ಮಂಗಳವಾರ, ಡಿಸೆಂಬರ್ 10, 2019
20 °C

ಆಳಂದದ 25 ಕೆರೆಗಳ ಜೀರ್ಣೋದ್ಧಾರ: ಸಚಿವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಳಂದದ 25 ಕೆರೆಗಳ ಜೀರ್ಣೋದ್ಧಾರ: ಸಚಿವ

ಕಲಬುರ್ಗಿ: ‘ಕೆರೆ ಅಭಿವೃದ್ಧಿ ಪ್ರಾಧಿಕಾರ ರಚನೆಯಾದ ಬಳಿಕ ಆಳಂದ ತಾಲ್ಲೂಕಿನ 25 ಕೆರೆಗಳ ಹೂಳು ಮತ್ತು ಒತ್ತುವರಿ ತೆರವುಗೊಳಿಸಿ ಜೀರ್ಣೋದ್ಧಾರ ಮಾಡಲಾಗುವುದು’ ಎಂದು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಸಚಿವ ಟಿ.ಬಿ.ಜಯಚಂದ್ರ ಭರವಸೆ ನೀಡಿದರು.

ಆಳಂದ ತಾಲ್ಲೂಕಿನ ಮಾದನಹಿಪ್ಪರಗಾ ಗ್ರಾಮದಲ್ಲಿ ಅಂತರ್ಜಲ ಅಭಿವೃದ್ಧಿ ವಿಶೇಷ ಯೋಜನೆಯ ₹20 ಕೋಟಿ ಅನುದಾನದಲ್ಲಿ ಚೆಕ್‌ ಡ್ಯಾಂ ನಿರ್ಮಾಣ, ಹಳ್ಳಗಳ ವಿಸ್ತರಣೆ ಹಾಗೂ ಅಂತರ್ಜಲ ವೃದ್ಧಿಗೆ ಭಾನುವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ಕೆರೆಗಳ ಪಾವಿತ್ರ್ಯತೆ ಉಳಿಸಲು ಸರ್ಕಾರ ಮುಂದಾಗಿದೆ. ಸತತ ಬರ ಎದುರಿಸುತ್ತಿರುವ ಜಿಲ್ಲೆಗಳಲ್ಲಿ ಕೆರೆಗಳ ಅಭಿವೃದ್ಧಿಗೆ ₹60 ಕೋಟಿ ನೀಡಲಾಗಿದೆ. ಹೂಳು ತೆರವುಗೊಳಿಸಿ ಮಳೆ ನೀರು ನಿಲ್ಲುವಂತೆ ಮಾಡಲಾಗುವುದು. ಇದರಿಂದ ಸುತ್ತಲಿನ ಗ್ರಾಮಗಳ ಅಂತರ್ಜಲ ಮಟ್ಟ ಹೆಚ್ಚಲಿದೆ’ ಎಂದು ತಿಳಿಸಿದರು.

‘ಆಳಂದದಂತಹ ಬರ ಪೀಡಿತ ತಾಲ್ಲೂಕುಗಳಲ್ಲಿ ಅಂತರ್ಜಲ ಅಭಿವೃದ್ಧಿಗಾಗಿಯೇ ಇಲಾಖೆಯು ವಿಶೇಷ ಯೋಜನೆ ರೂಪಿಸಿದೆ. ಮೊದಲ ಹಂತದಲ್ಲಿ ₹20 ಕೋಟಿ ಆಳಂದ ತಾಲ್ಲೂಕಿಗೆ ಬಿಡುಗಡೆ ಆಗಿತ್ತು. ಈಗ ಮತ್ತೆ ₹20 ಕೋಟಿ ವೆಚ್ಚದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗಿದೆ. ಕಾಮಗಾರಿಯನ್ನು ಜೂನ್‌, ಜುಲೈ ತಿಂಗಳೊಳಗೆ ಪೂರ್ಣಗೊಳಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

‘ಶಿರಾ ವಿಧಾನಸಭಾ ಕ್ಷೇತ್ರದಲ್ಲೂ ನೀರಿನ ಸಮಸ್ಯೆ ಇತ್ತು. 1,300 ಅಡಿ ಆಳ ಕೊರೆದರೂ ನೀರು ಸಿಗುತ್ತಿರಲ್ಲಿಲ್ಲ. ನಂತರ ಅಲ್ಲಿ 35ರಿಂದ 40 ಕಿ.ಮೀ ಸಿಮೆಂಟ್‌ನಿಂದ ಒಡ್ಡು ನಿರ್ಮಿಸಲಾಯಿತು. ಸಣ್ಣ ಸಣ್ಣ ಚೆಕ್‌ ಡ್ಯಾಂ ಕಟ್ಟಲಾಯಿತು. ಇದರಿಂದ ಈಗ 100 ಅಡಿ ಆಳಕ್ಕೆ ಹೋದರೆ ಜೀವಜಲ ದೊರೆಯುತ್ತಿದೆ. ಇದೇ ಮಾದರಿಯನ್ನು ಆಳಂದ ತಾಲ್ಲೂಕಿನಲ್ಲೂ ಅನುಷ್ಠಾನಗೊಳಿಸಲಾಗಿದೆ’ ಎಂದರು.

ಶಾಸಕ ಬಿ.ಆರ್‌.ಪಾಟೀಲ ಮಾತನಾಡಿ, ‘ಆಳಂದ ತಾಲ್ಲೂಕಿನಲ್ಲಿ ನೀರಿಗೆ ಬರ ಇರಲಿಲ್ಲ. ಹಿಂದೆ ತೆರೆದಬಾವಿಯ ನೀರನ್ನೇ ಕುಡಿಯುತ್ತಿದ್ದೆವು. ಹಳ್ಳಗಳು ತುಂಬಿ ಹರಿಯುತ್ತಿದ್ದವು. ರೈತರು ತರಕಾರಿ, ತೋಟಗಾರಿಕೆ ಬೆಳೆಗಳನ್ನು ಸಮೃದ್ಧವಾಗಿ ಬೆಳೆಯುತ್ತಿದ್ದರು. ಆದರೆ, 1971ರ ಭೀಕರ ಬರದ ನಂತರ ಹನಿ ನೀರಿಗೂ ಹಾಹಾಕಾರ ಉಂಟಾಗಿದೆ’ ಎಂದರು.

‘ಕಳೆದ ವರ್ಷ 140 ಹಳ್ಳಿಗಳಿಗೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗಿದೆ. ಟ್ಯಾಂಕರ್‌ ನೀರಿಗಾಗಿ ರಾಜ್ಯದಲ್ಲಿ ₹21 ಕೋಟಿ ಖರ್ಚಾಗಿದ್ದು, ನಮ್ಮ ತಾಲ್ಲೂಕಿಗೆ ₹14 ಕೋಟಿ ಖರ್ಚಾಗಿದೆ. ಇದು ಇಲ್ಲಿನ ನೀರಿನ ಬವಣೆಗೆ ಸಾಕ್ಷಿ’ ಎಂದು ಹೇಳಿದರು.

‘ಕೆರೆ ನಿರ್ಮಾಣಕ್ಕೆ ಶೇ 80 ರೈತರ ಒಪ್ಪಿಗೆ ಅಗತ್ಯ ಎಂದು ಕೇಂದ್ರ ಸರ್ಕಾರ ಕಾಯ್ದೆಗೆ ತಿದ್ದುಪಡಿ ತಂದಿದೆ. ಇದರಿಂದ ತಾಲ್ಲೂಕಿನ ವಿವಿಧೆಡೆ ಆರಂಭವಾಗಿದ್ದ ಕೆರೆ ನಿರ್ಮಾಣ ಕಾಮಗಾರಿಗಳು ಸ್ಥಗಿತಗೊಂಡಿವೆ. ಕೇಂದ್ರದ ಶೇ 90 ಹಾಗೂ ರಾಜ್ಯ ಸರ್ಕಾರದ ಶೇ 10ರ ಅನುದಾನದ ಪಾಲುದಾರಿಕೆಯಲ್ಲಿ ಕೆರೆ ನಿರ್ಮಿಸುವ ಯೋಜನೆಗೆ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಗ್ರಹಣ ಹಿಡಿದಿದೆ’ ಎಂದು ಆಪಾದಿಸಿದರು.

ಅಕ್ಕಲಕೋಟ ಶಾಸಕ ಸಿದ್ದರಾಮ ಮೇತ್ರಿ ಮಾತನಾಡಿ, ‘ಆಳಂದ ಶಾಸಕರು ದೂರದೃಷ್ಟಿ ಹೊಂದಿದ್ದಾರೆ. ₹1,500 ಕೋಟಿ ಅನುದಾನ ತಂದು ಕ್ಷೇತ್ರದಲ್ಲಿ ಜಲಸಮೃದ್ಧಿ ಯೋಜನೆ ಕೈಗೊಂಡಿದ್ದಾರೆ’ ಎಂದರು.

ಸಣ್ಣ ನೀರಾವರಿ ಇಲಾಖೆಯ ಕಾರ್ಯದರ್ಶಿ ಆರ್.ರುದ್ರಯ್ಯ, ತಹಶೀಲ್ದಾರ್ ಬಸವರಾಜ ಬೆಣ್ಣೆಶಿರೂರು, ಜಿ.ಪಂ ಸದಸ್ಯ ಸಿದ್ದರಾಮ ಪ್ಯಾಟಿ, ಪುರಸಭೆ ಮಾಜಿ ಅಧ್ಯಕ್ಷ ವಿಠಲರಾವ ಪಾಟೀಲ, ಎಪಿಎಂಸಿ ಅಧ್ಯಕ್ಷ ಶರಣಬಸಪ್ಪ ಭೂಸನೂರು, ಬಸವಂತರಾವ ಮಾಲಿಪಾಟೀಲ, ಗುರುಶರಣ ಪಾಟೀಲ, ರಮೇಶ ಲೋಹಾರ, ಸಿದ್ದರಾಮ ಪಾಟೀಲ ಧಂಗಾಪುರ, ಮಲ್ಲಪ್ಪ ಯಳಮೇಲಿ, ಬಿ.ಕೆ.ಪಾಟೀಲ, ಎಇಇ ಕೆ.ಎಚ್.ರಾಜು, ಸಲಾಂ ಸಗರಿ, ಮಲ್ಲಯ್ಯ ಸ್ವಾಮಿ, ಸಿದ್ದರಾಮ ಅರಳಿಮರ, ಶರಣಗೌಡ ಪಾಟೀಲ, ಪಂಡಿತ ಖಾನಾಪುರೆ, ಅಜಗರಲಿ ಹವಾಲ್ದಾರ್, ಲಿಂಗರಾಜ ಪಾಟೀಲ ಇದ್ದರು.

ಏನಿದು ಯೋಜನೆ?

ಮಹಾರಾಷ್ಟ್ರದ ಲಾತೂರು ಜಿಲ್ಲೆಯ ಶಿರಪುರ ಮಾದರಿಯಲ್ಲಿ ಅಂತರ್ಜಲ ಹೆಚ್ಚಳ ಮಾಡುವ ವಿಶೇಷ ಯೋಜನೆ ಇದಾಗಿದೆ. ಇದಕ್ಕಾಗಿ ₹20 ಕೋಟಿ ನೀಡಲಾಗಿದೆ. ಮಾದನ ಹಿಪ್ಪರಗಾ ಸುತ್ತಲಿನ 14 ಹಳ್ಳಗಳಲ್ಲಿನ ಮಣ್ಣು ತೆರವುಗೊಳಿಸುವುದು, 51 ಹೊಸ ಚೆಕ್‌ ಡ್ಯಾಂ ನಿರ್ಮಾಣ, ಹಿನ್ನೀರು ಭೂಮಿಗೆ ಇಂಗಿಸುವುದು ಹಾಗೂ ಮಳೆ ನೀರು ಹೊಲಗಳಿಂದ ಹಳ್ಳಕ್ಕೆ ಬರುವಂತೆ ಕಾಮಗಾರಿಯನ್ನು ಈ ಮೊತ್ತದಲ್ಲಿ ಕೈಗೊಳ್ಳಲು ಉದ್ದೇಶಿಸಲಾಗಿದೆ.

‘ತೊಗರಿ ಮಿತಿ: ಕೇಂದ್ರ ಸರ್ಕಾರ ನಿರಾಸಕ್ತಿ’

‘ಕಲಬುರ್ಗಿ ಜಿಲ್ಲೆಯಲ್ಲಿ ನಿರೀಕ್ಷೆಗೂ ಮೀರಿ ತೊಗರಿ ಬೆಳೆಯಲಾಗಿದ್ದು, ಖರೀದಿ ಮಿತಿ ಹೆಚ್ಚಳ ಮಾಡುವಲ್ಲಿ ಕೇಂದ್ರ ಸರ್ಕಾರ ನಿರಾಸಕ್ತಿ ವಹಿಸಿದೆ’ ಸಚಿವ ಟಿ.ಬಿ.ಜಯಚಂದ್ರ ಅಸಮಾಧಾನ ವ್ಯಕ್ತಪಡಿಸಿದರು.

‘ಬೆಂಬಲ ಬೆಲೆಗೆ 16.5 ಲಕ್ಷ ಕ್ವಿಂಟಲ್‌ ತೊಗರಿ ಖರೀದಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಈಗಾಗಲೇ ಈ ಮಿತಿ ದಾಟಿದ್ದು, 2 ದಿನಗಳಿಂದ ತೊಗರಿ ಖರೀದಿ ಸ್ಥಗಿತಗೊಂಡಿದೆ. ಮಿತಿ ಹೆಚ್ಚಳ ಮಾಡುವಂತೆ ಮನವಿ ಮಾಡಿದರೂ ಕೇಂದ್ರ ಸ್ಪಂದಿಸಿಲ್ಲ’ ಎಂದರು.

‘ರಾಜ್ಯದಲ್ಲಿ ಈವರೆಗೆ 3.18 ಲಕ್ಷ ರೈತರು ಹೆಸರು ನೋಂದಣಿ ಮಾಡಿದ್ದಾರೆ. ಕಲಬುರ್ಗಿ, ರಾಯಚೂರು, ಯಾದಗಿರಿ ಹಾಗೂ ಕೊಪ್ಪಳ ಭಾಗದ ರೈತರೇ ಹೆಚ್ಚಾಗಿದ್ದಾರೆ. ಹೈ.ಕ ಭಾಗದಲ್ಲಿಯೇ 90 ಲಕ್ಷ ಕ್ವಿಂಟಲ್‌ ತೊಗರಿ ಬೆಳೆಯಲಾಗಿದೆ. ಆದರೆ, ಮತ್ತೆ 1 ಲಕ್ಷ ಕ್ವಿಂಟಲ್‌ ಖರೀದಿಗೆ ಮಾತ್ರ ಅನುಮತಿ ನೀಡಿರುವ ಮಾಹಿತಿ ಇದೆ. ಇದೂ ಯಾವುದಕ್ಕೂ ಸಾಲದು’ ಎಂದರು.

ಪ್ರತಿಕ್ರಿಯಿಸಿ (+)