‘ಗೌಡರ ಕೋಟೆ’ ಭೇದಿಸಲು ಪೈಪೋಟಿ

7

‘ಗೌಡರ ಕೋಟೆ’ ಭೇದಿಸಲು ಪೈಪೋಟಿ

Published:
Updated:

ಬೀದರ್‌: ಹುಮನಾಬಾದ್ ವಿಧಾನಸಭಾ ಕ್ಷೇತ್ರವು ಜಿಲ್ಲೆಯಲ್ಲಿ ಗೌಡರ ಭದ್ರ ಕೋಟೆ ಎಂದೇ ಗುರುತಿಸಿಕೊಂಡಿದೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ‘ಗೌಡರ ಕೋಟೆ’ ಭೇದಿಸಲು ಬಿಜೆಪಿ, ಜೆಡಿಎಸ್ ಹಾಗೂ ಬಿಎಸ್‌ಪಿ ಪೈಪೋಟಿ ನಡೆಸಿವೆ.

1978ರಿಂದ 1993ರ ವರೆಗೆ ನಾಲ್ಕು ಅವಧಿಗೆ ಬಸವರಾಜ ಪಾಟೀಲ ಈ ಕ್ಷೇತ್ರದ ಶಾಸಕರಾಗಿದ್ದರು. 1994ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಪರಾಭವಗೊಂಡ ನಂತರ 1999ರ ಚುನಾವಣೆಯಲ್ಲಿ ತಮ್ಮ ಪುತ್ರ ರಾಜಶೇಖರ ಪಾಟೀಲ ಅವರನ್ನು ಚುನಾವಣಾ ಕಣಕ್ಕೆ ಇಳಿಸಿದ್ದರು. ಆದರೆ, ರಾಜಶೇಖರ ಅವರಿಗೆ ಮೊದಲ ಯತ್ನದಲ್ಲಿ ವಿಜಯಲಕ್ಷ್ಮಿ ಒಲಿಯಲಿಲ್ಲ.

ಸುಭಾಷ ಕಲ್ಲೂರ್ ಶಾಸಕರಾಗಿ ಆಯ್ಕೆಯಾದರು. ಬಳಿಕ ಲಾಭದಾಯಕ ಹುದ್ದೆಯಲ್ಲಿದ್ದ ಕಾರಣ ಸುಪ್ರೀಂ ಕೋರ್ಟ್‌ ಸುಭಾಷ ಕಲ್ಲೂರ್‌ ಅವರ ಶಾಸಕತ್ವವನ್ನು ರದ್ದು ಪಡಿಸಿತ್ತು. 2003ರಲ್ಲಿ ಉಪ ಚುನಾವಣೆ ನಡೆದಾಗ ಮೊಲದ ಬಾರಿಗೆ ಗೆಲುವು ಸಾಧಿಸಿದ್ದ ರಾಜಶೇಖರ ಪಾಟೀಲ ಅವರು ಮರು ವರ್ಷವೇ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ನ ಮೆರಾಜುದ್ದೀನ್‌ ಪಟೇಲ್‌ ವಿರುದ್ಧ ಸೋತಿದ್ದರು. 2008ರಲ್ಲಿ ಆಯ್ಕೆ ಆಗಿ ರಾಜಶೇಖರ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ.

ಪ್ರಸ್ತುತ ಈ ಕ್ಷೇತ್ರದಲ್ಲಿ ಯಾರೊಬ್ಬರೂ ಕಾಂಗ್ರೆಸ್‌ ಟಿಕೆಟ್‌ ಕೇಳುವ ಧೈರ್ಯ ಮಾಡಿಲ್ಲ. ರಾಜಶೇಖರ ಪಾಟೀಲ ಅವರನ್ನು ಎದುರು ಹಾಕಿಕೊಳ್ಳುವುದು ಯಾರಿಗೂ ಇಷ್ಟವೂ ಇಲ್ಲ. ಸಚಿವ ಸಂಪುಟದಲ್ಲಿ ಸ್ಥಾನ ದೊರೆಯದಿದ್ದಾಗ ಪಕ್ಷದ ಮುಖಂಡರ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರನ್ನಾಗಿ ನೇಮಕ ಮಾಡುವ ಮೂಲಕ ರಾಜಶೇಖರ ಅವರನ್ನು ಸಮಾಧಾನ ಪಡಿಸಿದ್ದರು. ಡಿಸೆಂಬರ್‌ನಲ್ಲಿ ಜಿಲ್ಲೆಗೆ ಭೇಟಿ ನೀಡಿದ್ದ ಸಿದ್ದರಾಮಯ್ಯ ‘ರಾಜಶೇಖರ ಪಾಟೀಲರು ಉನ್ನತ ಹುದ್ದೆಗೇರಲು ಮತ್ತೆ ಅವಕಾಶ ಕೊಡಬೇಕು’ ಎಂದು ಮತದಾರರಿಗೆ ಮನವಿ ಮಾಡಿದ್ದರು. ಹೀಗಾಗಿ ಇವರಿಗೆ ಪಕ್ಷದ ಟಿಕೆಟ್‌ ಕೈತಪ್ಪುವ ಪ್ರಶ್ನೆಯೇ ಇಲ್ಲ ಎನ್ನುತ್ತಾರೆ ಕಾಂಗ್ರೆಸ್‌ ಮುಖಂಡರು.

‘ನಮ್ಮ ಕುಟುಂಬಕ್ಕೆ ರಾಜಕೀಯ ಹೊಸದಲ್ಲ. ಪ್ರತಿ ಚುನಾವಣೆಯಲ್ಲೂ ನಮ್ಮ ಕುಟುಂಬ ಒಂದು ಕಡೆ, ಕಾಂಗ್ರೆಸ್‌ ಹೊರತುಪಡಿಸಿ ಉಳಿದ ಎಲ್ಲ ರಾಜಕೀಯ ಪಕ್ಷಗಳು ಇನ್ನೊಂದು ಕಡೆ ಇರುತ್ತವೆ. ನನ್ನ ವಿರುದ್ಧ ಹತ್ತು ಜನ ಸ್ಪರ್ಧಿಸಿದರೂ ಚುನಾವಣೆಯಲ್ಲಿ ಪರಿಣಾಮ ಬೀರದು’ ಎಂದು ಹುಮನಾಬಾದ್‌ ಗೌಡರೆಂದೇ ಗುರುತಿಸಿಕೊಂಡ ರಾಜಶೇಖರ ಪಾಟೀಲ ಆತ್ಮವಿಶ್ವಾಸದಿಂದ ಹೇಳುತ್ತಾರೆ.

ಕಳೆದ ಚುನಾವಣೆಯಲ್ಲಿ 42 ಸಾವಿರ ಮತಗಳನ್ನು ಪಡೆದಿದ್ದ ಮಾಜಿ ಸಚಿವ ದಿ.ಮೆರಾಜುದ್ದೀನ್‌ ಪಟೇಲ್‌ ಅವರ ಸಹೋದರ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ನಸೀಮೊದ್ದಿನ್ ಪಟೇಲ್‌ ಈ ಬಾರಿ ಜೆಡಿಎಸ್‌ನಿಂದ ಸ್ಪರ್ಧಿಸಲು ತಯಾರಿ ನಡೆಸಿದ್ದಾರೆ. ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಅವರು ಬಹಿರಂಗವಾಗಿ ನಸೀಮೊದ್ದಿನ್ ಗೆ ಟಿಕೆಟ್‌ ಘೋಷಣೆ ಮಾಡಿದ್ದಾರೆ. ಇವರನ್ನು ಬಿಟ್ಟರೆ ಬೇರೆ ಯಾರೂ ಜೆಡಿಎಸ್‌ನಿಂದ ಸ್ಪರ್ಧಿಸಲು ಆಸಕ್ತಿ ತೋರಿಲ್ಲ.

ಬಹುಜನ ಸಮಾಜ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಅಂಕುಶ ಗೋಖಲೆ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಈ ಬಾರಿಯೂ ಇದೇ ಕ್ಷೇತ್ರದಿಂದ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ. ಮೂಲತಃ ಭಾಲ್ಕಿ ತಾಲ್ಲೂಕಿನ ಚಿಟ್ಟಾ ಗ್ರಾಮದವರಾದ ಅಂಕುಶ ಅವರು ಒಮ್ಮೆ ಚಳಕಾಪುರ ಕ್ಷೇತ್ರದಿಂದ ಭಾಲ್ಕಿ ತಾಲ್ಲೂಕು ಪಂಚಾಯಿತಿಗೆ ಆಯ್ಕೆಗೊಂಡಿದ್ದರು.

‘ಬಿಎಸ್‌ಪಿಯ ಟಿಕೆಟ್‌ ಆಕಾಂಕ್ಷಿಯಾಗಿದ್ದೇನೆ. ಜೆಡಿಎಸ್‌–ಬಿಎಸ್‌ಪಿ ಮೈತ್ರಿಯಿಂದಾಗಿ ಹುಮನಾಬಾದ್ ಕ್ಷೇತ್ರವನ್ನು ಬಿಟ್ಟುಕೊಡುವ ಪ್ರಸಂಗ ಬಂದರೆ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ಹಿಂಜರಿಯುವುದಿಲ್ಲ’ ಎಂದು ಅಂಕುಶ ಗೋಖಲೆ ಹೇಳುತ್ತಾರೆ.

ಬಿಜೆಪಿಯಲ್ಲಿ ಆಕಾಂಕ್ಷಿಗಳು ಅಧಿಕ

ಮಾಜಿ ಶಾಸಕ ಸುಭಾಷ ಕಲ್ಲೂರ್‌ ಸೇರಿ ಒಟ್ಟು ಆರು ಜನರು ಬಿಜೆಪಿಯ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ಬಿಜೆಪಿಯನ್ನು ಜಿಲ್ಲೆಯಲ್ಲಿ ಕಟ್ಟಿ ಬೆಳೆಸಿದ ಪ್ರಮುಖರಲ್ಲಿ ಸುಭಾಷ ಕಲ್ಲೂರ್ ಒಬ್ಬರು. 1994ರಲ್ಲಿ ಪ್ರಥಮ ಬಾರಿಗೆ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಪರಾಭವಗೊಂಡಿದ್ದರು. ಆದರೆ, 1999ರ ಚುನಾವಣೆಯಲ್ಲಿ ರಾಜಶೇಖರ ಪಾಟೀಲರ ವಿರುದ್ಧ ಗೆಲುವು ಸಾಧಿಸಿದ್ದರು. 2004 ಹಾಗೂ 2008ರಲ್ಲಿ ಸ್ಪರ್ಧಿಸಿ ಪರಾಭವಗೊಂಡಿದ್ದರು. ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಕೆಜೆಪಿ ಸೇರಿ ಮತ್ತೆ ಬಿಜೆಪಿಗೆ ಮರಳಿದ್ದಾರೆ.

1983ರಿಂದ ಪಕ್ಷದಲ್ಲಿ ಸಕ್ರಿಯ ಕಾರ್ಯಕರ್ತರಾಗಿ ಗುರುತಿಸಿಕೊಂಡಿರುವ ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಶಿವಾನಂದ ಮಂಠಾಳಕರ್‌ ಸಹ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಜಿಲ್ಲಾ ಪಂಚಾಯಿತಿಯ ರಾಜೇಶ್ವರ ಕ್ಷೇತ್ರದ ಸದಸ್ಯ ಹಣಮಂತವಾಡಿಯ ಗುಂಡೂ ರೆಡ್ಡಿ ಮೊದಲು ಜೆಡಿಎಸ್‌ನಲ್ಲಿದ್ದರು. ನಂತರ ಧರ್ಮಸಿಂಗ್‌ ನೇತೃತ್ವದಲ್ಲಿ ಕಾಂಗ್ರೆಸ್‌ ಸೇರಿದ್ದರು. ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್‌ ದೊರೆಯದ ಕಾರಣ ಬಿಜೆಪಿ ಸೇರಿದ್ದಾರೆ. ಬಿಜೆಪಿ ಟಿಕೆಟ್ ದೊರೆತರೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಅದೃಷ್ಟ ಪರೀಕ್ಷೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ.

ಬೀದರ್‌ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಸಂಜಯ್‌ ಖೇಣಿ, ಇಸ್ಲಾಂಪುರ ಮೂಲದ ಮಾಣಿಕರೆಡ್ಡಿ, ವಕೀಲ ರವಿಕಾಂತ ಹೂಗಾರ ಅವರು ತಾವೂ ಆಕಾಂಕ್ಷಿ ಎನ್ನುತ್ತಿದ್ದರೂ ಪಕ್ಷದ ವರಿಷ್ಠರ ತೀರ್ಮಾನವೇ ಅಂತಿಮ ಎಂದು ಹೇಳುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry