ಮಂಗಳವಾರ, ಡಿಸೆಂಬರ್ 10, 2019
26 °C

ಆರ್ಥಿಕ ಶಕ್ತಿಯಾಗಿ ಮಹಿಳೆ: ಗುರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆರ್ಥಿಕ ಶಕ್ತಿಯಾಗಿ ಮಹಿಳೆ: ಗುರಿ

ದೇವನಹಳ್ಳಿ: ಸಮಾಜದ ಮುಖ್ಯ ವಾಹಿನಿಯಲ್ಲಿ ಮಹಿಳೆಯನ್ನು ಬರಿ ವ್ಯಕ್ತಿಯಾಗಿ ರೂಪಿಸದೆ ಆರ್ಥಿಕ ಶಕ್ತಿಯನ್ನಾಗಿಸುವ ಗುರಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆ ಹೊಂದಿದೆ ಎಂದು ಯೋಜನೆ ಪ್ರಾದೇಶಿಕ ನಿರ್ದೇಶಕ ಆನಂದ್‌ ಸುವರ್ಣ ತಿಳಿಸಿದರು.

ಇಲ್ಲಿನ ಸರ್ಕಾರಿ ಕಿರಿಯ ಕಾಲೇಜು ಮಾಂಗಲ್ಯ ವೇದಿಕೆಯಲ್ಲಿ ಭಾನುವಾರ ಯೋಜನೆ ವತಿಯಿಂದ ಜಿಲ್ಲಾ ಮಟ್ಟದ ಮಹಿಳಾ ಸಮಾವೇಶ ಮತ್ತು ಸ್ವಸಹಾಯ ಗುಂಪುಗಳಿಗೆ ವಿವಿಧ ಸವಲತ್ತು ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಗ್ರಾಮೀಣ ಮಹಿಳೆಯರ ಸಂಕಷ್ಟವನ್ನು ಬಹಳ ಹತ್ತಿರದಿಂದ ಕಂಡ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು 36 ವರ್ಷಗಳ ಹಿಂದೆ ಆರಂಭಿಸಿದ ಒಂದು ಚಿಕ್ಕ ಸಂಸ್ಥೆ ಯಾವುದೇ ಅಡೆತಡೆ ಇಲ್ಲದೆ ವಿಸ್ತರಿಸಿಕೊಂಡಿದೆ. ಇಡೀ ರಾಜ್ಯದಲ್ಲಿ ಮಹಿಳಾ ಸಬಲೀಕರಣದ ದೃಢ ಹೆಜ್ಜೆ ಇಡುತ್ತಿದೆ ಎಂದರು.

ಮಹಿಳೆಯರು ಅಬಲರಲ್ಲ ಸಬಲರು ಎಂಬುದನ್ನು ಪ್ರತಿ ಮನೆಯ ಮಹಿಳೆಗೆ ಜಾಗೃತಿ ಮೂಡಿಸಲಾಗುತ್ತಿದೆ. ರಾಜ್ಯದಲ್ಲಿ ಶಿಕ್ಷಣ ವಂಚಿತೆ ಆರ್ಥಿಕ ನೆರವಿಲ್ಲದ 10 ಸಾವಿರ ಅನಾಥಮಕ್ಕಳಿಗೆ ಮತ್ತು ವಯೋವೃದ್ಧರಿಗೆ ಅನ್ನ, ಆಶ್ರಯ ನೀಡಿ ಮನೆಬಾಗಿಲಿಗೆ ಪ್ರೋತ್ಸಾಹಧನ ನೀಡುತ್ತಿದೆ. ವೃತ್ತಿ ಪರರಿಗೆ ತರಬೇತಿ ನೀಡಲು ಸುಜ್ಞಾನ ನಿಧಿ ಮೂಲಕ 7 ಸಾವಿರ ನಿರುದ್ಯೋಗಿಗಳಿಗೆ ನೆರವಿನ ಹಸ್ತ ಚಾಚಿದೆ ಎಂದರು.

ಜಿಲ್ಲೆಯಲ್ಲಿ ಕಳೆದ ವರ್ಷದಿಂದ ಸರ್ಕಾರಿ ಶಾಲೆಯ ಮಕ್ಕಳಿಗೆ ಶೇ. 80 ರಷ್ಟು ಕಲಿಕಾ ಮತ್ತು ಪೀಠೋಪಕರಣ ನೀಡಿದೆ. ಶ್ರಮಿಕ ಮತ್ತು ಕೃಷಿಕ ವರ್ಗ ಹಾಗೂ ಜಲ ಸಂರಕ್ಷಣೆ ಗುರಿ ಮಾಡಿಕೊಂಡು ರಾಜ್ಯದಲ್ಲಿ 164 ಹೋಬಳಿ ಕೇಂದ್ರದಲ್ಲಿ ರಾಜ್ಯದ ಸರ್ಕಾರದ ₹ 80 ಕೋಟಿ, ಧರ್ಮಸ್ಥಳ ಸಂಸ್ಥೆಯಿಂದ ₹ 40 ಕೋಟಿ ಸಹಯೋಗದಲ್ಲಿ ರೈತರಿಗೆ ಬೆಳೆ ಕಟಾವು ಯಂತ್ರ ಖರೀದಿಸಿದ್ದೇವೆ. ರೈತರಿಗೆ ಕ್ಷೇತ್ರವಾರು ಕೃಷಿ ಪಾಠ ಭೋದನೆ ಶಿಬಿರ ನಡೆಸಿದ್ದೇವೆ ಎಂದರು.

ರಾಜ್ಯದಲ್ಲಿ 81, ಬೆಂಗಳೂರು ಸುತ್ತಮುತ್ತ 24 ಕೆರೆ ಅಭಿವೃದ್ಧಿಪಡಿಸಿ ಕೆರೆಗಳಲ್ಲಿ ಪ್ರಸ್ತುತ ನೀರು ಸಂಗ್ರಹವಾಗಿದೆ. ಮದ್ಯವ್ಯಸನ ಮುಕ್ತಕ್ಕೆ 1250 ಶಿಬಿರ ನಡೆಸಿದ್ದು 78 ಸಾವಿರ ಜನರು ಅದನ್ನು ತ್ಯಜಿಸಿದ್ದಾರೆ. 2018 ರ ವರ್ಷದಲ್ಲಿ 100 ಕೆರೆ ಅಭಿವೃದ್ಧಿ ನಮ್ಮ ಗುರಿ, ರಾಜ್ಯದಲ್ಲಿ 4 ಲಕ್ಷ ಸ್ವಸಹಾಯ ಗುಂಪುಗಳಿದ್ದು, 40 ಲಕ್ಷ ತಾಯಂದಿರು ಪ್ರಗತಿಯ ಪಾಲುದಾರಿಕೆಯಲ್ಲಿದ್ದಾರೆ ಎಂದರು.

ಬದುಕುವ ದಿನಗಳನ್ನು ಸ್ಪರ್ಧಾತ್ಮಕವಾಗಿ ತೆಗೆದುಕೊಳ್ಳಬೇಕು. ಕುಟುಂಬದ ಪ್ರತಿಯೊಬ್ಬರು ದುಡಿಯಬೇಕು ಗಳಿಕೆಯಲ್ಲಿನ ಹಣ ಹೇಗೆ ಬಳಕೆ ಮಾಡಬೇಕು ಎಂಬುದು ಅತಿ ಮುಖ್ಯ ಎಂದರು.

ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ದಿ ನಿಗಮ ಅಧ್ಯಕ್ಷೆ ಭಾರತಿ ಶಂಕರ್ ಮಾತನಾಡಿ, ಸರ್ಕಾರ ಜಾರಿಗೆ ತರುವ ಮೊದಲೇ ಧರ್ಮಸ್ಥಳ ಸಂಸ್ಥೆ ಸ್ವಸಹಾಯ ಗುಂಪುಗಳನ್ನು ಜಾರಿಗೆ ತಂದಿದೆ. ಸಾಮಾಜಿಕ ವ್ಯವಸ್ಥೆಯಿಂದ ಮಹಿಳೆಯರು ಹೊರಬರಬೇಕು ಎಂದರು. ಸ್ವಾವಲಂಬನೆಗೆ ಚಿಂತೆ ಮಾಡಿ, ಆತ್ಮಹತ್ಯೆಯನ್ನಲ್ಲ. ಆರೋಗ್ಯ, ಪರಿಸರ ಸ್ವಚ್ಛತೆ ಬಗ್ಗೆ ಮಹಿಳೆಯರಿಗೆ ಜವಾಬ್ದಾರಿ ಇದೆ ಎಂದರು.

ಪುರಸಭೆ ಅಧ್ಯಕ್ಷ ಎಂ.ಮೂರ್ತಿ, ಬಿಜೆಪಿ ರಾಜಕೀಯ ವಿಶ್ಲೇಷಕ ಪ್ರಕೋಷ್ಠ ಜಿಲ್ಲಾ ಸಂಚಾಲಕ ಡಿ.ಆರ್‌.ನಾರಾಯಣಸ್ವಾಮಿ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಅನಂತಕುಮಾರಿ, ಮುಖಂಡ ಚಂದ್ರಣ್ಣ ಮಾತನಾಡಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ವಸಂತ ಸಾಲಿಯನ್‌, ತಾಲ್ಲೂಕು ಯೋಜನಾ ನಿರ್ದೇಶಕಿ ಅಕ್ಷತಾ ರೈ, ಜಿಲ್ಲಾ ಪಂಚಾಯಿತಿ ಸದಸ್ಯೆ ರಾಧಮ್ಮ, ಮುನಿರಾಜು, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ನಂದಿನಿ, ತಾಲ್ಲೂಕು ಪಂಚಾಯಿತಿ ಸದಸ್ಯೆ ಚೈತ್ರಾ, ಪುರಸಭೆ ಸದಸ್ಯರಾದ ಎಂ.ಕುಮಾರ್‌, ವಿ.ಗೋಪಾಲ್, ಲಯನ್‌ ಸಂಸ್ಥೆ ಅಧ್ಯಕ್ಷ ಪಿ.ಗಂಗಾಧರ್‌, ಕೃಷಿ ಪಂಡಿತ ಜಯರಾಮಯ್ಯ, ಜಿಲ್ಲಾ ಜನ ಜಾಗೃತಿ ವೇದಿಕೆ ಉಪಾಧ್ಯಕ್ಷ ಬಿ.ಕೆ.ನಾರಾಯಣಸ್ವಾಮಿ, ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆ ಜಿಲ್ಲಾ ಕಾರ್ಮಿಕ ಘಟಕ ಅಧ್ಯಕ್ಷ ನರಗನಹಳ್ಳಿ ಶ್ರೀನಿವಾಸ್‌ ಇದ್ದರು.

ಕೆಟ್ಟ ಭಾವನೆ ಬಿಡಿ

ಚಲನಚಿತ್ರ ತಾರೆ ವಿನಯ ಪ್ರಸಾದ್‌ ಮಾತನಾಡಿ, ಮಹಿಳೆಯರು ಜಾಗೃತರಾದರೆ ಮಾತ್ರ ಸಮಾಜ ಪ್ರಗತಿ ಹೊಂದಲು ಸಾಧ್ಯ. ಜಾತಿ ವ್ಯವಸ್ಥೆಯಿಂದ ಸಮಾಜ ನಲುಗಿದ್ದು, ಅದರಿಂದ ಹೊರಬರುವ ಪ್ರಯತ್ನ ಮಾಡಬೇಕು ಎಂದರು.

ಹೆಣ್ಣಿಗೆ ಹೆಣ್ಣೇ ಶತ್ರು ಎಂಬ ಕೆಟ್ಟ ಭಾವನೆ ಬಿಡಬೇಕು ಪರಸ್ಪರ ಅಸೂಯೆ ಬಿಡಬೇಕು, ಶ್ರಮ ಪಟ್ಟರೆ ಫಲ ಎಂಬ ಮನೋಭಾವ ರೂಢಿಸಿಕೊಳ್ಳಬೇಕು ಅವಕಾಶವನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.

ಪ್ರತಿಕ್ರಿಯಿಸಿ (+)