡಿಎಸ್, ಬಿಜೆಪಿ ಮರಳಿ ಯತ್ನಿಸಲು ಸಜ್ಜುಗೊಂಡಿವೆ.

45 ವರ್ಷಗಳಿಂದ ಗುರುಮಠಕಲ್ ಮತಕ್ಷೇತ್ರ ಕಾಂಗ್ರೆಸ್‌ ತೆಕ್ಕೆಯಲ್ಲಿಯೇ ಇದೆ. ಪ್ರತಿ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಜೆಡಿಎಸ್ ತೀವ್ರ ಪೈಪೋಟಿ ನೀಡುತ್ತಾ ಬಂದಿದೆ. ಕಳೆದ ಚುನಾವಣೆಯಲ್ಲಿ ಕೇವಲ 1,600 ಮತಗಳ ಅಂತರದಿಂದ ಜೆಡಿಎಸ್ ಹಿನ್ನಡೆ ಅನುಭವಿಸಿತ್ತು. ಈ ಬಾರಿ ಕಾಂಗ್ರೆಸ್‌ಗೆ ಪೈಪೋಟಿ ನೀಡಲು ಜೆಡಿಎಸ್ ಜತೆಗೆ ಬಿಜೆಪಿಯೂ ಸಜ್ಜುಗೊಂಡಿದೆ.

ಈ ಬಾರಿ ಬಿಜೆಪಿಯಲ್ಲಿ ಟಿಕೆಟ್ ಆಕಾಂಕ್ಷಿಗಳು ಹೆಚ್ಚಿದ್ದಾರೆ. ಕಳೆದ ಚುನಾವಣೆಯಲ್ಲಿ ಕೆಜೆಪಿಯಿಂದ ಸ್ಪರ್ಧಿಸಿ 32 ಸಾವಿರ ಮತಗಳನ್ನು ಪಡೆದು ಬಿ.ಎಸ್.ಯಡಿಯೂರಪ್ಪ ಅವರ ಮೆಚ್ಚುಗೆ ಗಳಿಸಿರುವ ವೆಂಕಟರೆಡ್ಡಿ ಮುದ್ನಾಳ ಈ ಬಾರಿ ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳಲ್ಲಿ ಪ್ರಮುಖರು. ಅವರದ್ದೇ ಕುಟುಂಬ ಸಂಬಂಧಿಯಾಗಿರುವ ನಾಗರತ್ನಾ ಕುಪ್ಪಿ ಮಹಿಳಾ ಪ್ರಾತಿನಿಧ್ಯದಡಿ ಅವಕಾಶ ಕೇಳುತ್ತಿದ್ದಾರೆ. ಅವರ ಮಧ್ಯೆ ಕಾಂಗ್ರೆಸ್‌ನಿಂದ ಬಿಜೆಪಿಗೆ ವಲಸೆ ಬಂದಿರುವ ಕಬ್ಬಲಿಗ ಸಮುದಾಯದ ಸಾಯಿಬಣ್ಣ ಬೋರಬಂಡಾ ಸ್ಥಳೀಯರಿಗೆ ಪ್ರಾತಿನಿಧ್ಯ ನೀಡುವಂತೆ ಒತ್ತಾಯಿಸಿದ್ದಾರೆ.

ಜೆಡಿಎಸ್‌ನಲ್ಲಿ ಟಿಕೆಟ್‌ ಆಕಾಂಕ್ಷಿಗಳು ಕಂಡುಬಂದಿಲ್ಲ. ಎರಡು ಬಾರಿ ಸೋತಿರುವ ಜೆಡಿಎಸ್‌ನ ನಾಗನಗೌಡ ಕಂದಕೂರ ಅವರೇ ಈ ಬಾರಿಯ ಅಭ್ಯರ್ಥಿ ಎಂಬುದಾಗಿ ಎಚ್.ಡಿ.ಕುಮಾರಸ್ವಾಮಿ ಘೋಷಿಸಿಯಾಗಿದೆ. ಅವರಿಗೆ ಪೈಪೋಟಿ ನೀಡಿ ಟಿಕೆಟ್‌ ಅಪೇಕ್ಷಿಸುವ ಸಮರ್ಥ ನಾಯಕರು ಜೆಡಿಎಸ್‌ನಲ್ಲಿ ಇಲ್ಲ. ಹಾಗಾಗಿ, ಈ ಬಾರಿಯೂ ನಾಗನಗೌಡ ಕಾಂಗ್ರೆಸ್‌ ಕೋಟೆಯನ್ನು ಭೇದಿಸಲು ಮರಳಿ ಯತ್ನಿಸಲು ಎಲ್ಲ ಸಿದ್ಧತೆ ನಡೆಸಿದ್ದಾರೆ.

ಗುರುಮಠಕಲ್‌ನಲ್ಲಿ ಈಗಲೂ ಮಲ್ಲಿಕಾರ್ಜುನ ಖರ್ಗೆ ಪ್ರಭಾವ ಕಡಿಮೆಯಾಗಿಲ್ಲ. 2008ರಲ್ಲಿ ಕ್ಷೇತ್ರ ಪುನರ್‌ವಿಂಗಡನೆಯಾದ ಮೇಲೆ ಚಿತ್ತಾಪುರದ ಕಬ್ಬಲಿಗ ಸಮುದಾಯ ಬಾಬುರಾವ ಚಿಂಚನಸೂರ ಅವರನ್ನು ಮಲ್ಲಿಕಾರ್ಜುನ ಖರ್ಗೆ ತಾವೇ ಕಟ್ಟಿರುವ ಭದ್ರಕೋಟೆಗೆ ಕರೆತಂದು ಗೆಲ್ಲಿಸಿದ್ದಾರೆ. ಈಗಲೂ ಖರ್ಗೆ ಸೂಚಿಸಿದ ಅಭ್ಯರ್ಥಿ ಗೆದ್ದು ಬರುತ್ತಾರೆ ಎಂಬುದಾಗಿ ಜನರು ಹೇಳುತ್ತಾರೆ. ಬಾಬುರಾವ ಚಿಂಚನಸೂರ ಎರಡು ಬಾರಿ ಚುನಾವಣೆಯಲ್ಲಿ ಪಾರಮ್ಯ ಮೆರೆದಿರುವುದೇ ಇದಕ್ಕೆ ಸಾಕ್ಷಿ. ಈ ಬಾರಿಯೂ ಗೆಲುವಿನ ಸವಾರಿ ಏರಲು ಚಿಂಚನಸೂರ ಸಿದ್ಧರಾಗಿ ನಿಂತಿದ್ದಾರೆ. ಕಾಂಗ್ರೆಸ್ ಟಿಕೆಟ್ ಅವರಿಗೆ ಖಚಿತವಾಗಿದೆ ಎನ್ನಲಾಗಿದೆ.

ಜೆಡಿಎಸ್‌ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಶರಣಗೌಡ ಕಂದಕೂರು ತಮ್ಮ ತಂದೆ ನಾಗನಗೌಡ ಅವರ ಪರವಾಗಿ ಸತತ ಎಂಟು ತಿಂಗಳಿನಿಂದ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ. ಅದಕ್ಕಾಗಿ 18 ದಿನಗಳವರೆಗೆ ಪಾದಯಾತ್ರೆ ಕೈಗೊಂಡಿದ್ದರು. ಪಾದಯಾತ್ರೆಯ ಅಂತಿಮ ದಿನದಂದು ಸೈದಾಪುರ ಹೋಬಳಿಯಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ನಾಗನಗೌಡ ಅವರ ಗೆಲುವಿಗಾಗಿ ವೈಯಕ್ತಿಕವಾಗಿ ನಾನೇ ಪ್ರಚಾರಕ್ಕೆ ಧುಮುಕುತ್ತೇನೆ ಎಂಬುದಾಗಿ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿ ಹೋಗಿದ್ದಾರೆ. ಎಚ್‌.ಡಿ.ಕುಮಾರಸ್ವಾಮಿ ಅವರ ಭರವಸೆಯ ಮೇಲೆ ಕಾಂಗ್ರೆಸ್‌ ಕೋಟೆ ಕೆಡವಲು ಜೆಡಿಎಸ್ ಯೋಜನೆ ರೂಪಿಸುತ್ತಿದೆ.

ಬಿಜೆಪಿಯ ಹೊಸಬರು ಹೇಳುವುದೇನು?

ಕಬ್ಬಲಿಗ ಸಮುದಾಯದ ಸಾಯಿಬಣ್ಣ ಬೋರಬಂಡಾ, ರೆಡ್ಡಿ ಲಿಂಗಾಯತ ಸಮುದಾಯದ ನಾಗರತ್ನಾ ಕುಪ್ಪಿ ಬಿಜೆಪಿಯ ಟಿಕೆಟ್‌ ಆಕಾಂಕ್ಷಿತರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.

‘ಗುರುಮಠಕಲ್‌ ಕ್ಷೇತ್ರದಲ್ಲಿ ಹಿಂದುಳಿದ ಕಬ್ಬಲಿಗ ಸಮುದಾಯದ ಸ್ಥಳೀಯರಿಗೆ ರಾಜಕೀಯ ಪ್ರಾತಿನಿಧ್ಯ ಸಿಕ್ಕಿಲ್ಲ. ಕ್ಷೇತ್ರದಲ್ಲಿ 75 ಸಾವಿರ ಕಬ್ಬಲಿಗ ಮತದಾರರಿಗೆ ಅನ್ಯಾಯವಾಗುತ್ತಿದೆ. ಕ್ಷೇತ್ರದಲ್ಲಿ ನೆಲೆ ನಿಂತಿರುವ ಕಬ್ಬಲಿಗ ಸಮುದಾಯದ ನನಗೆ ಟಿಕೆಟ್ ಕೊಡಿ’ ಎಂಬುದಾಗಿ ಸಾಯಿಬಣ್ಣ ಬೋರಬಂಡಾ ಬೇಡಿಕೆ ಇಟ್ಟಿದ್ದಾರೆ.

‘ಮಹಿಳೆಯರನ್ನು ಕಡೆಗಣಿಸಲಾಗಿದೆ. ಗುರುಮಠಕಲ್‌ ಮತಕ್ಷೇತ್ರದಲ್ಲಿ ಮಹಿಳೆಗೆ ಪ್ರಾತಿನಿಧ್ಯ ನೀಡಿದರೆ ಬಿಜೆಪಿಗೆ ಗೆಲುವು ಖಚಿತ’ ಎಂಬುದಾಗಿ ನಾಗರತ್ನಾ ಕುಪ್ಪಿ ಒತ್ತಾಯಿಸಿದ್ದಾರೆ.

ಆದರೆ, ಬಿ.ಎಸ್‌.ಯಡಿಯೂರಪ್ಪ ಅವರ ವಿಶ್ವಾಸ ಗಳಿಸಿರುವ ಹಿರಿಯ ಮುಖಂಡ ವೆಂಕಟರಡ್ಡಿ ಮುದ್ನಾಳ ಅವರಿಗೆ ಟಿಕೆಟ್ ಕಾಯಂ ಎಂಬ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿಬರುತ್ತಿವೆ.

ಜನ ಏನು ಹೇಳುತ್ತಾರೆ?

‘48 ವರ್ಷದ ರಾಜಕೀಯ ಇತಿಹಾಸದಲ್ಲಿ ಮತಕ್ಷೇತ್ರದಲ್ಲಿ ಹೊರಗಿನವರಿಗೆ ಆದ್ಯತೆ ನೀಡಲಾಗಿದೆ. ಯಾವ ಪಕ್ಷಗಳೂ ಸ್ಥಳೀಯ ಮುಖಂಡರಿಗೆ ಟಿಕೆಟ್ ನೀಡಿಲ್ಲ. ಮಲ್ಲಿಕಾರ್ಜುನ ಖರ್ಗೆ ಅವರಿಂದ ಹಿಡಿದು ಈಗಿನ ಬಾಬುರಾವ ಚಿಂಚನಸೂರ ಕೂಡ ಈ ಕ್ಷೇತ್ರದಲ್ಲಿ ಹುಟ್ಟಿ ಬೆಳೆದಿಲ್ಲ. ಚುನಾವಣೆಯ ನಂತರ ಗೆದ್ದ ಅವರನ್ನು ಕಾಣಬೇಕು ಎಂದರೆ ಕಲಬುರ್ಗಿ ಇಲ್ಲವೇ ಬೆಂಗಳೂರಿಗೆ ಹುಡುಕಿಕೊಂಡು ಹೋಗಬೇಕು. ಯಾವುದೇ ಪಕ್ಷ ಇರಲಿ ಈ ಕ್ಷೇತ್ರದಲ್ಲಿ ನೆಲೆಸಿರುವ ನಾಯಕರಿಗೆ ಟಿಕೆಟ್ ನೀಡಬೇಕು. ಅವರು ಸುಲಭವಾಗಿ ಜನರಿಗೆ ಸಿಗುವಂತಿರಬೇಕು’ ಎಂದು ಗುರುಮಠಕಲ್‌ ಮತಕ್ಷೇತ್ರದ ಶಾಂತಪ್ಪ ಪವಾರ, ಸಿದ್ಧಲಿಂಗಪ್ಪ ಕೊಂಕಲ್ ಹೇಳುತ್ತಾರೆ.

ಗುರುಮಠಕಲ್‌ ಮತಕ್ಷೇತ್ರದ ವಿವರ

2,35,314 ಮತಕ್ಷೇತ್ರದ ಒಟ್ಟು ಮತದಾರರು

1,17,534 ಒಟ್ಟು ಪುರುಷ ಮತದಾರರು

1,17,756 ಒಟ್ಟು ಮಹಿಳಾ ಮತದಾರರು

24 ಇತರೆ ಮತದಾರರು

253 ಒಟ್ಟು ಮತಗಟ್ಟೆಗಳು

30 ಹೊಸ ಮತಗಟ್ಟೆಗಳು

5,274 ಹೊಸ ಮತದಾರರ ಸೇರ್ಪಡೆ

* * 

ಮತದಾರರ ಒತ್ತಾಯ ಹಾಗೂ ಎಚ್‌.ಡಿ.ದೇವೇಗೌಡ, ಕುಮಾರಸ್ವಾಮಿ ಅವರ ಆಗ್ರಹದ ಮೇಲೆ ಕಣಕ್ಕೆ ಇಳಿದಿದ್ದೇನೆ. ಅಭಿವೃದ್ಧಿ ಚಿಂತಿಸುವವರು ಕೈಹಿಡಿಯಲಿದ್ದಾರೆ.
ನಾಗನಗೌಡ ಕಂದಕೂರ ಜೆಡಿಎಸ್‌ ಅಭ್ಯರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT