ಶುಕ್ರವಾರ, ಡಿಸೆಂಬರ್ 6, 2019
24 °C

ಗಟಾರ ಮಧ್ಯದಲ್ಲಿ ಮನೆಗಳ ದಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಟಾರ ಮಧ್ಯದಲ್ಲಿ ಮನೆಗಳ ದಾರಿ

ಬೀದರ್‌: ಸ್ವಚ್ಛ ಸರ್ವೇಕ್ಷಣ ಸಮೀಕ್ಷೆಯಲ್ಲಿ ರಾಷ್ಟ್ರದ ಸ್ವಚ್ಛ ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಳ್ಳಬೇಕಿದ್ದ ಬೀದರ್‌ ಮತ್ತೆ ಕೊಳಚೆ ನಗರದ ಹಣೆಪಟ್ಟಿ ಕಟ್ಟಿಕೊಂಡಿದೆ. ಕೇವಲ ಮುಖ್ಯ ರಸ್ತೆಗಳಿಗಷ್ಟೇ ಪ್ರಾಮುಖ್ಯ ನೀಡಿ ನಗರದ ಇತರೆ ಪ್ರದೇಶಗಳನ್ನು ಕಡೆಗಣಿಸಿದ್ದರಿಂದ ನಗರಸಭೆ ಅಧಿಕಾರಿಗಳ ಲೆಕ್ಕಾಚಾರ ಬುಡಮೇಲಾಗಿದೆ.

ಒಂದೆರಡು ಬಡಾವಣೆಗಳನ್ನು ಬಿಟ್ಟರೆ ಬಹುತೇಕ ಬಡಾವಣೆಗಳಲ್ಲಿ ಇಂದಿಗೂ ಕೊಳಚೆ ತುಂಬಿಕೊಂಡಿದೆ. ಜನ ರಸ್ತೆ ಬದಿಯಲ್ಲಿ ಕಸ ಎಸೆಯುವುದನ್ನು ನಿಲ್ಲಿಸಿಲ್ಲ. ನಗರಸಭೆ ಅಧಿಕಾರಿಗಳು ಗಟಾರ ನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆ ಮಾಡಿಲ್ಲ. ವಾರ್ಡ್‌ ಸಂಖ್ಯೆ 27 ಹಾಗೂ 28ರ ಸಿಎಂಸಿ ಕಾಲೊನಿಗೆ ಭೇಟಿ ನೀಡಿದರೆ ಬೀದರ್‌ ನಗರದ ನೈಜ ಸ್ವರೂಪ ಕಾಣಸಿಗುತ್ತದೆ.

ಸಿಎಂಸಿ ಕಾಲೊನಿ ಅಕ್ಷರಶಃ ಕೊಳೆಗೇರಿಯಾಗಿದೆ. ವಾರ್ಡ್‌ ಸಂಖ್ಯೆ 27ರ ಸಾಯಿಬಾಬಾ ಮಂದಿರ ಸಮೀಪದ ಓಣಿಗಳಲ್ಲಿ ಮನೆಗಳ ಸುತ್ತಮುತ್ತ ಕೊಳಚೆ ನೀರು ನಿಂತಿದೆ. ಗುರುನಾನಕ ದೇವ ಎಂಜಿನಿಯರಿಂಗ್ ಕಾಲೇಜಿನ ಆವರಣದಿಂದ ಹರಿದು ಬರುವ ಕೊಳಚೆ ನೀರು ಮನೆಗಳ ಮುಂದೆ ನಿಲ್ಲುತ್ತಿರುವ ಕಾರಣ ಕೆಲವರು ಮನೆಯನ್ನೇ ತೊರೆದಿದ್ದಾರೆ. ನಗರಸಭೆ ಸಿಬ್ಬಂದಿಗೆ ದೂರವಾಣಿ ಕರೆ ಮಾಡಿ ಹೇಳಿದರೂ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲಿಸುತ್ತಿಲ್ಲ. ನಗರಸಭೆ ಅಧಿಕಾರಿಗಳ ಕಾರ್ಯವೈಖರಿಗೆ ಬೇಸತ್ತು ಜನರು ರಸ್ತೆಯನ್ನು ಅಗೆದು ಹಾಕಿ ನೀರು ಹರಿದು ಹೋಗಲು ದಾರಿ ಮಾಡಿದ್ದಾರೆ.

ಸಿಎಂಸಿ ಕಾಲೊನಿಯ ಕೆಲ ಚಿಕ್ಕ ಓಣಿಗಳಲ್ಲಿ ರಸ್ತೆ ನಿರ್ಮಾಣ ಮಾಡದ ಕಾರಣ ಜನ ಗಟಾರಗಳಲ್ಲೇ ನಡೆದುಕೊಂಡು ಬರಬೇಕಾಗಿದೆ. ರಾತ್ರಿ ವೇಳೆಯಲ್ಲಿ ಮನೆಯಿಂದ ಹೊರ ಬರುವುದು ಕಷ್ಟವಾಗಿದೆ.

ವಾರ್ಡ್‌ ಸಂಖ್ಯೆ 27ರಿಂದ ಹರಿದು ಬರುವ ನೀರು ವಾರ್ಡ್‌ ಸಂಖ್ಯೆ 28ರ ಖಾಲಿ ನಿವೇಶನಗಳಲ್ಲಿ ನಿಲ್ಲುತ್ತಿದೆ. ಕೆಲವು ಕಡೆ ಜನರೇ ರಸ್ತೆ ಮಧ್ಯೆ ಅಲ್ಲಲ್ಲಿ ಅಗೆದು ನೀರಿಗೆ ದಾರಿ ಮಾಡಿದ್ದಾರೆ. ಇಲ್ಲಿಯ ಕೊಳಚೆ ನೀರಿನಲ್ಲಿ ಹಂದಿಗಳು ಹೊರಳಾಡಿ ಓಣಿಯಲ್ಲಿ ಅಡ್ಡಾಡುತ್ತಿವೆ. ಇದರಿಂದಾಗಿ ಈ ಪ್ರದೇಶದಲ್ಲಿ ಆಗಾಗ ಸಾಂಕ್ರಾಮಿಕ ರೋಗ ಕಾಣಿಸಿಕೊಳ್ಳುತ್ತಿದೆ.

‘ಕಳೆದ ವಾರ ಗಟಾರುಗಳು ತುಂಬಿ ಮನೆಗಳಿಗೆ ನೀರು ನುಗ್ಗಲು ಆರಂಭಿಸಿತ್ತು. ದೊಡ್ಡದಾಗ ಪೈಪ್‌ ಹಾಕಿದರೆ ನೀರು ಹರಿದು ಹೋಗುತ್ತಿತ್ತು. ಈಗಾಗಲೇ ನಗರಸಭೆ ಅಧಿಕಾರಿಗಳಿಗೆ ಮನವಿಪತ್ರ ಸಲ್ಲಿಸಲಾಗಿದೆ. ಆದರೆ ಅಧಿಕಾರಿಗಳು ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ’ ಎಂದು ಸೂರ್ಯಕಾಂತ ದೂರುತ್ತಾರೆ.

‘ದಿನದ 24 ಗಂಟೆ ನೀರು ಪೂರೈಕೆ ಯೋಜನೆ ಅಡಿಯಲ್ಲಿ ಪ್ರತಿಯೊಂದು ಮನೆಗೆ ನಲ್ಲಿ ಸಂಪರ್ಕ ಕೊಡಲಾಗಿದೆ. ಒಂದು ಮನೆಗೆ ನೀರು ಬಂದರೆ ಇನ್ನೊಂದು ಮನೆಗೆ ನೀರು ಬರುವುದಿಲ್ಲ. ಹೀಗಾಗಿ ಜನ ಕೊಳವೆಬಾವಿಗಳಿಂದ ನೀರು ಹೊತ್ತು ತರುತ್ತಿದ್ದಾರೆ.

‘ನಿರಂತರ ಕುಡಿಯುವ ನೀರಿನ ಯೋಜನೆ ಸಂಪೂರ್ಣ ವಿಫಲವಾಗಿದೆ. ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಸರಿಯಾಗಿ ಕೆಲಸ ಮಾಡಿಲ್ಲ’ ಎಂದು ಸಿಎಂಸಿ ಕಾಲೊನಿ ನಿವಾಸಿಗಳು ದೂರುತ್ತಾರೆ.

* * 

ಜೆಎನ್‌ಡಿ ಎಂಜಿನಿಯರಿಂಗ್‌ ಕಾಲೇಜಿನ ಆವರಣದಿಂದ ಹೊರಬರುವ ಕೊಳಚೆ ನೀರು ಸರಾಗವಾಗಿ ಹರಿದು ಹೋಗುವಂತೆ ಸಿಎಂಸಿ ಕಾಲೊನಿಯಲ್ಲಿ ದೊಡ್ಡ ಗಟಾರ ನಿರ್ಮಾಣ ಮಾಡಬೇಕು.

ಸೂರ್ಯಕಾಂತ, ಸಿಎಂಸಿ ಕಾಲೊನಿ ನಿವಾಸಿ

ಪ್ರತಿಕ್ರಿಯಿಸಿ (+)